ಎಲ್ಲರೂ ಕೇಳ್ತಿರೋ ಈ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇಲ್ಲ; ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ಸ್ನೇಹಾ ಪಾತ್ರಧಾರಿ ನಟಿ ಅಪೂರ್ವ ನಾಗರಾಜ್
Puttakkana Makkalu Serial: ಆರೂರು ಜಗದೀಶ್ ನಿರ್ದೇಶನದ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಹಳೇ ಸ್ನೇಹಾ ಪಾತ್ರ ಅಂತ್ಯವಾಗಿದೆ. ಆದರೂ ಕೂಡ ಇನ್ನೊಂದು ಸ್ನೇಹಾ ಪಾತ್ರ ಎಂಟ್ರಿ ಆಗಿದೆ. ಈ ಸ್ನೇಹಾ ಪಾತ್ರಕ್ಕೆ ನಟಿ ಅಪೂರ್ವ ನಾಗರಾಜ್ ಅವರು ಬಣ್ಣ ಹಚ್ಚಿದ್ದಾರೆ. ಈ ಸೀರಿಯಲ್ ಬಗ್ಗೆ ಅಪೂರ್ವ ಹೇಳುವುದೇನು? - ಸಂದರ್ಶನ ಪದ್ಮಶ್ರೀ ಭಟ್
Puttakkana Makkalu Apoorva Nagaraj Interview: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಸ್ನೇಹಾಳ ಎಂಟ್ರಿ ಆಗಿದೆ. ಸ್ನೇಹಾ ಪಾತ್ರದಲ್ಲಿ ಅಪೂರ್ವ ನಾಗರಾಜ್ ಅವರು ಅಭಿನಯಿಸುತ್ತಿದ್ದಾರೆ. ಹಳೇ ಸ್ನೇಹಾ ಪಾತ್ರ ಅಂತ್ಯ ಆಗಿದ್ದು, ಅದಕ್ಕೆ ರಿಪ್ಲೇಸ್‌ಮೆಂಟ್ ಎನ್ನುವಂತೆ ಹೊಸ ಸ್ನೇಹಾ ಪಾತ್ರ ಎಂಟ್ರಿ ಆಗಿದೆ ಎಂದು ಕೆಲವರು ಅಂದುಕೊಂಡಿದ್ದಾರಂತೆ. ಈ ಗೊಂದಲಗಳಿಗೆ ನಟಿ ಅಪೂರ್ವ ನಾಗರಾಜ್ ಅವರು ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
- ಹೊಸ ಸ್ನೇಹಾ ಆಗಿ ಕಾಣಿಸಿಕೊಳ್ತಿದ್ದೀರಿ, ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ?
ನನ್ನ ಪಾತ್ರ ರಿಪ್ಲೇಸ್‌ಮೆಂಟ್ ಅಂತ ಕೆಲವರು ಅಂದುಕೊಂಡಿದ್ದಾರೆ. ಹಳೇ ಸ್ನೇಹಾ ಇದ್ದಾಗಲೇ ನನ್ನ ಪಾತ್ರ ಶುರು ಆಗಿತ್ತು. ಹಾಗಾಗಿ ಅದು ರಿಪ್ಲೇಸ್‌ಮೆಂಟ್ ಅಲ್ಲ. ಈ ಸ್ನೇಹಾಗೆ ಅಪ್ಪ ಬಿಟ್ಟರೆ ಬೇರೆ ಜಗತ್ತು ಇಲ್ಲ. ಯಾರ ಬಳಿಯೂ ಕತ್ತು ಎತ್ತಿ ಮಾತಾಡೋ ಧೈರ್ಯ ಕೂಡ ಇಲ್ಲ ನನಗೆ. ಎಲ್ಲಿಂದಲೂ ಓಡಿ ಬಂದಿದ್ದೀನಿ, ಹೆದರಿಕೊಂಡಿದ್ದೀನಿ, ಯಾರು ಏನೋ ಮಾಡಿಬಿಡ್ತಾರೆ ಎನ್ನೋ ಭಯದಲ್ಲಿ ಇದ್ದೀನಿ ಅನ್ನೋ ಥರದಲ್ಲಿ ಪಾತ್ರ ಸಿಗ್ತಿದೆ. ಹಳೇ ಸ್ನೇಹಾದಷ್ಟು ಧೈರ್ಯವಂತೆ ಈ ಸ್ನೇಹಾ ಅಲ್ಲ.
- ಒಂದು ಜೋಡಿಗೆ ಇನ್ನೋರ್ವ ಸಂಗಾತಿ ಬಂದರೆ ವೀಕ್ಷಕರಿಗೆ ಇಷ್ಟ ಆಗೋದಿಲ್ಲ. ನಿಮ್ಮ ಅಭಿಪ್ರಾಯ ಏನು?
