Fahadh Faasil: ಸಿನಿಮಾಕ್ಕಿಂತ ಬದುಕು ದೊಡ್ಡದು; ನನ್ನ ಬಗ್ಗೆ ಚರ್ಚಿಸಬೇಡಿ ಎಂದ ಫಹಾದ್‌ ಫಾಸಿಲ್‌; ಹೊಸ ಚರ್ಚೆಗೆ ನಾಂದಿ ಹಾಡಿದ ಆವೇಶಂ ನಟ
ಕನ್ನಡ ಸುದ್ದಿ  /  ಮನರಂಜನೆ  /  Fahadh Faasil: ಸಿನಿಮಾಕ್ಕಿಂತ ಬದುಕು ದೊಡ್ಡದು; ನನ್ನ ಬಗ್ಗೆ ಚರ್ಚಿಸಬೇಡಿ ಎಂದ ಫಹಾದ್‌ ಫಾಸಿಲ್‌; ಹೊಸ ಚರ್ಚೆಗೆ ನಾಂದಿ ಹಾಡಿದ ಆವೇಶಂ ನಟ

Fahadh Faasil: ಸಿನಿಮಾಕ್ಕಿಂತ ಬದುಕು ದೊಡ್ಡದು; ನನ್ನ ಬಗ್ಗೆ ಚರ್ಚಿಸಬೇಡಿ ಎಂದ ಫಹಾದ್‌ ಫಾಸಿಲ್‌; ಹೊಸ ಚರ್ಚೆಗೆ ನಾಂದಿ ಹಾಡಿದ ಆವೇಶಂ ನಟ

ಮಲಯಾಳಂ ನಟ ಫಹಾದ್‌ ಫಾಸಿಲ್‌ ಅವರು ಜೀವನದ ಕುರಿತು ಮಾತನಾಡಿದ್ದಾರೆ. ಕೇವಲ ಸಿನಿಮಾದ ಕುರಿತು ಮಾತ್ರ ಯೋಚಿಸದೆ ಜೀವನದ ಬಗ್ಗೆಯೂ ಯೋಚಿಸಬೇಕು. ಯಾವುದೇ ನಟ ಅಥವಾ ಆತನ ಬದುಕಿನ ಕುರಿತು ಪ್ರೇಕ್ಷಕರು ಗೀಳು ಹೊಂದಿರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆವೇಶಂ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌
ಆವೇಶಂ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌

ಬೆಂಗಳೂರು: ಆವೇಶಂ ಸಿನಿಮಾದ ಅಭಿನಯಕ್ಕಾಗಿ ಎಲ್ಲೆಡೆ ಫಹಾದ್‌ ಫಾಸಿಲ್‌ ಕುರಿತು ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಪ್ರೇಮಿಗಳಿಗೆ ಆಪ್ತವಾಗಿರುವ ಈ ನಟನು ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಗಲಟ್ಟಾಪ್ಲಸ್‌ನಲ್ಲಿ ಭಾರದ್ವಜ್‌ ರಂಗನ್‌ ಜತೆಗಿನ ಸಂದರ್ಶನದಲ್ಲಿ ಫಹಾದ್‌ ಫಾಸಿಲ್‌ ಅವರು "ಜೀವನ ಎನ್ನುವುದು ಚಲನಚಿತ್ರಗಳನ್ನು ನೋಡುವುದಕ್ಕಿಂತ ಹೆಚ್ಚಿನದ್ದಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೀವನ ಮತ್ತು ಸಿನಿಮಾದ ಬಗ್ಗೆ ಫಹಾದ್‌ ಫಾಸಿಲ್‌ ಮಾತು

