Daaku Maharaaj Review: ಊಹೆಗೆ ನಿಲುಕುವ ಆಕ್ಷನ್ ಹೂರಣ, ಡಾಕು ಮಹಾರಾಜನಿಗಿಲ್ಲ ಕೌತುಕ ಕಾಯ್ದುಕೊಳ್ಳುವ ಗುಣ
Daaku Maharaaj Movie Review in Kannada: ಬಾಲಕೃಷ್ಣ ಅವರ ಸಿನಿಮಾ ಎಂದರೆ ಅದು ಕಮರ್ಷಿಯಲ್ ಅಂಶಗಳ ಗೊಂಚಲು. ಎಲ್ಲ ವರ್ಗದವರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಅವರ ಸಿನಿಮಾಗಳಲ್ಲಿ ಹೆಚ್ಚು. ಡಾಕು ಮಹಾರಾಜ್ ಚಿತ್ರದಲ್ಲೂ ಕಲರ್‌ಫುಲ್ ಹಾಡುಗಳು, ಅಬ್ಬರದ ಡೈಲಾಗ್‌ಗಳು.. ಇದೆಲ್ಲದಕ್ಕೂ ಮಿಗಿಲಾಗಿ ಸಿಡಿಲಬ್ಬರದ ಸಾಹಸ ದೃಶ್ಯಗಳೂ ಸೋಜಿಗದಂತೆ ಕಂಡಿವೆ.

Daaku Maharaj Review: ಟಾಲಿವುಡ್‌ನ ಸ್ಟಾರ್ ನಟ ಬಾಲಕೃಷ್ಣ ಅವರಿಗೆ ಸಂಕ್ರಾಂತಿ ಅಂದರೆ ಅದೇನೋ ಸಡಗರ. ಏಕೆಂದರೆ, ಪ್ರತಿ ಸಂಕ್ರಾಂತಿಗೂ ಅವರ ಒಂದು ಸಿನಿಮಾ ಬಿಡುಗಡೆ ಫಿಕ್ಸ್. ಕಳೆದ ವರ್ಷ ವೀರ ಸಿಂಹ ರೆಡ್ಡಿ ಚಿತ್ರದ ಮೂಲಕ ಶತಕೋಟಿ ಕ್ಲಬ್ ಸೇರಿದ್ದರು. ಈ ಸಲ ಡಾಕು ಮಹಾರಾಜ್ ಮೂಲಕ ಕಣಕ್ಕಿಳಿದಿದ್ದಾರೆ. ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶಿಸಿದ್ದಾರೆ. ಆಕ್ಷನ್ ಎಂಟರ್ಟೈನರ್ ಚಿತ್ರದಲ್ಲಿ ಪ್ರಗ್ಯಾ ಜೈಸ್ವಾಲ್ ಮತ್ತು ಶ್ರದ್ಧಾ ಶ್ರೀನಾಥ್ ನಾಯಕಿಯರು. ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯ ದೇವರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಈ ಸಿನಿಮಾ ಹೇಗಿದೆ? ಮಗದೊಮ್ಮೆ ಸಂಕ್ರಾಂತಿ ವಿಜೇತರಾಗಿ ಬಾಲಕೃಷ್ಣ ಹೊರಹೊಮ್ಮಿದರೇ? ಇಲ್ಲಿದೆ ಚಿತ್ರ ವಿಮರ್ಶೆ.
