ಕನ್ನಡ ಸುದ್ದಿ  /  Entertainment  /  Mp Hema Malini Reaction About Kangana Ranaut Politics Entry Rumor

Hema Malini about Kangana Ranaut: ಕಂಗನಾ ಜೊತೆಗೆ ರಾಖಿ ಸಾವಂತ್‌ ಕೂಡಾ ಕಳಿಸಿ ಆಕೆಯೂ ಮಂತ್ರಿ ಆಗ್ತಾರೆ..ಸಂಸದೆ ಹೇಮಾ ಮಾಲಿನಿ

''ಬೇರೆ ಯಾರನ್ನೂ ಮಥುರಾದಲ್ಲಿ ಸ್ಪರ್ಧಿಸಲು ನೀವು ಬಿಡುವುದಿಲ್ಲ. ಮಥುರಾದಲ್ಲಿ ಸಿನಿಮಾ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬುದು ನಿಮ್ಮ ತಲೆಯಲ್ಲಿ ಬಲವಾಗಿ ಕುಳಿತುಬಿಟ್ಟಿದೆ. ವೆರಿ ಗುಡ್‌, ರಾಖಿ ಸಾವಂತ್‌ನ ಕೂಡಾ ಕಳಿಸಿಕೊಡಿ, ಆಕೆ ಕೂಡಾ ಸ್ಪರ್ಧಿಸಲಿ'' ಎಂದು ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ.

ಕಂಗನಾ ರಾಜಕೀಯ ಎಂಟ್ರಿ ರೂಮರ್‌ ಬಗ್ಗೆ ಹೇಮಾ ಮಾಲಿನಿ ಪ್ರತಿಕ್ರಿಯೆ
ಕಂಗನಾ ರಾಜಕೀಯ ಎಂಟ್ರಿ ರೂಮರ್‌ ಬಗ್ಗೆ ಹೇಮಾ ಮಾಲಿನಿ ಪ್ರತಿಕ್ರಿಯೆ

ಸಿನಿಮಾ ತಾರೆಗಳು ರಾಜಕೀಯಕ್ಕೆ ಬರುವುದು ಸಾಮಾನ್ಯ ಎನಿಸಿದೆ. ಈಗಾಗಲೇ ಎಷ್ಟೋ ನಟ-ನಟಿಯರು ಎಂಎಲ್‌ಎ, ಎಂಪಿ, ಮಂತ್ರಿಗಳಾಗಿದ್ದಾರೆ. ಇದೀಗ ಕಂಗನಾ ರಣಾವತ್‌ ಕೂಡಾ ರಾಜಕೀಯಕ್ಕೆ ಬರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಸುದ್ದಿ ಇದಲ್ಲ, ಕಂಗನಾ ರಣಾವತ್‌ ರಾಜಕೀಯಕ್ಕೆ ಬರ್ತಿರೋ ವಿಚಾರಕ್ಕೆ ಸಂಸದೆ ಹೇಮಮಾಲಿನಿ ನೀಡಿರುವ ಪ್ರತಿಕ್ರಿಯೆ ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕಂಗನಾ ರಣಾವತ್‌ ಮಥುರಾ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ತಿಳಿದಾಗಿನಿಂದ ಕೆಲವರು ಕಂಗನಾಗೆ ಶುಭ ಕೋರಿದ್ದರೆ, ಇನ್ನೂ ಕೆಲವರು ಆಕೆಯ ಕಾಲೆಳೆಯುತ್ತಿದ್ದಾರೆ. ಈ ವಿಚಾರಕ್ಕೆ ಮಾಧ್ಯಮದವರು ಹೇಮಮಾಲಿನಿಯನ್ನು ಕೂಡಾ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ವಲ್ಪ ಗರಂ ಆಗಿ ಉತ್ತರಿಸಿದ ಹೇಮಾ ಮಾಲಿನಿ, ಮಥುರಾದಲ್ಲಿ ಕಂಗನಾ ರಣಾವತ್‌ ಮಾತ್ರವಲ್ಲ, ರಾಖಿ ಸಾವಂತ್‌ ಕೂಡಾ ಸ್ಪರ್ಧಿಸಬಹುದು ಎಂದು ಉತ್ತರಿಸಿದ್ದಾರೆ.

