Kannada Serials: ಕಿರುತೆರೆಗೆ ಲಗ್ಗೆ ಇಡ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಶುಭಂ ಹೇಳಲಿವೆ ಹಲವು ಸೀರಿಯಲ್‌ಗಳು
Upcoming Kannada Serials and Shows: ಇನ್ನೇನು ಕೆಲವೇ ದಿನಗಳ ಅಂತರದಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಹೊಸ ಸೀರಿಯಲ್‌ಗಳು ಮತ್ತು ರಿಯಾಲಿಟಿ ಶೋಗಳು ಆರಂಭವಾಗಲಿವೆ. ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್ ಲೈನ್‌ನಲ್ಲಿದ್ದರೆ, ಕಲರ್ಸ್ ಕನ್ನಡದಲ್ಲಿ ವಧು, ಯಜಮಾನ ಧಾರಾವಾಹಿ ಸೇರಿ ಎರಡು ನಾನ್ ಫಿಕ್ಷನ್ ಶೋಗಳು ಬರ್ತಿವೆ.

Upcoming Kannada Serials: ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಹತ್ತು ಹಲವು ಬಗೆಯ ವಿಭಿನ್ನ ಪ್ರಕಾರದ ಸೀರಿಯಲ್‌ಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಕೌಟುಂಬಿಕ ಕಥಾಹಂದರದ ಸೀರಿಯಲ್‌ಗಳ ಜತೆಗೆ ಹಾರರ್ ಎನಿಸುವ, ಹಳ್ಳಿ ಹಿನ್ನೆಲೆಯ ಕಥೆಗಳು, ಶ್ರೀಮಂತ ಹುಡುಗ, ಬಡ ಹುಡುಗಿ.. ಈ ಥರದ ಕಥೆಗಳು ಪ್ರಸಾರ ಕಾಣುತ್ತಿವೆ. ಟಿಆರ್‌ಪಿಯಲ್ಲಿಯೂ ಈ ಸೀರಿಯಲ್‌ಗಳು ನೋಡುಗರ ಮನಸ್ಸು ಗೆದ್ದು ಒಳ್ಳೊಳ್ಳೆ ಸ್ಥಾನ ಅಲಂಕರಿಸಿವೆ. ಅದರಂತೆ, ಈ ಧಾರಾವಾಹಿಗಳ ನಡುವೆಯೇ ಇದೀಗ ಇನ್ನೂ ಹಲವು ಮೆಗಾ ಧಾರಾವಾಹಿಗಳು ಮತ್ತು ಶೋಗಳು ಪ್ರಸಾರಕ್ಕೆ ಅಣಿಯಾಗುತ್ತಿವೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.
ಕಲರ್ಸ್ ಕನ್ನಡದಲ್ಲಿ ವಧು ಆಗಮನ
ಕಲರ್ಸ್ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿದೆ ವಧು ಸೀರಿಯಲ್. ಈಗಾಗಲೇ ಪ್ರೋಮೋಗಳ ಮೂಲಕವೇ ಗಮನ ಸೆಳೆದ ಈ ಸೀರಿಯಲ್, ಬಿಗ್ ಬಾಸ್ ಮುಗಿಯುತ್ತಿದ್ದಂತೆ ಪ್ರಸಾರವಾಗುವ ಸಾಧ್ಯತೆ ಇದೆ. ಈ ಹಿಂದಿನ ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ವಧು ಸೀರಿಯಲ್ ನಿರ್ದೇಶನ ಮಾಡುತ್ತಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ದಂಪತಿ, ವಧು ಸೀರಿಯಲ್‌ಗೆ ಬಂಡವಾಳ ಹೂಡುತ್ತಿದ್ದಾರೆ. ದುರ್ಗಾಶ್ರೀ, ಅಭಿಷೇಕ್ ಶ್ರೀಕಾಂತ್, ಟಿ.ಎನ್ ಸೀತಾರಾಮ್ ಸೇರಿ ಇನ್ನೂ ಹಲವು ಈ ಸೀರಿಯಲ್‌ನಲ್ಲಿದ್ದಾರೆ.
