ILAYARAJA: ಸಂಗೀತ ಮಾಂತ್ರಿಕ ಇಳಯರಾಜ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ
ಸಂಗೀತ ಮಾಂತ್ರಿಕ ಇಳಯರಾಜ ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.
ನವದೆಹಲಿ: ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಸಂಗೀತ ಮಾಂತ್ರಿಕ ಇಳಯರಾಜ ರಾಜ್ಯಸಭೆಯಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರನ್ನ ಭೇಟಿಯಾದ ಇಳಯರಾಜ ಅವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಳಯರಾಜ ಅವರನ್ನ ಸನ್ಮಾನಿಸಿ ಅಭಿನಂದಿಸಿದ್ದಾರೆ.
ನಮ್ಮ ದೇಶದ ಹೆಮ್ಮೆಯಾಗಿರುವ ಸಂಗೀತ ಮಾಂತ್ರಿಕ ಇಳಯರಾಜ ಅವರನ್ನು ರಾಜ್ಯಸಭೆಯಲ್ಲಿ ಕಾಣಲು ಸಿಕ್ಕ ಅವಕಾಶ ಅತ್ಯಂತ ಸಂತೋಷ ಉಂಟು ಮಾಡಿದೆ ಎಂದು ಸಚಿವ ಜೋಶಿ ಅವರು ತಿಳಿಸಿದ್ದಾರೆ. ಭೇಟಿಯ ವೇಳೆ ಕೇಂದ್ರ ಸಚಿವ ಪಿಯುಷ್ ಗೊಯಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ದಕ್ಷಿಣ ಭಾರತದಿಂದ ರಾಜ್ಯಸಭೆಗೆ ಒಟ್ಟು 4 ಮಂದಿ ಆಯ್ಕೆಯಾಗಿದ್ದಾರೆ. ಧರ್ಮಸ್ಥಳದ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಕ್ರೀಡಾಪಟು ಪಿ.ಟಿ.ಉಷಾ, ಚಿತ್ರಕಥೆಗಾರ, ನಿರ್ದೇಶಕ ವಿ.ವಿಜಯೇಂದ್ರ ಪ್ರಸಾದ್ ಹಾಗೂ ಸಂಗೀತ ಮಾಂತ್ರಿಕ ಇಳಯರಾಜ ನಾಮ ನಿರ್ದೇಶನಗೊಂಡಿದ್ದಾರೆ.
ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಸಂಗೀತ ಮಾಂತ್ರಿಕ ಇಳಯರಾಜ ಅವರು ರಾಜ್ಯಸಭೆಯಲ್ಲಿಂದು ಪ್ರಮಾಣ ವಚನ ಸ್ವೀಕರಿಸಿ ಸಚಿವ ಪ್ರಲ್ಹಾದ ಜೋಶಿ ಅವರನ್ನ ಭೇಟಿಯಾದರು. ರಾಜ್ಯಸಭಾ ಸದಸ್ಯರಾಗಿರುವ ಡಾ. ವಿರೇಂದ್ರೆ ಹೆಗ್ಗಡೆ ಅವರನ್ನು ಸಂಸದ ಪ್ರತಾಪ್ ಸಿಂಹ ಭೇಟಿಯಾದರು.
ಕ್ರೀಡೆ, ಸಮಾಜ ಸೇವೆ, ಕಲೆ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸಂಸದರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನೇಮಿಸಬಹುದು. ಅದರಂತೆ ತಮಿಳುನಾಡಿನ ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರನ್ನು ರಾಜ್ಯಸಭೆಯ ನಾಮನಿರ್ದೇಶಿತ ಸಂಸದರನ್ನಾಗಿ ಘೋಷಿಸಲಾಗಿತ್ತು.
ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಅಥ್ಲೀಟ್ ಪಿ.ಟಿ.ಉಷಾ ಹಾಗೂ ಆಂಧ್ರಪ್ರದೇಶದ ಸಿನಿಮಾ ಲೇಖಕ ವಿಜಯೇಂದ್ರ ಪ್ರಸಾದ್ ಅವರನ್ನು ಸಂಸದರನ್ನಾಗಿ ನೇಮಿಸಲಾಗಿದೆ. ಕಳೆದ ಸೋಮವಾರ ನಡೆದ ಸಂಸತ್ ಅಧಿವೇಶನದಲ್ಲಿ ನೇಮಕಗೊಂಡ ಸದಸ್ಯರು ಅಧಿಕಾರ ಸ್ವೀಕರಿಸಿದರು. ಆದರೆ ಇಳಯರಾಜ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಹೀಗಾಗಿ ಸಂಗೀತ ಮಾಂತ್ರಿಕ ಇಳಯರಾಜ ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭೆಯಲ್ಲಿ ಇಳಯರಾಜ ತಮಿಳಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ಇದೇ ಜುಲೈ 21 ರಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೇಲ್ಮನೆ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು.
ಜುಲೈ 6ರಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಭಾರತ ಕಂಡ ಶ್ರೇಷ್ಠ ಅಥ್ಲೀಟ್ ಪಿಟಿ ಉಷಾ ಹಾಗೂ ವಿ ವಿಜಯೇಂದ್ರ ಪ್ರಸಾದ್ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದರು. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದರು.
1948ರಲ್ಲಿ ಜನಿಸಿದ ವೀರೇಂದ್ರ ಹೆಗ್ಗಡೆಯವರು, ತಮ್ಮ 20ನೇ ವಯಸ್ಸಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. 1968ರಿಂದಲೂ ಧರ್ಮಾಧಿಕಾರಿಯಾಗಿ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಇವರು ಸಾಕ್ಷಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರ, ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಇವರು ಯುವಕರನ್ನು ಪ್ರೇರೇಪಿಸಿದ ಬಗೆ ಅಮೋಘ.
ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಅರಿವು ನೀಡಲು ಮತ್ತು ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ಅವರು ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಕೂಡಾ ಸ್ಥಾಪಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಮಾಡಬಹುದಾದ ಹಲವು ಕಾರ್ಯಗಳನ್ನು ಖಾಸಗಿಯಾಗಿ ಮಾಡಿಸಿದ್ದು, ಹೆಗ್ಗಡೆಯವರ ಸಾಧನೆಯೇ ಸರಿ. ಸದ್ಯ ಸಂಸತ್ತಿನ ಮುಂಗಾರು ಅಧಿವೇಶನ ಆರಂಭದಲ್ಲೇ ವಿಪಕ್ಷಗಳ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ನಿರಂತರ ಪ್ರತಿಭಟನೆ ಮತ್ತು ಗದ್ದಲದ ಪರಿಣಾಮವಾಗಿ ಕಲಾಪ ಸುಗಮವಾಗಿ ನಡೆದಿಲ್ಲ.