Beast Games review: ಏನಿದು ಬೀಸ್ಟ್‌ ಗೇಮ್ಸ್‌? ಮನರಂಜನೆ ನೀಡಲು ವಿಫಲವಾಯ್ತೇ ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಬಹುಮಾನದ ಆಟ
ಕನ್ನಡ ಸುದ್ದಿ  /  ಮನರಂಜನೆ  /  Beast Games Review: ಏನಿದು ಬೀಸ್ಟ್‌ ಗೇಮ್ಸ್‌? ಮನರಂಜನೆ ನೀಡಲು ವಿಫಲವಾಯ್ತೇ ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಬಹುಮಾನದ ಆಟ

Beast Games review: ಏನಿದು ಬೀಸ್ಟ್‌ ಗೇಮ್ಸ್‌? ಮನರಂಜನೆ ನೀಡಲು ವಿಫಲವಾಯ್ತೇ ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಬಹುಮಾನದ ಆಟ

Beast games review: ಸ್ಕ್ವಿಡ್‌ ಗೇಮ್‌ನ ಕ್ರೂರ ಪ್ರಯೋಗ ಇಷ್ಟವಾಗದೆ ಇದ್ದರೂ ಅಲ್ಲಿ ಸ್ಪರ್ಧಿಗಳಿಗೆ ಆಟವಾಡಲು ಕನಿಷ್ಠ ನ್ಯಾಯಯುತವಾದ ಅವಕಾಶಗಳು ಇದ್ದವು. ಆದರೆ, ಬೀಸ್ಟ್‌ ಗೇಮ್‌ನಲ್ಲಿ ಆಟಗಾರರಿಗೆ ಆಟದ ಮೇಲೆ ನಿಯಂತ್ರಣವೇ ಇರುವುದಿಲ್ಲ. ಒಬ್ಬ ಔಟಾದರೆ ಇಡೀ ಗುಂಪು ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ.

Beast games review: ಏನಿದು ಬೀಸ್ಟ್‌ ಗೇಮ್‌? ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಆಟ
Beast games review: ಏನಿದು ಬೀಸ್ಟ್‌ ಗೇಮ್‌? ಮಿಸ್ಟರ್‌ ಬೀಸ್ಟ್‌ನ 50,00,000 ಡಾಲರ್‌ ಆಟ

Beast games review: ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬೀಸ್ಟ್‌ ಗೇಮ್‌ ಎಂಬ ಜಗತ್ತಿನ ಬೃಹತ್‌ ರಿಯಾಲಿಟಿ ಶೋ ಎಂಬ ಖ್ಯಾತಿಯ ಸೀರಿಸ್‌ ಆರಂಭವಾಗಿದೆ. ಸ್ಕ್ವಿಡ್‌ ಗೇಮ್‌ನ ರಕ್ತಸಿಕ್ತ ಅಧ್ಯಾಯಗಳನ್ನು ನೋಡಿದವರಿಗೆ "ಕ್ರೌರ್ಯ" ಇಲ್ಲದ ಬೀಸ್ಟ್‌ ಗೇಮ್‌ ಇಷ್ಟವಾಗಿರಬಹುದು. ಆದರೆ, ಕೆಲವೇ ಸಂಚಿಕೆಗಳಲ್ಲಿ ಬೀಸ್ಟ್‌ ಗೇಮ್‌ ಬೋರ್‌ ಹೊಡೆಸುತ್ತಿರುವುದು ಸುಳ್ಳಲ್ಲ. ಯೂಟ್ಯೂಬ್‌ನಲ್ಲಿ ಮಿಸ್ಟರ್‌ ಬೀಟ್‌ ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್‌ಸನ್‌ನ ಈ ಮಹಾತ್ವಾಕಾಂಕ್ಷಿ ಆಟ ರೋಚಕತೆ ಕಾಯ್ದುಕೊಳ್ಳಲು ವಿಫಲವಾಗುತ್ತಿದೆ.

ಏನಿದು ಬೀಸ್ಟ್‌ ಗೇಮ್‌?

