Anshu Movie Review: ಮನೋವ್ಯಾದಿಯಿಂದ ಕಸುವು ಕಳೆದುಕೊಂಡವಳ ಕಥೆ ಈ ‘ಅಂಶು’; ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶು ಚಿತ್ರ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Anshu Movie Review: ಮನೋವ್ಯಾದಿಯಿಂದ ಕಸುವು ಕಳೆದುಕೊಂಡವಳ ಕಥೆ ಈ ‘ಅಂಶು’; ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶು ಚಿತ್ರ ವಿಮರ್ಶೆ

Anshu Movie Review: ಮನೋವ್ಯಾದಿಯಿಂದ ಕಸುವು ಕಳೆದುಕೊಂಡವಳ ಕಥೆ ಈ ‘ಅಂಶು’; ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶು ಚಿತ್ರ ವಿಮರ್ಶೆ

ಒಂದು ಹೆಣ್ಣು ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಅತ್ಯಂತ ಕ್ಲಿಷ್ಟ ಸ್ಥಿತಿ ಮತ್ತು ನೋವುಗಳು ಯಾವವು? ಆ ವಿಷಯಗಳನ್ನೇ ಇಲ್ಲಿ ನಿರ್ದೇಶಕರು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಮಾನಸಿಕ ತೊಳಲಾಟದ ಸುತ್ತ ಸಾಗುವ ಅಂಶು, ಕ್ಷಣ ಕ್ಷಣಕ್ಕೂ ನೋಡುಗನ ಎದೆಬಡಿತ ಹೆಚ್ಚಿಸುತ್ತದೆ.

ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶು ಚಿತ್ರ ವಿಮರ್ಶೆ
ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶು ಚಿತ್ರ ವಿಮರ್ಶೆ

Anshu Movie Review: ಅಂಶು ಸಿನಿಮಾ ಕೇವಲ ಒಂದು ಸಿನಿಮಾವಾಗಿ ರೂಪುಗೊಂಡಿಲ್ಲ. ಬದಲಿಗೆ ಕನ್ನಡದಲ್ಲೊಂದು ಹೊಸ ಪ್ರಯೋಗಕ್ಕೆ ಹಿಡಿದ ಕನ್ನಡಿಯಂತೆ ಕಂಡಿದೆ. ನೋಡುಗನ ಭಾವವನ್ನು ಕೆಣಕುತ್ತ, ವಿಚಲಿತಗೊಳಿಸುತ್ತ, ಯೋಚನೆಗೆ ವಾಲಿಸುತ್ತ ನಿಮ್ಮನ್ನು ದಿಟ್ಟಿಸಿ ನೋಡಿಸಿಕೊಂಡು ಹೋಗುವ ಗಟ್ಟಿತನ ಈ ಚಿತ್ರಕ್ಕಿದೆ. ಚೂರು ಆಚಿಚೆ ನೋಡುಗನ ಚಿತ್ತ ಹರಿದರೂ, ಸಿನಿಮಾ ವೀಕ್ಷಣೆಯ ಲಯ ತಪ್ಪುವ ಸಾಧ್ಯತೆಯೂ ದಟ್ಟವಾಗಿ ಕಾಣಿಸುತ್ತದೆ. ಅಷ್ಟೊಂದು ಸೂಕ್ಷ್ಮ ಹೆಣಿಗೆ ಈ ಚಿತ್ರದ್ದು. ಒಂದೇ ಪಾತ್ರದ ಜೊತೆಗೆ ಅಂಶು ಸಿನಿಮಾ ಕಟ್ಟುವ ನಿರ್ದೇಶಕರ ಶ್ರಮವೂ ಇಲ್ಲಿ ದೊಡ್ಡದು.

ಸೈಕಲಾಜಿಕಲ್‌ ಥ್ರಿಲ್ಲರ್‌ ಸಾಲಿಗೆ ಸೇರುವ ಅಂಶು ಚಿತ್ರದಲ್ಲಿ ಕಾಣಿಸುವುದು ಕೇವಲ ಒಂದೇ ಪಾತ್ರ. ಹಾಗಂತ ಬೇರೆ ಪಾತ್ರಗಳಿಲ್ಲವೇ? ಇವೆ. ಆದರೆ ಅವು ಕೇವಲ ಧ್ವನಿಗಷ್ಟೇ, ಅಸ್ಪಷ್ಟ ಮುಖಗಳಿಗಷ್ಟೇ ಸೀಮಿತ. ಇಡೀ ಸಿನಿಮಾದಲ್ಲಿ ನಿಶಾ ರವಿಕೃಷ್ಣನ್‌ ಒಬ್ಬರೇ ಕಾಣಿಸುತ್ತಾರೆ. ಇಡೀ ಸಿನಿಮಾದ ಕೇಂದ್ರಬಿಂದುವೇ ಅವರು. ಹಾಗಾಗಿ ಇತರ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕನ್ನಡದಲ್ಲಿ ಇದೊಂದು ಹೊಸ ಪ್ರಯೋಗ. ಆ ಹೊಸ ಪ್ರಯೋಗವನ್ನು ನಿರ್ದೇಶಕ ಎಂ.ಸಿ ಚನ್ನಕೇಶವ ಅಷ್ಟೇ ಬಿಗಿಯಾಗಿಯೇ ಕಟ್ಟಿಕೊಟ್ಟಿದ್ದಾರೆ.