ಹೊಸ ಸೀರಿಯಲ್ ಯಜಮಾನ
ವಧು ಮಾತ್ರವಲ್ಲದೆ, ಕಲರ್ಸ್ ಕನ್ನಡದ ಇನ್ನೊಂದು ಸೀರಿಯಲ್‌ನ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ಭಾನುವಾರ (ಜ. 12) ಯಜಮಾನ ಹೆಸರಿನ ಸೀರಿಯಲ್‌ನ ಮೊದಲ ಪ್ರೋಮೋ ರಿಲೀಸ್ ಆಗಿದ್ದು, ಕುತೂಹಲ ಮೂಡಿಸಿದೆ. ಶ್ರೀಮಂತಿಕೆಯ ಅಮಲಲ್ಲಿ ತೇಲುವ ಝಾನ್ಸಿ ಮತ್ತು ಮಧ್ಯಮ ವರ್ಗದ ಹುಡುಗ, ಡೆಲಿವರಿ ಬಾಯ್ ಕುಟುಂಬದ ಏರಿಳಿತದ ಕಥೆಯೇ ಈ ಸೀರಿಯಲ್. ಈ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸುತ್ತಿದ್ದಾರೆ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಮಧುಶ್ರೀ ಭೈರಪ್ಪ. ಇದೇ ಸೀರಿಯಲ್‌ಗೆ ನಾಯಕನಾಗಿ ಹರ್ಷ ಬಿಎಸ್ ನಟಿಸಲಿದ್ದಾರೆ. ಈ ಧಾರಾವಾಹಿಯ ಪ್ರಸಾರ ಯಾವಾಗ? ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.
ಮಜಾ ಟಾಕೀಸ್ ಮೂಲಕ ನಗೋಕೆ ರೆಡಿಯಾಗಿ
ಸೃಜನ್ ಲೋಕೇಶ್ ನಿರ್ದೇಶನ ಮತ್ತು ನಿರ್ಮಾಣದ ಜನಪ್ರಿಯ ಶೋ ಎಂದರೆ ಅದು ಕಲರ್ಸ್ ಕನ್ನಡದ ಮಜಾ ಟಾಕೀಸ್. ಹಲವು ಸೀಸನ್ ಮುಗಿಸಿಕೊಂಡಿದ್ದ ಈ ಶೋ, ಇತ್ತೀಚಿನ ಕೆಲ ವರ್ಷಗಳಿಂದ ಮುಂದುವರಿದಿಲ್ಲ. ಈಗ ಟೆನ್ಷನ್ ಬಿಟ್ಟಾಕಿ ನಗೋಕೆ ರೆಡಿಯಾಗಿ ಎಂದು ಕಳೆದ ಡಿಸೆಂಬರ್‌ನಲ್ಲಿಯೇ ಹೊಸ ಪ್ರೋಮೋ ಬಿಡುಗಡೆ ಮಾಡಿ, ನಾವು ಮತ್ತೆ ಬರ್ತಿದ್ದೇವೆ ಎಂದಿದ್ದರು ಸೃಜನ್ ಲೋಕೇಶ್. ಈ ಸಲದ ಈ ಶೋನಲ್ಲಿ ಯಾರೆಲ್ಲ ಇರ್ತಾರೆ? ಶೋ ಹೇಗಿರಲಿದೆ? ಎಂಬಿತ್ಯಾದಿ ವಿವರ ಇನ್ನೇನು ಶೀಘ್ರದಲ್ಲಿಯೇ ಲಭ್ಯವಾಗಲಿದೆ.
