The Kerala Story: ಬಳ್ಳಾರಿ ಕಾರ್ಯಕ್ರಮದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ; ಧನ್ಯವಾದ ಅರ್ಪಿಸಿದ ಅದಾ ಶರ್ಮಾ
ಕನ್ನಡ ಸುದ್ದಿ  /  ಮನರಂಜನೆ  /  The Kerala Story: ಬಳ್ಳಾರಿ ಕಾರ್ಯಕ್ರಮದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ; ಧನ್ಯವಾದ ಅರ್ಪಿಸಿದ ಅದಾ ಶರ್ಮಾ

The Kerala Story: ಬಳ್ಳಾರಿ ಕಾರ್ಯಕ್ರಮದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ; ಧನ್ಯವಾದ ಅರ್ಪಿಸಿದ ಅದಾ ಶರ್ಮಾ

ಕೇರಳದಂತ ಸುಂದರ ರಾಜ್ಯದಲ್ಲಿ ಭಯೋತ್ಪಾದನೆಯಂತ ಸಮಸ್ಯೆಯನ್ನು ತೋರಿಸಲಾಗಿದೆ. ಆದರೆ ಕಾಂಗ್ರೆಸ್‌ ಮಾತ್ರ ಇಂತಹ ಉತ್ತಮ ಸಂದೇಶವುಳ್ಳ ಸಿನಿಮಾವನ್ನು ಬ್ಯಾನ್‌ ಮಾಡಲು ಪ್ರತಿಭಟನೆ ನಡೆಸುತ್ತಿದೆ ಎಂದು ಮೋದಿ ಹೇಳಿದ್ದರು.

ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ 'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ
ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ 'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ

ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದ ವಿವಾದಾತ್ಮಕ 'ದಿ ಕೇರಳ ಸ್ಟೋರಿ' ಸಿನಿಮಾ ಮೇ 5 ರಂದು ರಿಲೀಸ್‌ ಆಗಿದೆ. ವಿವಾದಗಳ ನಡುವೆಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಕನ್ನಡ ನಟ ವಿಜಯ್‌ ಕೃಷ್ಣ ನಟಿಸಿದ್ದು ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಈ ನಡುವೆ ಚಿತ್ರದ ನಟಿ ಅದಾ ಶರ್ಮಾ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಮ್ಮ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗೌರವಾನ್ವಿತ ಪ್ರಧಾನಿ ಮೋದಿಯವರು ನಮ್ಮ ಚಲನಚಿತ್ರದ ಬಗ್ಗೆ ಮಾತನಾಡಿದ್ದಾರೆ. ''ಪ್ರೇಕ್ಷಕರು ನನ್ನ ಅಭಿನಯವನ್ನು ಶ್ಲಾಘಿಸುತ್ತಿದ್ದಾರೆ. ಚಿತ್ರಮಂದಿರ ಹೌಸ್‌ಫುಲ್‌ ಆಗಿದೆ. ಬಂಪರ್‌ ಓಪನಿಂಗ್‌ ಸಿಕ್ಕಿದೆ. ನಾನು ಎಂದಿಗೂ ಇಷ್ಟು ದೊಡ್ಡ ಕನಸು ಕಂಡಿದವಳಲ್ಲ. ಆದರೆ ನಮ್ಮ ದಿ ಕೇರಳ ಸ್ಟೋರಿ ಸಿನಿಮಾವನ್ನು ಕೆಲವರು ಪ್ರಚಾರದ ಚಿತ್ರ ಎಂದು ಕರೆಯುತ್ತಿದ್ದಾರೆ. ನಿಮ್ಮೆಲ್ಲರಲ್ಲಿ ನಾನು ಮನವಿ ಮಾಡುವುದು ಒಂದೇ. ನೀವು ಗೂಗಲ್‌ನಲ್ಲಿ ISIS ಹಾಗೂ Brides ಪದಗಳನ್ನು ಹುಡುಕಿ ನೋಡಿ. ಆಗ ಇದು ನಮ್ಮ ನಿಜವಾದ ಭಾರತೀಯ ಸಿನಿಮಾ ಎಂಬುದು ಅರ್ಥವಾಗುತ್ತದೆ'' ಎಂದು ಅದಾ ಶರ್ಮಾ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ''ನೀವು ದಿ ಕೇರಳ ಸ್ಟೋರಿ ಸಿನಿಮಾ ನೋಡುವಷ್ಟು ಧೈರ್ಯವಂತರೇ?'' ಎಂದು ಬರೆದುಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿ ಸಮಯದಲ್ಲಿ ನರೇಂದ್ರ ಮೋದಿ ದಿ ಕೇರಳ ಸ್ಟೋರಿ ಚಿತ್ರದ ಬಗ್ಗೆ ಮಾತನಾಡಿದ್ದರು. ''ದಿ ಕೇರಳ ಸ್ಟೋರಿ ಚಿತ್ರದಲ್ಲಿ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸಲಾಗಿದೆ. ಕೇರಳದಂತ ಸುಂದರ ರಾಜ್ಯದಲ್ಲಿ ಭಯೋತ್ಪಾದನೆಯಂತ ಸಮಸ್ಯೆಯನ್ನು ತೋರಿಸಲಾಗಿದೆ. ಆದರೆ ಕಾಂಗ್ರೆಸ್‌ ಮಾತ್ರ ಇಂತಹ ಉತ್ತಮ ಸಂದೇಶವುಳ್ಳ ಸಿನಿಮಾವನ್ನು ಬ್ಯಾನ್‌ ಮಾಡಲು ಪ್ರತಿಭಟನೆ ನಡೆಸುತ್ತಿದೆ'' ಎಂದು ಮೋದಿ ಹೇಳಿದ್ದರು. ಇದನ್ನು ಉಲ್ಲೇಖಿಸಿ ನಟಿ ಅದಾ ಶರ್ಮಾ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಡೈಲಾಗ್‌ಗಳಿಂದಲೇ ವಿವಾದದ ಕೇಂದ್ರಬಿಂದುವಾಗಿದ್ದ ಸಿನಿಮಾ

