ಏನ್ ಗುರು ಇದು ಕರ್ಮ! ಮಗಳ ವಯಸ್ಸಿನ ಊರ್ವಶಿ ರೌಟೇಲಾ ಜತೆಗೆ ಅಸಹ್ಯಕರ ಸ್ಟೆಪ್ಸ್ ಹಾಕಿದ ನಂದಮೂರಿ ಬಾಲಕೃಷ್ಣ ಸಿಕ್ಕಾಪಟ್ಟೆ ಟ್ರೋಲ್
Daaku Maharaaj Dabidi Dibidi Song Troll: ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ದಬಿಡಿ ದಿಬಿಡಿ ಹಾಡಿಗೆ ಇದೀಗ ಟ್ರೋಲ್ ಬಿಸಿ ತಟ್ಟಿದೆ. ಮಗಳ ವಯಸ್ಸಿನ ನಟಿಯ ಜತೆಗೆ ಇಷ್ಟೊಂದು ಕೆಟ್ಟದಾಗಿ ಡಾನ್ಸ್ ಮಾಡಬಾರದಿತ್ತು ಎಂದು ನೆಟ್ಟಿಗರು ಬಾಲಣ್ಣಗೆ ತರಾಟೆ ತೆಗೆದುಕೊಂಡು, ಟ್ರೋಲ್ ಮಾಡುತ್ತಿದ್ದಾರೆ.
Daaku Maharaaj Dabidi Dibidi Song Troll: ಟಾಲಿವುಡ್‌ನ ಹಿರಿಯ ನಟ ನಂದಮೂರಿ ಬಾಲಕೃಷ್ಣ ಸದ್ಯ ಡಾಕು ಮಹಾರಾಜ್ ಸಿನಿಮಾ ವಿಚಾರಕ್ಕೆ ಸಖತ್ ಸುದ್ದಿಯಲ್ಲಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರಕ್ಕೆ ಎಸ್.ಎಸ್. ತಮನ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ನ ಅನಿಮಲ್ ಚಿತ್ರದ ನಟ ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ಚಾಂದಿನಿ ಚೌಧರಿ ಈ ಚಿತ್ರದಲ್ಲಿದ್ದಾರೆ. ಜನವರಿ 12ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರದ ಕಿಕ್ ಕೊಡುವ ಹಾಡೊಂದು ಬಿಡುಗಡೆ ಆಗಿ ಸದ್ದು ಮಾಡುತ್ತಿದೆ. ಜತೆಗೆ ಒಂದಷ್ಟು ಟೀಕೆಗಳೂ ಈ ಹಾಡಿಗೆ ಕೇಳಿಬಂದಿವೆ.
ದಬಿದಿ ದಿಬಿಡಿ ಹಾಡಿಗೆ ಕಟು ಟೀಕೆ..
ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಡಾಕು ಮಹಾರಾಜ್ ಚಿತ್ರದ 'ದಬಿದಿ ದಿಬಿಡಿ..' ಸಾಹಿತ್ಯದ ಟಪ್ಪಾಂಗುಚ್ಚಿ ಸಾಂಗ್ ಗುರುವಾರವಷ್ಟೇ (ಜ. 2) ಬಿಡುಗಡೆ ಆಗಿದೆ. ಹಾಡಿನಲ್ಲಿ ನಂದಮೂರಿ ಬಾಲಕೃಷ್ಣ ಜತೆಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಖತ್ ಬೋಲ್ಡ್ ಆಗಿಯೇ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ರೊಮ್ಯಾಂಟಿಕ್ ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದಾರೆ. ಇನ್ನೊಂದು ಕಡೆ ಈ ಹಾಡಿನಲ್ಲಿನ ಒಂದಷ್ಟು ಸ್ಟೆಪ್ಸ್‌ಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿದೆ.
ನೀಲಿ ಶರ್ಟ್, ನೀಲಿ ಜಾಕೆಟ್, ಕಂದು ಪ್ಯಾಂಟ್ ಮತ್ತು ಸನ್ ಗ್ಲಾಸ್ ಧರಿಸಿ ಬಾಲಕೃಷ್ಣ ರಾಜನಂತೆ ಕುಳಿತುಕೊಳ್ಳುವುದರೊಂದಿಗೆ ಹಾಡಿನ ವೀಡಿಯೊ ಪ್ರಾರಂಭವಾಗುತ್ತದೆ. ಊರ್ವಶಿ ರೌಟೇಲಾ ಕ್ರಾಪ್ ಟಾಪ್ ಮತ್ತು ಸ್ಕರ್ಟ್ ಧರಿಸಿ ಮಿಂಚಿದ್ದಾರೆ. ಹಾಡಿನ ಸ್ಟೆಪ್ಸ್ ಸಂದರ್ಭದಲ್ಲಿ ಊರ್ವಶಿ ಅವರ ಸೊಂಟದ ಹಿಂಭಾಗವನ್ನು ದಬಿದಿ ದಿಬಿಡಿ.. ಅನ್ನೋ ಸಾಹಿತ್ಯಕ್ಕೆ ತಕ್ಕಂತೆ ಬಡಿದಿದ್ದಾರೆ. ಇದಷ್ಟೇ ಅಲ್ಲ, ಊರ್ವಶಿ ಹೊಕ್ಕಳ ಕೆಳಭಾಗಕ್ಕೂ ಬಡಿದು, ಆಕ್ಷೇಪಾರ್ಹ ರೀತಿಯಲ್ಲಿ ಅಸಭ್ಯವಾಗಿ ಬಾಲಣ್ಣ ನೃತ್ಯ ಮಾಡಿದ್ದಾರೆ.
