ಕನ್ನಡ ಸುದ್ದಿ  /  ಮನರಂಜನೆ  /  ಸುಳ್ಳು ಹೇಳ್ತಿಲ್ಲ, ಪುಷ್ಪ ಚಿತ್ರದಿಂದ ನನಗೆ ಏನೂ ಲಾಭವಾಗಿಲ್ಲ! ಮಲಯಾಳಿ ನಟ ಫಹಾದ್‌ ಫಾಸಿಲ್‌ ಹೇಳಿಕೆಗೆ ತೆಲುಗು ಫ್ಯಾನ್ಸ್‌ ಗರಂ

ಸುಳ್ಳು ಹೇಳ್ತಿಲ್ಲ, ಪುಷ್ಪ ಚಿತ್ರದಿಂದ ನನಗೆ ಏನೂ ಲಾಭವಾಗಿಲ್ಲ! ಮಲಯಾಳಿ ನಟ ಫಹಾದ್‌ ಫಾಸಿಲ್‌ ಹೇಳಿಕೆಗೆ ತೆಲುಗು ಫ್ಯಾನ್ಸ್‌ ಗರಂ

ಪುಷ್ಪ ಚಿತ್ರದಿಂದ ನನ್ನ ಕೆರಿಯರ್‌ಗೆ ಏನೂ ಪ್ರಯೋಜನ ಆಗಿಲ್ಲ ಎನ್ನುವ ಮೂಲಕ ತೆಲುಗು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಮಾಲಿವುಡ್‌ ನಟ ಫಹಾದ್‌ ಫಾಸಿಲ್‌. ಅಷ್ಟಕ್ಕೂ ಫಹಾದ್‌ ಹೇಳಿದ್ದೇನು? ಇಲ್ಲಿದೆ ವಿವರ

ಸುಳ್ಳು ಹೇಳ್ತಿಲ್ಲ, ಪುಷ್ಪ ಚಿತ್ರದಿಂದ ನನಗೆ ಏನೂ ಲಾಭವಾಗಿಲ್ಲ! ಮಲಯಾಳಿ ನಟ ಫಹಾದ್‌ ಫಾಸಿಲ್‌ ಹೇಳಿಕೆಗೆ ತೆಲುಗು ಫ್ಯಾನ್ಸ್‌ ಗರಂ
ಸುಳ್ಳು ಹೇಳ್ತಿಲ್ಲ, ಪುಷ್ಪ ಚಿತ್ರದಿಂದ ನನಗೆ ಏನೂ ಲಾಭವಾಗಿಲ್ಲ! ಮಲಯಾಳಿ ನಟ ಫಹಾದ್‌ ಫಾಸಿಲ್‌ ಹೇಳಿಕೆಗೆ ತೆಲುಗು ಫ್ಯಾನ್ಸ್‌ ಗರಂ

fahadh faasil on Pushpa: ಟಾಲಿವುಡ್‌ ಅಂಗಳದಲ್ಲಿ ಸದ್ಯ ಪುಷ್ಪ 2 ಚಿತ್ರದ್ದೇ ಸುದ್ದಿ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲು ರೆಡಿಯಾಗಿರುವ ಈ ಸಿನಿಮಾ, ಈಗಾಗಲೇ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. ಅಲ್ಲು ಅರ್ಜುನ್‌ ಅವರ ಮಾಸ್‌ ಅವತಾರ, ಮಲಯಾಳಿ ನಟ ಫಹಾದ್‌ ಫಾಸಿಲ್‌ ಗತ್ತು, ರಶ್ಮಿಕಾ ಮಂದಣ್ಣ ಬ್ಯೂಟಿ.. ನೋಡುಗರನ್ನು ಸೆಳೆದಿದೆ. ಇನ್ನೇನು ಬಿಡುಗಡೆಗೆ ಹತ್ತಿರವಿರುವ ಈ ಸಿನಿಮಾದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಸೋಷಿಯಲ್‌ ಮೀಡಿಯಾದಲ್ಲೂ ಈ ಹಾಡಿನ ರೀಲ್ಸ್‌ಗಳೂ ಸದ್ಯ ಟ್ರೆಂಡಿಂಗ್‌ನಲ್ಲಿವೆ. ಈ ನಡುವೆಯೇ ಇದೇ ಚಿತ್ರದ ನಟ ಫಹಾದ್‌ ಫಾಸಿಲ್‌ ಅವರ ಇತ್ತೀಚಿನ ಹೇಳಿಕೆಯೊಂದು ಸದ್ಯ ವೈರಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

