Namrata Recalls Sad Incident: ಮಗ ಬದುಕುವ ಚಾನ್ಸ್ ಕಡಿಮೆ ಎಂದು ವೈದ್ಯರು ಹೇಳಿದ್ದರು..ಕಹಿ ಘಟನೆ ನೆನೆದ ಮಹೇಶ್ ಬಾಬು ಪತ್ನಿ!
ಗೌತಮ್ ಪ್ಲಾನ್ಡ್ ಬೇಬಿ ಆದರೆ ಸಿತಾರಾ ಅನ್‌ಪ್ಲಾನ್ಡ್ ಬೇಬಿ. ನನಗೆ ಸಿನಿಮಾಗಿಂತ ಮಕ್ಕಳ ಯೋಗ ಕ್ಷೇಮ ಮುಖ್ಯವಾಗಿತ್ತು. ಮಕ್ಕಳ ವಿಚಾರದಲ್ಲಿ ಮಾನಸಿಕವಾಗಿ ನೊಂದಿದ್ದ ನಾನು ಅದರಿಂದ ಹೊರ ಬರಲು ಬಹಳ ಸಮಯ ಬೇಕಾಯ್ತು. ಆದ್ದರಿಂದ ನಾನು ಮತ್ತೆ ಸಿನಿಮಾದಲ್ಲಿ ನಟಿಸಲಿಲ್ಲ ಎಂದು ನಮ್ರತಾ (Namrata) ಭಾವುಕರಾಗಿ ಹೇಳಿಕೊಂಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಮಹೇಶ್ ಬಾಬು (Mahesh Babu) ಎಷ್ಟು ಹೆಸರು ಮಾಡಿದ್ದಾರೆ ಎನ್ನುವುದು ಪ್ರತಿ ಸಿನಿಮಾಭಿಮಾನಿಗೂ ಗೊತ್ತು. ತಮ್ಮ ಸಹನಟಿ ನಮ್ರತಾ ಶಿರೋಡ್ಕರ್ ಮದುವೆಯಾಗಿರುವ ಮಹೇಶ್ ಬಾಬು ವೃತ್ತಿ ಜೀವನದಲ್ಲೂ, ವೈಯಕ್ತಿಕ ಜೀವನದಲ್ಲೂ ಸಂತೋಷವಾಗಿದ್ದಾರೆ. ವೃತ್ತಿ ಜೀವನದಲ್ಲಿ ಅವರಿಗೆ ಅಭಿಮಾನಿಗಳ ಬೆಂಬಲವಿದ್ದರೆ, ವೈಯಕ್ತಿಕ ಜೀವನದಲ್ಲಿ ಪತ್ನಿ, ಮಕ್ಕಳು ಹಾಗೂ ಕುಟುಂಬ ಸದಾ ಬೆನ್ನುಲುಬಾಗಿ ನಿಂತಿದ್ದಾರೆ.
ನಮ್ರತಾ ಶಿರೋಡ್ಕರ್ ಕೂಡಾ ಆಗಿನ ಸಮಯದಲ್ಲಿ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿದ್ದರು. ತೆಲುಗಿನ 'ವಂಶಿ' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಅವರು ನಟಿಸಿದ್ದರು. ಈ ಸಿನಿಮಾ ನಂತರ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರಿಗೂ ಪ್ರೀತಿಯಾಗಿದೆ. ನಮ್ರತಾ, ಮಹೇಶ್ ಬಾಬು ಅವರಿಗಿಂತ 4 ವರ್ಷ ದೊಡ್ಡವರಾದರೂ ಅವರ ಪ್ರೀತಿಗೆ ವಯಸ್ಸು ಅಡ್ಡ ಬಂದಿಲ್ಲ. ಮಹೇಶ್ ಬಾಬು ಕೈ ಹಿಡಿದ ನಂತರ ಆಕೆ ಸಿನಿಮಾದಿಂದ ದೂರ ಉಳಿದರು. ಮಹೇಶ್ ಬಾಬು ಬೇಡ ಎಂದಿದ್ದರಿಂದ ನಮ್ರತಾ ಚಿತ್ರರಂಗ ಬಿಟ್ಟರು ಎಂಬ ಮಾತು ಒಂದೆಡೆ ಆದರೆ, ನಮ್ರತಾ, ತನ್ನ ಪತಿಗೆ ಬೆಂಬಲ ನೀಡುವ ಉದ್ದೇಶದಿಂದ ತಾವೇ ನಟನೆಯಿಂದ ದೂರ ಉಳಿದರು ಎಂದೂ ಕೂಡಾ ಕೆಲವರು ಹೇಳುತ್ತಾರೆ. ಆದರೆ ನಮ್ರತಾ, ಚಿತ್ರರಂಗದಿಂದ ದೂರಾಗಿದ್ದಕ್ಕೆ ಬೇರೆ ಕಾರಣವೇ ಇದೆ. ಇತ್ತೀಚೆಗೆ ನಮ್ರತಾ ಶಿರೋಡ್ಕರ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಕಹಿ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ.
