Forest Tales: ದಸರಾ ಆನೆಗಳ ನಂಟನ್ನು ಹಾಲಿವುಡ್‌ಗೆ ಬೆಸೆದ ಶತಮಾನದ ಹೀರೋ ಮೈಸೂರು ಮಣ್ಣಿನ ನಟ ಸಾಬು
Mysore Elephant Boy ಮೈಸೂರು ಆನೆಗಳಿಗೂ ಹಾಲಿವುಡ್‌ಗೂ ನಂಟಿದೆಯಾ, ಎಲಿಫೆಂಟ್ ಬಾಯ್ ಎಂಬ ಹಾಲಿವುಡ್ ಚಿತ್ರವೇ ಇದಕ್ಕೆ ಸಾಕ್ಷಿ. ಚಿತ್ರದ ನಾಯಕ ಸಾಬು ದಸ್ತಗೀರ್(Selar Sabu) ಕನ್ನಡಿಗ. ಮಾವುತನಾಗಿ ಮೈಸೂರು ಮಹಾರಾಜರ ಬಳಿಕ ಹಾಲಿವುಡ್ ತೆಕ್ಕೆಯಲ್ಲಿ ಬೆಳೆದ ಕಥಾನಕ ರೋಚಕ.3 ತಿಂಗಳು ಕಳೆದರೆ ಸಾಬು ಜನಿಸಿ ನೂರು ವರ್ಷ. ಅವರ ನೆನಪು ಆನೆಗಳೊಂದಿಗೆ ಅಜರಾಮರ.
ಸಾಬು ದಸ್ತಗೀರ್, ಮೈಸೂರು ಸಾಬು, ಸೇಲರ್ ಸಾಬು, ಸಾಬು.. ಈ ಎಲ್ಲಾ ಹೆಸರುಗಳಲ್ಲಿ ಇರುವ ಸಾಮಾನ್ಯ ಪದ ಸಾಬು.
ಇದು ಬರೀ ಹೆಸರಲ್ಲ. ಅತೀ ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬೆಳೆದ ಪರಿ. ಅದೂ ನಮ್ಮ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಕಾರಾಪುರ ಕಾಡಿನ ಪರಿಸರದಲ್ಲಿ ಹುಟ್ಟಿ, ಅಲ್ಲಿಯೇ ಬಾಲ್ಯ ಕಳೆದು ಮೈಸೂರು ಮಹಾರಾಜರ ಆಶ್ರಯ ಪಡೆದು ನಂತರ ಹಾಲಿವುಡ್‌ನಲ್ಲಿ ಧೃವತಾರೆಯಂತೆ ಮಿಂಚಿದ್ದು ಇತಿಹಾಸವಲ್ಲದೇ ಮತ್ತೇನು.
ಹಾಲಿವುಡ್‌ನ ಎಲಿಫೆಂಟ್ ಬಾಯ್ , ದ ಜಂಗಲ್ ಬುಕ್, ಮ್ಯಾನ್ ಈಟರ್ ಆಫ್ ಕುಮೋನ್, ಹೆಲೋ ಎಲಿಫೆಂಟ್, ಜಾಗ್ವಾರ್.. ಹೀಗೆ ಕಾಡಿನ ಹಿನ್ನೆಲೆಯ ಚಿತ್ರಗಳ ಸಾಹಸಮಯ ಪಾತ್ರಗಳಲ್ಲಿ ಕಂಡವರು ಸಾಬು. ಎಲ್ಲಿಯ ಕಾರಾಪುರ ಕಾಡು ಮತ್ತು ಆನೆ ಲೋಕ. ಮತ್ತೆಲ್ಲಿಯ ಪ್ರತಿಭಗಳ ಸಂಗಮ ಹಾಲಿವುಡ್. ಆ ಸಂಬಂಧವನ್ನು ಬೆಸೆದು ಹೊಸ ಪೀಳಿಗೆಗೆ ಅಪರಿಚಿತರಾಗಿಯೇ ಉಳಿದಿದ್ದಾರೆ ನಮ್ಮ ಕನ್ನಡದ ಪ್ರತಿಭೆ ಸಾಬು ಎಂಬ ದೈತ್ಯ.