ಈಗಾಗಲೇ ಬಿಗ್‌ಬಾಸ್‌ನಂತಹ ರಿಯಾಲಿಟಿ ಶೋಗಳನ್ನು ನೋಡಿದವರಿಗೆ ಬೀಸ್ಟ್‌ ಗೇಮ್‌ ತುಸು ಭಿನ್ನ ಎಂದು ಅರ್ಥವಾಗಿರಬಹುದು. ಬಿಗ್‌ಬಾಸ್‌ ಆಟದಲ್ಲಿ ಒಂದು ಮನೆಯೊಳಗೆ ಸ್ಪರ್ಧಿಗಳ ವಿವಿಧ ಆಟಗಳು ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡುತ್ತವೆ. ಸ್ಕ್ವಿಡ್‌ಗೇಮ್‌ ಎನ್ನುವುದು "ಸಾವು ಮತ್ತು ಬದುಕಿನ ಆಟ"ವಾಗಿತ್ತು. ಆದರೆ, ಬೀಸ್ಟ್‌ ಗೇಮ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಬೀಸ್ಟ್‌ ಸಿಟಿ ಎಂದು ಕರೆಯಲ್ಪಡುವ ಬೀಸ್ಟ್‌ಗೇಮ್‌ನ ದೊಡ್ಡಮನೆಗೆ ಒಂದು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಎಂಟ್ರಿ ನೀಡಿದ್ದರು. ಆದರೆ, ಅದರ ಎಲಿಮಿನೇಷನ್‌ ಪ್ರಕ್ರಿಯೆಯೇ ಭಿನ್ನವಾಗಿತ್ತು. ಒಂದೇ ಸಾರಿ ಒಂದು ಸಾಲಿನಲ್ಲಿರುವ ಎಲ್ಲರನ್ನೂ ಎಲಿಮಿನೇಟ್‌ ಮಾಡುವ ಈ ಆಟದಲ್ಲಿ ನಿಜವಾದ ಗೇಮಿಂಗ್‌ನ ಮಜವೇ ಇಲ್ಲವಾಗಿತ್ತು.

ಬೀಸ್ಟ್ ಗೇಮ್ಸ್ ಎನ್ನುವುದು ಸ್ಪರ್ಧಾ ಸರಣಿ. ಡಿಸೆಂಬರ್ 19 ರಂದು ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಜಿಮ್ಮಿ ಡೊನಾಲ್ಡ್‌ಸನ್ ಯಾನೆ ಮಿಸ್ಟರ್ ಬೀಸ್ಟ್‌ ಈ ರಿಯಾಲಿಟಿ ಶೋದ ರೂವಾರಿ. ಈ ಪ್ರದರ್ಶನವು ಸವಾಲುಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಗೆಲ್ಲುವ ಅವಕಾಶ ಸ್ಪರ್ಧಿಗಳಿಗೆ ನೀಡುತ್ತದೆ. ಕೊನೆಯದಾಗಿ ಗೆಲ್ಲುವ ಸ್ಪರ್ಧಿಗೆ 50,00,000 ಡಾಲರ್‌ ನೀಡಲಾಗುತ್ತದೆ. ಇದೇ ರೀತಿ ಸ್ಪರ್ಧಿಗಳಿಗೆ ಆಟದಿಂದ ಹೊರಗೆ ಹೋಗಲು ಆಫರ್‌ ನೀಡುತ್ತ ಸಾಗುತ್ತದೆ. ಈ ಶೋನಲ್ಲಿ ಗೆಲ್ಲುವವರಿಗೆ 5 ದಶಲಕ್ಷ ಡಾಲರ್‌ ಬಹುಮಾನ, ಲ್ಯಾಂಬೋರ್ಗಿನಿ ಕಾರು, ಖಾಸಗಿ ದ್ವೀಪದ ಬಹುಮಾನ ದೊರಕಲಿದೆ.

