ಮಿಸ್ಟರ್ ರಾಣಿ ಸಿನಿಮಾ ವಿಮರ್ಶೆ; ಸ್ತ್ರೀ ವೇಷದಲ್ಲಿ ಪ್ರೇಕ್ಷಕರ ಮನಗೆದ್ದ ದೀಪಕ್ ಸುಬ್ರಮಣ್ಯ, ನೂರಕ್ಕೆ ನೂರು ಮನರಂಜನೆ
ಕನ್ನಡ ಸುದ್ದಿ  /  ಮನರಂಜನೆ  /  ಮಿಸ್ಟರ್ ರಾಣಿ ಸಿನಿಮಾ ವಿಮರ್ಶೆ; ಸ್ತ್ರೀ ವೇಷದಲ್ಲಿ ಪ್ರೇಕ್ಷಕರ ಮನಗೆದ್ದ ದೀಪಕ್ ಸುಬ್ರಮಣ್ಯ, ನೂರಕ್ಕೆ ನೂರು ಮನರಂಜನೆ

ಮಿಸ್ಟರ್ ರಾಣಿ ಸಿನಿಮಾ ವಿಮರ್ಶೆ; ಸ್ತ್ರೀ ವೇಷದಲ್ಲಿ ಪ್ರೇಕ್ಷಕರ ಮನಗೆದ್ದ ದೀಪಕ್ ಸುಬ್ರಮಣ್ಯ, ನೂರಕ್ಕೆ ನೂರು ಮನರಂಜನೆ

ಜೀ ಕನ್ನಡ ವಾಹಿನಿಯಲ್ಲಿ ಪ್ರವಾಸ ಆಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಕ್ ಸುಬ್ರಮಣ್ಯ ಅವರ ಸಿನಿಮಾ ಬಿಡುಗಡೆಯಾಗಿದೆ. 'ಮಿಸ್ಟರ್ ರಾಣಿ' ಸಿನಿಮಾದಲ್ಲಿ ಸ್ತ್ರೀ ವೇಷದಲ್ಲಿ ದೀಪಕ್ ಸುಬ್ರಮಣ್ಯ ಪ್ರೇಕ್ಷಕರ ಮನಗೆದ್ದಿದ್ದಾರೆ.

ಮಿಸ್ಟರ್ ರಾಣಿ ಸಿನಿಮಾ ವಿಮರ್ಶೆ
ಮಿಸ್ಟರ್ ರಾಣಿ ಸಿನಿಮಾ ವಿಮರ್ಶೆ

'ಮಿಸ್ಟರ್ ರಾಣಿ' ಸಿನಿಮಾ ವಿಮರ್ಶೆ: ಮರ್ಲಿನ್ ಮನ್ರೋ ಗೆಟಪ್‌ನಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಕಿ ನಿಂತ "ಮಿಸ್ಟರ್ ರಾಣಿ' ಪೋಸ್ಟರ್ ನೋಡಿ ಸಾಕಷ್ಟು ಜನ ಈ ಸಿನಿಮಾ ನೋಡಬೇಕೆಂದು ನಿರ್ಧರಿಸಿರುತ್ತಾರೆ. ಅಷ್ಟೇ ಅಲ್ಲದೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟ ದೀಪಕ್ ಜಯಂತ್ ಪಾತ್ರದಲ್ಲಿ ಅಭಿನಯಿಸಿದ್ದು, ಸಿನಿಮಾದಲ್ಲಿ ಅವರನ್ನು ಸ್ತ್ರೀ ವೇಷದಲ್ಲಿ ಕಾಣಬೇಕು ಎಂಬ ಹಂಬಲದಿಂದಲೂ ಸಾಕಷ್ಟು ಜನ ಕುತೂಹಲ ಇಟ್ಟುಕೊಂಡಿರುತ್ತಾರೆ. ಸಿನಿಮಾದ ಟೈಟಲ್ ಕಾರ್ಡ್ ಆರಂಭದಲ್ಲೇ ಎಷ್ಟೊಂದು ಸಿನಿಮಾಗಳಲ್ಲಿ ನಾಯಕ ನಟರು ಸ್ತ್ರೀ ವೇಷದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದರು ಎಂಬುದನ್ನು ತೋರಿಸಲಾಗಿದೆ. ಕನ್ನಡ ಚಿತ್ರರಂಗದ ಮೇರು ನಟರಾದ ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ಜಗ್ಗೇಶ್‌, ಶರಣ್, ಉಪೇಂದ್ರ ಹಾಗೂ ಇನ್ನಿತರ ಭಾಷೆಯ ಸಾಕಷ್ಟು ಕಲಾವಿದರು ಸ್ತ್ರೀವೇಷದಲ್ಲಿ ಯಾವ ರೀತಿ ಕಾಣುತ್ತಿದ್ದರು ಎಂಬುದನ್ನು ತೋರಿಸುತ್ತಾ ಸಿನಿಮಾ ಆರಂಭವಾಗುತ್ತದೆ. ಧಾರಾವಾಹಿಯಂತೆ ಸಿನಿಮಾದಲ್ಲೂ ಇವರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ.