ಕಾರಾಪುರ ಕಾಡಿನ ಪ್ರತಿಭೆ
ಅದು ಸುಂದರ ಕಾಡು. ಮೈಸೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಊರು ಕಾರಾಪುರ, ಮೊದಲೆಲ್ಲಾ ದಟ್ಟ ಕಾಡು. ಅರವತ್ತರ ದಶಕದಲ್ಲಿ ಕಬಿನಿ ಜಲಾಶಯ ನಿರ್ಮಾಣವಾದಾಗ ಹಿನ್ನೀರಿನಿಂದ ಬಹಳಷ್ಟು ಊರುಗಳು ಮುಳುಗಡೆಯಾದವು. ಕಾಡು ಕೂಡ ಜಲಗರ್ಭದಲ್ಲಿ ಮುಳುಗಿ ಹೋಯಿತು. ಇದಕ್ಕೂ ಮೂರ್ನಾಲ್ಕು ದಶಕ ಹಿಂದೆ ದಟ್ಟ ಅಭಯಾರಣ್ಯದಿಂದ ಕೂಡಿದ
ಕಾರಾಪುರ ಕಾಕನಕೋಟೆ ಅಕ್ಕಪಕ್ಕದ ಪ್ರದೇಶ. ಈ ಕಾಡು ಆನೆಗಳಿಗೆ ಪ್ರಸಿದ್ದಿಯಾಗಿತ್ತು. ಕಾಡಿನ ಜತೆಗೆ ಇಲ್ಲಿ ನಡೆಯುತ್ತಿದ್ದ ಖೆಡ್ಡಾ ಕಾರ್ಯಾಚರಣೆಯೂ ಅಷ್ಟೇ ಪ್ರಸಿದ್ದಿ. ಏಕೆಂದರೆ ಕಾರಾಪುರದ ಅರಣ್ಯಕ್ಕೆ ಬಂದು ಇಲ್ಲಿ ಕಳೆಯುವುದು, ಬೇಟೆಯಾಡುವುದು ಮೋಜಿನ ವಿಷಯವೇ ಆಗಿತ್ತು. ಮೈಸೂರು ಮಹಾರಾಜರ ಅತಿಥಿಯಾಗಿ ಕಾರಾಪುರಕ್ಕೆ ಬಂದಿದ್ದಾರೆ ಎಂದರೆ ಅವರು ಅತಿಗಣ್ಯರೇ ಆಗಿರುತ್ತಿದ್ದರು. ಇಲ್ಲಿನ ಖೆಡ್ಡಾ ಕಾರ್ಯಾಚರಣೆ ನೋಡಲು ಬರುವವರೂ ಅಧಿಕ. ಸೆರೆ ಸಿಕ್ಕು ಖೆಡ್ಡಾ ಕಾರ್ಯಾಚರಣೆಯಲ್ಲಿ ಪಳಗಿದವರೇ ದಸರಾದಲ್ಲಿ ಐದಾರು ದಶಕದ ಹಿಂದೆ ಭಾಗಿಯಾದ ಆನೆಗಳು. ಅಂತಹ ಆನೆಗಳಿಗೂ ಸಾಬುಗೂ ಬಿಡಿಸಲಾಗದ ನಂಟು. ಸಾಬು ಜನಿಸಿದ್ದು ಇದೇ ಕಾರಾಪುರ ಅರಣ್ಯದಲ್ಲಿಯೇ.ಸಾಬು ಹುಟ್ಟಿದ್ದು 27 ಜನವರಿ 1924 ರಲ್ಲಿ.
ಆಗಲೇ ಆತನ ತಂದೆ ಕಾರಾಪುರ ಆನೆ ಶಿಬಿರದ ಮಾವುತ. ತಂದೆಯೊಂದಿಗೆ ಆನೆ ಏರಿ ಹೊರಟರೆ ಆದೇ ಸಾಬುವಿನ ನಿತ್ಯದ ಜೀವನ. ಇಲ್ಲಿಯೇ ಆರೇಳು ವರ್ಷದಲ್ಲಿ ಆನೆಗಳನ್ನು ಪಳಗಿಸುವ ಕಲೆಯನ್ನು ಕಲಿತಿದ್ದು ಸಾಬು.
