ಕನ್ನಡ ಸುದ್ದಿ  /  ಮನರಂಜನೆ  /  ಕನಕಲತಾ ನಿಧನ: ನೀಳಕೇಶ ಕತ್ತರಿಸಿಕೊಂಡರು, ತನ್ನ ಹೆಸರನ್ನೇ ಮರೆತರು; 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮಲಯಾಳಂ ನಟಿಯ ದುರಂತ ಬದುಕು

ಕನಕಲತಾ ನಿಧನ: ನೀಳಕೇಶ ಕತ್ತರಿಸಿಕೊಂಡರು, ತನ್ನ ಹೆಸರನ್ನೇ ಮರೆತರು; 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮಲಯಾಳಂ ನಟಿಯ ದುರಂತ ಬದುಕು

Malayalam actress Kanakalatha dies: ಮಾಲಿವುಡ್‌ನಲ್ಲಿ ಪೋಷಕ ನಟಿಯಾಗಿ ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ನಟಿಸಿದ್ದ ಮಲಯಾಳಂನ ಜನಪ್ರಿಯ ನಟಿ ಕನಕಲತಾ (64) ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪಾರ್ಕಿನ್ಸನ್‌ ಕಾಯಿಲೆ ಮತ್ತು ಬುದ್ದಿಮಾಂದ್ಯ(dementia) ಕಾಯಿಲೆಯಿಂದ ಬಳಲುತ್ತಿದ್ದರು.

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನಕಲತಾರ ದುರಂತ ಬದುಕು
350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕನಕಲತಾರ ದುರಂತ ಬದುಕು (keralakaumudi.)

ಬೆಂಗಳೂರು: ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ನಟಿಸಿದ್ದ ಮಲಯಾಳಂನ ಜನಪ್ರಿಯ ನಟಿ ಕನಕಲತಾ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 64 ವರ್ಷ ವಯಸ್ಸಿನ ಕನಕಲತಾ ಪಾರ್ಕಿನ್ಸನ್‌ ಕಾಯಿಲೆ ಮತ್ತು ಬುದ್ದಿಮಾಂದ್ಯ(dementia) ಕಾಯಿಲೆಯಿಂದ ಕಳೆದ ಹಲವು ವರ್ಷಗಳಿಂದ ಅಸ್ವಸ್ಥರಾಗಿದ್ದರು. ರಂಗಭೂಮಿಯಿಂದ ಮಾಲಿವುಡ್‌ ಚಿತ್ರರಂಗಕ್ಕೆ ಆಗಮಿಸಿದ್ದ ಇವರು ನೂರಾರು ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಗುರು, ಆಕಾಶ ಗಂಗಾ, ಅನಿಯತ್ರಿಪುವು, ಕೌರವರ್‌, ರಾಜವಿಂತೆ ಮಗನ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತನ್ನ ಹೆಸರನ್ನೇ ಮರೆತ ಕನಕಲತಾ

ಈಗಾಗಲೇ ಹೇಳಿದಂತೆ ಕನಕಲತಾ ಅವರು ಪಾರ್ಕಿನ್ಸನ್‌ ಮತ್ತು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಮರೆಯಲಾಗದ ಛಾಪು ಮೂಡಿಸದ್ದ ಕನಕಲತಾ ಅವರ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ತುಂಬಾ ಕಷ್ಟಪಟ್ಟಿದ್ದರು. ತನ್ನ ಹೆಸರನ್ನು ನೆನಪಿಸಿಕೊಳ್ಳಲಾಗದಷ್ಟು, ಟಿವಿಯಲ್ಲಿ ತನ್ನ ಸಿನಿಮಾ ಕಂಡರೂ ಅದು ತಾನೇ ಎಂದು ಗುರುತಿಸಲಾಗದಷ್ಟು ಆರೋಗ್ಯ ಹದಗೆಟ್ಟಿತ್ತು ಎಂದು ಮಾತೃಭೂಮಿ ಪತ್ರಿಕೆಯು ವರದಿ ಮಾಡಿದೆ.