ನಾಯಕನೇ ನಾಯಕಿಯೂ ಹೌದು!

ದೀಪಕ್ ಈ ಸಿನಿಮಾದ ನಾಯಕ ಹಾಗೂ ನಾಯಕಿ ಎರಡೂ ಆಗಿದ್ದಾರೆ. ಸಿನಿಮಾದುದ್ದಕ್ಕೂ ನಮ್ಮನ್ನು ಒಂದೇ ರೀತಿ ಮನರಂಜಿಸುತ್ತಾ ಸಾಗುವ ಅವರ ಅಭಿನಯ ಉತ್ತಮವಾಗಿದೆ. ಹೀರೋ ಆಗಬೇಕು ಎಂಬ ಕನಸು ಹೊತ್ತ ಇಂಜಿನಿಯರ್ ಒಬ್ಬ ತನ್ನ ಜೀವನದಲ್ಲಿ ಏನೆಲ್ಲ ಕಷ್ಟಪಡುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ನೂರಕ್ಕೆ ನೂರು ಮನರಂಜನೆ ಮತ್ತು ಹಾಸ್ಯವೇ ತುಂಬಿದೆ. ಸಿನಿಮಾದ ಮೊದಲಾರ್ಧಕ್ಕಿಂತ ಹೆಚ್ಚಾಗಿ, ದ್ವಿತೀಯಾರ್ಧ ಗಮನಸೆಳೆಯುತ್ತದೆ.

40 ಬೇರೆ ಬೇರೆ ಉಡುಪಿನಲ್ಲಿ ಸ್ತ್ರೀ ವೇಷದಲ್ಲಿ ನಟ ದೀಪಕ್ ಕಾಣಿಸಿಕೊಂಡಿದ್ದಾರೆ. ಒಬ್ಬ ಪುರುಷ ಸ್ತ್ರೀ ವೇಷ ಧರಿಸಿದ್ದು ಎಂಬುದನ್ನು ನಂಬಲು ಸಾಧ್ಯವೇ ಇಲ್ಲ ಎನ್ನುವ ರೀತಿ ಮಹಿಳೆಯರ ನಯ, ನಾಜೂಕನ್ನು ಅಭಿನಯಿಸಿ ತೋರಿಸಿದ್ದಾರೆ. ಇನ್ನು ದೀಪಕ್ ಅವರ ಗೆಳೆಯನ ಪಾತ್ರದಲ್ಲಿ ಅಭಿನಯಿಸಿದ ಶ್ರೀವತ್ಸ ಶ್ಯಾಮ್ (ಮಂಜ) ಸಿನಿಮಾದುದ್ದಕ್ಕೂ ಕಾಮಿಡಿ ಸಂಭಾಷಣೆಗಳಿಂದಲೇ ರಂಜಿಸುತ್ತಾರೆ.

ಸಿನಿಮಾದ ಕಥೆ ಏನು?