ಏನಿದು ಡಾಕು ಮಹಾರಾಜ್ ಕಥೆ
1996ರಲ್ಲಿ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಕಥೆ ತೆರೆದುಕೊಳ್ಳುತ್ತದೆ. ಕೃಷ್ಣಮೂರ್ತಿ (ಸಚಿನ್ ಖೇಡ್ಕರ್) ಅವರ ಕಾಫಿ ಎಸ್ಟೇಟ್ ಗುತ್ತಿಗೆಗೆ ಪಡೆದ ಶಾಸಕ ತ್ರಿಮೂರ್ತಿ, (ರವಿ ಕಿಶನ್) ಕಳ್ಳಸಾಗಣೆಕೆಯಲ್ಲಿ ಎತ್ತಿದ ಕೈ. ಈ ಕೃತ್ಯ ತಡೆಯಲು ಎಂಟ್ರಿ ಆಗುವವನೇ ಡಾಕು ಮಹಾರಾಜ್. ಮನೆಯ ಕಾರು ಚಾಲಕನಾಗಿ ನಾನಾಜಿ (ಬಾಲಕೃಷ್ಣ) ಎಂಬ ಹೆಸರಿನೊಂದಿಗೆ ಕೆಲಸಕ್ಕೆ ಸೇರುತ್ತಾನೆ. ಇದು ಒಂದು ಬದಿಯ ಕಥೆ. ಮತ್ತೊಂದು ಕಡೆ, ಚಂಬಲ್ ಕಣಿವೆಯಲ್ಲಿ, ಸೀತಾರಾಮ್ (ಬಾಲಕೃಷ್ಣ) ಮತ್ತು ಅವರ ಪತ್ನಿ (ಪ್ರಜ್ಞಾ ಜೈಸ್ವಾಲ್) ನೀರಾವರಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇಡೀ ಪ್ರದೇಶ ಮೈನಿಂಗ್ ಕಿಂಗ್ ಬಲ್ವಂತ್ ಠಾಕೂರ್ (ಬಾಬಿ ಡಿಯೋಲ್) ಹಿಡಿತದಲ್ಲಿದೆ. ತನ್ನ ವ್ಯವಹಾರಕ್ಕೆ ಅಡ್ಡಬರುವವರನ್ನು ಮುಲಾಜಿಲ್ಲದೇ ಹತ್ಯೆ ಮಾಡುವಷ್ಟು ಕ್ರೂರಿ ಈತ. ಈ ಬಲ್ವಂತ್‌ನ ಹುಟ್ಟಡಗಿಸಲು ಬಂದ ಸೀತಾರಾಮ್ ಯಾರು? ನಾನಾಜಿ ಯಾರು? ಇಬ್ಬರೂ ಒಬ್ಬರೇನಾ? ಈ ಎಲ್ಲ ಕೌತುಕಕ್ಕೂ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ.
ರಿವೇಂಜ್ ಡ್ರಾಮಾ.
ಹಳೆಯ ಕಥೆಗಳನ್ನು ಹೊಸ ರೀತಿಯಲ್ಲಿ ಹೇಳುವುದು ಸಹ ಒಂದು ಕಲೆ. ಆದರೆ, ನಿರ್ದೇಶಕ ಬಾಬಿ ಕೊಲ್ಲಿ ಡಾಕು ಮಹಾರಾಜ್ ಸಿನಿಮಾ ಮೂಲಕ ಆ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ. ಡಾಕು ಮಹಾರಾಜ್ ಒಂದು ಸರಳ ರಿವೇಂಜ್ ಡ್ರಾಮಾ. ಬಾಲಕೃಷ್ಣ ಅವರ ಹಿರೋಯಿಸಂ ಅನ್ನೇ ಪ್ರಧಾನವಾಗಿಟ್ಟುಕೊಂಡು ಪ್ರೇಕ್ಷಕರಿಗೆ ತಾಜಾತನದ ಟ್ರೀಟ್ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
ಲಾರ್ಜರ್ ದೆನ್ ಲೈಫ್
ಡಾಕು ಮಹಾರಾಜ್.. ಇದು ಟಿಪಿಕಲ್ ಬಾಲಣ್ಣನ ಮಾಸ್ ಶೈಲಿಯ ಸಿನಿಮಾ. ಈ ಚಿತ್ರವನ್ನು ಬಾಲಣ್ಣನ ಹಿಂದಿನ ಚಿತ್ರಗಳ ಫ್ಲೇವರ್ ಇಲ್ಲದೆ, ಹೊಸತನವನ್ನು ನೀಡಬೇಕು ಎಂಬ ಒಂದೇ ಉದ್ದೇಶಕ್ಕೆ ಬಹಳ ಸ್ಟೈಲಿಶ್ ಆಗಿಯೇ ಸೃಷ್ಟಿ ಮಾಡಿದ್ದಾರೆ ನಿರ್ದೇಶಕ ಬಾಬಿ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಆಕ್ಷನ್ ಸೀನ್‌ಗಳು ಸಿನಿಮಾದಲ್ಲಿ ಕಾಣಿಸುತ್ತ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತವೆ.