ಹದಿಮೂರು ವರ್ಷದ ಬಾಲಕ
ಸಾಬು ಆರಂಭದಲ್ಲೇ ತಂದೆ ತಾಯಿಯಿಂದ ದೂರವಾಗಬೇಕಾಯಿತು. ಅಂದರೆ ಎರಡು ವರ್ಷದವನಿದ್ದಾಗಲೇ ತಾಯಿಯನ್ನು ಕಳೆದುಕೊಂಡ. ಏಳು ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡ. ಕಾರಾಪುರದಲ್ಲಿಯೇ ಆನೆಗಳನ್ನು ನೋಡಿಕೊಂಡು ಇದ್ದ ಬಾಲಕ. ಚೂಟಿಯಾಗಿದ್ದ ಬಾಲಕ ಮಹಾರಾಜರ ಕಣ್ಣಿಗೆ ಬಿದ್ದು ಅಲ್ಲಿಂದ ಮೈಸೂರು ಅರಮನೆ ಸೇರುತ್ತಾನೆ. ಇಲ್ಲಿ ಹಿರಿಯರೊಂದಿಗೆ ಆನೆಗಳ ಉಸ್ತುವಾರಿ ನೋಡಿಕೊಳ್ಳುವುದು ಅತನ ಕಾಯಕ. ಆತ ಎಂಟೇ ವರ್ಷಕ್ಕೆ ಮಾವುತನಾಗಿಯೇ ಬಿಟ್ಟ. ಆತನ ಚಟುವಟಿಕೆ, ತೊಡಗಿಕೊಳ್ಳುವಿಕೆ. ಆನೆಗಳೊಂದಿನ ಒಡನಾಟ ,ಕಾಯಕ ಪ್ರೀತಿ ಎಲ್ಲವೂ ಅಲ್ಲಿದ್ದವರ ಪ್ರೀತಿಗೆ ಕಾರಣವಾಗಿತ್ತು.
ಹಾಲಿವುಡ್ ಗೆ ಹಾರಿದ ಸಾಬು
ಇದಾಗಿ ನಾಲ್ಕೈದು ವರ್ಷ 1936ರಲ್ಲಿ ಬ್ರಿಟಿಷ್ ಚಲನಚಿತ್ರಕಾರ, ನಟ, ನಿರ್ದೇಶಕ ಅಲೆಕ್ಸಾಂಡರ್ ಕೋರ್ಡಾ ಭಾರತಕ್ಕೆ ಬಂದಿದ್ದರು. ರುಡ್ಯಾರ್ಡ್ ಕಿಪ್ಲಿಂಗ್ ಅವರ ಎಲಿಫೆಂಟ್ ಬಾಯ್ ಚಿತ್ರ ಮಾಡುವ ಉದ್ದೇಶ ಅವರದ್ದಾಗಿತ್ತು. ತೂಮೈ ಎನ್ನುವ ಪಾತ್ರದ ಬಾಲಕನ ಜತೆಗೆ ಆನೆಗಳೂ ಅವರ ಚಿತ್ರಕ್ಕೆ ಬೇಕಾಗಿದ್ದವು. ಕೋರ್ಡಾ ತಮ್ಮೊಂದಿಗೆ ಸಾಕ್ಷ್ಯಚಿತ್ರ ತಯಾರಕ ರಾಬರ್ಟ್ ಜೆ ಫ್ಲಹರ್ಟಿ ಅವರನ್ನೂ ಕರೆ ತಂದಿದ್ದರು. ಎಲಿಫೆಂಟ್ ಬಾಯ್ ಚಿತ್ರ ನಿರ್ದೇಶನದ ಹೊಣೆ ಫ್ಲಹರ್ಟಿ ಅವರದ್ದೇ ಆಗಿತ್ತು. ಆಗಲೇ ಹಲವು ಚಿತ್ರ ಮಾಡಿದ್ದ ಫ್ಲಹರ್ಟಿ ಮೊದಲು ಅಸ್ಸಾಂಗೆ ಹೋಗಿ ಅಲ್ಲಿ ಎಲೆಫೆಂಟ್ ಬಾಯ್‌ಗೆ ಹುಡುಕಾಟ ಮಾಡಿ ಬಂದಿದ್ದರು. ಆನಂತರ ಮೈಸೂರಿನ ಆಗಿನ ಮಹಾರಾಜರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಹ್ವಾನದ ಮೇರೆಗೆ ಬಂದಿದ್ದು ಮೈಸೂರಿಗೆ. ಮೈಸೂರಿನಲ್ಲಿ ಆನೆಗಳನ್ನು ನೋಡುವಾಗ ಆವುಗಳೊಂದಿಗೆ ಸಹಜವಾಗಿಯೇ ಇದ್ದುಕೊಂಡು ಚುರುಕುತನ ಪ್ರದರ್ಶಿಸಿದ್ದ ಸಾಬು ಆಗ ಬಿದ್ದಿದ್ದು ಫ್ಲಹರ್ಟಿ ಕಣ್ಣಿಗೆ. ಎಲೆಫೆಂಟ್ ಬಾಯ್ ಜಗತ್ತಿನ ಕಣ್ಣಿಗೆ ತೆರೆದುಕೊಂಡಿದ್ದು ಹೀಗೆ.