2021ರಲ್ಲಿ ಬಿಡುಗಡೆಯಾದ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದಲ್ಲಿ ಫಹಾದ್‌ ಫಾಸಿಲ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಗತ್ತು ತೋರಿಸಿದ್ದರು. ಮೊದಲ ಭಾಗದಲ್ಲಿ ಎಸ್‌ಪಿ ಭನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಅವರು ಮಿಂಚು ಹರಿಸಿದ್ದರು. ಇದೀಗ ಎರಡನೇ ಭಾಗದಲ್ಲಿಯೂ ಅದು ಮುಂದುವರಿದಿದೆ. ಫಹಾದ್‌ ಫಾಸಿಲ್‌ ಪಾತ್ರಕ್ಕೆ ಇಡೀ ತೆಲುಗು ಮಂದಿ ಫಿದಾ ಆಗಿದ್ದರು. ಅಷ್ಟೇ ಅಲ್ಲ ಅವರಿಗೆ ಕೆಂಪು ಹಾಸಿನ ಸ್ವಾಗತವನ್ನೂ ಕೋರಿದ್ದರು. ಆದರೆ, ಈಗ ಇದೇ ತೆಲುಗು ಪ್ರೇಕ್ಷಕರು ಫಹಾದ್‌ ಹೇಳಿಕೆಯಿಂದ ಬೇಸರಗೊಂಡಿದ್ದಾರೆ.

ಮಲಯಾಳಂನಲ್ಲಿ ಫಹಾದ್‌ ಫಾಸಿಲ್‌ ಅವರದ್ದು ದೊಡ್ಡ ಹೆಸರು. ನಟನೆಯಲ್ಲಿಯೇ ಪ್ರಯೋಗಕ್ಕಿಳಿಯುವ ಕಲಾವಿದ. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ನೀಡುತ್ತ ಬರೀ ಮಾಲಿವುಡ್‌ನಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಈ ನಡುವೆ ಫಿಲಂ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ಪುಷ್ಪ ಸಿನಿಮಾದ ಯಶಸ್ಸಿನ ಬಗ್ಗೆ ಫಹಾದ್‌ ಮಾತನಾಡಿದ್ದಾರೆ. ಪುಷ್ಪ ಚಿತ್ರದಿಂದ ನನ್ನ ಕೆರಿಯರ್‌ಗೆ ಏನೂ ಪ್ರಯೋಜನ ಆಗಿಲ್ಲ ಎನ್ನುವ ಮೂಲಕ ತೆಲುಗು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಷ್ಟಕ್ಕೂ ಫಹಾದ್‌ ಹೇಳಿದ್ದೇನು?

ಪುಷ್ಪ ನಂತರ ಪ್ಯಾನ್‌ ಇಂಡಿಯಾ ನಟರಾದ್ರಾ? ಎಂಬ ಪ್ರಶ್ನೆ ಸಂದರ್ಶಕರಿಂದ ಬಂದಿದೆ. ಅದಕ್ಕೆ ಉತ್ತರಿಸಿದ ಫಹಾದ್‌, "ಪುಷ್ಪ ಸಿನಿಮಾದಲ್ಲಿನ ಭನ್ವರ್ ಸಿಂಗ್ ಶೇಖಾವತ್ ಎಂಬ ಪೊಲೀಸ್ ಪಾತ್ರವು ನನ್ನ  ವೃತ್ತಿಜೀವನದಲ್ಲಿ ಯಾವುದೇ ನಿರ್ದಿಷ್ಟ ವ್ಯತ್ಯಾಸ ತಂದುಕೊಡಲಿಲ್ಲ. ಪುಷ್ಪ ಸಿನಿಮಾದಿಂದ ನನ್ನ ವೃತ್ತಿಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳಿಲ್ಲ. ನಾನು ಇಲ್ಲಿ ಸುಳ್ಳು ಹೇಳ್ತಿಲ್ಲ. ಆ ಥರದ ಉದ್ದೇಶವೂ ನನಗಿಲ್ಲ. ಇದೇ ಮಾತನ್ನು ನಾನು ನಿರ್ದೇಶಕ ಸುಕುಮಾರ್ ಅವರಿಗೂ ಹೇಳಿದ್ದೇನೆ. ಅದನ್ನು ಮುಚ್ಚಿಡುವ ಅಗತ್ಯವಿಲ್ಲ" ಎಂದಿದ್ದಾರೆ ಫಹಾದ್.

