ಮುಟ್ಟಿನ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ಹೇಗಿತ್ತು ಸಿನಿಮಾ ನಿರ್ದೇಶಕನ ವರ್ತನೆ? ‘ಅಮಾನವೀಯತೆ’ ಬಗ್ಗೆಯೂ ನಿತ್ಯಾ ಮೆನನ್‌ ಮಾತು
ಕನ್ನಡ ಸುದ್ದಿ  /  ಮನರಂಜನೆ  /  ಮುಟ್ಟಿನ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ಹೇಗಿತ್ತು ಸಿನಿಮಾ ನಿರ್ದೇಶಕನ ವರ್ತನೆ? ‘ಅಮಾನವೀಯತೆ’ ಬಗ್ಗೆಯೂ ನಿತ್ಯಾ ಮೆನನ್‌ ಮಾತು

ಮುಟ್ಟಿನ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ಹೇಗಿತ್ತು ಸಿನಿಮಾ ನಿರ್ದೇಶಕನ ವರ್ತನೆ? ‘ಅಮಾನವೀಯತೆ’ ಬಗ್ಗೆಯೂ ನಿತ್ಯಾ ಮೆನನ್‌ ಮಾತು

Nithya Menon About Period Pain: ಸಿನಿಮಾರಂಗದಲ್ಲಿ ನಟಿಯರು ಎದುರಿಸುವ ಸಮಸ್ಯೆಗಳ ಬಗ್ಗೆ ನಿತ್ಯಾ ಮೆನನ್‌ ಮಾತನಾಡಿದ್ದಾರೆ. ಅನಾರೋಗ್ಯ ಇರಲಿ, ಮುಟ್ಟಿನ ಸಮಸ್ಯೆಯೇ ಇರಲಿ.. ಶೂಟಿಂಗ್‌ನಲ್ಲಿ ಭಾಗವಹಿಸಲೇಬೇಕು. ನಿಜಕ್ಕೂ ಇದೊಂದು ಅಮಾನವೀಯ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಿತ್ಯಾ ಮೆನನ್.‌

ಋತುಚಕ್ರದ ಬಗ್ಗೆ ನಿತ್ಯಾ ಮೆನನ್‌ ಮಾತು
ಋತುಚಕ್ರದ ಬಗ್ಗೆ ನಿತ್ಯಾ ಮೆನನ್‌ ಮಾತು

Nithya Menon About Period Pain: ಕನ್ನಡಕ್ಕಿಂತ ಪರಭಾಷೆಗಳಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ಬೆಂಗಳೂರು ಮೂಲದ ನಟಿ ನಿತ್ಯಾ ಮೆನನ್‌. ಅದರಲ್ಲೂ ತೆಲುಗು ಮತ್ತು ತಮಿಳಿನಲ್ಲಿ ಬಹು ಬೇಡಿಕೆ ಪಡೆದ ಈ ನಟಿ, ಕಳೆದ ವರ್ಷ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಇಂತಿಪ್ಪ ಈ ನಟಿ ಸದ್ಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ (kadhalikka neramillai) ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದಾರೆ. ಜಯಂ ರವಿ ನಾಯಕನಾಗಿ ನಟಿಸಿರುವ ಈ ಸಿನಿಮಾ ಇಂದು (ಜ. 14) ಬಿಡುಗಡೆ ಆಗಿದೆ. ಇದೇ ಸಿನಿಮಾ ಪ್ರಚಾರದ ವೇಳೆ, ಮಹಿಳೆಯರ ಅನಾರೋಗ್ಯದ ವಿಷಯದಲ್ಲಿ ಚಿತ್ರೋದ್ಯಮ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.

ಈ ಹಿಂದೆ ಶೂಟಿಂಗ್‌ ಸೆಟ್‌ನಲ್ಲಿನ ಅಹಿತಕರ ಘಟನಾವಳಿಗಳ ಬಗ್ಗೆ ನಟ, ನಟಿಯರು ಹೇಳಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಇದೀಗ ಮುಟ್ಟಿನ ಸಮಯದಲ್ಲಿ ಶೂಟಿಂಗ್‌ ಸೆಟ್‌ನಲ್ಲಿ ಅನುಭವಿಸಿದ ಘಟನೆಯ ಬಗ್ಗೆ ನಟಿ ನಿತ್ಯಾ ಮೆನನ್‌ ಹೇಳಿಕೊಂಡಿದ್ದಾರೆ. ಆದರೆ, ಯಾರೂ ನಿರ್ದೇಶಕ ಮಿಸ್ಕಿನ್‌ ರೀತಿ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ನಿತ್ಯಾ ಮೆನನ್‌ ಪರೋಕ್ಷವಾಗಿ ಯಾವ ನಿರ್ದೇಶಕರ ಬಗ್ಗೆ ಹೇಳುತ್ತಿದ್ದಾರೆ? ಹೀಗಿದೆ ಮಾಹಿತಿ.

ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ ಪ್ರಚಾರದ ವೇಳೆ ಚಿತ್ರರಂಗದಲ್ಲಿನ ಅಮಾನವೀಯತೆ ಬಗ್ಗೆ ನಿತ್ಯಾ ಮೆನನ್ ಮಾತನಾಡಿದ್ದಾರೆ. "ಸಿನಿಮಾಗಳಲ್ಲಿ ಸ್ವಲ್ಪ ಮಟ್ಟದ ಅಮಾನವೀಯತೆ ಇದೆ. ನೀವು ಎಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದರೂ, ಎಷ್ಟೇ ಕಷ್ಟಕರವಾಗಿದ್ದರೂ, ನೀವು ಏನನ್ನಾದರೂ ಮಾಡಿ ಶೂಟಿಂಗ್‌ ಸೆಟ್‌ಗೆ ಬರಲೇಬೇಕು ಎಂದು ನಿರ್ದೇಶಕರು ಮತ್ತು ನಿರ್ಮಾಪಕರು ನಿರೀಕ್ಷಿಸುತ್ತಾರೆ. ಏನೇ ಆದರೂ, ನಾವು ಅನುಭವಿಸಲೇಬೇಕು. ಆದರೆ, ನಿರ್ದೇಶಕ ಮಿಸ್ಕಿನ್‌ ಮಾತ್ರ ಈ ವಿಚಾರದಲ್ಲಿ ತುಂಬ ಭಿನ್ನ. 2020ರಲ್ಲಿ ಸೈಕೋ ಸಿನಿಮಾ ಶೂಟಿಂಗ್‌ ಸಮಯವದು. ಮೊದಲ ದಿನದ ಶೂಟಿಂಗ್‌ ವೇಳೆ ಋತುಚಕ್ರದ ನೋವಿನಲ್ಲಿದ್ದೆ. ಆ ನೋವನ್ನು ನಿರ್ದೇಶಕ ಮಿಸ್ಕಿನ್‌ ಮಾನವೀಯತೆ ದೃಷ್ಟಿಯಿಂದ ಅರ್ಥಮಾಡಿಕೊಂಡರು" ಎಂದು ನಿತ್ಯಾ ಅಂದಿನ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

ನಿತ್ಯಾ ನೋವಿಗೆ ಸ್ಪಂದಿಸಿದ ನಿರ್ದೇಶಕ

ಮುಂದುವರಿದು ಮಾತನಾಡುವ ನಿತ್ಯಾ, "ಆವತ್ತು ನಾನು ಸೈಕೋ ಸಿನಿಮಾ ಸೆಟ್‌ಗೆ ಕೊಂಚ ತಡವಾಗಿ ಹೋದೆ. ತಡವಾದ ಬಗ್ಗೆ ಮೊದಲ ಸಲ ನನ್ನ ಋತುಚಕ್ರದ ಬಗ್ಗೆ ಒಬ್ಬ ಪುರುಷ ನಿರ್ದೇಶಕನ ಬಳಿ ಮಾತನಾಡಿದೆ. ಅದನ್ನು ಅಷ್ಟೇ ಸೂಕ್ಷ್ಮವಾಗಿ ಅರ್ಥೈಸಿಕೊಂಡ ನಿರ್ದೇಶಕ ಮಿಸ್ಕಿನ್‌, ಇದು ಮೊದಲ ದಿನವೇ ಎಂದು ಕೇಳಿದರು. ಹೌದು ಎಂದಾಗ, ನನ್ನ ಕಡೆಯಿಂದ ಯಾವುದೇ ಕೆಲಸ ಮಾಡಿಸದೇ, ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ತಿಳಿಸಿದರು. ಬೇರೆ ಏನನ್ನೂ ಮಾಡದಂತೆಯೂ ಹೇಳಿದರು" ಎಂದು ನಿತ್ಯಾ ಮೆನನ್‌ ನೆನಪಿಸಿಕೊಂಡಿದ್ದಾರೆ. 

ನಿತ್ಯಾ ಮುಂದಿನ ಸಿನಿಮಾಗಳು

ಕಾದಲಿಕ್ಕ ನೆರಮಿಲ್ಲೈ ಸಿನಿಮಾ ಇದೀಗ ಬಿಡುಗಡೆ ಆಗಿದೆ. ಇದರ ಹೊರತಾಗಿ, ಧನುಷ್ ನಿರ್ದೇಶನದ ಇಡ್ಲಿ ಕಡೈ ಚಿತ್ರದಲ್ಲಿ ನಿತ್ಯಾ ನಟಿಸಲಿದ್ದಾರೆ. ಡಿಯರ್ ಎಕ್ಸೆಸ್ ಎಂಬ ಚಿತ್ರದ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ವಿಜಯ್ ಸೇತುಪತಿ ಮುಂದಿನ ಚಿತ್ರದಲ್ಲಿಯೂ ನಿತ್ಯಾ ನಾಯಕಿಯಾಗಿದ್ದಾರೆ.

Whats_app_banner