Chetan Ahimsa: ನೂತನ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಖಾಸಗಿ ಫೋಟೋ ವೈರಲ್; ಪ್ರತಿಸ್ಪರ್ಧಿಗಳ ಕುತಂತ್ರ ಟೀಕಿಸಿದ ನಟ ಚೇತನ್ ಅಹಿಂಸಾ
ನೂತನ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಫೋಟೋ ವೈರಲ್ ವಿಚಾರವಾಗಿ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
Chetan Ahimsa: ಸ್ಯಾಂಡಲ್‌ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನಿತ್ಯ ಒಂದಲ್ಲ ಒಂದು ವಿಷಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ತಮಗನಿಸಿದ್ದನ್ನು ಯಾವುದೇ ಮುಜುಗರಕ್ಕೆ ಒಳಗಾಗದೇ ನೇರವಾಗಿ ಹೇಳುತ್ತಾರೆ. ಸಿನಿಮಾ, ರಾಜಕೀಯ, ಸಾಮಾಜಿಕ ಹೀಗೆ ಎಲ್ಲದರ ಬಗ್ಗೆಯೂ ಕಮೆಂಟ್ ಮಾಡುತ್ತಲೇ ಇರುತ್ತಾರೆ. ಆ ಹೇಳಿಕೆ ಮೂಲಕ ಪರ ವಿರೋಧ ಚರ್ಚೆಯನ್ನೂ ಹುಟ್ಟುಹಾಕುತ್ತಿರುತ್ತಾರೆ. ಇದೀಗ ನೂತನವಾಗಿ ಚುನಾಯಿತರಾದ ಚಿಕ್ಕಮಗಳೂರಿನ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಬಗ್ಗೆ ಮಾತನಾಡಿದ್ದಾರೆ.
ಶಾಸಕಿ ನಯನ ಮೋಟಮ್ಮ ಕಾಂಗ್ರೆಸ್‌ನ ಹಿರಿಯ ಶಾಸಕಿ ಮೋಟಮ್ಮ ಅವರ ಮಗಳು. ಈ ನಯನಾ ಚುನಾವಣೆಗೂ ಮುನ್ನ ಸುದ್ದಿಯಾಗಿದ್ದು ಅವರ ಖಾಸಗಿ ಫೋಟೋಗಳ ಮೂಲಕ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಫೋಟೋಗಳನ್ನೇ ಬಂಡವಾಳವಾಗಿಸಿಕೊಂಡು ಪ್ರತಿಸ್ಪರ್ಧಿಗಳು ಪ್ರಚಾರ ಮಾಡಿದ ಉದಾಹರಣೆಯೂ ಇದೆ. ಇದಕ್ಕೆ ಸಂಬಂಧಿಸಿದಂತೆ ಸ್ವತಃ ನಯನಾ ಅವರೇ ಆ ಫೋಟೋಗಳ ವಿಡಿಯೋ ತುಣುಕನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು ಹೀಗೆ ಬರೆದುಕೊಂಡಿದ್ದರು.
"ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು... ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು" ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು. ಮಹಿಳೆಯ ಬಗ್ಗೆ ಹೀಗೆ ತುಚ್ಯ ರೀತಿಯಲ್ಲಿ ವರ್ತಿಸಿದ ರೀತಿಯನ್ನು ಖಂಡಿಸಿರುವ ಚೇತನ್ ಅಹಿಂಸಾ, ನಯನಾ ಮೋಟಮ್ಮ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಚೇತನ್ ಅಹಿಂಸಾ ಹೇಳಿದ್ದೇನು?
ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ.
ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ಬಲಿಪಶುಳಾಗುತ್ತಿದ್ದಾರೆ ಮತ್ತು ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ
ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಚೇತನ್ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಚೇತನ್ ಬೇಡಿಕೆ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಟ್ವಿಟ್ ಮಾಡಿದ ಚೇತನ್, ಗೋಹತ್ಯೆ ಮಸೂದೆ, ಜಾತಿ ಗಣತಿ, ಎಸ್ಟಿ ಮೀಸಲಾತಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪ್ರನಾಳಿಕೆಯಲ್ಲಿ ಹೇಳಿಕೊಂಡಿದ್ದ ಎಲ್ಲ 5 ಚುನಾವಣಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
1. ಎಲ್ಲಾ 5 ಚುನಾವಣಾ ಯೋಜನೆಗಳನ್ನು ಜಾರಿಗೊಳಿಸಬೇಕು
2. ಗೋಹತ್ಯೆ ವಿರೋಧಿ ಮಸೂದೆ & ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕಬೇಕು; 4% ಮುಸ್ಲಿಂ OBC ಮೀಸಲಾತಿಯನ್ನು ಮರುಸ್ಥಾಪಿಸಬೇಕು
3. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು/ಹೊರಗೆ ತರಬೇಕು
4. ಎಸ್ಟಿ (ST) ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು (ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು
ಹೀಗೆ ಈ ನಾಲ್ಕು ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದರು.