CSpace OTT: ಭಾರತದ ಮೊದಲ ಸರಕಾರಿ ಒಟಿಟಿ ಕೇರಳದಲ್ಲಿ ಮಾರ್ಚ್ 7ರಂದು ಬಿಡುಗಡೆ; ಸಿಸ್ಪೇಸ್ ಒಟಿಟಿಯಲ್ಲಿದೆ ಹಲವು ವಿಶೇಷ
CSpace OTT platform: ಕೇರಳ ಸರಕಾರವು ಭಾರತದ ಮೊದಲ ಸರಕಾರಿ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಮಾರ್ಚ್ 7ರಂದು ಪರಿಚಯಿಸಲಿದೆ. ಸಿನಿಮಾಗಳ ಆಯ್ಕೆಯಲ್ಲಿ ಖಾಸಗಿ ಒಟಿಟಿಗಳ ತಾರತಮ್ಯ, ಪಾರುಪತ್ಯ ತಪ್ಪಿಸಲು ಇದು ನೆರವಾಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಸ್ಪೇಸ್ ಒಟಿಟಿ ಉದ್ಘಾಟಿಸಲಿದ್ದಾರೆ.

ಬೆಂಗಳೂರು: ಕೇರಳ ಸರಕಾರವು ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಸಿಸ್ಪೇಸ್ ಎಂಬ ಹೊಸ ಒಟಿಟಿ ಪರಿಚಯಿಸಿ ಹೊಸ ಅಲೆ ಸೃಷ್ಟಿಸಲು ಮುಂದಾಗಿದೆ. ಸರಕಾರ ಬೆಂಬಲಿತ ಈ ಒಟಿಟಿಯು ಖಾಸಗಿ ಒಟಿಟಿಗಳು ಸಿನಿಮಾದ ಆಯ್ಕೆಯಲ್ಲಿ ಮಾಡುವ ತಾರತಮ್ಯವನ್ನು ತಪ್ಪಿಸುವ ನಿರೀಕ್ಷೆಯಿದೆ. ಬೃಹತ್ ಒಟಿಟಿ ವೀಕ್ಷಕರಿಗೆ ಅನುಕೂಲವಾಗುವಂತೆ ಕಂಟೆಂಟ್‌ಗಳನ್ನು ಆಯ್ಕೆ ಮಾಡಿ ನೀಡಲಾಗುವುದು ಎಂದು ಸರಕಾರ ತಿಳಿಸಿದೆ.
ಕೈರಳಿ ಥಿಯೇಟರ್‌ನಲ್ಲಿ ಮಾರ್ಚ್ 7ರಂದು ಬೆಳಗ್ಗೆ 9.30 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ನೂತನ ಸಿಸ್ಪೇಸ್ ಒಟಿಟಿಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಕೃತಿ ವ್ಯವಹಾರಗಳ ಸಚಿವರಾದ ಸಜಿ ಚೆರಿಯನ್ ಜತೆಗಿರಲಿದ್ದಾರೆ. "ವಿಷಯದ ಆಯ್ಕೆ ಮತ್ತು ಪ್ರಚಾರದ ವಿಷಯದಲ್ಲಿಒಟಿಟಿ ವಲಯದಲ್ಲಿ ಬೆಳೆಯುತ್ತಿರುವ ಅಸಮತೋಲನ ಮತ್ತು ಹಲವು ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಸಿಸ್ಪೇಸ್ ಅನ್ನು ಪರಿಚಯಿಸಲಾಗುತ್ತಿದೆ" ಎಂದು ಕೇರಳ ಸಿನಿಮಾ ಅಭಿವೃದ್ಧಿ ಪ್ರಾಧಿಕಾರದ (ಕೆಎಸ್‌ಎಫ್‌ಡಿಸಿ) ಸಜ್ಜಿ ಎನ್ ಕರಣ್ ಹೇಳಿದ್ದಾರೆ.