ಒಂದು ಹೆಣ್ಣು ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಅತ್ಯಂತ ಕ್ಲಿಷ್ಟ ಸ್ಥಿತಿ ಮತ್ತು ನೋವುಗಳು ಯಾವವು? ಆ ವಿಷಯಗಳನ್ನೇ ಇಲ್ಲಿ ನಿರ್ದೇಶಕರು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಮಾನಸಿಕ ತೊಳಲಾಟದ ಸುತ್ತ ಸಾಗುವ ಅಂಶು, ಕ್ಷಣ ಕ್ಷಣಕ್ಕೂ ನೋಡುಗನ ಎದೆಬಡಿತ ಹೆಚ್ಚಿಸುತ್ತದೆ. ಏನಾಗಲಿದೆ? ಎಂಬ ಪ್ರಶ್ನೆಯನ್ನು ಪದೇ ಪದೆ ಹುಟ್ಟುಹಾಕುತ್ತದೆ. ಊಹೆಗೆ ಅವಕಾಶ ಕೊಡದೆ, ವಾಸ್ತವದಲ್ಲಿ ಏನಾಗ್ತಿದೆ ಎಂಬುದನ್ನು ಮಾತ್ರ ಹೇಳುತ್ತ ಸಾಗುವ ಅಂಶು, ಮುಂದೇನಾಗಲಿದೆ ಎಂಬ ಸಣ್ಣ ಸುಳಿವನ್ನೂ ಪ್ರೇಕ್ಷಕನೆಡೆಗೆ ದಾಟಿಸುವುದಿಲ್ಲ.

ಹಾಗಾದರೆ ಏನಿದು ಸಿನಿಮಾ?

ಅಂಶು ಸಿನಿಮಾ ಒಂದು ಮನೋವ್ಯಾದಿಗೆ ತುತ್ತಾದವಳ ಕಥೆ. ಮಾನಸಿಕವಾಗಿ ತನ್ನ ಕಸುವು ಕಳೆದುಕೊಂಡವಳು ಯಾರು ಎಂಬ ಕುತೂಹಲಕ್ಕೆ ಸಿನಿಮಾದ ಕೊನೆಯಲ್ಲಿ ಉತ್ತರ ಸಿಗಲಿದೆ. ಮಹಿಳೆ ಸಮಾಜದಲ್ಲಿ ಎದುರಿಸುವ ಕ್ಲಿಷ್ಟ ಸವಾಲುಗಳು ಮತ್ತು ಅವುಗಳ ಜತೆಗೆ ಆಕೆಯ ಸಂಘರ್ಷದ ಕಥೆ ಈ ಅಂಶು ಮಡಿಲಲ್ಲಿದೆ. ಮಹಿಳೆಯ ವೈಯಕ್ತಿಯ ಬದುಕು, ಸಾಂಸಾರಿಕ ಜೀವನದ ಜತೆಗೆ ಸಾಮಾಜಿಕ ಪಿಡುಗಿನ ಬಗ್ಗೆಯೂ ನಿರ್ದೇಶಕರು ಈ ಸಿನಿಮಾದಲ್ಲಿ ಹೇಳುತ್ತ ಸಾಗಿದ್ದಾರೆ. ಪುರುಷನ ದಬ್ಬಾಳಿಕೆ, ಗಂಡನ ಕಿರುಕುಳ, ಜಾತಿ ವ್ಯವಸ್ಥೆ, ಅತ್ಯಾಚಾರದ ಯಾತನೆ, ಹೆಣ್ಣು ಭ್ರೂಣ ಹತ್ಯೆಯ ನೋವು.. ಇವೆಲ್ಲವುಗಳ ಸುಳಿಗೆ ಸಿಲುಕುವ ಮಹಿಳೆಯ ಮಾನಸಿಕ ನರಳಾಟವವನ್ನೂ ನಿರ್ದೇಶಕರು ಟಚ್‌ ಮಾಡಿದ್ದಾರೆ.

ಸುದೀರ್ಘ ಪಯಣದಂತೆ ಸಾಗುವ ಕಥನ..

