Freedom At Midnight: ದೇಶದ ವಿಭಜನೆಯ ಸಮಯದಲ್ಲಿ ಏನಾಯಿತು? ಐತಿಹಾಸಿಕ ವೆಬ್‌ಸರಣಿ ಫ್ರೀಡಂ ಅಟ್ ಮಿಡ್‌ನೈಟ್ ಟ್ರೇಲರ್ ಬಿಡುಗಡೆ
Freedom at Midnight Web Series OTT Release: ದೇಶದ ವಿಭಜನೆಯ ಸಮಯದಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಆಸಕ್ತಿದಾಯಕ ಫ್ರೀಡಂ ಅಟ್ ಮಿಡ್‌ನೈಟ್ ವೆಬ್ ಸರಣಿಯ ಒಟಿಟಿ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ವಿಶೇಷ ಏನೆಂದರೆ ಕನ್ನಡದಲ್ಲಿಯೂ ಈ ಸಿರೀಸ್ ಬಿಡುಗಡೆ ಆಗಲಿದೆ.
Freedom at Midnight Web Series: ಸ್ವಾತಂತ್ರ್ಯ ನಂತರ ಮತ್ತು ಸ್ವಾತಂತ್ರ್ಯ ಪೂರ್ವದ ಇತಿಹಾಸ ಘಟನೆಗಳ ಹಿನ್ನೆಲೆಯಲ್ಲಿ ಮೂಡಿಬಂದ ಫ್ರೀಡಂ ಅಟ್ ಮಿಡ್‌ನೈಟ್ (Freedom At Midnight) ವೆಬ್‌ಸಿರೀಸ್‌ನ ಟ್ರೇಲರ್ ಬಿಡುಗಡೆ ಆಗಿದೆ. ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸಿರೀಸ್ ಮೇಲೆ ಸಾಕಷ್ಟು ಜನರ ಕಣ್ಣಿದೆ. ಅದಕ್ಕೆ ಕಾರಣ; ಈ ಸಿರೀಸ್‌ನಲ್ಲಿ ನಿರ್ದೇಶಕರು ಹೇಳಹೊರಟಿರುವ ಕಥೆ.
ದೇಶದ ವಿಭಜನೆಗೆ ಕಾರಣ ಯಾರು? ಗಾಂಧಿ ಮತ್ತು ಸರ್ದಾರ್ ನಡುವಿನ ಸಂಘರ್ಷವೇನು? ಮೊದಲ ಪ್ರಧಾನಿ ಹುದ್ದೆಯ ಕೊನೆಯ ಕ್ಷಣದಲ್ಲಿ ಏಕೆ ಕೈ ಬದಲಾಯಿಸಿತು? ಇದೇ ಥೀಮ್ ಹೊಂದಿರುವ ಫ್ರೀಡಂ ಅಟ್ ಮಿಡ್ ನೈಟ್ ವೆಬ್ ಸರಣಿ ಸೋನಿಲೈವ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಸರಣಿಯು ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿ ಒಟ್ಟು ಆರು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿಲಿದೆ.
ಫ್ರೀಡಂ ಅಟ್ ಮಿಡ್ ನೈಟ್ ಒಟಿಟಿ ಬಿಡುಗಡೆ ದಿನಾಂಕ
ಕಳೆದ ಕೆಲ ತಿಂಗಳಿಂದ ಫ್ರೀಡಂ ಅಟ್ ಮಿಡ್ ನೈಟ್ ವೆಬ್ ಸರಣಿಯ ಪ್ರಚಾರ ಮಾಡುತ್ತಿದೆ ಸೋನಿಲೈವ್. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಎರಡು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ, ಅದು ಕಾರಣಾಂತರಗಳಿಂದ ಮುಂದೆ ಹೋಯಿತು. ಈಗ ಈ ಸರಣಿಯ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 15 ರಂದು ಸೋನಿಲೈವ್ ಒಟಿಟಿಯಲ್ಲಿ ಸಿರೀಸ್ ಪ್ರಸಾರವಾಗಲಿದೆ. ಅದಕ್ಕೂ ಮೊದಲು ಇಂದು (ನ. 4) ಟ್ರೇಲರ್ ರಿಲೀಸ್ ಆಗಿದೆ.
