ಮೇ 30ರಂದು ನಟ ಕೋಮಲ್ ಅಭಿನಯದ ಹೊಸ ಸಿನಿಮಾ ಬಿಡುಗಡೆ; ಸಿನಿಮಾದ ಭಾಷೆ ಕನ್ನಡವಲ್ಲ
ಕೋಮಲ್ ಅಭಿನಯದ ‘ಯಲಾ ಕುನ್ನಿ’ ಕಳೆದ ವರ್ಷ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡದೇ ಮಾಯವಾಯಿತು. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಅವರ ಚಿತ್ರವೊಂದು ಮೇ 30ರಂದು ಬಿಡುಗಡೆಯಾಗುತ್ತಿದೆ. ಹಾಗಂತ ಇದು ಕನ್ನಡ ಚಿತ್ರವಲ್ಲ. (ವರದಿ: ಚೇತನ್ ನಾಡಗೇರ್)

ಕೋಮಲ್ ಅಭಿನಯದ ‘ಯಲಾ ಕುನ್ನಿ’ ಕಳೆದ ವರ್ಷ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡದೇ ಮಾಯವಾಯಿತು. ಆ ನಂತರ ಅವರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಅವರ ಚಿತ್ರವೊಂದು ಮೇ 30ರಂದು ಬಿಡುಗಡೆಯಾಗುತ್ತಿದೆ. ಹಾಗಂತ ಇದು ಕನ್ನಡ ಚಿತ್ರವಲ್ಲ, ತಮಿಳು ಚಿತ್ರ ಎಂಬುದು ಗೊತ್ತಿರಲಿ.
ಒಂದು ವರ್ಷದ ಹಿಂದೆ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಕೋಮಲ್ ಹೇಳಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಮಿಳಿನ ಜನಪ್ರಿಯ ನಟು ಪ್ರಭು ಅವರೊಂದಿಗಿನ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಇದೀಗ ಬಿಡುಗಡೆ ಆಗುತ್ತಿರುವುದೇ ಅದೇ ಚಿತ್ರ. ಹೆಸರು ‘ರಾಜಪುತ್ರನ್’.
‘ರಾಜಪುತ್ರನ್’ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಟ್ರೇಲರ್‌ನಲ್ಲಿ ಕೋಮಲ್ ಅವರನ್ನು ಸಹ ನೋಡಬಹುದು. ಬಾಯಲ್ಲಿ ಸಿಗಾರ್ ಹಚ್ಚಿಕೊಮಡು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಎಂಟ್ರಿ ಕೊಡುವ ದೃಶ್ಯವು ಟ್ರೇಲರ್‌ನಲ್ಲಿದೆ. ಈ ಚಿತ್ರದಲ್ಲಿ ಅವರ ಪಾತ್ರವೇನು? ಹೆಸರೇನು? ಮುಂತಾದ ವಿಷಯಗಳು ಇನ್ನೂ ಬಹಿರಂಗವಾಗಿಲ್ಲ.
ಈ ಚಿತ್ರದಲ್ಲಿ ಹಿರಿಯ ನಟ ಪ್ರಭು ಜೊತೆಗೆ ವೆಟ್ರಿ, ಕೃಷ್ಣಪ್ರಿಯಾ, ಮನ್ಸೂರ್ ಅಲಿ ಖಾನ್ ಮುಂತಾದವರು ನಟಿಸಿದ್ದು, ಮಹಾಕಂದನ್ ನಿರ್ದೇಶನ ಮಾಡಿದ್ದಾರೆ. ಕೆ.ಎಂ. ಷಫಿ ನಿರ್ಮಾಣ ಮಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಚಿತ್ರವು ತಮಿಳುನಾಡಿನಾದ್ಯಂತ ಮೇ 30ರಂದು ಬಿಡುಗಡೆಯಾಗಲಿದೆ.
ಕೋಮಲ್ ಇದಕ್ಕೂ ಮುನ್ನ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದರು. 2014ರಲ್ಲಿ ಬಿಡುಗಡೆಯಾಗಿದ್ದ ‘ಐಂದಾಂ ತಲೈಪಮುರೈ ಸಿದ್ಧ ವೈದ್ಯ ಶಿಖಾಮಣಿ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದರು. ಭರತ್, ನಂದಿತಾ ಶ್ವೇತಾ ಮುಂತಾದವರು ಅಭಿನಯಿಸಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು. ಈಗ 11 ವರ್ಷಗಳ ನಂತರ ಕೋಮಲ್ ಅಭಿನಯದ ಇನ್ನೊಂದು ತಮಿಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ.
ಕನ್ನಡದ ವಿಷಯದಲ್ಲಿ ಹೇಳುವುದಾದರೆ, ಕೋಮಲ್ ಅಭಿನಯದ ನಾಲ್ಕು ಚಿತ್ರಗಳಿವೆ. ‘ಕೋಣ’, ‘ಕುಟೀರ’, ‘ರೋಲೆಕ್ಸ್’ ಮತ್ತು ‘ಕಾಲಾಯ ನಮಃ’ ಚಿತ್ರಗಳಲ್ಲಿ ಅವರು ನಟಿಸಿದ್ದು, ಈ ಚಿತ್ರಗಳು ಬಿಡುಗಡೆ ಆಗಬೇಕಿವೆ. ಏಳು ತಿಂಗಳಿನಿಂದ ಕೋಮಲ್ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿಲ್ಲ. ಹರಿಬರಿಯಲ್ಲಿ ಬಿಡುಗಡೆಯಾದ ‘ಎಲಾ ಕುನ್ನಿ’ ಸಹ ಚಿತ್ರಮಂದಿರಗಳಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.
ಹೀಗಿರುವಾಗಲೇ, ಕೋಮಲ್ ಅಭಿನಯದ ತಮಿಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅಭಿಮಾನಿಗಳು ಸದ್ಯ ತಮಿಳು ಚಿತ್ರದಲ್ಲೇ ಕೋಮಲ್ ಅವರನ್ನು ಕಣ್ತುಂಬಿಕೊಳ್ಳಬಹುದು. (ವರದಿ: ಚೇತನ್ ನಾಡಗೇರ್)