ದೈತ್ಯನಾಗಿ ಬೆಳೆದ ಪರಿ
ಮೈಸೂರು ಕಾರಾಪುರ ಆನೆಗಳ ಬಗ್ಗೆ ತಿಳಿದಿದ್ದ ಇಬ್ಬರಿಗೂ ಅಲ್ಲಿಗೂ ಭೇಟಿ ನೀಡುವ ಉಮೇದು. ಕೊನೆಗೆ ಇಲ್ಲಿಯೇ ಚಿತ್ರೀಕರಣ, ಸಾಬು ಈ ಚಿತ್ರದ ಹೀರೋ ಎನ್ನುವ ತೀರ್ಮಾನದೊಂದಿಗೆ ತಂಡ ಚಿತ್ರೀಕರಣಕ್ಕೆ ಅಣಿಯಾಯಿತು. ಸಿನೆಮಾ, ಕಲೆ ಬಗ್ಗೆ ಆಸಕ್ತರಿದ್ದ ನಾಲ್ವಡಿ ಅವರು ಇದಕ್ಕೆ ಅನುಮತಿಯನ್ನೂ ನೀಡಿ ತಮ್ಮ ಆನೆಗಳ ಮಾವುತನನ್ನೂ ನೀಡಲು ಒಪ್ಪಿದರು. ಕನ್ನಡ, ಉರ್ದು ಭಾಷೆಯನ್ನು ಕಲಿತಿದ್ದ, ಶಾಲೆಗೆ ಅಪರೂಪಕ್ಕೆ ಹೋಗಿದ್ದ ಸಾಬು ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುವುದು ಎಂದರೆ ಸುಮ್ಮನೆಯೇ. ಪ್ರತಿಭೆಗಳು ಹುಟ್ಟುವುದೇ ಹೀಗೆ. ಅನಾಮಿಕರೇ ಹೀರೋಗಳಾಗುವುದು ಎನ್ನುವ ನಮ್ಮ ಮುಂದಿನ ನೂರಾರು ಕಥಾನಕಗಳಂತೆ ಸಾಬು ಎಲಿಫೆಂಟ್ ಬಾಯ್ ಚಿತ್ರದಲ್ಲಿ ಅಭಿನಯಿಸೇ ಬಿಟ್ಟ.ಇಡೀ ಚಿತ್ರ ಮಾವುತ ಹಾಗೂ ಆನೆಯ ಹಿನ್ನೆಲೆಯಲ್ಲಿದ್ದರಿಂದ ಇಂಗ್ಲೀಷ್ ಕೂಡ ಕಲಿತುಕೊಂಡು ಸಹಜವಾಗಿಯೇ ಸಾಬು ಅಭಿಯನಿಸಿ ಬಿಟ್ಟ.ಲಂಡನ್‌ನಲ್ಲಿ ಅರ್ಧ, ಕಾರಾಪುರದಲ್ಲಿ ಉಳಿದರ್ಧ ಚಿತ್ರೀಕರಣಗೊಂಡಿತ್ತು. ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರ ಬಿಕ್ಕಟ್ಟಿನ ನಡುವೆಯೂ ಪೂರ್ಣಗೊಂಡು ಚಿತ್ರ ಬಿಡುಗಡೆ ಕಂಡು ಭಾರೀ ಹೆಸರು ಪಡೆಯಿತು. ಎಲಿಫೆಂಟ್ ಬಾಯ್ ಹಾಲಿವುಡ್‌ನ ತಾರೆಯೇ ಆದ. ಅರಣ್ಯದಲ್ಲಿ ಹುಟ್ಟಿ ಹಾಲಿವುಡ್ ಪ್ರವೇಶಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಯೂ ಸಾಬುದಾಯಿತು. ಸಾಬು ಲಂಡನ್‌ಗೆ ಹಾರಿ ಹೋಗಿ ಬೆಳೆದ ಪರಿಯ ಹಾದಿಯೆಲ್ಲಾ ಇತಿಹಾಸ. ನಿರಂತರವಾಗಿ ಇಪ್ಪತ್ತೈದು ವರ್ಷ ಹಾಲಿವುಡ್‌ನಲ್ಲಿದ್ದು24 ಚಿತ್ರಗಳಲ್ಲಿ ಅಭಿನಯಿಸಿದ್ದು