Prem: ‘ಸೆಟ್‌ನಲ್ಲಿ ನೀವಂದುಕೊಂಡಂತೆ ಸಂಜಯ್ ದತ್‌ಗೆ ಏನೂ ಆಗಿಲ್ಲ, ನಿಮ್ಮ ಕಾಳಜಿಗೆ ಧನ್ಯವಾದ’; ಸ್ಪಷ್ಟೀಕರಣ ನೀಡಿದ ‘ಕೆಡಿ’ ಪ್ರೇಮ್
ಕೆಡಿ ಸಿನಿಮಾ ಸೆಟ್‌ನಲ್ಲಿ ನಡೆದಿತ್ತು ಎನ್ನಲಾದ ಬಾಂಬ್ ಬ್ಲಾಸ್ಟ್ ಸುದ್ದಿಗೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ.
Prem: ಚಂದನವನದ ಬಹುನಿರೀಕ್ಷಿತ ಸಿನಿಮಾ ಕೆಡಿ ಚಿತ್ರದ ಚಿತ್ರೀಕರಣದಲ್ಲಿ ಬಾಂಬ್ ಬ್ಲಾಸ್ಟ್ ಆಗಿ ಸಂಜಯ್ ದತ್ ಗಾಯಗೊಂಡಿದ್ದರು ಎಂಬ ವಿಚಾರ ಹೊರಬೀಳುತ್ತಿದ್ದಂತೆ, ಅದರ ಸತ್ಯಾಸತ್ಯತೆ ಬಗ್ಗೆ ನಿರ್ದೇಶಕ ಪ್ರೇಮ್ ಉತ್ತರ ನೀಡಿದ್ದಾರೆ. ಆಗಿದ್ದೇ ಬೇರೆ ಸುದ್ದಿ ಹರಿದಾಡುತ್ತಿರುವುದೇ ಬೇರೆ ಎಂದು ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಬೆಂಗಳೂರಿನ ಮಾಗಡಿ ರೋಡ್‌ನಲ್ಲಿ ಹಾಕಲಾದ ಸೆಟ್‌ನಲ್ಲಿ ಕೆಡಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಬಾಂಬ್ ಬ್ಲಾಸ್ಟ್ ಮಾಡುವ ಸೀನ್‌ನಲ್ಲಿ ಸಂಜಯ್ ದತ್ ಮೊಣಕೈ ಹಾಗೂ ಮುಖಕ್ಕೆ ಗಾಯವಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ತಕ್ಷಣ ಅವರಿಗೆ ಚಿಕಿತ್ಸೆ ನೀಡಿ ಮುಂಬೈಗೆ ವಾಪಸ್ ಕಳುಹಿಸಲಾಗಿದೆ ಎಂಬ ಪುಕಾರು ಹಬ್ಬಿತ್ತು. ಈ ಘಟನೆ ಬಳಿಕ ಚಿತ್ರೀಕರಣವನ್ನೂ ನಿಲ್ಲಿಸಲಾಗಿತ್ತು ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ಸ್ಪಷ್ಟನೆ ನೀಡಿದ್ದಾರೆ.
ಪ್ರೇಮ್ ನೀಡಿದ ಸ್ಪಷ್ಟನೆ ಹೀಗಿದೆ...
"ಕೆಡಿ ಸೆಟ್‌ನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಸಂಜಯ್ ದತ್‌ಗೆ ಗಂಭೀರ ಗಾಯವಾಗಿದೆ ಎಂಬ ವರದಿ ಶುದ್ಧ ಸುಳ್ಳು. ಆದರೆ, ಸೆಟ್‌ನಲ್ಲಿ ಸಣ್ಣ ಘಟನೆ ನಡೆದಿದೆ. ಆದರೆ, ಸಂಜಯ್ ದತ್ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಮತ್ತೆ ಎಂದಿನಂತೆ ಶೂಟಿಂಗ್ ಶುರುವಾಗಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು" ಎಂದು ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟೀಕರಣ ನೀಡಿದ್ದಾರೆ ಪ್ರೇಮ್.
ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. 70-80ರ ಕಾಲಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಲಿದ್ದಾರೆ. ಇದು ಧ್ರುವ ಸರ್ಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.
17 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದ ಶಿಲ್ಪಾ ಶೆಟ್ಟಿ
2005ರಲ್ಲಿ ತೆರೆ ಕಂಡ 'ಆಟೋ ಶಂಕರ್' ಚಿತ್ರದ ನಂತರ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ 17 ವರ್ಷಗಳ ನಂತರ ಮತ್ತೆ ಅವರು ಕೆ.ಡಿ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ಧಾರೆ. ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ, ಸತ್ಯವತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲು ಇತ್ತೀಚೆಗೆ ಶಿಲ್ಪಾ ಶೆಟ್ಟಿ ಬೆಂಗಳೂರಿಗೆ ಬಂದಿದ್ದರು. ಈಗಾಗಲೇ ಶಿಲ್ಪಾಶೆಟ್ಟಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು ಎರಡನೇ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಲು ಸಿಲಿಕಾನ್ ಸಿಟಿಗೆ ಬಂದು ಹೋಗಿದ್ದರು.