ಒಂದು ಐಕಾನಿಕ್ ಜೋಡಿ ಬದಲಾದರೆ ಪ್ರೇಕ್ಷಕಳಾಗಿ ನನಗೂ ಕೂಡ ಬೇಸರ ಆಗುತ್ತದೆ. ಇವರ ಥರ ಇರಬೇಕು ಅಂತ ತಲೆಯಲ್ಲಿ ಕೂತಿರುತ್ತದೆ. ಒಂದು ಪಾತ್ರಧಾರಿ ಬದಲು ಬೇರೆಯವರು ಬಂದರೆ ಬೇಸರ ಆಗುತ್ತದೆ. ಇದು ಕಾಮನ್. ಹಳೇ ಪಾತ್ರದ ಹೆಸರು ಸ್ನೇಹಾ, ನಿಮ್ಮ ಪಾತ್ರದ ಹೆಸರು ಕೂಡ ಸ್ನೇಹಾ. ಹೀಗಾಗಿ ಇದು ರಿಪ್ಲೇಸ್‌ಮೆಂಟ್ ಎನ್ನುವ ಭಾವನೆ. ಕಂಠಿಗೂ ನಿಮಗೂ ಮದುವೆ ಆಗಬಾರದು ಅಂತಲೂ ವೀಕ್ಷಕರು ಬಯಸುತಿದ್ದಾರೆ. ಕಥೆಯಲ್ಲಿ ಆ ರೂಪ ಬಂದಿಲ್ಲ. ಸ್ನೇಹಾ ಅಕ್ಳನ ಗಂಡ ಕಂಠಿ, ಕಂಠಿ ತುಂಬ ನೋವಿನಿಂದ ಇದ್ದಾರೆ, ಸ್ನೇಹಾ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಕಂಠಿ ಏನಾದರೂ ಮಾಡಿಕೊಳ್ತಾರಾ ಎಂಬ ಕಾಳಜಿ ಇದೆಯೇ ಹೊರತು, ಅದನ್ನು ಬಿಟ್ಟು ಬೇರೆ ಯಾವ ಭಾವವೂ ಇಲ್ಲ.
- ನಂ 1 ಸ್ಥಾನದಲ್ಲಿರುವ ಧಾರಾವಾಹಿಯಲ್ಲಿ ಎಲ್ಲ ಪಾತ್ರಗಳಿಗೂ ಒಳ್ಳೆಯ ಹೆಸರು ಸಿಕ್ಕಿದೆ, ಜನರು ಗುರುತಿಸುತ್ತಾರೆ. ಈಗ ನೀವು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದೀರಿ.
ಪ್ರೊಡಕ್ಷನ್ ಹೌಸ್, ಒಳ್ಳೆಯ ಧಾರಾವಾಹಿ ಎಂದು ನನಗೆ ಮೊದಲೇ ಅಭಿಪ್ರಾಯ ಇತ್ತು. ಆಡಿಷನ್‌ಗೆ ತುಂಬ ಜನರು ಬಂದಿದ್ದರು. ಆರೂರು ಜಗದೀಶ್ ಅವರೇ ಅಲ್ಲಿದ್ದು ನಾನು ಮಾಡಿದ ತಪ್ಪುಗಳನ್ನು ತಿದ್ದುತ್ತಿದ್ದರು. ಕೆಲಸ ಮಾಡಿದ್ರೆ ಈ ಥರ ಡೈರೆಕ್ಟರ್ ಜೊತೆ ಕೆಲಸ ಮಾಡಬೇಕು ಎಂದು ಅನಿಸಿತ್ತು. ಇನ್ನು ಉಮಾಶ್ರೀ ಅವರ ಜೊತೆ ನಟಿಸಬೇಕು ಎಂದರೆ ಆ ಯೋಗ್ಯತೆ ಇರಬೇಕು. ಇದೆಲ್ಲವೂ ನನ್ನ ತಲೆಯಲ್ಲಿತ್ತು. ಇನ್ನು ನಾನು ಸಂಪೂರ್ಣವಾಗಿ ಸೀರಿಯಲ್‌ಗೆ ಅಡ್ಜಸ್ಟ್ ಆಗಿದೀನಿ ಅಂತ ಹೇಳೋಕೆ ಆಗೋದಿಲ್ಲ. ಸೀರಿಯಲ್ ಶೂಟಿಂಗ್ ನಡೆಯುವಾಗ ನಾನು ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎನ್ನೋದು ಗೊತ್ತಾಗತ್ತೆ, ಆಮೇಲೆ ಸೀರಿಯಲ್‌ನಲ್ಲಿ ನಟಿಸ್ತಿದ್ದೀನಿ ಎನ್ನೋದು ಮರೆತು ಹೋಗತ್ತೆ. ನಾನಿನ್ನೂ ನೋಟ್ಸ್ ಮಾಡಿಕೊಂಡು ಕಲಿಯುವ ಪ್ರಯತ್ನದಲ್ಲಿದ್ದೇನೆ.
- ವೀಕ್ಷಕರ ಪ್ರತಿಕ್ರಿಯೆ ಏನು?
ನನ್ನ ನಟನೆ ಚೆನ್ನಾಗಿದೆ ಎಂದು ಮೆಸೇಜ್ ಬರ್ತಿದೆ. ಕಂಠಿಗೆ ಜೋಡಿಯಾಗಿ ಬರ್ತೀರಾ ಅಂತ ಕೇಳುತ್ತಿದ್ದಾರೆ. ಈ ಹೊಸ ಸ್ನೇಹಾ ಕಂಠಿಗೆ ಜೋಡಿಯಾಗಿ ಬರ್ತಾಳೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಹೀಗಾಗಿ ಏನಾಗತ್ತೆ ಅಂತ ಕಾದು ನೋಡಬೇಕಾಗಿದೆ.
ಸಂದರ್ಶನ- ಪದ್ಮಶ್ರೀ ಭಟ್
ವಿಭಾಗ