ಸಿಸ್ಪೇಸ್ ಒಟಿಟಿ ಕುರಿತು
ಸಿಎಸ್ಪೇಸ್ ಅನ್ನು ಕೇರಳ ರಾಜ್ಯ ಸರಕಾರದ ಕೆಎಸ್‌ಎಫ್‌ಡಿಸಿಯು ನಿರ್ವಹಿಸಲಿದೆ. ಕೆಎಸ್‌ಎಫ್‌ಡಿಸಿಯು ಮಲಯಾಳಂ ಸಿನಿಮಾ ಮತ್ತು ಉದ್ಯಮದ ಪ್ರಚಾರಕ್ಕಾಗಿ ಸಂಸ್ಕೃತಿ ಇಲಾಖೆಯಡಿ ಇರುವ ಸರಕಾರದ ಅಂಗಸಂಸ್ಥೆಯಾಗಿದೆ. ಈ ಒಟಿಟಿಯಲ್ಲಿ ಯಾವ ಸಿನಿಮಾ, ವೆಬ್ ಸರಣಿ ಇರಬೇಕೆಂದು ಕಂಟೆಂಟ್ ಆಯ್ಕೆ ಮಾಡಲು ಕೆಎಸ್‌ಎಫ್‌ಡಿಸಿಸಿಯು ಕೇರಳ ರಾಜ್ಯದ ಸಾಂಸ್ಕೃತಿಕ ವಲಯದ 60 ಸದಸ್ಯರ ಕ್ಯುರೇಟರ್ ಸಮಿತಿಯನ್ನೂ ರಚಿಸಿದೆ. ಈ ಒಟಿಟಿಗೆ ಸಲ್ಲಿಕೆಯಾದ ಕಂಟೆಂಟ್ ಅನ್ನು ಅದರಲ್ಲಿರುವ ಕಲಾತ್ಮಕ, ಸಾಂಸ್ಕೃತಿಕ ಮತ್ತು ಮನರಂಜನೆ ಅಂಶಗಳ ಆಧಾರದಲ್ಲಿ ಈ ಕ್ಯುರೇಟರ್‌ಗಳು ಮೌಲ್ಯಮಾಪನ ಮಾಡಲಿದ್ದಾರೆ. ಈ ಸಮಿತಿಯಲ್ಲಿ ಬೆನ್ಯಾಮಿನ್, ಒವಿ ಉಷಾ, ಸಂತೋಷ್ ಶಿವನ್, ಶ್ಯಾಮಪ್ರಸಾದ್, ಸನ್ನಿ ಜೋಸೆಫ್ ಮತ್ತು ಜಿಯೋ ಬೇಬಿ ಮುಂತಾದವರು ಇದ್ದಾರೆ.
ಯಾವೆಲ್ಲ ಸಿನಿಮಾಗಳು ಇರಲಿವೆ?
ಈ ಸಮಿತಿಯ ಸದಸ್ಯರು ಶಿಫಾರಸು ಮಾಡಿರುವ ಕಂಟೆಂಟ್‌ಗಳು ಮಾತ್ರ ಸಿಸ್ಪೇಸ್ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ಮೊದಲ ಹಂತದಲ್ಲಿ ಇಲ್ಲಿಯವರೆಗೆ ಈ ಕ್ಯುರೇಟರ್‌ಗಳು 42 ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇವುಗಳಲ್ಲಿ 35 ಫೀಚರ್ ಸಿನಿಮಾಗಳಾಗಿವೆ. ಆರು ಡಾಕ್ಯುಮೆಂಟರಿಗಳಾಗಿವೆ. ಒಂದು ಶಾರ್ಟ್ ಫಿಲ್ಮ್ ಕೂಡ ಇದೆ. ಪ್ರಮುಖ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡ ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿ ಪಡೆದ ಸಿನಿಮಾಗಳನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ.
ಸಿಸ್ಪೇಸ್ ಒಟಿಟಿ ದರ ಎಷ್ಟು?
