Aadujeevitham: 3 ದಿನ ಉಪವಾಸ, ವೋಡ್ಕಾ ಕುಡಿದು ಆಡುಜೀವಿತಂ ನಗ್ನ ದೃಶ್ಯದಲ್ಲಿ ನಟಿಸಿದ ಪೃಥ್ವಿರಾಜ್‌ ಸುಕುಮಾರನ್‌
ಕನ್ನಡ ಸುದ್ದಿ  /  ಮನರಂಜನೆ  /  Aadujeevitham: 3 ದಿನ ಉಪವಾಸ, ವೋಡ್ಕಾ ಕುಡಿದು ಆಡುಜೀವಿತಂ ನಗ್ನ ದೃಶ್ಯದಲ್ಲಿ ನಟಿಸಿದ ಪೃಥ್ವಿರಾಜ್‌ ಸುಕುಮಾರನ್‌

Aadujeevitham: 3 ದಿನ ಉಪವಾಸ, ವೋಡ್ಕಾ ಕುಡಿದು ಆಡುಜೀವಿತಂ ನಗ್ನ ದೃಶ್ಯದಲ್ಲಿ ನಟಿಸಿದ ಪೃಥ್ವಿರಾಜ್‌ ಸುಕುಮಾರನ್‌

ಆಡುಜೀವಿತಂ ಸಿನಿಮಾದಲ್ಲಿ ನಜೀಬ್‌ ಪಾತ್ರಕ್ಕಾಗಿ ಪೃಥ್ವಿರಾಜ್‌ ಅವರು ಕಠಿಣ ದೈಹಿಕ ಕಸರತ್ತುಗಳನ್ನು ಮಾಡಿದ್ದಾರೆ. ಆ ಸಿನಿಮಾದ ನಗ್ನ ದೃಶ್ಯದಲ್ಲಿ ನಟಿಸುವ ಈ ನಟ ಮೂರು ದಿನ ಉಪವಾಸ ಇದ್ದರು. ದೇಹದ ನೀರೆಲ್ಲ ಆವಿಯಾಗಲು ತುಸು ವೋಡ್ಕಾ ಕುಡಿದಿದ್ದರು.

ಪೃಥ್ವಿರಾಜ್‌ ಸುಕುಮಾರನ್‌
ಪೃಥ್ವಿರಾಜ್‌ ಸುಕುಮಾರನ್‌

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಆಡುಜೀವಿತಂ: ದಿ ಗೋಟ್‌ ಲೈಫ್‌ ಸಿನಿಮಾದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ಅವರ ನಗ್ನ ದೃಶ್ಯದ ಕುರಿತು ಸಿನಿಮಾಟೊಗ್ರಾಫರ್‌ ಸುನಿಲ್‌ ಕೆಎಸ್‌ ಮಾತನಾಡಿದ್ದಾರೆ. ಈ ನಗ್ನ ದೃಶ್ಯ ಮಾಡುವ ಮೊದಲು ಪೃಥ್ವಿರಾಜ್‌ ಅವರು ಮೂರು ದಿನ ಉಪವಾಸ ಮಾಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಆಡುಜೀವಿತಂ ನಗ್ನ ದೃಶ್ಯದ ಕುರಿತು ಸುನಿಲ್‌ ಮಾತು

"ನಗ್ನ ದೃಶ್ಯದ ಶೂಟಿಂಗ್‌ಗಾಗಿ ಪೃಥ್ವಿರಾಜ್‌ ಅವರು ಮೂರು ದಿನ ಉಪವಾಸ ಮಾಡಿದ್ದಾರೆ. ಮೂರನೇ ದಿನ ನೀರು ಕೂಡ ಸೇವಿಸಿರಲಿಲ್ಲ. ಶೂಟಿಂಗ್‌ ಆರಂಭಕ್ಕೆ ಮೊದಲು ಅವರು 30 ಎಂಎಲ್‌ ವೋಡ್ಕಾ ಕುಡಿದು ದೇಹದಲ್ಲಿ ಉಳಿದಿರುವ ಇತರೆ ನೀರಿನ ಅಂಶ ಹೋಗುವಂತೆ ಮಾಡಿದ್ದರು. ಅವರನ್ನು ಶೂಟಿಂಗ್‌ ಸ್ಥಳಕ್ಕೆ ಚೇರ್‌ ಮೇಲೆ ಕುಳ್ಳಿರಿಸಿ ಎತ್ತಿಕೊಂಡು ಬರಲಾಗಿತ್ತು. ಶೂಟಿಂಗ್‌ ಆರಂಭಕ್ಕೆ ಮೊದಲು ಅವರನ್ನು ನಾವು ಚೇರ್‌ನಿಂದ ಎತ್ತಿ ನಿಲ್ಲಿಸಬೇಕಿತ್ತು" ಎಂದು ಕ್ಯಾಮೆರಾಮೆನ್‌ ಸುನಿಲ್‌ ಹೇಳಿದ್ದಾರೆ ಎಂದು ಕ್ರಿಸ್ಟೋಪರ್‌ ಟ್ವೀಟ್‌ ಮಾಡಿದ್ದಾರೆ.

