Kiara Advani: ಟಾಕ್ಸಿಕ್ ಸಿನಿಮಾ ಮಾತ್ರವಲ್ಲ ಕಿಯಾರಾ ಅಡ್ವಾನಿ ಮುಂಬರಲಿರುವ ಈ ಸಿನಿಮಾಗಳಲ್ಲೂ ಮಿಂಚಲಿದ್ದಾರೆ
ಟಾಕ್ಸಿಕ್ ಸಿನಿಮಾ ಮಾತ್ರವಲ್ಲ ಕಿಯಾರಾ ಅಡ್ವಾನಿ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಗೇಮ್ ಚೇಂಜರ್ ಸಿನಿಮಾದಲ್ಲಿ ಅಭಿನಯಿಸಿದ ನಂತರ ಇನ್ನಷ್ಟು ಅವಕಾಶಗಳನ್ನು ಬಾಚಿಕೊಂಡಿದ್ದಾರೆ.

ಯಶ್, ನಯನತಾರಾ ಸೇರಿದಂತೆ ಹಲವರು ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಈ ಚಿತ್ರದ ಮೂಲಕ ಕಿಯಾರಾ ಅಡ್ವಾನಿ ಕನ್ನಡ ಭಾಷೆಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಗೇಮ್ ಚೇಂಜರ್ ಸಿನಿಮಾದಲ್ಲಿ ಕಿಯಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಅನುಭವಿಸಿತ್ತು. ಆ ಸಿನಿಮಾ ನಷ್ಟ ಅನುಭವಿಸಿದರೂ ಸಹ ಕಿಯಾರಾಗಿದ್ದ ಅವಕಾಶಗಳು ಮಾತ್ರ ಕಡಿಮೆ ಆಗಲಿಲ್ಲ. ಒಂದಾದಮೇಲೊಂದು ಅವಕಾಶವನ್ನು ಪಡೆದು, ಸಿನಿಮಾಗಳಲ್ಲಿ ಕಿಯಾರಾ ತಮ್ಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಕಿಯಾರಾ ಮಿಂಚಲಿದ್ದಾರೆ. ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಟಾಕ್ಸಿಕ್ ಸಿನಿಮಾ
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹುಕೋಟಿ ವೆಚ್ಚದಲ್ಲಿ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಇದೇ ನಿರ್ಮಾಣ ಸಂಸ್ಥೆ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ ದೊಡ್ಡ ಸರ್ಪ್ರೈಸ್ ನೀಡಿದೆ. ಹಾಗಾದರೆ ಅದ್ಯಾವಾಗ ಟಾಕ್ಸಿಕ್ ಸಿನಿಮಾ ಬಿಡುಗಡೆ? ಅಧಿಕೃತ ಘೋಷಣೆ ಜತೆಗೆ ಹೊಸ ಪೋಸ್ಟರ್ ಮೂಲಕ ಯಶ್ ಎಂಟ್ರಿ ಕೊಟ್ಟಿದ್ದು, 2026ರ ಮಾರ್ಚ್ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಯುಗಾದಿ ಮತ್ತು ಈದ್ ಹಬ್ಬದ ಸಂದರ್ಭದಲ್ಲಿ ಗ್ರ್ಯಾಂಡ್ ಆಗಿ ಚಿತ್ರ ತೆರೆಗೆ ಬರಲಿದೆ.
ಶಕ್ತಿ ಶಾಲಿನಿ
ಶಕ್ತಿ ಶಾಲಿನಿ ಸಿನಿಮಾದಲ್ಲಿ ಕಿಯಾರಾ ಅಭಿನಯಿಸುತ್ತಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಹಾರರ್ ಹಾಗೂ ಹಾಸ್ಯ ಮಿಶ್ರಿತ ಸಿನಿಮಾ ಇದಾಗಿದೆ. ಈ ಸಿನಿಮಾ ಪ್ರೇಕ್ಷಕರನ್ನು ಅಚ್ಚರಿಗೊಳಿಸಲಿದೆ. ಡಿಸೆಂಬರ್ 31 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಕಿಯಾರಾ ಅಡ್ವಾಣಿ ಶಕ್ತಿ ಶಾಲಿನಿ ಸಿನಿಮಾದ ಮೂಲಕ ಇನ್ನೊಂದು ಹೊಸ ರೀತಿಯ ಪಾತ್ರಕ್ಕೆ ಕಾಲಿಡಲಿದ್ದಾರೆ.
ಡಾನ್ 3
ಫರ್ಹಾನ್ ಅಖ್ತರ್ ಅವರ ಡಾನ್ 3 ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮೊದಲ ಬಾರಿಗೆ ರಣವೀರ್ ಸಿಂಗ್ ಜತೆ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಸಿನಿಮಾದಲ್ಲಿ ಮೂರನೇ ಭಾಗದಲ್ಲಿ ಶಾರುಖ್ ಖಾನ್ ಬದಲಿಗೆ ರಣವೀರ್ ಅವರನ್ನು ಆಯ್ಕೆ ಮಾಡಿದ್ದರಿಂದ ನಿರ್ಮಾಪಕರು ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು . ಡಾನ್ 3ಯ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಪ್ಯಾನ್ ಇಂಡಿಯಾ ಚಿತ್ರ 'ಗೇಮ್ ಚೇಂಜರ್' ನಲ್ಲಿ ಕಿಯಾರಾ ಅಡ್ವಾಣಿ, ರಾಮ್ ಚರಣ್ ಮತ್ತು ಎಸ್.ಜೆ. ಸೂರ್ಯ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ.
