National Film Awards; ಬ್ರಹ್ಮಾಸ್ತ್ರಕ್ಕೆ ಅತ್ಯುತ್ತಮ ವಿಎಫ್‌ಎಕ್ಸ್ ಸಿನಿಮಾ ಪ್ರಶಸ್ತಿಯ ಗರಿ, 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ
70th National Film Awards 2024; 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್‌ನ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಫ್ಯಾಂಟಸಿ ಸಾಹಸಮಯ ಚಿತ್ರ ‘ಬ್ರಹ್ಮಾಸ್ತ್ರ’ಕ್ಕೆ ಅತ್ಯುತ್ತಮ ವಿಎಫ್‌ಎಕ್ಸ್ ಸಿನಿಮಾ ಪ್ರಶಸ್ತಿ ಸಿಕ್ಕಿದೆ.
ಬೆಂಗಳೂರು: ಸಿನಿಮಾ ಕ್ಷೇತ್ರದ ಬಹುನಿರೀಕ್ಷಿತ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (70th National Film Awards 2024) ಘೋಷಣೆಯಾಗಿದ್ದು, ಬಾಲಿವುಡ್ ಚಿತ್ರ ಬ್ರಹ್ಮಾಸ್ತ್ರಕ್ಕೆ ಅತ್ಯುತ್ತಮ ವಿಎಫ್‌ಎಕ್ಸ್ ಪ್ರಶಸ್ತಿ ಘೋಷಣೆಯಾಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಫ್ಯಾಂಟಸಿ ಸಾಹಸಮಯ ಚಿತ್ರ 'ಬ್ರಹ್ಮಾಸ್ತ್ರ' (Brahmastra) ಭಾರಿ ಸಂಚಲನ ಮೂಡಿಸಿದ ಚಿತ್ರವಾಗಿದೆ. ಇದರಲ್ಲಿ 4500ರಷ್ಟು ವಿಎಫ್‌ಎಕ್ಸ್ ದೃಶ್ಯಗಳಿವೆ. ಬ್ರಹ್ಮಾಸ್ತ್ರ ಸಿನಿಮಾ ‘ಡಿಸ್ನಿ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಹಿಂದಿ ಭಾಷೆಯ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು, ಅಯನ್ ಮುಖರ್ಜಿ ಅವರ ಕಥೆ ಮತ್ತು ನಿರ್ದೇಶನವನ್ನು ಹೊಂದಿದೆ. ಪ್ರೈಮ್ ಫೋಕಸ್ ಸಂಸ್ಥೆ ಇದರ ವಿಎಫ್‌ಎಕ್ಸ್ ಸಂಕಲನ ಮಾಡಿಕೊಟ್ಟಿದೆ. ವಿಎಫ್‌ಎಕ್ಸ್ ಎಂದರೆ ವಿಷುವಲ್ ಎಫೆಕ್ಟ್ಸ್ ಎಂಬುದರ ಸಂಕ್ಷಿಪ್ತ ರೂಪ. ಸರಳವಾಗಿ ಹೇಳಬೇಕು ಎಂದರೆ ಅನಿಮೇಶನ್ ತಂತ್ರಜ್ಞಾನದ ಮೂಲಕ ದೃಶ್ಯ ವೈಭವೀಕರಣ ಮಾಡಿ ಸಿನಿಮಾಗೆ ಸೇರಿಸುವಂಥದ್ದು.
ಹುಸೇನ್ ದಲಾಲ್ ಅವರು ಸಂಭಾಷಣೆ ಬರೆದರೆ, ಕರಣ್ ಜೋಹರ್, ಅಪೂರ್ವ ಮೆಹ್ತಾ, ಯಶ್ ಜೋಹರ್, ನಮಿತ್ ಮಲ್ಹೋತ್ರಾ ಮತ್ತು ಅಯನ್ ಮುಖರ್ಜಿ ಈ ಸಿನಿಮಾಕ್ಕೆ ನಿರ್ಮಾಪಕರು. ಬ್ರಹ್ಮಾಸ್ತ್ರ ಮೊದಲ ಭಾಗ ಇದಾಗಿದ್ದು, ಎರಡನೇ ಭಾಗವನ್ನು ಸಿನಿಮಾ ರಸಿಕರು ಎದುರುನೋಡುತ್ತಿದ್ದಾರೆ.
ವಿಎಫ್‌ಎಕ್ಸ್ ಹಿಂದಿನ ರೂವಾರಿ ನಮಿತ್ ಮಲ್ಹೋತ್ರಾ
ಬ್ರಹ್ಮಾಸ್ತ್ರ ಪಾರ್ಟ್ 1 ಶಿವಾ ಸಿನಿಮಾದ ವಿಷುಯಲ್ ಎಫೆಕ್ಟ್‌ಗಳಿಗೆ (ವಿಎಫ್ಎಕ್ಸ್) ಸಂಬಂಧಿಸಿದ ಹೆಚ್ಚಿನ ಶ್ರೇಯಸ್ಸು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ನಮಿತ್ ಮಲ್ಹೋತ್ರಾ ಅವರದ್ದು. ನಮಿತ್ ಮಲ್ಹೋತ್ರಾ ಅವರು ಪ್ರೈಮ್ ಫೋಕಸ್ ಲಿಮಿಟೆಡ್‌ನ ಸಂಸ್ಥಾಪಕ. ಏಳು ಬಾರಿ ಆಸ್ಕರ್-ವಿಜೇತ ಕಂಪನಿ ಡಿಎನ್‌ಇಜಿ ಕಂಪನಿಯ ಅಧ್ಯಕ್ಷ ಮತ್ತು ಜಾಗತಿಕ ಸಿಇಒ ಕೂಡ ಹೌದು. ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಡಿಸ್ನಿ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್‌ನಂತಹ ಹೆಸರಾಂತ ಸ್ಟುಡಿಯೋಗಳ ತಂಡಗಳ ಜೊತೆಗೆ ಕೈ ಜೋಡಿಸಿರುವುದರಿಂದಲೇ ಇಂಥದ್ದೊಂದು ಸಾಹಸಮಯ ಚಿತ್ರ ತೆಗೆಯಲು ಸಾಧ್ಯವಾಯಿತು ಎನ್ನುತ್ತಾರೆ ಚಿತ್ರರಂಗದವರು.