ಸ್ಕ್ವಿಡ್‌ ಗೇಮ್‌ ಮತ್ತು ಬೀಸ್ಟ್‌ ಗೇಮ್‌ ನಡುವಿನ ವ್ಯತ್ಯಾಸ

ಸ್ಕ್ವಿಡ್‌ ಗೇಮ್‌ನ ಕ್ರೂರ ಪ್ರಯೋಗ ಇಷ್ಟವಾಗದೆ ಇದ್ದರೂ ಅಲ್ಲಿ ಸ್ಪರ್ಧಿಗಳಿಗೆ ಆಟವಾಡಲು ಕನಿಷ್ಠ ನ್ಯಾಯಯುತವಾದ ಅವಕಾಶಗಳು ಇದ್ದವು. ಯಾರೋ ಒಬ್ಬರು ಹೊರಗೆ ಹೋಗ್ತಿನಿ ಅಂದಾಗ ಆತ ನಿಂತ ಸಾಲಿನಲ್ಲಿರುವ ಇತರೆ ಅಮಾಯಕ ಆಟಗಾರರು ಎಲಿಮಿನೇಟ್‌ ಆಗಬೇಕಾಗಿರಲಿಲ್ಲ. ಪ್ರತಿಯೊಬ್ಬರಿಗೂ ಒಂದೇ ರೀತಿಯ ಅವಕಾಶ ಸ್ಕ್ವಿಡ್‌ ಗೇಮ್‌ನಲ್ಲಿತ್ತು. ಆಟಗಾರನ ದೈಹಿಕ ಸಾಮರ್ಥ್ಯ, ಕೌಶಲ, ಬುದ್ಧಿವಂತಿಕೆಯ ಜತೆಗೆ ಒಂದಿಷ್ಟು ಅದೃಷ್ಟವು ಸ್ಕ್ವಿಡ್‌ ಗೇಮ್‌ನ ಸ್ಪರ್ಧಿಗಳಿಗೆ ಇತ್ತು. ಆಟದಲ್ಲಿ ಯಾರಾದರೂ ಅನ್ಯಾಯ ಮಾಡಿದಾಗ ಆ ಸ್ಪರ್ಧಿಯನ್ನು ಸ್ಕ್ವಿಡ್‌ ಗೇಮ್‌ನಲ್ಲಿ ಕೊಲ್ಲಲಾಗುತ್ತಿತ್ತು. ಸಮಾಜದ ದುಡ್ಡಿರುವ ವರ್ಗಕ್ಕೆ ಮನರಂಜನೆ ನೀಡಲು ಹಣಕಾಸು ತೊಂದರೆಗಳಿರುವ ಜನರನ್ನು ಈ ರೀತಿ ಸ್ಪರ್ಧಿಗಳಾಗಿ ಆಡಲು ಅವಕಾಶ ನೀಡಿತ್ತು. ಗೆದ್ದವರಿಗೆ ದೊಡ್ಡಮೊತ್ತದ ಆಮೀಷ ನೀಡಲಾಗಿತ್ತು. ಒಂದು ಕಡೆ ಪ್ರಾಣ ಭಯ, ಇನ್ನೊಂದು ಕಡೆ ದೊಡ್ಡಮೊತ್ತದ ಹಣ ಸ್ಪರ್ಧಿಗಳ ಮುಂದೆ ಇತ್ತು. "ಬಡವನಾಗಿ/ಬಡವಳಾಗಿ ಹೆಚ್ಚು ಕಾಲ ಬದುಕಿ ಸಾಯುವುದಕ್ಕಿಂತ ಇಷ್ಟು ದೊಡ್ಡ ಮೊತ್ತ ಗೆಲ್ಲುವುದು ಅಥವಾ ಈ ಪ್ರಯತ್ನದಲ್ಲಿ ಸಾಯುವುದು" ಎಂಬ ಆಯ್ಕೆಯು ಸ್ಕ್ವಿಡ್‌ ಗೇಮ್‌ನ ಬಹುತೇಕ ಆಟಗಾರರರಿಗೆ ಇಷ್ಟವಾಗಿತ್ತು.

