ಖ್ಯಾತ ನಟಿ ಅಪರ್ಣಾ ನಾಯರ್ ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
2 ದಿನಗಳ ಹಿಂದಷ್ಠೇ ಅಪರ್ಣ ತನ್ನ ಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ವಾರದ ಹಿಂದೆ ಪತಿ ಸಂಜಿತ್ ಜೊತೆಗೆ ತೆಗೆಸಿದ ಫೋಟೋ ಹಂಚಿಕೊಂಡು 'ಇವರು ನನ್ನ ಶಕ್ತಿ' ಎಂದು ಬರೆದುಕೊಂಡಿದ್ದರು.
ಹೃದಯಾಘಾತ, ಆತ್ಮಹತ್ಯೆ ಮಾಡಿಕೊಂಡು ಯುವ ನಟ ನಟಿಯರು ಸಾವನ್ನಪ್ಪುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅಪರ್ಣಾ ನಾಯರ್ ಎಂಬ 31 ವರ್ಷದ ಮಲಯಾಳಂ ನಟಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರ್ಣ ಸಾವಿನ ಸುದ್ದಿ ಮಾಲಿವುಡ್ಗೆ ಆಘಾತ ನೀಡಿದೆ.
2 ದಿನಗಳ ಹಿಂದಷ್ಟೇ ಖುಷಿಯಾಗಿ ಪೋಸ್ಟ್ ಹಂಚಿಕೊಂಡಿದ್ದ ಅಪರ್ಣಾ
ಅಪರ್ಣಾ ನಾಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪರ್ಣಾ ನಿಧನ ಕುಟುಂಬದವರು, ಸ್ನೇಹಿತರು ಹಾಗೂ ಮಲಯಾಳಂ ಚಿತ್ರರಂಗಕ್ಕೆ ಶಾಕ್ ನೀಡಿದೆ. ಏಕೆಂದರೆ 2 ದಿನಗಳ ಹಿಂದಷ್ಠೇ ಅಪರ್ಣ ತನ್ನ ಮಗಳ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ವಾರದ ಹಿಂದೆ ಪತಿ ಸಂಜಿತ್ ಜೊತೆಗೆ ತೆಗೆಸಿದ ಫೋಟೋ ಹಂಚಿಕೊಂಡು 'ಇವರು ನನ್ನ ಶಕ್ತಿ' ಎಂದು ಬರೆದುಕೊಂಡಿದ್ದರು. ಆಕೆ ಇತ್ತೀಚೆಗೆ ಹಂಚಿಕೊಂಡ ಯಾವ ಫೋಟೋಗಳಲ್ಲೇ ಆಗಲೀ ಆಕೆ ನೋವಿನಲ್ಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. 2 ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಪರ್ಣಾ, ಹೀಗೆ ಆತ್ಮಹತ್ಯೆಯಂಥ ನಿರ್ಧಾರ ಮಾಡಿದ್ದೂ ಏಕೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ತಮ್ಮ ನಿವಾಸದಲ್ಲಿ ನೇಣಿಗೆ ಶರಣು
ಆಗಸ್ಟ್ 31, ಗುರುವಾರ ರಾತ್ರಿ ಅಪರ್ಣಾ ತಿರುವನಂತಪುರಂನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡಿದ್ದಾರೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತ ದೇಹವನ್ನು ಪೋಸ್ಟ್ ಮಾರ್ಟಂಗಾಗಿ ಪಿಆರ್ಎಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಅಪರ್ಣಾ ಆತ್ಮೀಯರು ಹಾಗೂ ನೆರೆ ಹೊರೆಯವರ ಹೇಳಿಕೆ ಪಡೆಯುತ್ತಿದ್ದಾರೆ. ಅಪರ್ಣಾ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.
ಮಲಯಾಳಂ ಕಿರುತೆರೆ, ಸಿನಿಮಾಗಳಲ್ಲಿ ನಟನೆ
ಅಪರ್ಣಾ ನಾಯರ್ ಮಲಯಾಳಂ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ. ಚಂದನಮಾಳ, ಆತ್ಮಸಾಕ್ಷಿ, ಮೈಥಿಲಿ ವೇಂಡುಂ ವರುಂ ದೇವಪರಶಂ ಧಾರಾವಾಹಿಗಳ ಮೂಲಕ ಅಪರ್ಣ ಖ್ಯಾತರಾಗಿದ್ದರು. ಮಲಯಾಳಂನ ಮೇಘತೀರ್ಥಂ, ಮುತ್ತುಗೊ, ಅಚ್ಚಾಯಸ್, ಕೊಡತಿ ಸಮಕ್ಷಮ್ ಬಾಲನ್ ವಕಿಲ್ ಹಾಗೂ ಕಲ್ಕಿ ಸಿನಿಮಾಗಳಲ್ಲಿ ನಟಿಸಿದ್ದರು. ಇಷ್ಟು ಹೆಸರು ಗಳಿಸಿದ್ದ ನಟಿ ವೈಯಕ್ತಿಕ ಜೀವನದಲ್ಲಿ ಕೂಡಾ ಸಂತೋಷದಿಂದ ಇದ್ದರು. ಆದರೆ ಆಕೆ ಆತ್ಮಹತ್ಯೆಯಂಥ ನಿರ್ಧಾರ ಮಾಡಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಟಾಲಿವುಡ್ ನಟ ಸುಧೀರ್ ವರ್ಮಾ, ಕನ್ನಡ ನಟ ಸಂಪತ್ ಜಯರಾಮ್ ಕೂಡಾ ಇದೇ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.