ಮಾಲಿವುಡ್‌ಗೆ ಮೊದಲ ಪ್ರಾಶಸ್ತ್ಯ

"ನಾನು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಯಾವುದಕ್ಕೂ ನಾನು ಅಗೌರವ ತೋರುತ್ತಿಲ್ಲ. ಪುಷ್ಪ ಬಿಡುಗಡೆಯಾದ ಬಳಿಕ ಪ್ರೇಕ್ಷಕರು ನನ್ನಿಂದ ಮ್ಯಾಜಿಕ್ ಅನ್ನು ನಿರೀಕ್ಷಿಸುತ್ತಾರೆ. ಇದು ಸುಕುಮಾರ್ ಸರ್ ಅವರ ಶುದ್ಧ ಕೊಲಾಬರೇಷನ್ ಮತ್ತು ಪ್ರೀತಿ. ನನ್ನ ಜೀವನ ಏನೇ ಇದ್ದರೂ ಅದು ಮಲಯಾಳಂ ಚಿತ್ರರಂಗ. ನಾನು ಏನೇ ಮಾಡುವುದಿದ್ದರೂ ಅದು ಮಲಯಾಳಂನಲ್ಲಿ. ಪುಷ್ಪ ಸಿನಿಮಾ ಬಳಿಕ ಮಲಯಾಳಂ ಬಾರದವರೂ ಮಲಯಾಳಂ ಸಿನಿಮಾ ನೋಡುತ್ತಿದ್ದಾರೆ ಅದೇ ಖುಷಿ" ಎಂದು ಫಹಾದ್ ಸ್ಪಷ್ಟಪಡಿಸಿದ್ದಾರೆ.

ತೆಲುಗು ಫ್ಯಾನ್ಸ್ ಗರಂ

ಫಹಾದ್‌ ಅವರ ಈ ಹೇಳಿಕೆ ಸದ್ಯ ಟಾಲಿವುಡ್‌ ಅಂಗಳದಲ್ಲಿ ಚರ್ಚೆಯ ವಿಷಯವಾಗಿದೆ. ಅಲ್ಲು ಅರ್ಜುನ್‌ ಫ್ಯಾನ್ಸ್‌, ಫಹಾದ್‌ ಮಾತಿನಿಂದ ಬೇಸರಗೊಂಡಿದ್ದಾರೆ. ಪುಷ್ಪ ಸಿನಿಮಾದಿಂದಲೇ ಇಷ್ಟು ಖ್ಯಾತಿ ಪಡೆದ ನೀವು, ಈಗ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಇತ್ತ ಪುಷ್ಪ 2 ಚಿತ್ರ ಇದೇ ವರ್ಷದ ಆಗಸ್ಟ್‌ 15ರಂದು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಫಹಾದ್‌ ಫಾಸಿಲ್‌ ನಾಯಕನಾಗಿ ನಟಿಸಿದ ಆವೇಶಂ ಸಿನಿಮಾ, ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಿದೆ. ಒಟಿಟಿಯಲ್ಲೂ ಚಿತ್ರಕ್ಕೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ 100 ಕೋಟಿಗೂ ಅಧಿಕ ಕಮಾಯಿ ಮಾಡಿತ್ತು. 

IPL_Entry_Point