ಏಪ್ರಿಲ್‌ ಕೊನೆಯ ವಾರದಲ್ಲಿ ಚಿತ್ರತಂಡ ಟ್ರೇಲರ್‌ ರಿಲೀಸ್‌ ಮಾಡಿತ್ತು. ಟ್ರೇಲರ್‌ ಆರಂಭದಲ್ಲಿ ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್‌ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತೆಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. ''ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?'' ಎಂದು ಮುಸ್ಲಿಂ ಯುವತಿ ಕೇಳುತ್ತಾಳೆ. ಹಾಗೇ ಶಾಲಿನಿಗೆ ಮಾಲ್‌ವೊಂದರಲ್ಲಿ ಅವಮಾನವಾದಾಗ ಅದೇ ಮುಸ್ಲಿಂ ಯುವತಿ, ''ಹಿಜಾಬ್‌ ಧರಿಸಿದ ಯಾವುದೇ ಮಹಿಳೆಯನ್ನು ಯಾರೂ ಅತ್ಯಾಚಾರ ಮಾಡಲಾಗುವುದಿಲ್ಲ, ಯಾರೂ ರೇಗಿಸುವುದೂ ಇಲ್ಲ, ಏಕೆಂದರೆ ಅಲ್ಲಾಹ್‌ ಅವರನ್ನು ಯಾವಾಗಲೂ ರಕ್ಷಿಸುತ್ತಾರೆ'' ಎಂಬ ಮಾತುಗಳನ್ನು ಆಡಿ, ಶಾಲಿನಿ ಮುಸ್ಲಿಂ ಧರ್ಮಕ್ಕೆ ಸೇರುವಂತೆ ಪ್ರೇರೇಪಿಸುತ್ತಾಳೆ. ಮುಸ್ಲಿಂ ಯುವತಿಯ ಪಾತ್ರದ ಈ ಡೈಲಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್‌ ಪಿಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌, ವಿಪುಲ್‌ ಅಮೃತ್‌ಲಾಲ್‌ ಶಾ ಪ್ರೊಡಕ್ಷನ್ಸ್‌ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ವಿಜಯ್‌ ಕೃಷ್ಣ, ಪ್ರಣಯ್‌ ಪಚೊರಿ, ಪ್ರಣವ್‌ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

Whats_app_banner