Anant Nag Top 10 Movies: ತಪ್ಪದೇ ನೋಡಲೇಬೇಕಾದ ಪದ್ಮವಿಭೂಷಣ ಅನಂತ್ ನಾಗ್ ಅಭಿನಯದ 10 ಚಿತ್ರಗಳಿವು
Anant Nag Top 10 Comedy Movies: ಅನಂತ್ ನಾಗ್ ವರ್ಸೈಟಲ್ ಅನಿಸಿಕೊಳ್ಳುವುದಕ್ಕೆ ಹಲವು ಚಿತ್ರಗಳು ಮತ್ತು ಪಾತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಆ ಪೈಕಿ ದಿ ಬೆಸ್ಟ್ ಎನ್ನುವಂತಹ 10 ಚಿತ್ರಗಳನ್ನು ನೀವು ನೋಡಲೇಬೇಕು.

Anant Nag Movies: ಕನ್ನಡದ ಹೆಮ್ಮೆಯ ನಟ ಅನಂತ್ ನಾಗ್ ಅವರಿಗೆ ಕೊನೆಗೂ ಶನಿವಾರ ರಾತ್ರಿ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕೆಂಬ ಕೂಗು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಅದಕ್ಕೂ ದೊಡ್ಡ ಪ್ರಶಸ್ತಿ ಅವರಿಗೆ ಸಿಕ್ಕಿದೆ.
ಅನಂತ್ ನಾಗ್ ಬರೀ ಕನ್ನಡದ ನಟರಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ನಟ. ಅದಕ್ಕೆ ಸರಿಯಾಗಿ ಅವರು ಕನ್ನಡವಲ್ಲದೆ ತೆಲುಗು, ಹಿಂದಿ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿದ್ದಾರೆ. ಬರೀ ಕಮರ್ಷಿಯಲ್ ಚಿತ್ರಗಳಷ್ಟೇ ಅಲ್ಲ, ಕಲಾತ್ಮಕ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ನಾಯಕನಾಗುವುದರ ಜೊತೆಗೆ ಪೋಷಕ ಪಾತ್ರಗಳಲ್ಲೂ ಗೆದ್ದಿದ್ದಾರೆ. ಅನಂತ್ ನಾಗ್ ಅವರು ವರ್ಸೈಟಲ್ ಅನಿಸಿಕೊಳ್ಳುವುದಕ್ಕೆ ಹಲವು ಚಿತ್ರಗಳು ಮತ್ತು ಪಾತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಆ ಪೈಕಿ ದಿ ಬೆಸ್ಟ್ ಎನ್ನುವಂತಹ 10 ಚಿತ್ರಗಳನ್ನು ನೀವು ನೋಡಲೇಬೇಕು.
ಅನಂತ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ 1973ರಲ್ಲಿ ಬಿಡುಗಡೆಯಾದ ‘ಸಂಕಲ್ಪ’ ಚಿತ್ರದ ಮೂಲಕ ಪರಿಚಿತರಾದರೂ, ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದೆಂದರೆ, ಅದು 1975ರಲ್ಲಿ ಬಿಡುಗಡೆಯಾದ ಜಿ.ವಿ. ಅಯ್ಯರ್ ನಿರ್ದೇಶನದ ‘ಹಂಸಗೀತೆ’. ತ.ರಾ.ಸು ವಿರಚಿತ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಈ ಚಿತ್ರದಲ್ಲಿ ಭೈರವಿ ವೆಂಕಟಸುಬ್ಬಯ್ಯ ಎಂಬ ಪಾತ್ರದಲ್ಲಿ ನಟಿಸಿದ್ದರು. ಒಬ್ಬ ಸಂಗೀತಗಾರನ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ಅನಂತ್ ನಾಗ್ ಅಮೋಘವಾಗಿ ನಟಿಸಿದ್ದರು.
1977ರಲ್ಲಿ ಬಿಡುಗುಡೆಯಾದ ‘ಕನ್ನೇಶ್ವರ ರಾಮ’ ಚಿತ್ರದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಒಬ್ಬ ಕಳ್ಳನಾಗಿ ಅನಂತ್ ನಾಗ್ ಅಭಿನಯಿಸಿದ್ದರು. ಎಂ.ಎಸ್. ಸತ್ಯು ನಿರ್ದೇಶನದ ಈ ಚಿತ್ರದಲ್ಲಿ ಸಾಮಾನ್ಯ ಮನುಷ್ಯನೊಬ್ಬ, ಕಾರಣಾಂತರಗಳಿಂದ ಜೈಲು ಪಾಲಾಗುತ್ತಾನೆ. ಅಲ್ಲಿ ಡಕಾಯಿತರ ಗುಂಪಿನೊಂದಿಗೆ ಸೇರಿ ಶ್ರೀಮಂತರನ್ನು ದರೋಡೆ ಮಾಡಿ ಬಡವರ ಪಾಲಿನ ರಾಬಿನ್ ಹುಡ್ ಆಗುತ್ತಾನೆ. ಮುಂದಿನ ದಿನಗಳಲ್ಲಿ ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಾನೆ. ಈ ಚಿತ್ರದ ಮೂಲಕ ಶಬನಾ ಆಜ್ಮಿ ಮತ್ತು ಅಮೋಲ್ ಪಾಲೇಕರ್, ಕನ್ನಡ ಚಿತ್ರದಲ್ಲಿ ನಟಿಸುವಂತಾಯಿತು.