"ನಿಮಗೆ ಗೊತ್ತಿಲ್ಲದ ಇತಿಹಾಸ. ನೀವು ತಿಳಿದುಕೊಳ್ಳಬೇಕಾದ ಇತಿಹಾಸ. ಇದು ಭಾರತದ ಸ್ವಾತಂತ್ರ್ಯದ ಬಗ್ಗೆ ಆಸಕ್ತಿದಾಯಕ ಕಥೆಯ ಮೂರನೇ ಡ್ರಾಪ್. ಫ್ರೀಡಂ ಅಟ್ ಮಿಡ್ನೈಟ್ ನವೆಂಬರ್ 15 ರಿಂದ ಸೋನಿಲೈವ್ನಲ್ಲಿ ಪ್ರಸಾರವಾಗಲಿದೆ" ಎಂದು ಕನ್ನಡದಲ್ಲಿಯೇ ಈ ವೆಬ್‌ಸಿರೀಸ್‌ನ ಟ್ರೇಲರ್ ಅನ್ನು ಹಂಚಿಕೊಂಡಿದೆ ಸೋನಿಲೈವ್. ಜತೆಗೆ ಸ್ಟ್ರೀಮಿಂಗ್ ದಿನಾಂಕವೂ ಬಹಿರಂಗವಾಗಿದೆ.
ಫ್ರೀಡಂ ಅಟ್ ಮಿಡ್ನೈಟ್ ಡ್ರಾಪ್ 1 ಟ್ರೇಲರ್‌ನಲ್ಲಿ ಏನಿದೆ?
ಜವಾಹರ್ ಲಾಲ್ ನೆಹರು ಹೇಗೆ ದೇಶದ ಮೊದಲ ಪ್ರಧಾನಿಯಾದರು ಎಂಬುದನ್ನು ಈ ಟ್ರೇಲರ್ ಹೇಳುತ್ತದೆ. ವೀಡಿಯೊದ ಆರಂಭದಲ್ಲಿ, ಮೌಲಾನ ಅಬ್ದುಲ್ ಕಲಾಂ ಆಜಾದ್ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾರೆ. ಕಾಂಗ್ರೆಸ್‌ನ ಭವಿಷ್ಯದ ಅಧ್ಯಕ್ಷರೇ ದೇಶದ ಮೊದಲ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳುತ್ತಾರೆ. ಆಗ ಪಟೇಲರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂದಿನ ಪ್ರಧಾನಿ ಎಂದು ಆಜಾದ್ ಘೋಷಣೆ ಮಾಡುತ್ತಿದ್ದಂತೆ, ಅವರಿಗೆ ಎಲ್ಲರೂ ಬೆಂಬಲ ಸೂಚಿಸುತ್ತಾರೆ. ಇತರ ಎಲ್ಲ ಸದಸ್ಯರು ಚಪ್ಪಾಳೆಯೊಂದಿಗೆ ಅದನ್ನು ಅನುಮೋದಿಸುತ್ತಾರೆ. ಸ್ವತಃ ನೆಹರೂ ಹಸ್ತಲಾಘವ ಮಾಡಿ ಶುಭ ಕೋರುತ್ತಾರೆ.
ಆದರೆ ಅದೇ ಕ್ಷಣದಲ್ಲಿ, ಮಹಾತ್ಮ ಗಾಂಧಿ ಸಭೆಯ ಅಂಗಳ ಪ್ರವೇಶಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಸರ್ದಾರ್ ಬೇಕು, ಆದರೆ ದೇಶಕ್ಕೆ ಜವಾಹರ್ ಬೇಕು ಎಂದು ಹೇಳುತ್ತಾರೆ. ಸರ್ದಾರ್ ವಲ್ಲಭಬಾಯಿ ಪಟೇಲರ ಕೈಗೆ ನಾಮಪತ್ರ ಹಿಂಪಡೆಯುವ ಪತ್ರ ನೀಡುತ್ತಾರೆ ಗಾಂಧೀಜಿ. ಗಾಂಧೀಜಿ ಮಾತಿಗೆ ಸಹಮತಿಸಿ, ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯುತ್ತಾರೆ. ಅಲ್ಲಿಗೆ ನೆಹರೂ ದೇಶದ ಮೊದಲ ಪ್ರಧಾನಿಯಾಗಿ ಗಾಂಧೀಜಿಯೇ ಘೋಷಿಸುತ್ತಾರೆ. ನೆಹರೂ ಪ್ರಧಾನಿಯಾಗಲು ಗಾಂಧಿ ಅವರ ಪಾತ್ರವೇ ದೊಡ್ಡದಿತ್ತು ಎಂಬುದನ್ನು ಬಿಡುಗಡೆಯಾದ ಟ್ರೇಲರ್‌ನಲ್ಲಿ ಕಾಣಬಹುದಾಗಿದೆ.