Bramayugam: ಭ್ರಮಯುಗಂ ಸಿನಿಮಾಕ್ಕೆ ಪ್ರೇಕ್ಷಕರ ಮೆಚ್ಚುಗೆ, ಮಮ್ಮುಟ್ಟಿ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು? ನಿಗೂಢ ಭಯಾನಕ ಭ್ರಮಯುಗಂ
Bramayugam Mammootty Movie: ಈ ವಾರ ಮಾಲಿವುಡ್‌ನಲ್ಲಿ ಬಿಡುಗಡೆಯಾದ ಮಮ್ಮುಟಿ ನಟನೆಯ ಭ್ರಮಯುಗಂ ಸಿನಿಮಾದ ಕುರಿತು ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆ ಕೇಳಿಬರುತ್ತಿದೆ. ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಸೇರಿದಂತೆ ಭ್ರಮಯುಗಂ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಸೂಪರ್‌ಸ್ಟಾರ್ ಮಮ್ಮುಟ್ಟಿ ನಟನೆಯ ಭ್ರಮಯುಗಂ ಈ ವಾರ ಮಾಲಿವುಡ್‌ನಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿ 15, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ರಾಹುಲ್ ಸದಾಶಿವನ್ ನಿರ್ದೇಶನ ಮಾಡಿದ್ದಾರೆ. ಮಮ್ಮುಟಿಯ ಭ್ರಮಯುಗಂ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳುಬರುತ್ತಿವೆ. ಮಮ್ಮುಟ್ಟಿಯ ಈ ಹಿಂದಿನ ಕೆಲವು ಕಥಲ್ ದಿ ಕೋರ್, ಕಣ್ಣೂರು ಸ್ಕ್ವಾಡ್ ಸಿನಿಮಾಗಳಿಗಿಂತ ಬ್ರಹ್ಮಂಯುಗಂ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಉತ್ತಮವಾಗಿದೆ.
ಮಮ್ಮುಟ್ಟಿ ನಟನೆಯ ಭ್ರಮಯುಗಂ ಸಿನಿಮಾದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರಥನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಬಾಕ್ಸ್ ಆಫೀಸ್‌ನಲ್ಲಿ ಭ್ರಮಯುಗಂ ಸಿನಿಮಾವು ಮೊದಲ ದಿನ 3.10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸಚ್‌ನಿಲ್ಕ್.ಕಾಂನ ವರದಿ ತಿಳಿಸಿದೆ. ನಿನ್ನೆ ಮಲಯಾಳಂ ಸಿನಿಮಾ ಮಂದಿರಗಳಲ್ಲಿ ಈ ಸಿನಿಮಾದ ಒಟ್ಟಾರೆ ಆಕ್ಯುಪೆನ್ಸಿ ಶೇಕಡ 46.52 ಇತ್ತು. ಬಳಿಕ ಈ ಪ್ರಮಾಣ ಶೇಕಡ 64.27ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಭ್ರಮಯುಗಂ ಅತ್ಯಧಿಕ ಪ್ರದರ್ಶನ
ಭ್ರಮಯುಗಂ ಸಿನಿಮಾವು ಬೆಂಗಳೂರಿನಲ್ಲಿ ಅತ್ಯಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನಲ್ಲಿ 158 ಶೋಗಳು, ಕೊಚ್ಚಿಯಲ್ಲಿ 128 ಶೋಗಳು ಮತ್ತು ತಿರುವನಂತಪುರಂನಲ್ಲಿ 115 ಶೋಗಳು ಪ್ರದರ್ಶನಗೊಳ್ಳುತ್ತಿವೆ ಎಂದು ಕೊಯಿಮೊಯಿ.ಕಾಂ ವರದಿ ತಿಳಿಸಿದೆ.
ಮಮ್ಮುಟ್ಟಿಯ ಹಿಂದಿನ ಸಿನಿಮಾಗಳ ಕಲೆಕ್ಷನ್‌ಗೆ ಹೋಲಿಕೆ
ಮಮ್ಮುಟ್ಟಿಯ ಈ ಹಿಂದಿನ ಸಿನಿಮಾಗಳ ಕಲೆಕ್ಷನ್‌ಗೆ ಹೋಲಿಸಿ ನೋಡೋಣ. ಇತ್ತೀಚೆಗೆ ಅಂದರೆ ಜನವರಿ 25ರಂದು ಮಲೈಕೊಟೈ ವಾಲಿಬಾನ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಇದರ ಜಾಗತಿಕ ಕಲೆಕ್ಷನ್ 29.75 ಕೋಟಿ ಆಗಿದೆ. ಭಾರತದಲ್ಲಿ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದಕ್ಕೂ ಮೊದಲು ಒಂದಿಷ್ಟು ನಕಾರಾತ್ಮಕ ವಿಮರ್ಶೆಗೆ ಕಾರಣವಾದ ಮಮ್ಮುಟ್ಟಿಯ ಕಥಲ್-ದಿ ಕೋರ್ ಸಿನಿಮಾವು ಮೊದಲ ದಿನ 1.05 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದು 2023ರ ಭಾರತದ ಅತ್ಯುತ್ತಮ ಸಿನಿಮಾ ಎಂಬ ವಿಮರ್ಶೆಗೆ ಪಾತ್ರವಾಗಿತ್ತು. ಒಟ್ಟಾರೆ ಈ ಸಿನಿಮಾ 10.87 ಕೋಟಿ ರೂಪಾಯಿ ಗಳಿಸಿತ್ತು. ಇದೇ ರೀತಿ ಕಣ್ಣೂರು ಸ್ಕ್ವಾಡ್ ಸಿನಿಮಾವು ಮೊದಲ ದಿನ 2.2 ಕೋಟಿ ಗಳಿಸಿತ್ತು. ಇವೆಲ್ಲ ಸಿನಿಮಾಗಳು ಮಲಯಾಳಂ ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾಗಳು.