ಪ್ರಶ್ನೆ ಎದುರಾಗುತ್ತಿದ್ದಂತೆ ಹೇಮಾ ಮಾಲಿನಿ 'ಹೌದಾ, ಒಳ್ಳೆ ವಿಚಾರ' ಎಂದರು. ಇದರ ಬಗ್ಗೆ ನೀವು ಏನು ಹೇಳ್ತೀರ ಎಂದು ಕೇಳಿದಾಗ, ''ಇದರ ಬಗ್ಗೆ ಏನು ಹೇಳೋದು, ಎಲ್ಲವೂ ಶ್ರೀಕೃಷ್ಣನಿಗೆ ಬಿಟ್ಟದ್ದು. ಬೇರೆ ಯಾರನ್ನೂ ಮಥುರಾದಲ್ಲಿ ಸ್ಪರ್ಧಿಸಲು ನೀವು ಬಿಡುವುದಿಲ್ಲ. ಮಥುರಾದಲ್ಲಿ ಸಿನಿಮಾ ತಾರೆಯರು ಮಾತ್ರ ಸ್ಪರ್ಧಿಸಬೇಕು ಎಂಬುದು ನಿಮ್ಮ ತಲೆಯಲ್ಲಿ ಬಲವಾಗಿ ಕುಳಿತುಬಿಟ್ಟಿದೆ. ವೆರಿ ಗುಡ್‌, ರಾಖಿ ಸಾವಂತ್‌ನ ಕೂಡಾ ಕಳಿಸಿಕೊಡಿ, ಆಕೆ ಕೂಡಾ ಸ್ಪರ್ಧಿಸಲಿ'' ಎನುತ್ತಾ ಕಾರು ಹತ್ತಿ ಹೊರಟರು. ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದವರು ಹೇಮಾ ಜಿ, ಕಂಗನಾ, ರಾಖಿ ಸಾವಂತ್‌ ರಾಜಕೀಯಕ್ಕೆ ಬಂದ್ರೆ ನಿಮಗೆ ಇಷ್ಟವಾಗುವುದಿಲ್ಲವೇ..? ಎಂದು ಪ್ರಶ್ನಿಸುತ್ತಿದ್ದಾರೆ.

ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ್ದ ರಾಜಕೀಯ ನಾಯಕರು

ಬಿಹಾರದ ಮಾಜಿ ಮುಖ್ಯಮಂತ್ರಿ, ಲಾಲೂ ಪ್ರಸಾದ್ ಯಾದವ್ ಕೆಲವು ವರ್ಷಗಳ ಹಿಂದೆ ಬಿಹಾರದ ರಸ್ತೆಗಳನ್ನು ಬಾಲಿವುಡ್​ ನಟಿ ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿದ್ದರು. ಆಗ ಹೇಮಾ ಮಾಲಿನಿ ಈ ವಿಚಾರವಾಗಿ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಮಹಾರಾಷ್ಟ್ರದ ಸಚಿವರೊಬ್ಬರು ಕೂಡಾ ಹೀಗೆ ಮಾತನಾಡಿದ್ದರು. ಇದಕ್ಕೆ ಹೇಮಾ ಮಾಲಿನಿ ಬೇಸರಗೊಂಡಿದ್ದರು.

ಮಹಾರಾಷ್ಟ್ರದ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಗುಲಾಬ್​ರಾವ್ ಪಾಟೀಲ್ ಕಾರ್ಯಕ್ರಮವೊಂದರಲ್ಲಿ ''ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ನೋಡಿ. ಒಂದು ವೇಳೆ ರಸ್ತೆಗಳು ಹೇಮಾ ಮಾಲಿನಿ ಕೆನ್ನೆಗಳಂತೆ ಇಲ್ಲದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧವಿದ್ದೇನೆ'' ಎಂದು ಹೇಳಿದ್ದರು. ಇವರ ಹೇಳಿಕೆಗೆ ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಸೇರಿದಂತೆ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿ ಸಚಿವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದರು. ಹೇಮಾ ಮಾಲಿನಿ ಕೂಡಾ ಪ್ರತಿಕ್ರಿಯಿಸಿ, ''ರಸ್ತೆಗಳನ್ನು ನನ್ನ ಕೆನ್ನೆಗೆ ಹೋಲಿಸುವ ಟ್ರೆಂಡ್ ಲಾಲೂ ಪ್ರಸಾದ್ ಯಾದವ್ ಅವರಿಂದ ಆರಂಭವಾಯ್ತು. ಇದೀಗ ಎಲ್ಲರೂ ಅದೇ ವಾಕ್ಯಗಳನ್ನು ಬಳಸುತ್ತಿದ್ದಾರೆ. ಸಾಮಾನ್ಯ ಜನರು ಈ ರೀತಿ ಮಾತನಾಡಿದರೆ ಅಡ್ಜೆಸ್ಟ್​ ಮಾಡಿಕೊಳ್ಳಬಹುದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ಮುಖಂಡರು ಈ ರೀತಿ ಮಾತನಾಡುವುದು ಸರಿಯಲ್ಲ. ಯಾವುದೇ ಮಹಿಳೆಗಾಗಲೀ ಪುರುಷರು ಗೌರವ ನೀಡುವುದನ್ನು ಕಲಿಯಬೇಕು'' ಎಂದಿದ್ದರು.

IPL_Entry_Point