ವಿಶೇಷ. ಮೌಗ್ಲಿಯ ಪಾತ್ರವಂತೂ ಇನ್ನಷ್ಟು ಪ್ರಸಿದ್ದಿ ತಂದು ಹಾಗೂ ಸಾಬು ಪ್ರತಿಭೆ ಅನಾವರಣಗೊಳಿಸಿತು. ಅಲ್ಲಿಯೇ ಮದುವೆ, ಕುಟುಂಬ ಎಲ್ಲವೂ ಆಗಿ ಹೋಯಿತು. ಇಬ್ಬರು ಮಕ್ಕಳು, ಪತ್ನಿಯೊಂದಿಗೆ ಅಮೆರಿಕಾ ನಿವಾಸಿಯಾದರು ಸಾಬು. ಆದರೆ ಹೃದಯಾಘಾತದಿಂದ 1963ರಲ್ಲಿ ತೀರಿಕೊಂಡರು ಸಾಬು. ಅಂದರೆ ಅವರು ಇಹಲೋಕ ತ್ಯಜಿಸಿದಾಗ ಬರೀ 39 ವರ್ಷ. ನಂತರ ಪತ್ನಿ, ಮಗಳು ಕೂಡ ತೀರಿಕೊಂಡರು. ಈಗ ಅವರ ಕಡೆಯವರು ಕಾರಾಪುರದಲ್ಲೂ ಯಾರೂ ಇಲ್ಲ.
ಸಾಬು ಅಭಿನಯಿಸಿದ ಚಿತ್ರಗಳು
ಎಲಿಫೆಂಟ್ ಬಾಯ್ ( ಪಾತ್ರ ತೂಮೈ 1937), ದಡ್ರಮ್( ಪ್ರಿನ್ಸ್ ಅಜೀಮ್-1938), ದ ಥೀಪ್ ಆಫ್ ಬಾಗ್ದಾದ್( ಅಬು 1940), ದ ಜಂಗಲ್ ಬುಕ್( ಮೌಗ್ಲಿ-1942)
ಅರೇಬಿಯನ್ ನೈಟ್ಸ್(ಅಲಿ ಬೆನ್ ಅಲಿ 1942), ವೈಟ್ ಸೇವೆಜ್(ಒರಾನೋ 1943), ಕೋಬ್ರಾ ವುಮನ್( ಕಾಡೋ 1944), ಟೇಂಗಿಯರ್( ಪೆಪೆ 1946), ಬ್ಲಾಕ್ ನರ್ಸಿಸಸ್ ( ಯಂಗ್ ಜನರಲ್ 1947), ದ ಎಂಡ್ ಆಫ್ ದ ರಿವರ್( ಮನೋಯಲ್ 1947), ಮ್ಯಾನ್ ಈಟರ್ ಆಫ್ ಕುಮೋನ್( ನರೈನ್1948 ), ಸಾಂಗ್ ಆಫ್ ಇಂಡಿಯಾ( ರಾಮದಾರ್1949), ಸೇವೇಜ್ ಡ್ರಮ್ಸ್( ಟಿಪೋ ಟೈರೋ 1951), ಹೆಲೋ ಎಲಿಫೆಂಟ್( ಸುಲ್ತಾನ್ ಆಫ್ ನಾಗೋರ್ ಸಾಬು1952 ), ಬಾಗ್ದಾದ್- (1952) ಸೆಕೆಂಡ್ ಟೆಸೋರೋ ಬೆಂಗಾಲ( ಐನೂರ್1953), ಜಾಗ್ವಾರ್( ಜುವಾನೋ1956 ), ಜಂಗಲ್ ಹಲ್( ಸಾಬು ದ ಜಂಗಲ್ ಬಾಯ್1956), ದ ಬ್ಲಾಕ್ ಪ್ಯಾಂಥರ್( ಸಾಬು ದ ಜಂಗಲ್ ಬಾಯ್1957 ), ಸಾಬ್ ಅಂಡ್ ದ ಮ್ಯಾಜಿಕ್ ರಿಂಗ್( ಸಾಬು1957), , ಮಿಸ್ಟ್ರೆಸ್ ಆಫ್ ದ ವರ್ಲ್ಡ್( ಡಾ.ಲಿನ್ ಚೋರ್ 1960), ರಾಂಪೇಜ್( ತಾಲಿಬ್1963), ದ ಟೈಗರ್ ವಾಕ್ಸ್ (ರಾಮ್ ಸಿಂಗ್ 1964).