ಭ್ರಮಯುಗಂ ಸಿನಿಮಾ ವಿಮರ್ಶೆ
ಹಿಂದೂಸ್ತಾನ್ ಟೈಮ್ಸ್ ಕನ್ನಡವು ಈ ಸಿನಿಮಾವನ್ನು ಇನ್ನೂ ವೀಕ್ಷಿಸಿಲ್ಲ. ಆನ್‌ಲೈನ್‌ನಲ್ಲಿ ಈ ಸಿನಿಮಾದ ಕುರಿತು ಸಾಕಷ್ಟು ಸಕಾರಾತ್ಮಕ ವಿಮರ್ಶೆಗಳು ಪ್ರಕಟವಾಗಿವೆ. ಇದು ಮಿಸ್ ಮಾಡದೆ ನೋಡಬೇಕಾದ ಮಮ್ಮುಟ್ಟಿಯ ಸಿನಿಮಾ ಎಂದು ಹೇಳಲಾಗುತ್ತಿದೆ. ಹಲವು ವಿಮರ್ಶೆಗಳು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ.
ಭ್ರಮಯುಗಂ ಸಿನಿಮಾದ ಕಥೆ
ಇದು ಫೋರ್ಚುಗೀಸ್ ಕಾಲದ ಕಥೆಯನ್ನು ಹೊಂದಿದೆ. ಫೋರ್ಚ್‌ಗೀಸರು ಕೇರಳವನ್ನು ಲೂಟಿ ಮಾಡುತ್ತಿರುವ ಸಂದರ್ಭದಲ್ಲಿ ಪಾನನ (ಅರ್ಜುನ್ ಅಶೋಕನ್) ಎಂಬಾತ ಗುಲಾಮಗಿರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಕಾಡಿನಲ್ಲಿ ದಾರಿ ತಪ್ಪಿ ಮಹಲೊಂದರ ಮೇಲೆ ಬೀಳುತ್ತಾನೆ. ಆ ಪಾಳು ಬಿದ್ದ ಮಹಲಿನಲ್ಲಿ (ಬಂಗಲೆಯಲ್ಲಿ) ಯುಜಮಾನ ಇರುತ್ತಾನೆ. ಆ ಮನೆಯ ಒಂದು ಭಾಗ ಪಾಳುಬಿದ್ದಿದೆ. ಕೊಡುಮೋನ್ ಪೊಟ್ಟಿ (ಮಮ್ಮುಟ್ಟಿ) ಈ ಬಂಗಲೆಯ ಮಾಲೀಕ. ಆತನ ಜತೆ ಇನ್ನೊಬ್ಬ ಮಾತ್ರ ಇರುತ್ತಾನೆ. ಅಂದರೆ, ಆತನ ಜತೆ ಒಬ್ಬ ಅಡುಗೆಯಾತ (ಸಿದ್ಧಾರ್ಥ್ ಭರತನ್) ಮೌನವಾಗಿ ಇರುತ್ತಾನೆ. ಈ ಮಹಲು ಮತ್ತು ಅದರ ಯುಜಮಾನನ ಬಗ್ಗೆ ಆ ಅಡುಗೆಯಾತನಿಗೆ ನಿಗೂಢ ಸಂಗತಿಗಳು ತಿಳಿದಿರುತ್ತವೆ.
ಇಂತಹ ಮನೆಗೆ ಪಾನನ ಎಂಟ್ರಿ ನೀಡುತ್ತಾನೆ. ಉತ್ತಮ ಹಾಡುಗಾರನಾದ ಪಾಣನನು ತನ್ನ ಹಾಡುಗಾರಿಕೆಯಿಂದ ಮನೆಯ ಯಜಮಾನನನ್ನು ಮೆಚ್ಚಿಸುತ್ತಾನೆ. ಇವನ ಹಾಡಿಗೆ ಮೆಚ್ಚಿ ಆಹಾರ ನೀಡುತ್ತಾನೆ. ಪಾನನ ಈ ಬಂಗಲೆಯಲ್ಲಿ ಶಾಶ್ವತವಾಗಿ ಇರಬೇಕೆಂದು ಕೊಡಮೋನ್ ಪೊಟ್ಟಿ ಬಯಸುತ್ತಾನೆ. ಆರಂಭದಲ್ಲಿ ಪಾನನ್ ಆಗೋದಿಲ್ಲ ಅನ್ನುತಾನೆ. ಕೊಡುಮೋನ್ ಒತ್ತಾಯಕ್ಕೆ ಒಪ್ಪಿ ಅಲ್ಲಿ ಇರುತ್ತಾನೆ. ಪಾನನಿಗೆ ತಾನು ಸಿಲುಕಿರುವ ಅಪಾಯದ ಕುರಿತು ತಿಳಿದಿಲ್ಲ. ಈ ಮಹಲ್ಲಿಗೆ ಎಂಟ್ರಿ ನೀಡಿದ ಬಳಿಕ ಹೊರಕ್ಕೆ ಹೋಗುವುದು ಸಾಧ್ಯವಿಲ್ಲ ಎನ್ನುವುದು ಆತನಿಗೆ ತಿಳಿದಿಲ್ಲ. ಈ ಕೌತುಕ, ನಿಗೂಢ, ಬೆಚ್ಚಿಬೀಳಿಸುವ ಕಥೆಯನ್ನು ಭ್ರಮಯುಗಂ ಹೊಂದಿದೆ.