ಮಗಳ ವಯಸ್ಸಿನ ನಟಿ ಜತೆ ಕೆಟ್ಟ ಭಂಗಿ
ಸದ್ಯ ಈ ಹಾಡೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಬಾಲಕೃಷ್ಣ ಅವರ ಜತೆಗೆ ಈ ಹಾಡಿನ ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಅವರನ್ನೂ ನೆಟ್ಟಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. 64 ವರ್ಷದ ಬಾಲಕೃಷ್ಣ ಅವರು 30 ವರ್ಷದ ಮಗಳ ವಯಸ್ಸಿನ ನಟಿ ಊರ್ವಶಿ ರೌಟೇಲಾ ಅವರೊಂದಿಗೆ ತೀರಾ ಕೆಟ್ಟದಾಗಿ ಹೆಜ್ಜೆ ಹಾಕಿಸಿದ್ದಾರೆ. ಈ ಬಗ್ಗೆ ಟೀಕೆಗಳ ಸುರಿಮಳೆಯೇ ಹರಿದುಬಂದಿದ್ದು, ನೀವು ಕೇವಲ ಸಿನಿಮಾ ನಟ ಮಾತ್ರವಲ್ಲ, ರಾಜಕಾರಣಿಯೂ ಹೌದು. ನೀವು ನಿಮ್ಮ ಸಿನಿಮಾಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದೂ ಟೀಕಿಸಿದ್ದಾರೆ.
ನೆಟ್ಟಿಗ ವಲಯದಿಂದ ಟ್ರೋಲ್..
“ಯುವತಿಯೊಬ್ಬಳು ತನ್ನ ತಾತನ ಜತೆ ನೃತ್ಯ ಮಾಡುತ್ತಿದ್ದಾಳೆ” ಎಂದೂ ಕೆಲವರು ಕಾಮೆಂಟ್ ಮಾಡಿದರೆ, “ಕೆಟ್ಟ ನೃತ್ಯ ಸಂಯೋಜನೆ, ಟ್ರೋಲಿಂಗ್ ಈಗಾಗಲೇ ಪ್ರಾರಂಭವಾಗಿದೆ. ನೀವು ನಿಜವಾಗಿಯೂ ಬಾಲಕೃಷ್ಣ ಅವರ ಹಿತೈಷಿಗಳಾಗಿದ್ದರೆ, ದಯವಿಟ್ಟು ಈ ಹಾಡನ್ನು ತೆಗೆದುಹಾಕಿ, ಅದನ್ನು ಮರು ಶೂಟ್ ಮಾಡಿ” ಎಂದು ಇನ್ನು ಕೆಲವರು ಮನವಿ ಮಾಡುತ್ತಿದ್ದಾರೆ.
ಪುಷ್ಪ 2 ಚಿತ್ರದ ಪೀಲಿಂಗ್ಸ್ ಹಾಡಿಗೂ ನೃತ್ಯ ಸಂಯೋಜನೆ
ಪುಷ್ಪ 2 ಚಿತ್ರದ ಪೀಲಿಂಗ್ಸು ಹಾಡನ್ನು ಕೋರಿಯೋಗ್ರಾಫ್ ಮಾಡಿದ್ದೂ ಇದೇ ಶೇಖರ್ ಮಾಸ್ಟರ್. ಪೀಲಿಂಗ್ಸ್ ಹಾಡಿನಲ್ಲಿಯೂ ಕೆಲವು ಅಸಭ್ಯ ಡಾನ್ಸ್ ಭಂಗಿ ನೋಡುಗರ ಕಣ್ಣಿಗೆ ಬೀದಿತ್ತು. ಆದರೆ, ಚಿತ್ರದಲ್ಲಿ ಅದು ಪತಿ, ಪತ್ನಿಯ ರೊಮ್ಯಾನ್ಸ್ ಆಗಿದ್ದರಿಂದ, ವಯಸ್ಸಿನ ಅಂತರವೂ ಸರಿಯಾಗಿದ್ದರಿಂದ ಹೆಚ್ಚು ಟೀಕೆಗಳು ಕೇಳಿಬರಲಿಲ್ಲ. ಆದರೆ, ಇದೀಗ ಡಾಕು ಮಹಾರಾಜ್ ಸಿನಿಮಾದ ದಬಡಿ ದಿಬಿಡಿ ಹಾಡು ಸಾಕಷ್ಟು ಟ್ರೋಲ್ ಆಗುತ್ತಿದೆ.