ಕನ್ನಡದ ಮೊದಲ ಹಾರರ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ನಾ ನಿನ್ನ ಬಿಡಲಾರೆ’ ಚಿತ್ರವು ಅನಂತ್ ನಾಗ್ ಎಂತಹ ನಟ ಎಂದು ತೋರಿಸಿಕೊಟ್ಟ ಇನ್ನೊಂದು ಚಿತ್ರ. ಈ ಚಿತ್ರದಲ್ಲಿ ದೆವ್ವದ ಕಾಟದಿಂದ ತತ್ತಿರುಸುವ ನಾಯಕನಾಗಿ ಅನಂತ್ ನಾಗ್ ಅಭಿನಯಿಸಿದ್ದು, ಈ ಚಿತ್ರದ ಅಭಿನಯಕ್ಕೆ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಮೊದಲ ಬಾರಿಗೆ ಜೊತೆಯಾಗಿ ನಟಿಸಿದರು. ಚಿತ್ರ ಯಶಸ್ವಿಯಾಗಿ, ಈ ಜೋಡಿ ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಯಲ್ಲೊಂದಾಯಿತು.
ಅಲ್ಲಿಯವರೆಗೂ ಕಮರ್ಷಿಯಲ್ ಚಿತ್ರಗಳಲ್ಲಿ ಅನಂತ್ ನಾಗ್ ಅವರು ನಟಿಸಿದ್ದರೂ, ‘ನಾರದ ವಿಜಯ’ ಚಿತ್ರದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಪೌರಾಣಿಕ ಪಾತ್ರವಾದ ನಾರದನ ಜೊತೆಗೆ ವಿಜಯ್ ಎಂಬ ಪೊಲೀಸ್ ಅಧಿಕಾರಿಯಾಗಿ ಗಮನಸೆಳೆದಿದ್ದರು. ಎರಡೂ ಪಾತ್ರಗಳಿಗೆ ತಮ್ಮ ಮ್ಯಾನರಿಸಂನಿಂದ ಪ್ರತ್ಯೇಕತೆ ತಂದು ಕೊಟ್ಟ ಈ ಚಿತ್ರವು ದೊಡ್ಡ ಯಶಸ್ಸು ಕಂಡಿತು ಎಂಬ ಹೇಳಲಾಗುತ್ತದೆ. ಈ ಚಿತ್ರದ ‘ಇದು ಎಂಥಾ ಲೋಕವಯ್ಯಾ …’ ಹಾಡು, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಗೀತೆಗಳಲ್ಲೊಂದಾಗಿದೆ.
ಆಕ್ಸಿಡೆಂಟ್; ವಯಸ್ಸಿಗೆ ಮೀರಿದ ಪಾತ್ರವದು
ಶಂಕರ್ ನಾಗ್ ನಿರ್ದೇಶನದ ‘ಆ್ಯಕ್ಸಿಡೆಂಟ್’ ಚಿತ್ರದಲ್ಲಿ ಅನಂತ್ ನಾಗ್, ಚಾಣಾಕ್ಷ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದ ಅನಂತ್ ನಾಗ್, ತಾವು ಎಂಥಾ ಪಾತ್ರವನ್ನೂ ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟರು. ಈ ಚಿತ್ರವು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು.