ಎರಡು ಶೇಡ್‌ಗಳ ಪಾತ್ರ ನೋಡುಗರಿಗೆ ಕೊನೆಯವರೆಗೂ ಕಿಕ್ ಕೊಡುತ್ತಲೇ ಸಾಗುತ್ತವೆ. ಒಟ್ಟಾರೆಯಾಗಿ ಲಾರ್ಜರ್ ದೆನ್ ಲೈಫ್ ರೀತಿಯಲ್ಲಿ ಬಾಲಕೃಷ್ಣ ಅವರ ಪಾತ್ರ ಕಂಡಿದೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಫ್ಯಾಮಿಲಿ ಆಡಿಯೆನ್ಸ್ ಗಮನದಲ್ಲಿಟ್ಟುಕೊಂಡು, ಮಿತಿಗಳನ್ನು ದಾಟದೆ, ರಕ್ತಪಾತ ಮತ್ತು ಹಿಂಸೆಯನ್ನು ಹೆಚ್ಚು ವೈಭವೀಕರಿಸದ ರೀತಿಯಲ್ಲಿ ಸಿನಿಮಾ ಕಟ್ಟಿಕೊಟ್ಟಿರುವುದು ನಿರ್ದೇಶಕರ ಹೆಚ್ಚುಗಾರಿಕೆ.
ಮೇಳೈಸಿದ ಸಾಹಸ, ಬಾಲಣ್ಣ ಸಿಡಿಲಬ್ಬರ
ಟಾಲಿವುಡ್ ನಟ ಬಾಲಕೃಷ್ಣ ಅವರ ಸಿನಿಮಾ ಎಂದರೆ ಅದು ಕಮರ್ಷಿಯಲ್ ಅಂಶಗಳ ಗೊಂಚಲು. ಒಂದು ವರ್ಗಕ್ಕಷ್ಟೇ ಅವರ ಸಿನಿಮಾಗಳು ಸೀಮಿತವಾಗುವುದಿಲ್ಲ. ಎಲ್ಲ ವರ್ಗದವರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಅವರ ಸಿನಿಮಾಗಳಲ್ಲಿ ಹೆಚ್ಚು. ಅದರಂತೆ, ಡಾಕು ಮಹಾರಾಜ್ ಸಿನಿಮಾದಲ್ಲಿಯೂ ಕಲರ್‌ಫುಲ್ ಹಾಡುಗಳು, ಅಬ್ಬರದ ಡೈಲಾಗ್‌ಗಳು, ಐಟಂ ಡಾನ್ಸ್.. ಇದೆಲ್ಲದಕ್ಕೂ ಮಿಗಿಲಾಗಿ ಸಿಡಿಲಬ್ಬರದ ಸಾಹಸ ದೃಶ್ಯಗಳೂ ಸೋಜಿಗದಂತೆ ಕಂಡಿವೆ. ಸಾಹಸ ನಿರ್ದೇಶಕರು ಈ ಚಿತ್ರದ ಇನ್ನೊಬ್ಬ ನಾಯಕನಂತೆ ಕಂಡಿದ್ದಾರೆ. ಆ ಮಟ್ಟಿಗೆ ಆಕ್ಷನ್ ದೃಶ್ಯಗಳು ಮೇಳೈಸಿವೆ.
ಊಹೆಗೆ ನಿಲುಕುವಂಥದ್ದು..
