ಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

ಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

ಪ್ರಯಾಗ್ ರಾಜ್‌ನ ಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಎಂಬ ಸಿನಿಮಾವೊಂದರಲ್ಲಿ ಮೊನಾಲಿಸಾ ಅಭಿನಯಿಸಲಿದ್ದಾರೆ.

ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್
ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್

ತನ್ನ ಸಹಜ ಸೌಂದರ್ಯದಿಂದಲೇ ಕುಂಭಮೇಳದಲ್ಲಿ ಸಾಕಷ್ಟು ಜನರ ಮನಗೆದ್ದ ರುದ್ರಾಕ್ಷಿ ಮಾರುವ ಯುವತಿ ಮೊನಾಲಿಸಾ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಇಡೀ ದೇಶದ ಗಮನ ಸೆಳೆದಿದ್ದರು. ಈ ಮೂಲಕ ಸಾಕಷ್ಟು ಜನರನ್ನು ತಲುಪಿದ ಮೊನಾಲಿಸಾಗೆ ಇದೀಗ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಎಲ್ಲ ವದಂತಿಗಳಿಗೆ ತೆರೆಬಿದ್ದಿದ್ದು, ಸುದ್ದಿ ಅಧಿಕೃತಗೊಂಡಿದೆ. 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಎಂಬ ಸಿನಿಮಾದಲ್ಲಿ ಮೊನಾಲಿಸಾ ಅಭಿನಯಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಿನಿಮಾ ನಿರ್ಮಾಪಕ ಸನೋಜ್ ಮಿಶ್ರಾ ಮೊನಾಲಿಸಾ ಅವರ ಮನೆಗೆ ತೆರಳಿ ಅಲ್ಲಿಂದಲೇ ವಿಡಿಯೋ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರು 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಎಂಬ ಬಾಲಿವುಡ್ ಚಲನಚಿತ್ರದಲ್ಲಿ ಅಭಿನಯಿಸಲು ಮೊನಾಲಿಸಾ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊದ ಮೂಲಕ ಕೆಲ ವಿಚಾರಗಳನ್ನು ಹಂಚಿಕೊಂಡಿದ್ಧಾರೆ. ಮೊನಾಲಿಸಾ ಅವರನ್ನು ಭೇಟಿಯಾಗಬೇಕು ಎಂದು ಸನೋಜ್ ಮಿಶ್ರಾ ಪ್ರಯಾಗ್‌ ರಾಜ್‌ಗೆ ಹೋಗಿದ್ದರಂತೆ. ಆದರೆ ಆಕೆ ಅಲ್ಲಿಂದ ತನ್ನ ಊರಿಗೆ ಮರಳಿ ಬಂದಿದ್ದಾರೆ ಎಂಬ ವಿಚಾರ ತಿಳಿದುಬಂದಿದ್ದು, ಆಕೆಯ ಊರಾದ ಮಧ್ಯಪ್ರದೇಶದ ಇಂದೋರ್‍‌ನ ಮಹೇಶ್ವರದಲ್ಲೇ ಆಕೆಯನ್ನು ಭೇಟಿಯಾಗಿದ್ದಾರೆ. ಅಲ್ಲಿ ಬಂದು ಆಕೆಯ ಪರಿವಾರದ ಜೊತೆ ಮಾತಾಡಿರುವುದಾಗಿ ಸನೋಜ್ ಮಿಶ್ರಾ ತಿಳಿಸಿದ್ದಾರೆ. ತಮ್ಮ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಸಿನಿಮಾದಲ್ಲಿ ಮೊನಾಲಿಸಾ ಅಭಿನಯಿಸುವುದಕ್ಕೆ ಆಕೆಯ ಕುಟುಂಬದ ಸಹಮತವನ್ನೂ ಪಡೆದಿದ್ದಾರಂತೆ.

ಮೊನಾಲಿಸಾ ಮತ್ತು ಆಕೆಯ ಕುಟುಂಬದ ಸದಸ್ಯರು ತುಂಬಾ ಮುಗ್ದರು ಎಂದು ನಿರ್ಮಾಪಕ ಸನೋಜ್ ಮಿಶ್ರಾ ತಿಳಿಸಿದ್ದು, ತಾನು ಅಂದುಕೊಂಡದ್ದಕ್ಕಿಂತ ಮೊನಾಲಿಸಾ ಮತ್ತು ಆಕೆಯ ಕುಟುಂಬ ವರ್ಗ ಹೆಚ್ಚು ಮುಗ್ಧತೆ ಹೊಂದಿದೆ. ಹೀಗಾಗಿ, ಈಗ ನನ್ನ ಜವಾಬ್ಧಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊನಾಲಿಸಾ ಅವರನ್ನು ಭವಿಷ್ಯದಲ್ಲಿ ಯಶಸ್ವಿಯಾಗುವಂತೆ ಮಾಡುತ್ತೇವೆ ಎಂಬುದು ಅವರ ದೃಢ ಅಭಿಪ್ರಾಯವಾಗಿದೆ. ಸನೋಜ್ ಮಿಶ್ರಾ ಅವರ ಭೇಟಿಯ ನಂತರ ಮೊನಾಲಿಸಾ ಕೂಡ ಮಾತನಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. "ನಾನು ಸಿನಿಮಾದಲ್ಲಿ ಅಭಿನಯಿಸಲು ತಯಾರಾಗುತ್ತೇನೆ.. ಕಷ್ಟಪಡುತ್ತೇನೆ, ಸಿದ್ಧತೆ ಮಾಡಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

ಯಾರ ಜೀವನ ಯಾವ ರೀತಿ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಾಲಿಸಾರಿಗೆ ಒಳ್ಳೆಯದಾಗಲಿ ಎಂದು ಸಾಕಷ್ಟು ಕಾಮೆಂಟ್‌ಗಳು ಸನೋಜ್ ಮಿಶ್ರಾ ಅವರ ವಿಡಿಯೋಗೆ ಹರಿದುಬಂದಿವೆ. ಇನ್ನೂ ಕೆಲವರು, ತೆರೆಯ ಮೇಲೆ ಮೊನಾಲಿಸಾರನ್ನು ಕಾಣಲು ಆಸಕ್ತರಾಗಿದ್ದೇವೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕವೇ ಇಷ್ಟೊಂದು ಜನಪ್ರಿಯತೆ ಪಡೆದುಕೊಂಡ ಮೊನಾಲಿಸಾ ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಸ್ಟಾರ್ ಆದರೂ ಆಗಬಹುದು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರಿಂದ ವ್ಯಕ್ತವಾಗಿದೆ.

Whats_app_banner