ಸಿಸ್ಪೇಸ್ ತನ್ನ ವ್ಯವಹಾರ ಮತ್ತು ಗಳಿಕೆ, ಆದಾಯ ಹಂಚಿಕೆಯ ಕುರಿತು ಪಾರದರ್ಶಕತೆ ಹೊಂದಿರಲಿದೆ. ಸಿನಿಮಾ ಅಥವಾ ವೆಬ್ ಸರಣಿ ಇತ್ಯಾದಿ ಕಂಟೆಂಟ್ ಮಾಲೀಕರು ವೀಕ್ಷಣೆ ಆಧಾರದಲ್ಲಿ ಈ ಒಟಿಟಿಗೆ ಪಾವತಿ ಮಾಡಬೇಕು. ಇದೇ ರೀತಿ ಬಳಕೆದಾರರು ಅಂದರೆ ಒಟಿಟಿ ವೀಕ್ಷಕರು ಕೂಡ ಪ್ರತಿಕಂಟೆಂಟ್‌ಗೆ ಹಣ ನೀಡಿ ಸಿನಿಮಾ ವೀಕ್ಷಿಸಬಹುದು. ಒಂದು ಸಿನಿಮಾ ವೀಕ್ಷಣೆಗೆ ಸುಮಾರು 75 ರೂಪಾಯಿ ಇರಲಿದೆ. ಸಣ್ಣ ಕಂಟೆಂಟ್ ದರ ಕಡಿಮೆ ಇರಲಿದೆ. ಸಿನಿಮಾ ಇತ್ಯಾದಿ ಕಂಟೆಂಟ್ ನೀಡುವವರಿಗೆ ಗ್ರಾಹಕರು ಪಾವತಿಸಿದ ಮೊತ್ತದಲ್ಲಿ ಅರ್ಧ ಮೊತ್ತ ಹೋಗಲಿದೆ. ಈ ಮೂಲಕ ಚಿತ್ರ ತಯಾರಕರಿಗೂ ಈ ಒಟಿಟಿ ವೇದಿಕೆ ಲಾಭದಾಯಕವಾಗಲಿದೆ. ಜನರು ಚಿತ್ರಮಂದಿರಗಳಿಂದ ದೂರವಾಗುತ್ತಿರುವ ಸಂದರ್ಭದಲ್ಲಿ, ಒಟಿಟಿ ವೀಕ್ಷಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೇರಳ ಸರಕಾರವು ಈ ವಿನೂತನ ಒಟಿಟಿ ಪರಿಚಯಿಸಿದೆ.
ಸಿಸ್ಪೇಸ್ ಒಟಿಟಿ ಡೌನ್‌ಲೋಡ್ ಹೇಗೆ?
ಮಾರ್ಚ್ 7ರಿಂದ ಬಳಕೆದಾರರು ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಸ್ಪೇಸ್ ಆಪ್ (Download CSpace app) ಡೌನ್‌ಲೋಡ್ ಮಾಡಿಕೊಳ್ಳಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬಯಸದ ಕೇವಲ ಒಟಿಟಿಯಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಲಿದೆ ಎಂದು ಕೆಎಸ್‌ಎಫ್‌ಡಿಸಿ ಎಂಡಿ ಅಬ್ದುಲ್ ಮಲ್ಲಿಕ್ ಹೇಳಿದ್ದಾರೆ. ಈ ರೀತಿ ನೇರವಾಗಿ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದರಿಂದ ಸಿನಿಮಾ ತಯಾರಕರು ಮತ್ತು ವಿತರಕರಿಗೆ ಆಗುವ ನಷ್ಟದ ತೊಂದರೆಯನ್ನೂ ಈ ನೂತನ ಒಟಿಟಿ ಸರಿಪಡಿಸಲಿದೆ ಎಂದು ಅವರು ಹೇಳಿದ್ದಾರೆ.