ಗಲ್ಸ್ ವರ್ಸಸ್ ಬಾಯ್ಸ್
ಬಿಗ್ ಬಾಸ್ ಶೋನಲ್ಲಿಯೇ ಗಲ್ಸ್ ವರ್ಸಸ್ ಬಾಯ್ಸ್ ಎಂಬ ಹೊಸ ಶೋ ಆರಂಭಿಸುವ ಘೋಷಣೆ ಮಾಡಿದೆ ಕಲರ್ಸ್ ಕನ್ನಡ. ಅಷ್ಟೇ ಅಲ್ಲ, ಬಿಗ್ ಬಾಸ್ ಸ್ಪರ್ಧಿಗಳನ್ನೇ ಬಳಸಿಕೊಂಡು ಪ್ರೋಮೋ ಶೂಟ್ ಸಹ ಮಾಡಿ, ಅದನ್ನು ವಾರಾಂತ್ಯದ ಬಿಗ್ ಬಾಸ್ ಏಪಿಸೋಡ್‌ನಲ್ಲಿ ಪ್ರಸಾರ ಸಹ ಮಾಡಲಾಗಿತ್ತು. ಅನುಪಮ ಗೌಡ ಈ ಶೋನ ನಿರೂಪಣೆ ಮಾಡಲಿದ್ದು, ಬಿಗ್ ಬಾಸ್ ಮುಗಿಯುತ್ತಿದ್ದಂತೆ ಆರಂಭವಾಗಲಿದೆ. ಶೋನಲ್ಲಿ ಯಾರೆಲ್ಲ ಇರಲಿದ್ದಾರೆ, ಆಟಗಳು ಹೇಗಿರಲಿವೆ? ಎಂಬಿತ್ಯಾದಿ ವಿವರ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ
ಕನ್ನಡ ಕಿರುತೆರೆಯಲ್ಲಿ ಹಾರರ್ ಸೀರಿಯಲ್‌ಗಳ ಸಂಖ್ಯೆ ಕಡಿಮೆ ಎನ್ನುತ್ತಿರುವಾಗಲೇ, ಇತ್ತೀಚಿಗಷ್ಟೇ ಕಲರ್ಸ್ ಕನ್ನಡದಿಂದ ನೂರು ಜನ್ಮಕೂ ಸೀರಿಯಲ್ ಪ್ರಸಾರ ಆರಂಭಿಸಿತ್ತು. ಇದೀಗ ಅಂಥದ್ದೇ ಮತ್ತೊಂದು ಹಾರರ್ ಶೈಲಿಯ ಸೀರಿಯಲ್ ಜೀ ಕನ್ನಡದಲ್ಲಿಯೂ ಪ್ರಸಾರವಾಗಲಿದೆ. ಕೆಲ ತಿಂಗಳ ಹಿಂದೆಯೇ ನಾ ನಿನ್ನ ಬಿಡಲಾರೆ ಸೀರಿಯಲ್‌ನ ಮೊದಲ ಪ್ರೋಮೋ ಝಲಕ್ ವೀಕ್ಷಕರ ಕಣ್ಣರಳಿಸಿತ್ತು. ಇದೀಗ ಅತೀ ಶೀಘ್ರದಲ್ಲಿಯೇ ಟೆಲಿಕಾಸ್ಟ್ ಆಗಲಿದೆ.
ಶ್ರೀ ರಾಘವೇಂದ್ರ ಮಹಾತ್ಮೆ
ಜೀ ಕನ್ನಡದ ಇನ್ನೊಂದು ಮಹಾತ್ವಾಕಾಂಕ್ಷೆಯುಳ್ಳ ಪ್ರಾಜೆಕ್ಟ್ ಎಂದರೆ ಅದು ಶ್ರೀ ರಾಘವೇಂದ್ರ ಮಹಾತ್ಮೆ. ಭಕ್ತಿಪ್ರಧಾನ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಸೀರಿಯಲ್ ಘೋಷಣೆ ಆಗಿದ್ದೇ ಬಂತು, ಅದಾದ ಮೇಲೆ ಆಡಿಷನ್ ಕಾಲ್ ಮಾಡಿದ್ದನ್ನು ಬಿಟ್ಟರೆ, ಈ ವರೆಗೂ ಯಾವುದೇ ಅಪ್‌ಡೇಟ್ ಹೊಬಿಟ್ಟಿಲ್ಲ ಜೀ ಕನ್ನಡ. ಸದ್ಯ ತೆರೆಯ ಹಿಂದೆ ಆಡಿಷನ್ಸ್ ಪ್ರಕ್ರಿಯೆ ಸಂಪೂರ್ಣವಾಗಿದ್ದು, ಮುಖ್ಯ ಪಾತ್ರಧಾರಿಗಳ ಆಯ್ಕೆಯೂ ಆಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ, ಮಾರ್ಚ್ ವೇಳೆಗೆ ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್ ಶುರುವಾಗುವ ಸಾಧ್ಯತೆ ಇದೆ.
