ತಮಿಳಿನ ಟೆಸ್ಟ್ ಸಿನಿಮಾ ಹೇಗಿದೆ? ಮಾಧವನ್‌ಗೆ ಧ್ವನಿಯಾದ ಕನ್ನಡ ನಟ ನವೀನ್ ಕೃಷ್ಣ ಪ್ರಮುಖ ಆಕರ್ಷಣೆ- ವೀರಕಪುತ್ರ ಶ್ರೀನಿವಾಸ ವಿಮರ್ಶೆ
Netflix Test Movie Review: ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟೆಸ್ಟ್ ಸಿನಿಮಾದ ಕುರಿತು ವೀರಕಪುತ್ರ ಶ್ರೀನಿವಾಸ ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ಒಟಿಟಿಯಲ್ಲಿ ಈ ಸಿನಿಮಾ ನೋಡುವ ಮುನ್ನ ಈ ರಿವ್ಯೂ ಓದಿ.

ವೀರಕಪುತ್ರ ಶ್ರೀನಿವಾಸ ಬರಹ: ಅವನೊಬ್ಬ ದೇಶಪ್ರೇಮಿ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದವನು. ಅಮೇರಿಕಾದಲ್ಲಿಯೇ ನೂರೆಂಟು ಅವಕಾಶಗಳಿದ್ದರೂ ತನ್ನ ಪ್ರತಿಭೆ ನನ್ನ ದೇಶಕ್ಕೆ ಮಾತ್ರ ಅಂತ ನಿರ್ಧರಿಸಿ ಭಾರತಕ್ಕೆ ಬಂದುಬಿಡುತ್ತಾನೆ. ಇಡೀ ದೇಶದ ದಿಕ್ಕನ್ನೇ ಬದಲಿಸಿಬಲ್ಲಂತಹ ಸಂಶೋಧನೆಯೊಂದನ್ನು ಮಾಡುತ್ತಾನೆ. ಆದರೆ ಆ ಯೋಜನೆ ಅನುಮತಿಗೆ ಅವನು ಪಡಬಾರದ ಕಷ್ಟ ಪಡಬೇಕಾಗುತ್ತದೆ. ಅಧಿಕಾರಿಗಳು ಐವತ್ತು ಲಕ್ಷ ಲಂಚ ಕೇಳ್ತಾರೆ! ಇವನು ಬಡ್ಡಿಗೆ ತಂದು ಕೊಡ್ತಾನೆ. ಮುಂದುವರಿದ ಅಧಿಕಾರಿಗಳು ಅದು ಸಾಕಾಗಲ್ಲ ಇನ್ನೂ ಐದು ಕೋಟಿ ಬೇಕು ಅನ್ನೋ ಡಿಮ್ಯಾಂಡ್ ಮುಂದಿಡುತ್ತಾರೆ! ಇವನಿಗೆ ನಿಂತ ನೆಲ ಕುಸಿದ ಅನುಭವ. ಅದರ ಮಧ್ಯೆ ಅವನ ಹೆಂಡತಿಯದ್ದೊಂದು ಕಹಾನಿ. ಆಕೆಗೆ ತಾನು ತಾಯಿಯಾಗಬೇಕು ಎಂಬಾಸೆ. ವಿಪರೀತ ಕುಡಿತದ ಕಾರಣಕ್ಕೆ ಗಂಡನಿಂದ ಅಮ್ಮನಾಗುವುದು ಸಾಧ‌್ಯವಿಲ್ಲ ಅಂತ ರಿಪೋರ್ಟ್ ಹೇಳುತ್ತಿದೆ. ಆದರೆ ಸಮಾಜ ಮಾತ್ರ ನನ್ನನ್ನೇ ಬಂಜೆ ಮಾಡಿ ರಿಪೋರ್ಟ್ ಕೊಡುತ್ತಿದೆ. ಆದ್ದರಿಂದ ನಾನು ತಾಯಿಯಾಗಲೇಬೇಕು. ಸೋ, ಫರ್ಟಿಲಿಟಿ ಸೆಂಟರ್ ಗೆ ಐದು ಲಕ್ಷ ಹಣ ಕಟ್ಟು ಅಂತ ಗಂಡನ ಮೇಲೆ ಒತ್ತಡ ಹೇರುತ್ತಾಳೆ. ಆತನಿಗೀಗ ತನ್ನ ಕನಸಿನ ಪ್ರಾಜೆಕ್ಟಿಗಾಗಿ ಐದು ಕೋಟಿ, ಹೆಂಡತಿಯ ಕನಸಿಗಾಗಿ ಐದು ಲಕ್ಷ ಬೇಕೇ ಬೇಕು! ಆದ್ರೆ ಅಷ್ಟು ಹಣ ಎಲ್ಲಿಂದ ತರೋದು?