1990ನೇ ವರ್ಷ ಅನಂತ್ ಪಾಲಿಗೆ ವಿಶೇಷ
1990ರ ಅನಂತ್ ನಾಗ್ ಅವರ ಪಾಲಿಗೆ ಬಹಳ ಮಹತ್ವದ ವರ್ಷ. ಈ ವರ್ಷದಲ್ಲಿ ಅನಂತ್ ನಾಗ್ ಅವರ ಹಲವು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಮೂರು ಪ್ರಮುಖ ಚಿತ್ರಗಳೆಂದರೆ, ಅದು ‘ಉದ್ಭವ’, ‘ಗಣೇಶನ ಮದುವೆ’ ಮತ್ತು ‘ಗೋಲ್‍ಮಾಲ್ ರಾಧಾಕೃಷ್ಣ’. ಮೂರೂ ಚಿತ್ರಗಳು ಕಾಮಿಡಿ ಚಿತ್ರಗಳಾದರೂ, ಮೂರೂ ವಿಭಿನ್ನ ಶೈಲಿಯದ್ದಾಗಿದ್ದವು ಮತ್ತು ಮೂರು ಚಿತ್ರಗಳ ಹೈಲೈಟ್ ಎಂದರೆ ಅದು ಅನಂತ್ ನಾಗ್ ಅವರ ಅಭಿನಯ. ಬಿ.ವಿ. ವೈಕುಂಠರಾಜು ಅವರ ನಾಟಕವಾಧರಿಸಿದ ‘ಉದ್ಭವ’ ಚಿತ್ರದಲ್ಲಿ ಅನಂತ್ ನಾಗ್ ಅವರು ಪುಢಾರಿಯ ಪಾತ್ರ ಮಾಡಿದ್ದರು. ‘ಗಣೇಶನ ಮದುವೆ’ಯ ಅವರ ಗಣೇಶನ ಪಾತ್ರ ಯಶಸ್ವಿಯಾಗಿ, ಗಣೇಶ ಸರಣಿಯ ಚಿತ್ರಗಳು ಪ್ರಾರಂಭವಾದವು. ಇನ್ನು, ‘ಗೋಲ್ಮಾಲ್ ರಾಧಾಕೃಷ್ಣ ಚಿತ್ರ ಗೆದ್ದು, ಅದರ ಮುಂದುವರೆದ ಭಾಗವೂ ಬಂತು. ಈ ಚಿತ್ರಗಳು ಫ್ಯಾಮಿಲಿ ಪ್ರೇಕ್ಷಕರಿಗೆ ಅನಂತ್ ನಾಗ್ ಅವರನ್ನು ಇನ್ನಷ್ಟು ಹತ್ತಿರವಾಗಿಸುವುದರ ಜೊತೆಗೆ, ಅನಂತ್ ನಾಗ್ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದವು.
ಕಾದಂಬರಿ ಆಧರಿತ ಬೆಳದಿಂಗಳ ಬಾಲೆ
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ‘ಬೆಳದಿಂಗಳ ಬಾಲೆ’ ಚಿತ್ರವು ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯನ್ನಾಧರಿಸಿದ ಚಿತ್ರವಾಗಿತ್ತು. ಅದಕ್ಕೂ ಮುನ್ನ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡಿದ್ದ ಅನಂತ್ ನಾಗ್, ಈ ಚಿತ್ರದಲ್ಲಿ ರೇವಂತ್ ಎಂಬ ಚೆಸ್ ಮಾಸ್ಟರ್ ಪಾತ್ರದಲ್ಲಿ ನಟಿಸಿದ್ದರು. ನಾಯಕ-ನಾಯಕಿ ಒಬ್ಬರನ್ನೊಬ್ಬರು ನೋಡದೆ ಪ್ರೀತಿಸುವ ವಿಭಿನ್ನ ಕಥೆ ಹೊಂದಿದ್ದ ಈ ಚಿತ್ರವು, ಚಿತ್ರರಂಗದಲ್ಲಿ ಟ್ರೆಂಡ್ ಸೆಟರ್ ಆಯಿತು. ಈ ಚಿತ್ರವು ರಾಜ್ಯ ಸರ್ಕಾರದಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
2016ರಲ್ಲಿ ಬಿಡುಗಡೆಯಾದ ಹೇಮಂತ್ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರವು ಅನಂತ್ ನಾಗ್ ಅವರ ಬಹುಮುಖ ಪ್ರತಿಭೆಯನ್ನು ತೆರೆದಿಡುವ ಇನ್ನೊಂದು ಚಿತ್ರ. ಆಲ್‍ಜೈಮರ್ ಖಾಯಿಲೆಯಿಂದ ಬಳಲುತ್ತಿರುವ ವೆಂಕೋಬ ರಾವ್ ಎಂಬ ಹಿರಿಯನಾಗಿ ಅನಂತ್ ನಾಗ್ ನೀಡಿದ ಅಭಿನಯ ಅದ್ಭುತ. ತಂದೆ-ಮಗನ ಸಂಬಂಧವನ್ನು ಬಿಚ್ಚಿಡುವ ಈ ಚಿತ್ರದಲ್ಲಿ ಅನಂತ್ ನಾಗ್ ತಂದೆಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರವು ತಮಿಳಿನಲ್ಲೂ ರೀಮೇಕ್ ಆಗಿದ್ದು, ಅನಂತ್ ನಾಗ್ ಅವರ ಪಾತ್ರವನ್ನು ಪ್ರಕಾಶ್ ರೈ ನಿರ್ವಹಿಸಿದ್ದರು.
ಲೇಖನ: ಚೇತನ್ ನಾಡಿಗೇರ್
