Narayana Narayana Review: ʻನಾರಾಯಣ ನಾರಾಯಣʼ ಇದು ನಿಧಿ ಹಿಂದೆ ಬಿದ್ದ ಹಳ್ಳಿ ಹುಡುಗರ ಹಾಡು ಪಾಡು
ನಾರಾಯಣ ನಾರಾಯಣ ಸಿನಿಮಾದ ಕಥೆ ತುಂಬ ಸಿಂಪಲ್. ಗ್ರಾಮೀಣ ಭಾಗದಲ್ಲಿನ ನಿಧಿ ಸುತ್ತ ಮತ್ತು ಅದರ ಹಿನ್ನೆಲೆಯಲ್ಲಿ ಸುತ್ತಿಕೊಂಡ ಒಂದಷ್ಟು ನಂಬಿಕೆ ಮತ್ತು ಮೌಢ್ಯಗಳ ಜತೆಗೆ ಸಾಗುವ ಕಥೆಯಿದು.

Narayana Narayana Review: ಹಳ್ಳಿ ಜೀವನ, ಊರ ಗೌಡನ ಆಳ್ವಿಕೆ, ಅದೇ ಊರಲ್ಲೊಬ್ಬ ನಾಟಕದ ಮೇಷ್ಟ್ರು, ಚೆಂದದ ಹುಡುಗಿ, ಆಕೆ ಮೇಲೆ ಕಣ್ಣಿಟ್ಟ ಒಂದಷ್ಟು ಹುಡುಗರು, ನವಿರು ಕಾಮಿಡಿ ಜತೆಗೆ ಹಳ್ಳಿ ಹುಡುಗರ ನಿಧಿ ಹುಡುಕಾಟದ ಹಾಡು ಪಾಡು... ಇದು ಈ ವಾರ ತೆರೆಗೆ ಬಂದಿರುವ ನಾರಾಯಣ ನಾರಾಯಣ ಸಿನಿಮಾದ ಒಂದೆಳೆ. ಕಾಮಿಡಿ ಸಿನಿಮಾ ಅಂತ ಹೇಳಿಕೊಂಡ ನಾರಾಯಣ ನಾರಾಯಣ ಮೊದಲಾರ್ಧದಲ್ಲಿ ಕಾಮಿಡಿ ಸಿಹಿಯುಣಿಸಿ, ದ್ವಿತೀಯಾರ್ಧಕ್ಕೆ ಒಂದಷ್ಟು ಸಸ್ಪೆನ್ಸ್ ಜತೆಗೆ ಥ್ರಿಲ್ಲರ್ ಅಂಶಗಳನ್ನೂ ಮಿಶ್ರಣ ಮಾಡಿ ಪ್ರೇಕ್ಷಕನ ತಟ್ಟೆಗೆ ಬಡಿಸಿದ್ದಾರೆ ನಿರ್ದೇಶಕ ಶ್ರೀಕಾಂತ್ ಕೆಂಚಪ್ಪ.
ನಾರಾಯಣ ನಾರಾಯಣ ಚಿತ್ರ ನಿಧಿ ಹುಡುಕಾಟದ ಸುತ್ತ ಗಿರಕಿ ಹೊಡೆಯುವ ಕಥೆ. ಪ್ರೀತಿ ಗೀತಿ ಇತ್ಯಾದಿ ಜತೆಗೆ ಸ್ನೇಹಕ್ಕೂ ಇಲ್ಲಿ ಜಾಗ ಕಲ್ಪಿಸಿದ್ದಾರೆ ನಿರ್ದೇಶಕರು. ಹಳ್ಳಿ ಅಂದ ಮೇಲೆ ಅಲ್ಲಿ ಹಗೆತನ, ದ್ವೇಷ, ದಳ್ಳುರಿ, ಮೌಢ್ಯಗಳು ಸಹಜ. ಇವುಗಳನ್ನು ನಾರಾಯಣ ನಾರಾಯಣ ಚಿತ್ರದಲ್ಲಿ ಮುಂದುವರಿಸಿಕೊಂಡು, ಹಾಸ್ಯದ ಜತೆಗೆ ಸಂದೇಶವೊಂದನ್ನು ಪ್ರೇಕ್ಷಕರೆಡೆಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶ್ರೀಕಾಂತ್ ಕೆಂಚಪ್ಪ.
ಇಂದಿಗೂ ಗ್ರಾಮೀಣ ಭಾಗದಲ್ಲಿ ನಿಧಿ ಇದೆ ಅನ್ನೋ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಆ ನಿಧಿ ಆಸೆಗಾಗಿ ಬಲಿ ಎಂಬ ಮೌಢ್ಯಗಳೂ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿವೆ. ಆ ಅನಾಚಾರಗಳ ನಿರ್ಮೂಲನೆಯ ಬಗ್ಗೆಯೂ ನಿರ್ದೇಶಕರು ಸಿನಿಮಾ ಮೂಲಕ ಪಾತ್ರಧಾರಿಗಳಿಂದ ಮಾತನಾಡಿಸಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಅದೆಲ್ಲವನ್ನು ಮನುಷ್ಯನಿಂದ ಹೇಳಿಸಿಲ್ಲ. ಬದಲಿಗೆ ಶ್ರೀಕೃಷ್ಣನ ಪಾತ್ರವೊಂದರ ಮೂಲಕ ಸರಿ ತಪ್ಪುಗಳ ಪರಾಮರ್ಶೆ ಮಾಡಿಸಿದ್ದಾರೆ. ಇಡೀ ಸಿನಿಮಾ ಸಾಗುವುದೇ ಶ್ರೀಕೃಷ್ಣ ಪರಮಾತ್ಮನ ಆಧುನಿಕ ಉಪದೇಶದ ಮೇಲೆ.