ಎಲಿವೇಷನ್ಸ್ ಮತ್ತು ಸಾಹಸ ದೃಶ್ಯಗಳ ಅಬ್ಬರ ಆರ್ಭಟ ಬದಿಗಿಟ್ಟರೆ ಡಾಕು ಮಹಾರಾಜ್ ಸಿನಿಮಾದ ಕಥೆಯಲ್ಲಿ ಹೊಸತನ ಇಣುಕುವುದಿಲ್ಲ. ಮೇಕಿಂಗ್ ಮತ್ತು ಆಕ್ಷನ್ ಅನ್ನೇ ಪ್ರಧಾನವಾಗಿಟ್ಟುಕೊಂಡು ಕಥೆ ಹೆಣೆದಂತಿದೆ ನಿರ್ದೇಶಕರು. ಮೊದಲಾರ್ಧಕ್ಕೂ ಮುನ್ನ ಇದೊಂದು ರಿವೇಂಜ್ ಡ್ರಾಮಾ ಎಂಬುದು ಪ್ರೇಕ್ಷಕ ಸರಳವಾಗಿ ಊಹಿಸಿಬಿಡಬಲ್ಲ! ಕಥೆಯಲ್ಲಿ ಕೌತುಕವನ್ನು ಕಾಯ್ದುಕೊಳ್ಳುವ ಗುಣ ಡಾಕು ಮಹಾರಾಜನಿಗಿಲ್ಲ.
ಸೀತಾರಾ ಎಂಟರ್ಟೈನ್ಮೆಂಟ್ಸ್ ಕೈ ಬಿಚ್ಚಿ ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದೆ. ಹಾಗಾಗಿ ಮೇಕಿಂಗ್ ವಿಚಾರದಲ್ಲಿ ಡಾಕು ಮಹಾರಾಜ್ ಶ್ರೀಮಂತವಾಗಿ ಮೂಡಿಬಂದಿದೆ. ಥಮನ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್. ವಿಜಯ್ ಕಣ್ಣನ್ ಛಾಯಾಗ್ರಹಣದ ಕುಸುರಿ ಕೆಲಸ ಚಿತ್ರದ ದೊಡ್ಡ ಆಸ್ತಿಯಂತೆ ಕಂಡಿದೆ. ಆದರೆ, ನೀರಸ ಬರವಣಿಗೆ ಸಿನಿಮಾದ ಸಿಂಗಾರಕ್ಕೆ ಕೊಂಚ ತೊಡಕಾಗಿದೆ. ಭಾವನಾತ್ಮಕ ದೃಶ್ಯಗಳಲ್ಲಿ ನೈಜತೆಯ ಭಾವ ಕಾಣಿಸುವುದಿಲ್ಲ. ಸಂಕಲನದ ವಿಚಾರದಲ್ಲಿ ಚಿತ್ರದ ಮೊದಲಾರ್ಧ ಅಸಂಬದ್ಧ ಎನಿಸುತ್ತದೆ. ದ್ವಿತೀಯಾರ್ಧ ಸುದೀರ್ಘ ಎನಿಸುತ್ತದೆ. ಸಾಕಷ್ಟು ಕಡೆಗಳಲ್ಲಿ ಟ್ರಿಮ್ ಮಾಡುವುದನ್ನು ಸಂಕಲನಕಾರರು ಕೈ ಬಿಟ್ಟಿದ್ದಾರೆ.
ಚಿತ್ರ: ಡಾಕು ಮಹಾರಾಜ್
ನಿರ್ದೇಶನ: ಬಾಬಿ ಕೊಲ್ಲಿ
ನಿರ್ಮಾಣ: ಸೀತಾರಾ ಎಂಟರ್ಟೈನ್ಮೆಂಟ್ಸ್
ಸಂಗೀತ: ಥಮನ್
ಛಾಯಾಗ್ರಹಣ: ವಿಜಯ್ ಕಣ್ಣನ್
ತಾರಾಗಣ: ನಂದಮೂರಿ ಬಾಲಕೃಷ್ಣ, ಬಾಬಿ ಡಿಯೋಲ್, ಪ್ರಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್ ಮುಂತಾದವರು
ಸ್ಟಾರ್: 3/5
ಚಿತ್ರ ವಿಮರ್ಶೆ: ಮಂಜು ಕೊಟಗುಣಸಿ