ಕೇವಲ 1 ಗಂಟೆ 37 ನಿಮಿಷದ ಚಿತ್ರವಾದರೂ, ಸುದೀರ್ಘ ಹಾದಿಯಂತೆ ಈ ಸಿನಿಮಾ ಸಾಗುತ್ತದೆ. ಅದಕ್ಕೆ ಕಾರಣ; ಸಿನಿಮಾದಲ್ಲಿ ಕಾಣಿಸುವ ಒಂದೇ ಪಾತ್ರ. ಕಥೆ ಕರೆದುಕೊಂಡು ಹೋಗುವ ರೀತಿಯೂ ನೋಡುಗನ ತಾಳ್ಮೆ ಪರೀಕ್ಷಿಸುತ್ತದೆ. ಏನಾಗ್ತಿದೆ ಎಂಬ ಗೊಂದಲವೂ ಮೂಡುತ್ತದೆ. ದೃಷ್ಟಿ ಬದಲಾದರೂ ಸಿನಿಮಾ ಅರ್ಥೈಸಿಕೊಳ್ಳುವುದು ತುಸು ಕಷ್ಟ.‌ ಕಾಮಿಡಿಯನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಮಾಸ್‌ ಆಕ್ಷನ್‌ ಸೀನ್‌ಗಳು ಇಲ್ಲಿ ಇಲ್ಲ. ರೊಮ್ಯಾನ್ಸ್‌ ಕಾಣಿಸದು. ಒಂದು ಟಿಪಿಕಲ್ ಥ್ರಿಲ್ಲರ್‌ ಸಿನಿಮಾ ಬೇಡುವ ಅಂಶಗಳು ಈ ಸಿನಿಮಾದಲ್ಲಿವೆ.

ಇಡೀ ಸಿನಿಮಾ ಹೊತ್ತು ಸಾಗಿದ ನಿಶಾ ರವಿಕೃಷ್ಣನ್‌

ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ ನಾಯಕ ನಟಿ ನಿಶಾ ರವಿಕೃಷ್ಣನ್. ಮಹಿಳೆಯ ಎದುರಿಸುವ ಸಮಸ್ಯೆ ಮತ್ತು ಸವಾಲುಗಳಿಗೆ ಮುಖವಾಗಿ ಅವರಿಲ್ಲಿ ಕಂಡಿದ್ದಾರೆ. ಸಿಕ್ಕ ಪಾತ್ರದಲ್ಲಿ ಜೀವಿಸಿದ್ದಾರೆ. ಇದರಾಚೆಗೆ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾವೊಂದು ಬಯಸುವ ಹಿನ್ನೆಲೆ ಸಂಗೀತವನ್ನು ಕೆಸಿ ಬಾಲಸರಂಗನ್‌ ನೀಡಿದ್ದಾರೆ. ಸುನೀಲ್‌ ನರಸಿಂಹಮೂರ್ತಿ ಅವರ ಛಾಯಾಗ್ರಹಣದಲ್ಲಿಯೂ ಒಂದಷ್ಟು ಪ್ರಯೋಗಗಳಾಗಿವೆ. ರಿಕಿ ಮಾರ್ಟಿನ್‌ ಅವರ ಮೊನಚು ಸಂಕಲನ ಚಿತ್ರವನ್ನು ಹಿಡಿದು ಕೂರಿಸುತ್ತದೆ. ಒಟ್ಟಾರೆಯಾಗಿ ಒಂದು ಥ್ರಿಲ್ಲರ್‌ ಅನುಭವ ಬೇಕೆಂದರೆ ಈ ವಾರ ಅಂಶು ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬಹುದು.

ಅಂಶು ಸಿನಿಮಾ ವಿವರ

ಜಾನರ್: ಸೈಕಲಾಜಿಕಲ್ ಥ್ರಿಲ್ಲರ್

ನಿರ್ದೇಶಕ: ಎಂ ಸಿ ಚನ್ನ ಕೇಶವ

ನಿರ್ಮಾಣ: ಗ್ರಹಣ ಎಲ್​ಎಲ್​ಪಿ

ತಾರಾಗಣ: ‌ನಿಶಾ ರವಿಕೃಷ್ಣನ್ ‌

ಸಾಹಿತ್ಯ, ಸಂಭಾಷಣೆ: ಮಹೇಂದ್ರ ಗೌಡ

ಸಂಗೀತ: ಕೆ ಸಿ ಬಾಲಸರಂಗನ್

ಛಾಯಾಗ್ರಹಣ: ಸುನೀಲ್‌ ನರಸಿಂಹಮೂರ್ತಿ

ಸಂಕಲನ; ರಿಕಿ ಮಾರ್ಟಿನ್

ಎಚ್‌ಟಿ ಕನ್ನಡ ರೇಟಿಂಗ್: 3.5\5

Whats_app_banner