Akshay Kumar: ಭಾರತದ ಭೂಪಟಕ್ಕೆ ಅವಮಾನಿಸಿದ್ರಾ ಅಕ್ಷಯ್ ಕುಮಾರ್...ಹೊಸ ಜಾಹೀರಾತಿನ ಬಗ್ಗೆ ನೆಟಿಜನ್ಸ್ ಗರಂ
ವಿದೇಶದಲ್ಲಿ ನಡೆಯುವ ಬಾಲಿವುಡ್ ಕಾರ್ಯಕ್ರಮವೊಂದರ ವಿಡಿಯೋ ತುಣುಕೊಂದನ್ನು ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಅಮೆರಿಕದಲ್ಲಿ ಬಾಲಿವುಡ್ ಕಾರ್ಯಕ್ರಮವೊಂದು ನಡೆಯುತ್ತಿದ್ದು ಆ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮೌನಿ ರಾಯ್, ನೋರಾ ಫತೇಹಿ, ದಿಶಾ ಪಟಾನಿ ಹಾಗೂ ಇನ್ನಿತರರು ಭಾಗವಹಿಸುತ್ತಿದ್ದಾರೆ.
ಕ್ರಿಕೆಟಿಗರು, ಸಿನಿಮಾ ತಾರೆಯರು ಜಾಹೀರಾತಿನ ವಿಚಾರಕ್ಕೆ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಸೆಲೆಬ್ರಿಟಿಗಳು, ಸಾಮಾನ್ಯ ಜನರಿಗೆ ಮಾದರಿಯಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಅವರಿಂದ ಸಮಾಜದ ಹಾದಿ ತಪ್ಪಿಸುವ ಕೆಲಸ ಆಗಬಾರದು ಎನ್ನುವುದು ಜನರ ಅಭಿಪ್ರಾಯ. ಆದರೆ ಕೆಲವೊಮ್ಮೆ ಸೆಲೆಬ್ರಿಟಿಗಳು ನಟಿಸುವ ಜಾಹೀರಾತು ಎಲ್ಲರ ಬೇಸರಕ್ಕೆ ಕಾರಣವಾಗುತ್ತದೆ.
ಕೆಲವು ದಿನಗಳ ಹಿಂದಷ್ಟೇ ನಟ ಯಶ್ ಪೆಪ್ಸಿ ಜಾಹೀರಾತಿನಲ್ಲಿ ನಟಿಸಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದರು. ಅದಕ್ಕೂ ಮುನ್ನ ರಮ್ಮಿ ಜಾಹೀರಾತಿನ ವಿಚಾರವಾಗಿ ಸುದೀಪ್, ತಮನ್ನಾ, ವಿರಾಟ್ ಕೊಹ್ಲಿ ಹಾಗೂ ಇನ್ನಿತರರ ಬಗ್ಗೆ ನೆಟಿಜನ್ಸ್ ಗರಂ ಆಗಿದ್ದರು. ಪಾನ್ ಮಸಾಲ ಜಾಹೀರಾತಿಗಾಗಿ ಶಾರುಖ್ ಖಾನ್ ಹಾಗೂ ಅಜಯ್ ದೇವ್ಗನ್ ಇಬ್ಬರನ್ನೂ ಜನರು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಅದೇ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಇದೀಗ ಹೊಸ ಜಾಹೀರಾತಿನ ವಿಚಾರವಾಗಿ ಮತ್ತೆ ಅಕ್ಷಯ್ ಕುಮಾರ್ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ವಿದೇಶದಲ್ಲಿ ನಡೆಯುವ ಬಾಲಿವುಡ್ ಕಾರ್ಯಕ್ರಮವೊಂದರ ವಿಡಿಯೋ ತುಣುಕೊಂದನ್ನು ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಅಮೆರಿಕದಲ್ಲಿ ಬಾಲಿವುಡ್ ಕಾರ್ಯಕ್ರಮವೊಂದು ನಡೆಯುತ್ತಿದ್ದು ಆ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮೌನಿ ರಾಯ್, ನೋರಾ ಫತೇಹಿ, ದಿಶಾ ಪಟಾನಿ ಹಾಗೂ ಇನ್ನಿತರರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮ ನೋಡಲು ಏರ್ ಟಿಕೆಟ್ ಬುಕ್ ಮಾಡಿ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದು ಈ ವಿಡಿಯೋವನ್ನು ಕತಾರ್ ಏರ್‌ವೇರ್‌ಸ್‌ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಈ ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಹಾಗೂ ಇನ್ನಿತರರು ಭಾರತ ಹಾಗೂ ವರ್ಲ್ಡ್ ಗ್ಲೋಬ್ ಮೇಲೆ ನಡೆದಾಡುತ್ತಿರುವಂತೆ ವಿಡಿಯೋ ಸೃಷ್ಟಿಸಲಾಗಿದೆ. ಇದು ನೆಟಿಜನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಷಯ್ ಕುಮಾರ್ ಕೆನಡಿಯನ್ ಪ್ರಜೆ ಎಂದು ಕೇಳಿದ್ದೇನೆ ಅದಕ್ಕಾಗಿ ಅವರು ಭಾರತದ ಮ್ಯಾಪ್ ಮೇಲೆ ನಡೆಯುವುದು ಎಷ್ಟು ಸರಿ..? ಅವರಿಗೆ ಭಾರತದ ಬಗ್ಗೆ ಸ್ವಲ್ಪವೂ ಗೌರವ ಇಲ್ಲವೇ..? ಎಂದು ನೆಟಿಜನ್ಸ್ ಕೇಳುತ್ತಿದ್ದಾರೆ. ಮತ್ತೊಬ್ಬರು, ಅಕ್ಷಯ್ ಕುಮಾರ್ ವಿರುದ್ಧ ಕೇಸ್ ಹಾಕಿ ಎನ್ನುತ್ತಿದ್ದಾರೆ. ಆದರೆ ಇದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ನಿಜವಾಗಿಯೂ ಮ್ಯಾಪ್ ಮೇಲೆ ನಡೆದಾಡಿಲ್ಲ. ಎಡಿಟಿಂಗ್‌ನಲ್ಲಿ ಆ ರೀತಿ ಕ್ರಿಯೇಟ್ ಮಾಡಲಾಗಿದೆ. ಹಾಗೇ ನಾವು ಪ್ರತಿ ದಿನ ಭೂಮಿ ತಾಯಿ ಮೇಲೆ ನಡೆಯುತ್ತೇವೆ. ಅದು ತಪ್ಪಲ್ಲವೇ..? ನಿಮಗೆ ಅಕ್ಷಯ್ ಕುಮಾರ್ ಇಷ್ಟವಿಲ್ಲದಿದ್ದರೆ ಬೇಡ, ಅದರೆ ಎಲ್ಲದರಲ್ಲೂ ತಪ್ಪು ಹುಡುಕಬೇಡಿ ಎಂದಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ವಿವಾದಕ್ಕೆ ಒಳಗಾಗಿತ್ತು ಅಕ್ಷಯ್ ಅಭಿನಯದ 'ರಾಮ್ ಸೇತು' ಸಿನಿಮಾ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ರಾಮ್ ಸೇತು' ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾ ಪೌರಾಣಿಕ ಹಿನ್ನೆಲೆಯುಳ್ಳ ರಾಮ ಸೇತುವೆ ಹಿನ್ನೆಲೆ ಆಧರಿಸಿ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ತಪ್ಪು ಸಂಗತಿಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ರಾಜ್ಯಸಭಾ ಮಾಜಿ ಸಂಸದ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದೆಲ್ಲದಕ್ಕೂ ನಟ ಅಕ್ಷಯ್ ಕುಮಾರ್ ಹಾಗೂ ಚಿತ್ರ ತಂಡವೇ ಕಾರಣ ಎಂದು ದೂರಿದ್ದರು.
"ಮುಂಬೈ ಸಿನಿಮಾ ಮಂದಿಗೆ ಸುಳ್ಳು ಹೇಳುವ ಮತ್ತು ತಪ್ಪು ಮಾಹಿತಿ ನೀಡುವ ಕೆಟ್ಟ ಅಭ್ಯಾಸವಿದೆ. ಹಾಗಾಗಿ ಅವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಲಿಸಲು, ನಾನು ಮತ್ತು ವಕೀಲ ಸತ್ಯ ಸಬರ್ವಾಲ್ ಒಟ್ಟಿಗೆ ಸೇರಿ ಕಾನೂನಾತ್ಮಕ ನೋಟಿಸ್ ಜಾರಿ ಮಾಡಿದ್ದೇವೆ. ನಟ ಅಕ್ಷಯ್ ಕುಮಾರ್ ಮತ್ತು ಅವರ ತಂಡದ 8 ಜನರಿಗೆ ರಾಮಸೇತು ಕಥೆಯನ್ನು ವಿರೂಪಗೊಳಿಸಿದ್ದಕ್ಕಾಗಿ ನೋಟಿಸ್ ಕಳುಹಿಸಲಾಗಿದೆ" ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.