ಆದರೆ, ಬೀಸ್ಟ್‌ ಗೇಮ್‌ ಎಂಬ ಆಟದ ರೀತಿ ರಿವಾಜುಗಳೇ ಬೇರೆ. ಆಟಗಾರರಿಗೆ ಆಟದ ಮೇಲೆ ನಿಯಂತ್ರಣವೇ ಇರುವುದಿಲ್ಲ. ಯಾವುದಾದರೂ ಒಂದು ಆಟದಲ್ಲಿ ಒಬ್ಬ ಹೊರಗುಳಿಯಲು ಬಯಸಿದರೆ ಅದರ ಪರಿಣಾಮ ಆತ ನಿಂತ ಸಾಲಿನಲ್ಲಿರುವ ಎಲ್ಲರ ಮೇಲೂ ಆಗುತ್ತಿತ್ತು. ತಮ್ಮ ಗುಂಪಿನಲ್ಲಿ ಯಾರನ್ನಾದರೂ ಒಬ್ಬರನ್ನು ಹೊರಗೆ ಹೋಗುವಂತೆ ಮನವೋಲಿಸುವ ಆಟವೂ ಇದರಲ್ಲಿತ್ತು. ಯಾರೊಬ್ಬರೂ ಆಟದಿಂದ ಹೊರಗೆ ಹೋಗದೆ ಇದ್ದರೆ ಇಡೀ ತಂಡವೂ ಔಟ್‌ ಆಗಿ ಆಟದಿಂದ ಹೊರಕ್ಕೆ ಹೋಗಬೇಕಾಗಿತ್ತು. ಬೀಸ್ಟ್‌ ಗೇಮ್‌ ಎನ್ನುವುದು ಸ್ವಂತ ಅರ್ಹತೆಯಿಂದ ಗೆಲ್ಲಲು ಸಾಧ್ಯವಾಗದ ಆಟ. ಇಲ್ಲಿ ಅದೃಷ್ಟವಿದ್ದವರು ಮಾತ್ರ ಉಳಿಯುತ್ತಾರೆ.

ಬೀಸ್ಟ್‌ಗೇಮ್‌ನಲ್ಲಿ ಲಂಚದ ಆಟವೂ ಇತ್ತು. ಒಂದು ತಂಡದಲ್ಲಿ ಹಲವು ಜನರು ಇರುತ್ತಾರೆ. ಆಗ ಬೀಸ್ಟ್‌ ಗೇಮ್‌ನಲ್ಲಿ ಲಂಚದ ಆಮೀಷ ಒಡ್ಡಲಾಗುತ್ತದೆ. ಅದು ಕೂಡ ದೊಡ್ಡ ಮೊತ್ತ. ಸೆಕೆಂಡ್‌ಗಳಲ್ಲಿ ಹಣದ ಪ್ರಮಾಣ ಹೆಚ್ಚುತ್ತ ಹೋಗುತ್ತದೆ. ಐದು ಲಕ್ಷ ಡಾಲರ್‌, ಹತ್ತು ಲಕ್ಷ ಡಾಲರ್‌ ನೀಡ್ತೀವಿ ಯಾರು ಹೊರಗೆ ಹೋಗ್ತೀರಿ ಎಂದು ಕೇಳಲಾಗುತ್ತದೆ. ಹಣದ ಆಸೆಗೆ ಒಬ್ಬ ಸ್ಪರ್ಧಿ ನಾನು ಹೊರಗೆ ಹೋಗ್ತೀನಿ ಎಂದು ಬಟನ್‌ ಒತ್ತಿದರೆ ಸಾಕು, ಆತನಿಗೆ ಲಂಚದ ಹಣ ದೊರಕುತ್ತದೆ. ಆದರೆ, ಆತನ ಸಾಲು ಅಥವಾ ತಂಡದಲ್ಲಿರುವವರೆಲ್ಲರೂ ತಾವು ಮಾಡದ ತಪ್ಪಿಗೆ, ತಾವು ಆಡದ ಆಟಕ್ಕೆ ಸ್ಪರ್ಧೆಯಿಂದ ಹೊರಗೆ ಹೋಗುತ್ತಾರೆ. ಅವರಿಗೆ ಯಾವುದೇ ಹಣವಿಲ್ಲ. ತಾವು ಏನೂ ಆಟ ಆಡದೆ, ತಮ್ಮ ಕೌಶಲ ಪ್ರದರ್ಶಿಸದೆ ಹೊರಗೆ ಹೋಗಬೇಕಾಗುತ್ತದೆ.