ಭರ್ಜರಿ ಬ್ಯಾಚುಲರ್
ಕಳೆದ ವರ್ಷ ಆರಂಭವಾದ ಭರ್ಜರಿ ಬ್ಯಾಚುಲರ್ಸ್ ಶೋ ಸೂಪರ್ ಹಿಟ್ ಆಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರಾಗಿದ್ದ ಈ ಶೋವನ್ನು ಅಕುಲ್ ಬಾಲಾಜಿ ಆಂಕರ್ ಆಗಿದ್ದರು. ಹಾಸ್ಯ ನಟ ಜಗಪ್ಪ ವಿನ್ನರ್ ಆಗಿ ಹೊರಹೊಮ್ಮಿದ್ದರು. ಈಗ ಇದೇ ಶೋ ಇನ್ನೇನು ಆರಂಭವಾಗುವ ಸಾಧ್ಯತೆ ಇದೆ. ತೆರೆ ಹಿಂದೆ ಇದೇ ಶೋನ ಕೆಲಸಗಳು ಆರಂಭವಾಗಿದ್ದು, ಜೀ ಎಂಟರ್ಟೈನರ್ಸ್ ಶೋ ಮುಗಿಯುತ್ತಿದ್ದಂತೆ, ಭರ್ಜರಿ ಬ್ಯಾಚುಲರ್ಸ್ ಶೋ ಘೋಷಣೆ ಆಗಬೇಕಿದೆ.
ಉದಯ ಟಿವಿಯಲ್ಲಿ ಪಲ್ಲವಿ ಅನುಪಲ್ಲವಿ
ಕಿರುತೆರೆಯ ವೀಕ್ಷಕರನ್ನು ಸೆಳೆಯುವಲ್ಲಿ ಉದಯ ಟಿವಿಯೂ ಹಿಂದೆ ಬಿದ್ದಿಲ್ಲ. ಹೊಸ ಹೊಸ ಪ್ರಯತ್ನಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಉದಯ ಟಿವಿ, ಇದೀಗ ಅನು ಪಲ್ಲವಿ ಅನ್ನೋ ಹೊಸ ಸೀರಿಯಲ್ ಜತೆಗೆ ಆಗಮಿಸುತ್ತಿದೆ. ದುಷ್ಟರನ್ನು ಸದೆಬಡಿಯೋ ಸಿಂಹಿಣಿ.. ಮುದ್ದು ಮಗಳಿಗೆ ವಾತ್ಸಲ್ಯದ ರೂಪಿಣಿ.. ನೂರು ನೋವನ್ನು ನುಂಗಿ ತನ್ನಲ್ಲಿ.. ಪ್ರೀತಿ ತುಂಬಿದ ಕಥೆ ಹೊತ್ತು ಬರ್ತಿದ್ದಾಳೆ ಐಎಎಸ್ ಪಲ್ಲವಿ. 'ಅನುಪಲ್ಲವಿ' ಶೀಘ್ರದಲ್ಲಿ ಎಂದು ಹೊಸ ಪ್ರೋಮೋ ಬಿಡುಗಡೆ ಮಾಡಿದೆ.

ವಿಭಾಗ