ನಾಲ್ಕೈದು ತಿಂಗಳಲ್ಲಿ ಸಾವಿರ ಕೋಟಿ ಎಂದು ಗಹಗಹಿಸಿದ್ದ ಮಲಯಾಳಿ ಚಿತ್ರರಂಗಕ್ಕೆ ಇದೆಂಥ ಸ್ಥಿತಿ!; ED ಸುಳಿಗೆ ಸಿಲುಕಿದ ಮಾಲಿವುಡ್ ವಿಲವಿಲ
ಮಲಯಾಳಂನ ಈ ವರ್ಷದ ಬ್ಲಾಕ್ ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಯಾವಾಗ ನೂರು ಕೋಟಿ, 200 ಕೋಟಿ ಗಳಿಕೆ ಎಂದು ಅಧಿಕೃತವಾಗಿ ಹೇಳಿಕೊಂಡಿತೋ, ಅಲ್ಲಿಂದ ಇಡೀ ಚಿತ್ರೋದ್ಯಮ ED ಸುಳಿಗೆ ಸಿಲುಕಿದೆ. ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಹಣಕಾಸಿನ ವ್ಯವಹಾರಗಳ ಮೇಲೆ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿಟ್ಟಿದೆ.

Malayalam film industry: 2024ರ ವರ್ಷ ಯಾವ ಭಾಷೆಯ ಚಿತ್ರೋದ್ಯಮಕ್ಕೆ ವರವಾಗಿದ್ಯೋ ಶಾಪವಾಗಿದ್ಯೋ ಗೊತ್ತಿಲ್ಲ. ಆದರೆ ದಕ್ಷಿಣ ಭಾರತದ ಮಲಯಾಳಿ ಚಿತ್ರರಂಗ ಮಾತ್ರ ಯಶಸ್ಸಿನ ಹೊದಿಕೆ ಹೊದ್ದು ನಳನಳಿಸಿದೆ. ಅದಕ್ಕೆ ಕಾರಣ; ಸರಣಿ ಬ್ಲಾಕ್ ಬಸ್ಟರ್ ಸಿನಿಮಾಗಳು! ಸಿನಿಮಾ ವ್ಯಾಪ್ತಿ ಕನ್ನಡಕ್ಕಿಂತಲೂ ಕಿರಿದಾದರೂ, ಅಲ್ಲಿನ ಕಂಟೆಂಟ್‌ಗಳಿಗೆ ಬರೀ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಹಾಗಾಗಿಯೇ ಆರಂಭದ ಕೇವಲ ನಾಲ್ಕೈದು ತಿಂಗಳ ಅವಧಿಯಲ್ಲಿ ಬರೋಬ್ಬರಿ ಸಾವಿರ ಕೋಟಿ ಗಳಿಕೆ ಮಾಡಿ ಎಲ್ಲರನ್ನು ಹುಬ್ಬೇರಿಸಿತ್ತು. ಹೀಗೆ ಗಳಿಕೆ ಮಾಡಿದ್ದೇ ತಡ ಜಾರಿ ನಿರ್ದೇಶನಾಲಯದ (Enforcement Directorate) ಕಣ್ಣು ಈ ಚಿತ್ರರಂಗದ ಮೇಲೆ ಬಿದ್ದಿದೆ.
ಮಲಯಾಳಂನ ಈ ವರ್ಷದ ಬ್ಲಾಕ್ ಬಸ್ಟರ್ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಯಾವಾಗ ನೂರು ಕೋಟಿ, 200 ಕೋಟಿ ಗಳಿಕೆ ಎಂದು ಅಧಿಕೃತವಾಗಿ ಹೇಳಿಕೊಂಡಿತೋ, ಅಲ್ಲಿಂದ ಇಡೀ ಚಿತ್ರೋದ್ಯಮ ED ಸುಳಿಗೆ ಸಿಲುಕಿದೆ. ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಹಣಕಾಸಿನ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಗಳಿಕೆಯ ವಿಚಾರದಲ್ಲಿನ ಕೆಲವು ಏರಿಳಿತಗಳು, ನಿರ್ಮಾಪಕರ ಘೋಷಣೆಯೂ ಮತ್ತು ಬ್ಯಾಂಕ್ ಲೆಕ್ಕಕ್ಕೂ ತಾಳೆಯಾಗಿರಲಿಲ್ಲ. ಅದೆಲ್ಲವನ್ನು ಪರಿಶೀಲಿಸುವ ಉದ್ದೇಶಕ್ಕೆ ನಿರ್ಮಾಪಕರ, ವಿತರಕರ ಬ್ಯಾಂಕ್ ಖಾತೆಗಳನ್ನು ಹಿಡಿದಿಟ್ಟುಕೊಳ್ಳಲು ಕಾನೂನು ಸಲಹೆ ಪಡೆಯುತ್ತಿದೆ ಜಾರಿ ನಿರ್ದೇಶನಾಲಯ.