ನಾರಾಯಣ ನಾರಾಯಣ ಸಿನಿಮಾದ ಕಥೆ ತುಂಬ ಸಿಂಪಲ್. ಗ್ರಾಮೀಣ ಭಾಗದಲ್ಲಿನ ನಿಧಿ ಸುತ್ತ ಮತ್ತು ಅದರ ಹಿನ್ನೆಲೆಯಲ್ಲಿ ಸುತ್ತಿಕೊಂಡ ಒಂದಷ್ಟು ನಂಬಿಕೆಗಳ ಜತೆಗೆ ಸಾಗುವ ಕಥೆಯಿದು. ಇಷ್ಟನ್ನೇ ಸಿನಿಮಾ ಮಾಡಿದ್ದರೆ, ಅದು ಸಾಕ್ಷ್ಯಚಿತ್ರವಾಗುತ್ತಿತ್ತು. ಆದರೆ, ಅದಕ್ಕೆ ಕಾಮಿಡಿ ಲೇಪನ ಮಾಡಿ, ದ್ವಾಪರದ ಶ್ರೀಕೃಷ್ಣನನ್ನು ಕಲಿಯುಗಕ್ಕೆ ಕರೆತಂದು, ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ. ಕೇವಲ 2 ಗಂಟೆಯ ಅವಧಿಯ ಈ ಸಿನಿಮಾ ಬೋರ್ ಎನಿಸದೆ ನೋಡಿಸಿಕೊಂಡು ಹೋಗುವ ಗುಣ ಹೊಂದಿದೆ.
ಮೇಕಿಂಗ್ ಮೂಲಕ ಸಿನಿಮಾವನ್ನು ಇನ್ನಷ್ಟು ಚೆಂದಗಾಣಿಸುವ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ. ಹಾಸ್ಯವನ್ನು ಬೇಕು ಅಂತಲೇ ಒಂದಷ್ಟು ಕಡೆ ತುರುಕಿದಂತಿದೆ. ಸತ್ಯ ರಾಧಾಕೃಷ್ಣ ಮತ್ತು ಜತೀನ ದರ್ಶನ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಕಮಲ್ ಸಿಂಗ್ ಮತ್ತು ಲಕ್ಕೇಗೌಡ ಅವರ ಛಾಯಾಗ್ರಹಣದ ಕೈಚಳಕ ಇನ್ನಷ್ಟು ಮಾಗಬೇಕು. ಹಾಸ್ಯ ನಟ ಪವನ್ ಕುಮಾರ್ ಅವರಿಗಿಲ್ಲಿ ಕೊಂಚ ಗಂಭೀರ ಪಾತ್ರ, ಅವರಾಡುವ ಮಾತೆಲ್ಲವೂ ಸಂದೇಶಮಯ. ಇನ್ನುಳಿದಂತೆ ದರ್ಶನ್, ಕೀರ್ತಿ ಕೃಷ್ಣ, ಪುನೀತ್ ಬಿಎ, ಗುರುರಾಜ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಬ್ಬರ ಆಡಂಬರ ಇಲ್ಲದ, ಹಾಸ್ಯದ ಜತೆಗೆ ಥ್ರಿಲ್ ಬೇಕಿದ್ದರೆ, ಈ ವಾರ ಚಿತ್ರಮಂದಿರಗಳಲ್ಲಿ ನಾರಾಯಣನನ್ನು ಕಣ್ತುಂಬಿಕೊಳ್ಳಬಹುದು.
ಚಿತ್ರ: ನಾರಾಯಣ ನಾರಾಯಣ
ನಿರ್ದೇಶನ: ಶ್ರೀಕಾಂತ್ ಕೆಂಚಪ್ಪ
ನಿರ್ಮಾಣ: ಕೃಷ್ಣಪ್ಪ ಪಿ, ಮಂಜುನಾಥ ಕೆ
ತಾರಾಗಣ: ಕೀರ್ತಿ ಕೃಷ್ಣ, ದರ್ಶನ್, ಬಿಂಬಿಕಾ, ಪವನ್ ಕುಮಾರ್, ಪುನೀತ್ ಬಿಎ, ರಘು ಭಟ್, ಗುರುಕಿರಣ್, ಹಂಪಾ ಇತರರು
ಸಂಗೀತ: ಸತ್ಯ ರಾಧಾಕೃಷ್ಣ ಮತ್ತು ಜತೀನ ದರ್ಶನ್
ಛಾಯಾಗ್ರಹಣ: ಕಮಲ್ ಸಿಂಗ್ ಮತ್ತು ಲಕ್ಕೇಗೌಡ
ಸಂಕಲನ: ಅರವಿಂದ್ ರಾಜ್