''2005ರಲ್ಲಿ ಮಹೇಶ್ ಬಾಬು ಜೊತೆ ನನ್ನ ಮದುವೆ ಆಯ್ತು. ಅದಾದ ಮರು ವರ್ಷವೇ ಮಗ ಗೌತಮ್ ಹುಟ್ಟಿದ. ಆದರೆ ಆತನ ಕಂಡಿಷನ್ ಬಹಳ ಕ್ರಿಟಿಕಲ್ ಆಗಿತ್ತು. ಆತ ಬದುಕುತ್ತಾನೋ ಇಲ್ಲವೋ ಎಂದು ನಾವಿಬ್ಬರೂ ಬಹಳ ಮಾನಸಿಕವಾಗಿ ನೊಂದಿದ್ದೆವು. ಮಗ ಗುಣಮುಖನಾಗಲಿ ಎಂದು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ನನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತೋ ಏನೋ, ಗೌತಮ್ ನಿಧಾನವಾಗಿ ಚೇತರಿಸಿಕೊಂಡ. ಆದರೆ ಅದಾದ 6 ವರ್ಷಗಳ ನಂತರ ಮಗಳು ಸಿತಾರಾ ಹುಟ್ಟಿದಳು. ಗೌತಮ್ ಪ್ಲಾನ್ಡ್ ಬೇಬಿ ಆದರೆ ಸಿತಾರಾ ಅನ್‌ಪ್ಲಾನ್ಡ್ ಬೇಬಿ. ನನಗೆ ಸಿನಿಮಾಗಿಂತ ಮಕ್ಕಳ ಯೋಗ ಕ್ಷೇಮ ಮುಖ್ಯವಾಗಿತ್ತು. ಮಕ್ಕಳ ವಿಚಾರದಲ್ಲಿ ಮಾನಸಿಕವಾಗಿ ನೊಂದಿದ್ದ ನಾನು ಅದರಿಂದ ಹೊರ ಬರಲು ಬಹಳ ಸಮಯ ಬೇಕಾಯ್ತು. ಆದ್ದರಿಂದ ನಾನು ಮತ್ತೆ ಸಿನಿಮಾದಲ್ಲಿ ನಟಿಸಲಿಲ್ಲ'' ಎಂದು ನಮ್ರತಾ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಹಾಗೇ ಮಹೇಶ್ ಬಾಬು ಕೂಡಾ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾಗ ಇದೇ ವಿಚಾರವಾಗಿ ಹೇಳಿಕೊಂಡಿದ್ದರು. ''ನಮ್ರತಾ 7ನೇ ತಿಂಗಳ ಗರ್ಭಿಣಿ ಆಗಿದ್ದಾಗ ಆಸ್ಪತ್ರೆಗೆ ಚೆಕಪ್ ಹೋಗಿದ್ದರು. ನಾನು ಆಗ ಹೈದಾರಾಬಾದ್‌ನಲ್ಲೇ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಆದರೆ ನಮ್ರತಾ ತಪಾಸಣೆ ಮಾಡಿದ ವೈದ್ಯರು, ಮಗುವಿನ ಬೆನ್ನು ಹಾಗೂ ಕತ್ತಿನ ಭಾಗ ಬೆಸೆದುಕೊಂಡಿದ್ದು ಹೃದಯ ಬಡಿತ ಸರಿಯಾಗಿ ಕೇಳುತ್ತಿಲ್ಲ, ಬದುಕುವ ಚಾನ್ಸ್ ಬಹಳ ಕಡಿಮೆ ಎಂದಿದ್ದಾರೆ. ವಿಷಯ ತಿಳಿದ ನಾನು ಕೂಡಲೇ ಆಸ್ಪತ್ರೆಗೆ ಹೋದೆ. 2 ಗಂಟೆಗಳ ಸರ್ಜರಿ ಮಾಡಿ ಮಗುವನ್ನು ಹೊರ ತೆಗೆಯಲಾಯ್ತು.''
''ಮೂರು ವಾರಗಳ ಕಾಲ ಮಗುವನ್ನು ಇಂಕ್ಯುಬೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಯ್ತು. ನಂತರ ಕೂಡಾ ಮಗುವಿಗೆ 40 ಗ್ರಾಂ ಹಾಲನ್ನು ಮಾತ್ರ ನೀಡಬೇಕು ಎಂದು ವೈದ್ಯರು ಸೂಚಿಸಿದ್ದರು. ವೈದ್ಯರ ಸತತ ಚಿಕಿತ್ಸೆ ಹಾಗೂ ನಮ್ಮ ಆರೈಕೆ ನಂತರ ಗೌತಮ್ ನಾರ್ಮಲ್ ಆದ. ಹಣ ಇರುವ ನಮ್ಮ ಪರಿಸ್ಥಿತಿಯೇ ಈ ರೀತಿ ಆದರೆ, ಹಣ ಇಲ್ಲದವರ ಸ್ಥಿತಿ ಹೇಗೆ ಇರಬೇಡ. ನಮಗೆ ಆದ ಕಷ್ಟ ಯಾರಿಗೂ ಬರಬಾರದು ಎಂಬ ಕಾರಣಕ್ಕೆ ನಾನು ಫೌಂಡೇಶನ್ ಸ್ಥಾಪಿಸಿ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ'' ಎಂದು ಹೇಳಿದ್ದರು.
ಈ ವಿಡಿಯೋ ಈಗಲೂ ವೈರಲ್ ಆಗುತ್ತಿದೆ. ಸ್ಟಾರ್ ನಟರ ಬದುಕು ದೂರದಿಂದ ನೋಡಿದವರಿಗೆ ಚೆನ್ನಾಗಿ ಕಾಣುತ್ತದೆ. ಆದರೆ ಅವರಿಗೂ ನಾನಾ ಸಮಸ್ಯೆಗಳಿರುತ್ತವೆ ಎಂದು ನೆಟಿಜನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಜನರ ಕಷ್ಟ ಅರ್ಥ ಮಾಡಿಕೊಂಡು ಮಹೇಶ್ ಬಾಬು ಫೌಂಡೇಶನ್ ಸ್ಥಾಪಿಸಿರುವ ವಿಚಾರ ತಿಳಿದು ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ.
ವಿಭಾಗ