ಅಂದು 'ಮಿಲನʼ ಧಾರಾವಾಹಿಯ ಅರ್ಥ ಪಾತ್ರದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದ ಬಾಲನಟಿ ಶಿವಾನಿ ಈಗ ಹೇಗಿದ್ದಾರೆ, ಶಿಕ್ಷಣ ಏನು?
ಸಂದರ್ಶನ- ಪದ್ಮಶ್ರೀ ಭಟ್: ‘ಮಿಲನ’ ಧಾರಾವಾಹಿಯಲ್ಲಿ ಅರ್ಥ ಎನ್ನುವ ಪಾತ್ರದ ಮೂಲಕ ಪಟಪಟ ಅಂತ ಡೈಲಾಗ್ ಹೇಳಿಕೊಂಡು, ಮುದ್ದು ಮುದ್ದಾಗಿ ನಟಿಸಿ ಸಾಕಷ್ಟು ಜನರ ಮನಸ್ಸು ಕದ್ದಿದ್ದ ಶಿವಾನಿ ಈಗ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
2013ರಲ್ಲಿ ಪ್ರಸಾರ ಆಗುತ್ತಿದ್ದ 'ಮಿಲನʼ ಧಾರಾವಾಹಿ ಭಾರೀ ಜನಪ್ರಿಯತೆ ಪಡೆದಿತ್ತು. ಆ ಧಾರಾವಾಹಿಯಲ್ಲಿ ಪುಟಾಣಿ ಅರ್ಥ ಪಾತ್ರದಲ್ಲಿ ಶಿವಾನಿ ನಟಿಸಿದ್ದರು. ಪ್ರಶಾಂತ್ ಭಾರದ್ವಾಜ್, ವಿನುತಾ, ಸೌಮ್ಯಾ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಸೀರಿಯಲ್ ಅದಾಗಿತ್ತು. ಅದು ಶಿವಾನಿಯ ಮೊದಲ ಧಾರಾವಾಹಿ ಆಗಿತ್ತು. ಈಗ ಶಿವಾನಿ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜರ್ನಿ, ʼಮಿಲನʼ ನೆನಪುಗಳನ್ನು ಶಿವಾನಿ ಅವರು ʼಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಪ್ರಶ್ನೆ: ಈಗ ಏನು ಮಾಡುತ್ತಿದ್ದೀರಿ?
ಉತ್ತರ: ಹತ್ತನೇ ಕ್ಲಾಸ್ ಓದುತ್ತಿದ್ದೇನೆ. ಸದ್ಯ ʼಶಾಂತಿ ನಿವಾಸʼ ಧಾರಾವಾಹಿಯಲ್ಲಿ ವರ್ಷಾ ಎನ್ನುವ ಪಾತ್ರ ಮಾಡುತ್ತಿದ್ದೇನೆ.
ಪ್ರಶ್ನೆ: ʼಮಿಲನʼ ಧಾರಾವಾಹಿ ದಿನಗಳು ನೆನಪಿದೆಯಾ?
ನಾನು ಚಿಕ್ಕವಳಿದ್ದೆ, ಹಾಗಾಗಿ ಎಲ್ಲವೂ ನೆನಪಿಲ್ಲ. ಆದರೆ ಡೈಲಾಗ್ ಕಂಠಪಾಠ ಮಾಡಿದ್ದು ನೆನಪಿದೆ. ನಮ್ಮ ಧಾರಾವಾಹಿಗೆ ಮಧುಸೂದನ್ ಅವರು ನಿರ್ದೇಶನ ಮಾಡುತ್ತಿದ್ದರು. ನಾನು ಡೈಲಾಗ್ ಪೂರ್ತಿ ಹೇಳದೆ ಇದ್ರೆ ಮಧು ಸರ್ ಸುಮ್ಮನೆ ಬಿಡುತ್ತಿರಲಿಲ್ಲ, ಡೈಲಾಗ್ ಹೇಳಿಸಿಯೇ ಹೇಳಿಸುತ್ತಿದ್ದರು. ʼಮಿಲನʼ ಧಾರಾವಾಹಿ ಶೂಟಿಂಗ್ ನಮ್ಮ ಮನೆಯಲ್ಲಿ ನಡೆಯುತ್ತಿತ್ತು. ಆಗ ಅರ್ಥ ಪಾತ್ರಕ್ಕೆ ನಮ್ಮ ಮನೆಗೆ ಅನೇಕ ಹೆಣ್ಣು ಮಕ್ಕಳು ಆಡಿಷನ್‌ಗೆ ಬರುತ್ತಿದ್ದರು. ಆ ಮಕ್ಕಳಿಗೆ ನಾನು ಡೈಲಾಗ್ ಹೇಳಿಕೊಡುತ್ತಿದ್ದೆ. ಅದನ್ನು ನೋಡಿದ ಸೀರಿಯಲ್ ತಂಡ ನನ್ನನ್ನು ಅರ್ಥ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿತು. ಆಗ ನನಗೆ ಮೂರು ವರ್ಷ.