ಕಳೆದ ಐದು ವರ್ಷದ ಸಿನಿಮಾಗಳ ಮೇಲೆ ವಿಚಾರಣೆ
ಮನೋರಮಾ ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ನಿರ್ಮಿಸಲಾದ ಎಲ್ಲಾ ಬ್ಲಾಕ್‌ಬಸ್ಟರ್ ಮಲಯಾಳಂ ಸಿನಿಮಾಗಳ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಲು ED ಈಗ ಸಿದ್ಧತೆ ನಡೆಸುತ್ತಿದೆ. ಸಿನಿಮಾ ನಿರ್ಮಾಣದ ಬಜೆಟ್ ಮತ್ತು ಆದಾಯದ ಅಂಕಿಅಂಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ED ಸಂಗ್ರಹಿಸಲಿದೆ. ಕೇರಳದ ಥಿಯೇಟರ್ ವಲಯದಲ್ಲಿ ಕಪ್ಪು ಹಣದ ವಹಿವಾಟು, ಮನಿ ಲಾಂಡ್ರಿಂಗ್ ನಡೆಯುತ್ತಿದೆ ಎಂದು ಚಲನಚಿತ್ರ ನಿರ್ಮಾಪಕರಿಬ್ಬರ ಮಾಹಿತಿ ಆಧರಿಸಿ ತನಿಖೆ ಆರಂಭಿಸಲಾಗಿದೆ.
ನಾಲ್ಕೈದು ತಿಂಗಳಲ್ಲಿ ಸಾವಿರ ಕೋಟಿ ಬಿಜಿನೆಸ್
ಮಲಯಾಳಂ ಚಲನಚಿತ್ರೋದ್ಯಮವು 2024ರಲ್ಲಿ ಗಮನಾರ್ಹವಾದ ಬೆಳವಣಿಗೆಯನ್ನು ಕಂಡಿದೆ. ಮೊದಲ ಐದು ತಿಂಗಳಲ್ಲಿ ಬರೋಬ್ಬರಿ ಸಾವಿರ ಕೋಟಿ ಸನಿಹ ವಹಿವಾಟು ನಡೆದಿದೆ. 'ಮಂಜುಮ್ಮೆಲ್ ಬಾಯ್ಸ್,' 'ಆವೇಶಂ,' 'ಆಡುಜೀವಿತಂ,' ಮತ್ತು 'ಪ್ರೇಮಲು' ಬ್ರಮಯುಗಂ ಸೇರಿ ಇನ್ನೂ ಹಲವು ಸಿನಿಮಾಗಳು ಕೋಟಿ ಕೋಟಿ ಗಳಿಕೆ ಮಾಡಿವೆ. ಹೀಗೆ ನೂರಾರು ಕೋಟಿ ಬಾಚಿದ ಈ ಸಿನಿಮಾಗಳ ಆರ್ಥಿಕ ವಹಿವಾಟಿನ ಮಾಹಿತಿಯನ್ನು ED ಪಡೆಯುತ್ತಿದೆ.
ಎಲ್ಲದಕ್ಕೂ ಮಂಜುಮ್ಮೆಲ್ ಬಾಯ್ಸ್ ಕಾರಣ
'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ನಿರೀಕ್ಷೆಗೂ ಮೀರಿ ಹಣ ಗಳಿಕೆ ಮಾಡುತ್ತ ಸಾಗಿತೋ, ಕೆಲವರ ಕಣ್ಣೂ ಈ ಸಿನಿಮಾ ಮೇಲೆ ಬಿತ್ತು. ಲಾಭಾಂಶ ಹಂಚಿಕೆ ವಿಚಾರದಲ್ಲಿ ತಂಡದವರಿಂದಲೇ ಅಪಸ್ವರ ಕೇಳಿಬಂದಿತು. ಈ ಅಪಸ್ವರ ED ಮೆಟ್ಟಿಲೇರಿತು. ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸಲು ಇಡಿಯನ್ನು ಪ್ರೇರೇಪಿಸಿತು. ಇದು ಚಿತ್ರದ ನಿರ್ಮಾಪಕರ ವಿರುದ್ಧ ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ECIR) ದಾಖಲಿಸಲು ಕಾರಣವಾಯಿತು. ಸೌಬಿನ್ ಶಾಹಿರ್, ಬಾಬು ಶಾಹಿರ್ ಮತ್ತು ಶಾನ್ ಆಂಟೋನಿ ಸೇರಿದಂತೆ ನಿರ್ಮಾಪಕರಿಗೆ ನೋಟಿಸ್ ಕಳುಹಿಸಲಾಗಿದ್ದು, ಅವರನ್ನು ವಿಚಾರಣೆಗೆ ಕರೆಯಲಾಗಿದೆ.