"ತನ್ನ ಮತ್ತು ತನ್ನ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ಇರುವ ಗ್ರಹಿಕೆಯನ್ನು ಫಹಾದ್‌ ಫಾಸಿಲ್‌ ತಿಳಿಸಿದ್ದಾರೆ. "ನನಗೆ ಸಮಯದ ಕುರಿತು ತಿಳಿದಿಲ್ಲ. ನಾನು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡುವುದಿಲ್ಲ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸುವುದಿಲ್ಲ. ನಾನು ಮಾಡುವ ಯೋಜನೆಗಳು ಪೂರ್ವ ಯೋಜಿತವಲ್ಲ. ನನಗೆ ಆಸಕ್ತಿ ಇರುವ ಕೆಲಸಗಳನ್ನು ಮಾಡುತ್ತಿದ್ದೇನೆ. ನಾನು ಯಾವಾಗಲೂ ಪ್ರೇಕ್ಷಕರಿಗೆ ಹೇಳುವುದು ಇಷ್ಟೇ. ನನ್ನ ಸಿನಿಮಾ ನೋಡಿ ಎಂದು ಪ್ರೇಕ್ಷಕರಿಗೆ ತಿಳಿಸಲು ಪ್ರಯತ್ನಿಸುವೆ. ನನ್ನ ಚಲನಚಿತ್ರಗಳ ಕುರಿತು ಮಾತ್ರ ಯೋಚಿಸಿ. ನನ್ನ ಬಗ್ಗೆ, ನನ್ನ ಜೀವನದ ಬಗ್ಗೆ ಯೋಚಿಸಬೇಡಿ. ನಾನು ಏನು ಮಾಡುತ್ತಿದ್ದೇನೆ ಎಂದು ಪ್ರೇಕ್ಷಕರು ಚಿಂತಿಸುವುದನ್ನು ನಾನು ಬಯಸುವುದಿಲ್ಲ. ನೀವು ಥಿಯೇಟರ್‌ನಿಂದ ಹೊರಬಂದ ನಂತರ ನನ್ನನ್ನು ಗಂಭೀರವಾಗಿ ಪರಿಗಣಿಸಬೇಡಿ. ನೀವು ಚಿತ್ರಮಂದಿರಗಳಲ್ಲಿ ಇರುವಾಗ ಮಾತ್ರ ನನ್ನ ಬಗ್ಗೆ ಯೋಚಿಸಿ. ಜನರು ತಮ್ಮ ಡೈನಿಂಗ್‌ ಟೇಬಲ್‌ಗಳಲ್ಲಿ ನಟರು ಅಥವಾ ಅವರ ಅಭಿನಯದ ಕುರಿತು ಚರ್ಚಿಸುವುದನ್ನು ನಾನು ಬಯಸುವುದಿಲ್ಲ. ಸಿನಿಮಾ ನೋಡಿ ಚಿತ್ರಮಂದಿರದಲ್ಲಿ ಚರ್ಚಿಸಿ, ಚಿತ್ರ ನೋಡಿ ಮನೆಗೆ ಹಿಂತುರುಗುವಾಗ ಚರ್ಚಿಸಿ. ಸಿನಿಮಾ ಎಂದರೆ ಅಷ್ಟೇ. ಅದಕ್ಕೂ ಮಿತಿಯಿದೆ. ಸಿನಿಮಾ ನೋಡುವುದಕ್ಕಿಂತ ನೀವು ಜೀವನದಲ್ಲಿ ಇನ್ನೂ ಹೆಚ್ಚಿನದ್ದನ್ನು ಮಾಡಬಹುದು" ಎಂದು ಅವರು ಹೇಳಿದ್ದಾರೆ. ಇವರ ಮಾತುಗಳ ಕುರಿತು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಸಿನಿಮಾ

ಫಹಾದ್‌ ಫಾಸಿಲ್‌ ನಟನೆಯ ಸಾಹಸ-ಹಾಸ್ಯ ಸಿನಿಮಾ ಆವೇಶಂ ಇತ್ತೀಚೆಗೆ ಬಿಡುಗಡೆಯಾಗಿದೆ. 20 ಕೋಟಿ ರೂಪಾಯಿ ಬಜೆಟ್‌ನ ಈ ಸಿನಿಮಾ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಈ ಸಿನಿಮಾವು ಏಪ್ರಿಲ್ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಈ ಸಿನಿಮಾದ ಒಟಿಟಿ ಬಿಡುಗಡೆಯ ಕುರಿತು ಮಾಹಿತಿ ದೊರಕಿದೆ. ವರದಿಗಳ ಪ್ರಕಾರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಮೇ 17ರಂದು ಸ್ಟ್ರೀಮಿಂಗ್‌ ಆಗಲಿದೆ. ಈ ಸಿನಿಮಾವನ್ನು ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೋಡಬಹುದು.

ಫಹಾದ್‌ ಫಾಸಿಲ್‌ ಕುರಿತು

ಅಬ್ದುಲ್‌ ಹಮೀದ್‌ ಮಹಮ್ಮದ್‌ ಫಹಾದ್‌ ಫಾಸಿಲ್‌ ಅವರು 1982ರ ಆಗಸ್ಟ್‌ 8ರಂದು ಜನಿಸಿದರು. ಇವರು ಮಲಯಾಳಂ ಮತ್ತು ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಪ್ರಶಸ್ತಿ ಪಡೆದಿದ್ದಾರೆ. ಮೂರು ಫಿಲ್ಮ್‌ ಫೇರ್‌ ಸೌತ್‌ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಸಿನಿಮಾ ತಯಾರಕ ಫಾಜಿಲ್‌ ಅವರ ಮಗನಾದ ಫಹಾದ್‌ ತನ್ನ 20ನೇ ವಯಸ್ಸಿನಲ್ಲಿ ನಟನೆ ಆರಂಭಿಸಿದರು. ಕೈಥೆಮ್‌ ದೂರತ್‌ ಸಿನಿಮಾದ ಮೂಲಕ ಸಿನಿಪ್ರಯಾಣ ಆರಂಭಿಸಿದರು. ಇದಾದ ಬಳಿಕ ಏಳು ವರ್ಷದ ಗ್ಯಾಪ್‌ನ ನಂತರ ಕೇರಳ ಕೆಫೆ ಸಿನಿಮಾದ ಮೂಲಕ ವಾಪಸ್ಸಾದರು. ಚಪ್ಪಾ ಕುರಿಸು ಸಿನಿಮಾದಲ್ಲಿ ಇವರ ಅರ್ಜುನ್‌ ಪಾತ್ರ ಪ್ರೇಕ್ಷಕರ ಗಮನ ಸೆಳೆಯಿತು. 22 ಫಿಮೇಲ್‌ ಕೊಟ್ಟಾಯಂ ಸಿನಿಮಾದ ನಟನೆಗಾಗಿ ಮೊದಲ ಫಿಲ್ಮ್‌ಪೇರ್‌ ಅವಾರ್ಡ್‌ ಪಡೆದರು.

Whats_app_banner