ಪ್ರಶ್ನೆ: 'ಮಿಲನʼ ಸೀರಿಯಲ್ ತಂಡದವರ ಜೊತೆ ಈಗಲೂ ಕಾಂಟ್ಯಾಕ್ಟ್‌ನಲ್ಲಿದ್ದೀರಾ?
ಉತ್ತರ: ಎಲ್ಲರೂ ಇಲ್ಲ. ನಿರಂಜನ್ ದೇಶಪಾಂಡೆ, ಪ್ರಶಾಂತ್ ಭಾರದ್ವಾಜ್ ಮುಂತಾದವರನ್ನು ಆಗಾಗ ಭೇಟಿ ಮಾಡುತ್ತಿದ್ದೇನೆ.
ಪ್ರಶ್ನೆ: 'ಮಿಲನʼ ಧಾರಾವಾಹಿಯಲ್ಲಿ ತುಂಬ ನೆನಪು ಇರುವ ವಿಷಯ ಏನು?
ಉತ್ತರ: ತಲಕಾವೇರಿಯಲ್ಲಿ ಮುಳುಗುವ ದೃಶ್ಯ ಇತ್ತು. ಟೇಕ್ ಜಾಸ್ತಿ ಆಗಿ ನಾನು ಸುಮಾರು ಸಲ ನೀರಲ್ಲಿ ಮುಳುಗುವ ಹಾಗೆ ಆಯ್ತು. ನನಗೆ ಆ ಶೂಟಿಂಗ್ ದೃಶ್ಯ ತುಂಬ ಕಷ್ಟ ಆಗಿತ್ತು.
ಇಂದು 'ಮಿಲನʼ ಧಾರಾವಾಹಿಯನ್ನು ನೋಡಿದಾಗ ಏನು ಅನಿಸುತ್ತದೆ?
ಉತ್ತರ: ನಾನು ಇಷ್ಟೆಲ್ಲ ನಟಿಸಿದ್ದೀನಾ ಅಂತ ನನಗೆ ಸರ್ಪ್ರೈಸ್ ಆಗುತ್ತೆ. ಅಷ್ಟೇ ಅಲ್ಲದೆ ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಇಂದು ಕೂಡ ಜನರು ನನ್ನನ್ನು ಅರ್ಥ ಅಂತ ಕರೆಯುತ್ತಾರೆ.
ಪ್ರಶ್ನೆ: ಇಲ್ಲಿಯವರೆಗೆ ಯಾವ ಯಾವ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿದ್ದೀರಿ?
ಉತ್ತರ: ʼಗೀತಾಂಜಲಿʼ, ʼಮುದ್ದುಲಕ್ಷ್ಮೀʼ, ʼನಮ್ಮನೆ ಯುವರಾಣಿʼ ಮುಂತಾದ ಧಾರಾವಾಹಿಗಳು, ಹತ್ತು ಸಿನಿಮಾಗಳಲ್ಲಿ ನಟಿಸಿದ್ದೆ, ಅಷ್ಟೇ ಅಲ್ಲದೆ ಪ್ರತಿಷ್ಠಿತ ಜಾಹೀರಾತುಗಳಲ್ಲಿ ನಟಿಸಿದ್ದೇನೆ. ಅಷ್ಟೇ ಅಲ್ಲದೆ ʼಸಾಫಲ್ಯʼ ರಂಗತಂಡದ ನಾಟಕಗಳಲ್ಲಿ ಅಭಿನಯಿಸುತ್ತಿರುತ್ತೇನೆ.