ಶತಮಾನೋತ್ಸವ ವರ್ಷ
ಮೈಸೂರು ಕಾಡಿನ ಹಿರಿಮೆ, ಆನೆಗಳ ಮಹತ್ವವನ್ನು ಜಗತ್ತಿಗೆ ಸಾರಿದ ಸಾಬು ವನ್ಯಜೀವಿ ಲೋಕದ ಅಂಬಾಸಿಡರ್ ಹೌದು. ಮೈಸೂರು ಪರಿಸರದಲ್ಲಿಯೇ ಬೆಳೆದು ಇಲ್ಲಿಂದ ದೂರದ ಲಂಡನ್, ಅಮೆರಿಕಾಕ್ಕೆ ಹೋಗಿ ಫಿನೀಕ್ಸ್‌ನಂತೆ ಬೆಳೆದ ಸಾಬು 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳು ವನ್ಯಜೀವಿ ಹಿನ್ನೆಲೆಯವು. ಮೈಸೂರು ಮಣ್ಣಿನ ನಂಟಿರುವ ಈ ಪ್ರತಿಭೆಯ ಜನ್ಮಶತಮಾನೋತ್ಸವ ವರ್ಷವಿದು. ಇದನ್ನು ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಈಗಿನ ದಸರಾ ಚಲನಚಿತ್ರೋತ್ಸವ ಸಮಿತಿ ಮಾಡಿಲ್ಲ. ಹಾಸ್ಯ ಬ್ರಹ್ಮ ನರಸಿಂಹರಾಜು ಅವರ ಹೆಸರಿನಲ್ಲಿ ಜನ್ಮಶತಮಾನೋತ್ಸವ ನಡೆಸಿ ಅವರ ಚಿತ್ರಗಳ ಪ್ರದರ್ಶನ ಮಾಡುತ್ತಿರುವುದು ಸ್ತುತ್ಯಾರ್ಹ. ಆದೇ ರೀತಿ ಸಾಬು ಅವರ ನಾಲ್ಕೈದು ಚಿತ್ರಗಳನ್ನು ಪ್ರದರ್ಶನ ಮಾಡಿದ್ದರೂ ಅವರಿಗೆ ಗೌರವ ನೀಡಿದಂತೆ ಆಗುತ್ತಿತ್ತು. ಆಗ ಸಾಬು ತಂದೆ ಹಾಗೂ ಸಾಬು ದಸರಾಗೆ ಬಂದಿದ್ದ ಮಾಹಿತಿ ಇಲ್ಲವಾದರೂ ಕಾರಾಪುರ ಆನೆಗಳ ನಂಟು ದಸರಾದೊಂದಿಗೆ ಇದ್ದೇ ಇದೆ. ಐರಾವತ, ದ್ರೋಣ, ರಾಜೇಂದ್ರ ಸಹಿತ ಹಲವು ಆನೆಗಳು ಕಾರಾಪುರ ಶಿಬಿರದವೇ. ಇಂತಹ ಆನೆಗಳ ಶಿಬಿರದ ಒಡನಾಡಿಯಾಗಿದ್ದ ಸಾಬು ಕುರಿತು ಚಿತ್ರಗಳ ಪ್ರದರ್ಶನವನ್ನು ದಸರಾ ಸಮಿತಿ ಈಗಲೂ ಮಾಡಿದರೆ ದಸರಾ ಆನೆಗಳು ಹಾಗೂ ಆ ಪರಂಪರೆಗೆ ನೀಡುವ ಗೌರವವೂ ಹೌದು.
-ಕುಂದೂರು ಉಮೇಶಭಟ್ಟ
( ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)