ಆಡುಜೀವಿತಂ ಸಿನಿಮಾದ ಕುರಿತು

ಇದು ಬ್ಲೆಸ್ಸಿ ನಿರ್ದೇಶನದ ಸತ್ಯಘಟನೆ ಆಧರಿತ ಸರ್ವೈವಲ್‌ ಸಿನಿಮಾ. ಇಲ್ಲಿಯವರೆಗೆ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 35.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. 2008ರ ಬೆಸ್ಟ್‌ ಸೆಲ್ಲಿಂಗ್‌ ಕಾದಂಬರಿ ಆಡುಜೀವಿತಂ ಆಧರಿತ ಸಿನಿಮಾ ಇದಾಗಿದೆ. ಇದು ಬೆನ್ನಿಮಿನ್‌ ಬರೆದ ಕಾದಂಬರಿ. ನಜೀಬ್‌ ಎಂಬ ಮಲಯಾಳಿ ವಲಸಿಗ ಗಲ್ಪ್‌ ದೇಶದಲ್ಲಿ ಅನುಭವಿಸಿದ ಕಷ್ಟದ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ. ಸೌದಿ ಅರೇಬಿಯಾದಲ್ಲಿ ಈ ವಲಸಿಗ ಜೀತದಾಳುವಿನಂತೆ ಮರುಭೂಮಿಯಲ್ಲಿ ಬದುಕಿರುತ್ತಾನೆ. ಆತ ಅಲ್ಲಿಂದ ಭಾರತಕ್ಕೆ ವಾಪಸ್‌ ಬರಲು ಮಾಡುವ ಪ್ರಯತ್ನವನ್ನು ಆಡುಜೀವಿತಂ ಸಿನಿಮಾದಲ್ಲಿ ತೋರಿಸಲಾಗಿದೆ.

ರಿಯಲ್‌ ನಜೀಬ್‌ ಸಿನಿಮಾ ನೋಡಿದ್ರು

ಇತ್ತೀಚೆಗೆ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ- ದಿ ಗೋಟ್‌ ಲೈಪ್‌ ಸಿನಿಮಾವನ್ನು ರಿಯಲ್‌ ನಜೀಬ್‌ ನೋಡಿದ್ದರು. ಈ ಸಿನಿಮಾವು ಕೇರಳದ ನಜೀಮ್‌ ಮಹಮ್ಮದ್‌ ಎಂಬ ವ್ಯಕ್ತಿಯ ಬದುಕಿನಲ್ಲಿ ನಡೆದ ಸತ್ಯ ಕಥೆ ಆಧರಿತವಾದದ್ದು. ಗಲ್ಫ್‌ಗೆ ಕೆಲಸ ಹೋದ ನಜೀಬ್‌ ಅಲ್ಲಿ ಮರುಭೂಮಿಯಲ್ಲಿ ಜೀತದಾಳುವಂತೆ ಸಿಲುಕಿ ಅಲ್ಲಿಂದ ಪಾರಾಗಿ ಬರಲು ಕಷ್ಟಪಟ್ಟ ಕಥೆಯಾಗಿದೆ. ಈ ಕಥೆ ಕಾದಂಬರಿಯಾಗಿಯೂ ಜನಪ್ರಿಯತೆ ಪಡೆದಿದೆ. ಈ ಕಾದಂಬರಿಯಿಂದ ಪ್ರೇರಣೆ ಪಡೆದು ಆಡುಜೀವಿತಂ ಸಿನಿಮಾ ಮಾಡಲಾಗಿದೆ. ಇದೀಗ ಈ ಸಿನಿಮಾದ ನಿಜವಾದ ಕಥಾನಾಯಕ ನಜೀಬ್‌ ಆಡುಜೀವಿತಂ ಸಿನಿಮಾವನ್ನು ವೀಕ್ಷಿಸಿದ್ದಾರೆ. ಟೈಮ್ಸ್‌ ನೌ ವರದಿ ಪ್ರಕಾರ ನಜೀಬ್‌ ಅವರು ಈ ಸಿನಿಮಾವನ್ನು ವೀಕ್ಷಿಸಿ ಕಣ್ಣೀರಿಟ್ಟಿದ್ದರು. "ನಾನು ಬಹುತೇಕ ದೃಶ್ಯಗಳನ್ನು ಕಣ್ಣೀರಲ್ಲೇ ನೋಡಿದೆ. ನಿಜಕ್ಕೂ ನನಗೆ ಈ ಸಿನಿಮಾ ನೋಡುವಾಗ ತುಂಬಾ ನೋವಾಯಿತು" ಎಂದು ನಜೀಬ್‌ ಹೇಳಿದ್ದಾರೆ.

ದಿ ಗೋಟ್‌ ಲೈಫ್‌ ಸಿನಿಮಾ ವಿಮರ್ಶೆ

“ಸುಮಾರು ಮೂರು ಗಂಟೆಯ ಅವಧಿಯ ಸಿನಿಮಾವಿದು. ಕೆಲವೊಂದು ಭಾಗದಲ್ಲಿ ದೀರ್ಘವಾದಂತೆ ಅನಿಸಬಹುದು. ದ್ವಿತೀಯಾರ್ಧದಲ್ಲಿ ಕೆಲವು ಕಡೆ ಬೋರ್‌ ಹೊಡೆಸಬಹುದು. ಆದರೆ ದೊಡ್ಡ ಪರದೆಯಲ್ಲಿ ದಿ ಗೋಟ್‌ ಲೈಫ್‌ ಸಿನಿಮಾ ನೋಡುವುದು ನಿಜಕ್ಕೂ ಒಂದು ಅನನ್ಯ ಅನುಭವವಾಗುತ್ತದೆ.” ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವಿಮರ್ಶೆ ಮಾಡಿದೆ. ವಿಮರ್ಶೆ ಇಲ್ಲಿದೆ ಓದಿ

Whats_app_banner