ಆಗ ಒಬ್ಬ ಕ್ರಿಕೆಟಿಗನು ಸಿಗ್ತಾನೆ. ಅವನು ಒಂದು ಕಾಲದ ಲೆಜೆಂಡ್. ಆದ್ರೆ ಈಗ ಎರಡು ವರ್ಷದಿಂದ ಫಾರ್ಮ್ನಲ್ಲಿಲ್ಲ. ಅತ್ತ ಅವನ ಆಟಕ್ಕಾಗಿ ಲಕ್ಷಾಂತರ ದೇಶವಾಸಿಗಳು ಕಾದು ಕುಳಿತಿದ್ದಾರೆ. ಇತ್ತ ಅವನಿಗೆ ನಿವೃತ್ತಿ ಕೊಟ್ಟು ಕೈತೊಳೆದುಕೊಳ್ಳಲು ಕ್ರಿಕೆಟ್ ಬೋರ್ಡ್ ವೇದಿಕೆ ಸಿದ್ದಮಾಡುತ್ತಿದೆ. ಇದೊಂದು ಕೊನೇ ಪಂದ್ಯ ಆಡಿಬಿಡು ಅನ್ನುತ್ತೆ ಆ ಬೋರ್ಡ್. ಆ ಪಂದ್ಯ ಅವನಿಗೆ ಮಾಡು ಅಥವಾ ಮಡಿ ಅನ್ನೋ ತರಹದ್ದು. ಎರಡು ವರ್ಷದಿಂದ ಇಲ್ಲದ ಫಾರ್ಮ್ ಅನ್ನು ವಾಪಸ್ ಹೇಗೆ ತರೋದು ಅನ್ನೋ ಚಿಂತೆಯಲ್ಲಿರುವಾಗಲೇ ಅವನ ಜೀವನಕ್ಕೆ ಎಂಟ್ರಿ ಕೊಡೋದು ಈ ದೇಶಪ್ರೇಮಿ!
ನಾನು ಇಡೀ ದೇಶದ ದಿಕ್ಕನ್ನೇ ಬದಲಿಸ್ತೀನಿ ಅಂದ್ರೆ ಒಬ್ರೂ ನನ್ನ ಮಾತು ಕೇಳ್ತಿಲ್ಲ. ಆದ್ರೆ ನೀನಾಡುವ ಆಟಕ್ಕೆ ಸಾವಿರಾರು ಕೋಟಿ ಖರ್ಚು ಮಾಡ್ತಿದ್ದಾರೆ. ನಿನಗಾಗಿ ಲಕ್ಷಾಂತರ ಜನ ಪ್ರಾರ್ಥಿಸ್ತಿದ್ದಾರೆ. ಆ ಲಕ್ಷಾಂತರ ಜನರ ಒಳಿತಿಗಾಗಿ ನಾನು ಶ್ರಮಪಡುತ್ತಿದ್ದೇನೆ. ಹಾಗಾದ್ರೆ ಯಾವ್ದು ದೇಶಪ್ರೇಮ? ನನ್ನದೋ ನಿನ್ನದೋ? ಅನ್ನೋ ಪ್ರಶ್ನೆಯನ್ನು ಸ್ವಗತದಲ್ಲಿಯೇ ಕೇಳಿಕೊಳ್ಳುತ್ತಾನೆ. ಒಂದು ನಿರ್ಧಾರಕ್ಕೆ ಬಂದವನಂತೆ, ಆ ಕ್ರಿಕೆಟಿಗನನ್ನೇ ಬಳಸಿಕೊಂಡು ತನ್ನ ಗುರಿಮುಟ್ಟಲು ಯೋಜನೆ ರೂಪಿಸ್ತಾನೆ. ಅದಕ್ಕಾಗಿ ಹೆಂಡ್ತಿಯನ್ನು ಬಳಸಿಕೊಳ್ತಾನೆ. ಗೆಳೆಯನನ್ನು