ಹಾಲಿವುಡ್‌ನ ಸಾಹಸಗಾಥೆ ಸರಣಿ ಅವೆಂಜರ್ಸ್‌ಗೆ ಹೋಲಿಸುವುದಾದರೆ ಭಾರತದ ಬ್ರಹ್ಮಾಸ್ತ್ರ ಭಾಗ 1 ಶಿವಾ ಸಿನಿಮಾವು ಅನೇಕ ವಿಶೇಷಗಳನ್ನು ಹೊಂದಿದೆ. ಇದರಲ್ಲಿ ಮುಖ್ಯವಾಗಿ ವಿಎಫ್‌ಎಕ್ಸ್ ಗಮನಸೆಳೆಯುತ್ತದೆ. ಅವೆಂಜರ್ಸ್‌ನ ಎಂಡ್‌ಗೇಮ್‌ನಲ್ಲಿ 2400ರಷ್ಟು ವಿಎಫ್‌ಎಕ್ಸ್ ದೃಶ್ಯಗಳಿದ್ದರೆ, ಬ್ರಹ್ಮಾಸ್ತ್ರ ಭಾಗ 1 ರಲ್ಲಿ 4500ಕ್ಕೂ ಹೆಚ್ಚು ವಿಎಫ್‌ಎಕ್ಸ್ ದೃಶ್ಯಗಳಿವೆ. ಜಾಗತಿಕವಾಗಿ ಕೂಡ ಇಷ್ಟು ಅಧಿಕ ಪ್ರಮಾಣದ ವಿಎಫ್‌ಎಕ್ಸ್ ಹೊಂದಿರುವ ಸಿನಿಮಾ ಇನ್ನೊಂದಿಲ್ಲ. ಈ ಸಿನಿಮಾಕ್ಕೆ ಕೆಲಸ ಮಾಡಿದ ತಂಡದಲ್ಲಿ ಲಂಡನ್, ಉತ್ತರ ಅಮೆರಿಕ, ಭಾರತದ ಪರಿಣತರ ತಂತ್ರಜ್ಞರಿದ್ದರು. ನಮಿತ್ ಮಲ್ಹೋತ್ರಾ ಮಾರ್ಗದರ್ಶನದಲ್ಲಿ ಅವರು ಕೆಲಸ ಮಾಡಿದ್ದರು.
ಬ್ರಹ್ಮಾಸ್ತ್ರ ಭಾಗ 1 ಶಿವಾ; ಭಾರತೀಯ ಸಾಹಸ ಚಿತ್ರದ ಹಿನ್ನೆಲೆ
ಬ್ರಹ್ಮಾಸ್ತ್ರ ಭಾಗ 1 ಶಿವಾ ಸಿನಿಮಾವನ್ನು 2022ರ ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲಾಗಿದೆ. ಬ್ರಹ್ಮಾಸ್ತ್ರ ಸಿನಿಮಾವು ಐದು ಭಾಷೆಗಳಲ್ಲಿ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ದೇಶಾದ್ಯಂತ 2D ಮತ್ತು 3D ಎರಡರಲ್ಲೂ ಇದು ತೆರೆ ಕಂಢಿದ್ದು, ಭಾರತದಲ್ಲಿ 5,000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿತ್ತು.
ಈ ಸಿನಿಮಾವು ಅಸ್ಟ್ರಾವರ್ಸ್ ಎಂಬ ಹೆಸರಿನ ಸಿನಿಮೀಯ ಬ್ರಹ್ಮಾಂಡದ ಭಾಗವಾಗಿದ್ದು, ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಮತ್ತು ನಾಗಾರ್ಜುನ ಸೇರಿ ದೊಡ್ಡ ತಾರಾಗಣವನ್ನು ಹೊಂದಿದೆ. ವಿಕಿಪೀಡಿಯಾ ಮಾಹಿತಿ ಪ್ರಕಾರ, ಸಿನಿಮಾ ನಿರ್ಮಾಣಕ್ಕೆ 375 ಕೋಟಿ ರೂಪಾಯಿಯಿಂದ 400 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಬಾಕ್ಸ್ ಆಫೀಸ್ ಮೂಲಕ ಸಿನಿಮಾದ ಕಲೆಕ್ಷನ್ 418.8 ಕೋಟಿ ರೂಪಾಯಿಯಿಂದ 431 ಕೋಟಿ ರೂಪಾಯಿ.