ಪ್ರಶ್ನೆ: ಫೇವರಿಟ್ ನಟ ಯಾರು?
ಉತ್ತರ: ಪುನೀತ್ ರಾಜ್‌ಕುಮಾರ್. ನಾನು ಪುನೀತ್ ಸರ್ ಅವರನ್ನು ನೋಡಿ ಮಾತನಾಡಿದ್ದೇನೆ. ಪುನೀತ್ ಸರ್ ಇಂದು ಇಲ್ಲ ಎನ್ನೋದು ಬಹಳ ಬೇಸರ ತಂದಿದೆ.
ಪ್ರಶ್ನೆ: ನಿಮ್ಮ ಮನೆಯಲ್ಲಿ ಯಾವಾಗಲೂ ಶೂಟಿಂಗ್ ನಡೆಯೋದರಿಂದ ಓದಲು ಕಷ್ಟ ಆಗೋದಿಲ್ವಾ?
ಇದನ್ನೂ ಓದಿ: Ramachari Serial: ರಾಮಾಚಾರಿ ಧಾರಾವಾಹಿಗಾಗಿ ತಲೆ ಬೋಳಿಸಿಕೊಂಡ್ರಾ ಮೌನಾ ಗುಡ್ಡೆಮನೆ! ವೈರಲ್ ಆಗ್ತಿದೆ ಚಾರು ಫೋಟೋಸ್
ಉತ್ತರ: ಇಲ್ಲ. ನಮಗೆ ಅಂತ ನಮ್ಮ ಮನೆಯಲ್ಲಿ ಒಂದು ರೂಮ್ ಇದೆ. ಅಲ್ಲಿಯೇ ನಾವು ಓದಿಕೊಳ್ಳುತ್ತೇವೆ.
ಪ್ರಶ್ನೆ: ಮುಂದಿನ ಗುರಿ ಏನು?
ಉತ್ತರ: ಜರ್ನಲಿಸ್ಟ್ ಆಗಬೇಕು ಅಂತಿದೆ. ಅಷ್ಟೇ ಅಲ್ಲದೆ ನಟಿಯಾಗಬೇಕು ಅಂತ ಆಸೆ ಇದೆ.
ಪ್ರಶ್ನೆ: ಶಿಕ್ಷಣ, ನಟನೆ ಹೇಗೆ ಬ್ಯಾಲೆನ್ಸ್ ಮಾಡುತ್ತಿದ್ದೀರಿ?
ಉತ್ತರ: ನಮ್ಮ ಶಾಲೆಯಲ್ಲಿ ನೀಡಿದ ಸಹಕಾರದಿಂದ ಶಿಕ್ಷಣ ಆರಾಮಾಗಿ ಸಾಗ್ತಿದೆ. ಶೂಟಿಂಗ್‌ನವರು ಕೂಡ ಸಹಕಾರ ಕೊಡ್ತಿರೋದರಿಂದ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ನನಗೆ ಇಬ್ಬರು ಅಕ್ಕಂದಿರು ಇದ್ದಾರೆ, ಅವರು ನನಗೆ ಓದಲು ಸಹಾಯ ಮಾಡ್ತಾರೆ.
ಪ್ರಶ್ನೆ: ನಿಮ್ಮ ಮನೆಗೆ ಸಾಕಷ್ಟು ನಟ-ನಟಿಯರು ಬರುತ್ತಾರೆ. ನಿಮಗೆ ಯಾವ ಕಲಾವಿದರ ಜೊತೆ ಭೇಟಿ ಆಗಿದ್ದು ಖುಷಿ ಕೊಟ್ಟಿದೆ?
ಉತ್ತರ: ಮೊದಲ ಬಾರಿಗೆ ʼನೆನಪಿರಲಿʼ ಪ್ರೇಮ್ ಅವರು ನನ್ನ ಜನ್ಮದಿನ ಆಚರಿಸಿದ್ದರು. ಅಲ್ಲಿಯವರೆಗೆ ನನ್ನ ಜನ್ಮದಿನಕ್ಕೆ ಕೇಕ್ ಕಟ್ ಮಾಡಿರಲಿಲ್ಲ.