ಬಳಸಿಕೊಳ್ತಾನೆ. ಹಾಗಾದರೆ, ಆತ ತನ್ನ ಕನಸನ್ನು ಈಡೇರಿಸಿಕೊಂಡನಾ? ಆ ಕ್ರಿಕೆಟಿಗ ಫಾರ್ಮ್ ಗೆ ಬಂದನಾ? ಆಕೆಯ ಅಮ್ಮನಾಗುವ ಕನಸು ನನಸಾಯಿತ? ಎಂಬೆಲ್ಲಾ ಆಸಕ್ತಿಕರ ಅಂಶಗಳಿರುವ ಸಿನಿಮಾ ಹೆಸರು 'ಟೆಸ್ಟ್'. ಕತೆ ಚೆನ್ನಾಗಿದ್ರೂ ಇದು ಚೂರು ಸಹನೆ ಪರೀಕ್ಷೆ ಮಾಡುತ್ತೆ. ನಾನು ಅಲ್ಲಲ್ಲಿ 2X ಸ್ಪೀಡಲ್ಲಿ ನೋಡಿದ್ದೇನೆ! ಅನುಕೂಲಸಿಂಧು ಸ್ಕ್ರೀನ್ ಪ್ಲೇ! ಪೊಲೀಸಿನವರನ್ನು ಕೇವಲ ಉತ್ಕಟತೆ ಹೆಚ್ಚಿಸಲಷ್ಟೇ ಬಳಸಿಕೊಂಡದ್ದು ಗೊತ್ತಾಗುತ್ತದೆ. ಬೆಟ್ಟಿಂಗ್ ದೃಶ್ಯಗಳು ರಣ ಬೋರಿಂಗ್. ಕ್ಲ್ಯೆಮ್ಯಾಕ್ಸ್ ಅನ್ನು ಹೇಗೆ ಸಮರ್ಥಿಸಿಕೊಳ್ಳಬೇಕೋ ಗೊತ್ತಾಗುವುದಿಲ್ಲ. ಬಹುಶಃ ಪ್ರೇಕ್ಷಕನಿಗಿಂತ ನಿರ್ದೇಶಕನಿಗೇ ಆ ವಿಷಯದಲ್ಲಿ ಹೆಚ್ಚು ಗೊಂದಲವಿರುವಂತಿದೆ.
ಇಷ್ಟೆಲ್ಲದರ ನಡುವೆಯೂ ಒಂದು ವಿಷಯ ಮಾತ್ರ ನನಗೆ ಸಖತ್ ಖುಷಿಕೊಟ್ಟಿತು. ಅದೇನೆಂದರೆ ನಮ್ಮ ನವೀನ್ ಕೃಷ್ಣ ಅವರ ಡಬ್ಬಿಂಗ್. ಹಾಸ್ಯ, ಆಕ್ರೋಶ, ಅಸಹನೆ, ಅಸಹಾಯಕತೆಗಳಿಗೆ ನವೀನ್ ಕೃಷ್ಣ ಅವರು ಅದೆಷ್ಟು ಚಂದ ಧ್ವನಿಯಾಗಿದ್ದಾರೆ ಅಂದ್ರೆ ಅದು ಮಾಧವನ್ ಅಲ್ಲ ಅಂತ ಒಂದು ಕ್ಷಣಕ್ಕೂ ಅನ್ನಿಸಲ್ಲ! ಮಾಧವನ್ ಕನ್ನಡ ಮಾತನಾಡ್ತಿದ್ದಾನೆ ಅಂತಷ್ಟೇ ಅನ್ನಿಸೋದು. ನಟನಟಿಯರ ಅಭಿನಯ, ನವೀನ್ ಕೃಷ್ಣ ಅವರ ಡಬ್ಬಿಂಗ್ ಗಾಗಿ ಒಮ್ಮೆ ನೋಡಬಹುದು.
- ವೀರಕಪುತ್ರ ಶ್ರೀನಿವಾಸ