ಒಳ್ಳೆ ಉದ್ಯೋಗ ಸಿಕ್ಕರು ತನ್ನ ಆಸಕ್ತಿಯ ಕ್ಷೇತ್ರದಲ್ಲೇ ಮುನ್ನಡೆಯಬೇಕೆಂಬ ಬಯಕೆ ಹೊತ್ತ ರಾಜ, ಎಲ್ಲೂ ಅವಕಾಶಗಳೇ ಸಿಗದೆ ನಾನಾ ರೀತಿಯ ಪಾತ್ರಗಳನ್ನು ಮಾಡುತ್ತಾ, ಸಿಕ್ಕ ಸಣ್ಣಪುಟ್ಟ ಅವಕಾಶಗಳಿಂದ ಅಸಮಾಧಾನಗೊಂಡಿರುವಾಗ ಅವನ ಗೆಳೆಯ ಮಂಜ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶಕ್ಕೆ ರಾಜನನ್ನು ಒಪ್ಪಿಸುತ್ತಾನೆ. ಇಷ್ಟವಿಲ್ಲದೇ ಇದ್ದರೂ ಆ ಸಿನಿಮಾ ಮಾಡಲು ಮುಂದಾದ ರಾಜ, ಕೊನೆಗೆ ನಂಬರ್ 1 ನಟಿ ಎಂಬ ಪಟ್ಟ ಪಡೆದುಕೊಳ್ಳುತ್ತಾನೆ. ರಾಣಿ ಅಭಿಮಾನಿಗಳು ಹೆಚ್ಚಾಗಿ ವೇದಿಕೆಯೊಂದರಲ್ಲಿ ಅವಾಂತರ ಸೃಷ್ಟಿಯಾದಾಗ ರಾಜ ಎಲ್ಲ ಸತ್ಯ ಹೇಳಲು ಮುಂದಾಗುತ್ತಾನೆ. ಆದರೆ ಕೊನೆಯಲ್ಲಿ ರಾಜ ಮತ್ತು ರಾಣಿ ಇಬ್ಬರೂ ಒಬ್ಬರೇ ಎಂಬ ಸತ್ಯವನ್ನು ಜನರಿಗೆ ಗೊತ್ತಾಗುವ ಸಂದರ್ಭ ಎದುರಾಗುತ್ತದೆ. ಆದರೆ, ಹೇಗೆ ಮುಚ್ಚಿಡುತ್ತಾರೆ ಎಂಬುದೇ ಈ ಸಿನಿಮಾದ ಕಥೆ.

ಕೈ ಹಿಡಿದಿಲ್ಲ ಹೊಸ ಪ್ರಯತ್ನ

ಸಿನಿಮಾದಲ್ಲಿ ಒಟ್ಟು 4 ಹಾಡುಗಳಿದ್ದು, 'ಬುಡಕ್ಕೆ ಬೆಂಕಿ ಬಿದ್ರೂನೂ, ಬೀಡಿ ಹಚ್ಚಕೊಂಡ್‌ ಸೇದ್ತೀನಿ' ಎಂಬ ಹಾಡಿಗೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಜೋರಾಗಿಯೇ ಇರುತ್ತದೆ. ಛಾಯಾಗ್ರಹಣ ಉತ್ತಮವಾಗಿದೆ. ಗ್ರಾಫಿಕ್ಸ್‌ ಬಳಕೆ ಮಾಡಿ ಹೊಸ ಪ್ರಯತ್ನ ಮಾಡಲಾಗಿದೆ. ಆದರೆ ಆ ಪ್ರಯತ್ನ ಕೈ ಹಿಡಿದಿಲ್ಲ. ಗ್ರಾಫಿಕ್ಸ್‌ ಕಾರ್ಟೂನ್ ಗೇಮ್‌ನಂತೆ ಭಾಸವಾಗುತ್ತದೆ. ಆ ದೃಶ್ಯಗಳು ಇಲ್ಲದೇ ಇದ್ದರೂ ಸಿನಿಮಾದ ಕಥೆಯಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ, ಅನಾವಶ್ಯಕವಾಗಿ ಅದನ್ನು ತುರುಕಿಸಿದಂತಿದೆ. ಆದರೆ, ಪೂರ್ತಿ ಪ್ರಮಾಣದ ಮನರಂಜನೆ ಹಾಗೂ ಮನಬಿಚ್ಚಿ ನಗುವಂತೆ ಮಾಡುವ ದ್ವಿತೀಯಾರ್ಧ ಜನರ ಮನ ಗೆಲ್ಲುತ್ತದೆ.

ದೀಪಕ್ ಸುಬ್ರಹ್ಮಣ್ಯ, ಪಾರ್ವತಿ ನಾಯರ್, ಶ್ರೀವತ್ಸ ಶ್ಯಾಮ್, ಮಧು ಚಂದ್ರ, ಲಕ್ಷ್ಮೀ ಕಾರಂತ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶನ: ಮಧು ಚಂದ್ರ
ಸಂಗೀತ: ಜೂಡಾ ಸ್ಯಾಂಡಿ
ಛಾಯಾಗ್ರಹಣ: ರವೀಂದ್ರನಾಥ್ ಟಿ
ಹಿನ್ನೆಲೆ ಸಂಗೀತ: ರಿತ್ವಿಕ್ ಮುರುಳೀಧರ್
ಸಂಪಾದಕ: ಮಧು ತುಂಬೇಕೆರೆ
ರೇಟಿಂಗ್: 2.7/5

ವಿಮರ್ಶೆ: ಸುಮಾ ಕಂಚೀಪಾಲ್

Whats_app_banner