ತನ್ನ ಕೊನೆಯ ವರ್ಷಗಳಲ್ಲಿ ಮಲಯಿಂಕೀಜುವಿನಲ್ಲಿ ತನ್ನ ಸಹೋದರಿ ಜತೆ ವಾಸಿಸುತ್ತಿದ್ದರು. ಸಹೋದರಿ ವಿಜಯಮ್ಮನ ಜತೆ ಆಗಾಗ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದರು. ಪಾರ್ಕಿನ್ಸನ್‌ ಮತ್ತು ಬುದ್ದಿಮಾಂದ್ಯತೆಯಿಂದ ಇವರು ಬಳಲುತ್ತಿದ್ದರು. ಮೋಹನ್‌ಲಾಲ್‌ ಜತೆ ತನ್ಮಾತ್ರ ಚಿತ್ರದಲ್ಲಿ ನಟಿಸುವಾಗಲೇ ಇವರಿಗೆ ಮಾನಸಿಕ ಆರೋಗ್ಯ ಹದಗಟ್ಟ ಲಕ್ಷಣಗಳನ್ನು ಗುರುತಿಸಿದರು ಎಂದು ಸಹೋದರಿಯ ಮಾತನ್ನು ಉಲ್ಲೇಖಿಸಿ ಮಾತೃಭೂಮಿ ವರದಿ ಮಾಡಿದೆ. 2021ರಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಕನಕಲತಾ ಹೆಚ್ಚು ಮೌನವಾಗಿರುತ್ತಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಇವರು ಬುದ್ದಿಮಾಂದ್ಯತೆಯ ಲಕ್ಷಣಗಳನ್ನು ಪ್ರದರ್ಶಿಸಲು ಆರಂಭಿಸಿದ್ದಾರಂತೆ.

ಆರೋಗ್ಯ ತುಸು ಉತ್ತಮವಾಗಿದ್ದ ಸಮಯದಲ್ಲಿ ಇವರಿಗೆ ಸೀರಿಯಲ್‌ ಮತ್ತು ಸಿನಿಮಾ ರಂಗದಿಂದ ಆಫರ್‌ಗಳು ಬರುತ್ತಿದ್ದವು. ಆದರೆ, ಅವೆಲ್ಲವನ್ನೂ ಕನಕಲತಾ ನಿರಾಕರಿಸುತ್ತ ಬಂದರು. ಕ್ರಮೇಣ ತಿನ್ನುವುದನ್ನೂ ಕಡಿಮೆ ಮಾಡಿದರು. ದಿನವಿಡೀ ತಿನ್ನದೇ ಇರುತ್ತಿದ್ದರು. ಸುಂದರವಾಗಿದ್ದ ಈ ನಟಿ ತೆಳ್ಳಗಾಗುತ್ತ ಬಂದರು. ಉದ್ದನೆಯ ಗುಂಗುರು ಕೂದಲನ್ನು ಕತ್ತರಿಸಿದ್ದರು. ತನ್ನ ಸ್ವಂತ ಸಿನಿಮಾಗಳನ್ನು ನೋಡುತ್ತಿದ್ದರು. ಕ್ರಮೇಣ ಆ ಸಿನಿಮಾಗಳಲ್ಲಿ ನಟಿಸಿದ್ದು ನಾನೇ ಎನ್ನುವುದನ್ನೂ ಗುರುತಿಸಲು ವಿಫಲರಾಗುತ್ತಿದ್ದರು ಎಂದು ಮಾತೃಭೂಮಿ ವರದಿ ತಿಳಿಸಿದೆ.

ಕನಕಲತಾರ ಬಗ್ಗೆ

ಮಲಯಾಳಂ ನಟಿ ಕನಕಲತಾ ಅವರು ಆಗಸ್ಟ್‌ 24, 1960ರಲ್ಲಿ ಕೇರಳದ ಕೊಲ್ಲಂನಲ್ಲಿ ಪರಮೇಶ್ವರನ್‌ ಪಿಳ್ಳೈ ಮತ್ತು ಚಿನ್ನಮ್ಮ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರು ಕೊಲ್ಲಾಮ್‌ನ ಸರಕಾರಿ ಮಹಿಳಾ ಶಾಲೆಯಲ್ಲಿ ಶಿಕ್ಷಣ ಪಡೆದರು. ಸಿನಿಮಾರಂಗಕ್ಕೆ ಪ್ರವೇಶಿಸುವ ಮೊದಲು ಅವರು ರಂಗಭೂಮಿ ಕಲಾವಿದೆಯಾಗಿದ್ದರು. ಮಲಯಾಳಂ ಮಾತ್ರವಲ್ಲದೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಲಯಾಳಂನಲ್ಲಿ ರಾಧ ಎನ್ನ ಪೆನ್ನುಕುಟ್ಟಿ, ಅನರ್ಥುಪಟ್ಟು, ಅಪರ್ಣಾ, ಅಂಬಲಪೂವು, ಚಿಲ್ಲು, ಚಂಪಲಕ್ಕಡು, ಕಾಕ್ಕಾ, ಸ್ನೇಹಪೂರ್ವಂ ಮೀರಾ, ಕತೈಲ್‌ ಪಟ್ಟು, ಕಟ್ಟರುವಿ, ತಾಯಂಬಕ, ಆದ್ಯಂತೆ ಅನುಗ್ರಹಂ, ಕಿನ್ನಮ್‌ ಕಟ್ಟ ಕಲ್ಲಾನ್‌, ಗುರು, ದಿ ಗುಡ್‌ ಬಾಯ್ಸ್‌, ನ್ಯೂಸ್‌ಪೇಪರ್‌ ಬಾಯ್‌, ವರ್ನ ಪಕ್ಕಿಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point