ಬೀಸ್ಟ್‌ ಸಿಟಿಯೊಳಗೆ ನಡೆಯುವ ಆಟಗಳೂ ರೋಚಕವಾಗಿಯೇನೂ ಇರಲಿಲ್ಲ. ಇಲ್ಲೂ ಸ್ಪರ್ಧಿಗಳಿಗೆ ತಮ್ಮ ಬುದ್ಧಿ, ಕೌಶಲ ಪ್ರದರ್ಶಿಸಿ ಆಡುವ ಅವಕಾಶ ನೀಡಿರಲಿಲ್ಲ. ಇಲ್ಲಿ ತಂಡದಲ್ಲಿ ಯಾರಾದರೂ ಒಬ್ಬರು ವಿಫಲವಾದರೆ ಇಡೀ ತಂಡಕ್ಕೆ ಎಲಿಮಿನೇಟ್‌ ಆಗುವ ಶಿಕ್ಷೆ ಇತ್ತು. ಉದಾಹರಣೆಗೆ ದೊಡ್ಡ ತಂಡದಲ್ಲಿ ಒಂದು ಬಾಲ್‌ ಅನ್ನು ಕೆಳಗೆ ಇರುವ ಬಾಸ್ಕೆಟ್‌ಗೆ ಹಾಕಬೇಕಿತ್ತು. ಬಾಸ್ಕೆಟ್‌ಗೆ ಬಾಲ್‌ ಬಿದ್ದಿಲ್ಲವೆಂದಾದರೆ ಇಡೀ ತಂಡ ಔಟ್‌. ಇದೇ ರೀತಿ ಒಂದು ಕೋಣೆಯ ಪೂರ್ತಿ ಒಂದು ತಂಡ ಇರುತ್ತದೆ. ಅಲ್ಲಿ ಮೇಲಿನಿಂದ ಒಂದೊಂದಾಗಿ ಬಾಲ್‌ ಬೀಳುತ್ತದೆ. ಯಾರಾದರೂ ಮೇಲಿನಿಂದ ಬೀಳುವ ಬಾಲ್‌ ಕ್ಯಾಚ್‌ ಹಿಡಿದಿಲ್ಲವೆಂದಾದರೆ ಆ ಇಡೀ ತಂಡ ಔಟ್‌.

ವೈಯಕ್ತಿಕವಾಗಿ ನನಗೆ ಇಷ್ಟವಾಗದ ಇನ್ನೊಂದು ಅಂಶವೆಂದರೆ ಐವತ್ತು ಲಕ್ಷ ಮಿಲಿಯನ್‌ ಡಾಲರ್‌ನ ರಾಶಿಯೆಂದು ಬಿಂಬಿಸಲಾಗಿರುವ ಹಣದ ರಾಶಿಯ ವಿನ್ಯಾಸದ ಮೇಲೆ ನಿಂತು ಹೋಸ್ಟ್‌ ಕಾರ್ಯಕ್ರಮ ನಡೆಸಿಕೊಡುವ ರೀತಿ. ಹಣವನ್ನು ಕಾಲಲ್ಲಿ ಮೆಟ್ಟಬಾರದು, ಹಣಕ್ಕೆ ಅಗೌರವ ತೋರಿಸಬಾರದು ಎಂದೆಲ್ಲ ನಂಬುವವರಿಗೆ ಇದನ್ನು ನೋಡಲು ಕಷ್ಟವಾಗಬಹುದು. ಇಂತಹ ಶೋಗಳು ಹಣ ಸಂಪಾದನೆ ತುಂಬಾ ಸುಲಭ ಎಂಬ ಮನಸ್ಥಿತಿಯನ್ನೂ ಮೂಡಿಸಬಹುದು.

ಸದ್ಯ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಶೋ ಟಾಪ್‌ 1ನಲ್ಲಿದೆ. ಆದರೆ, ಶೋ ಬೋರ್‌ ಹೊಡೆಸುತ್ತದೆ, ಮನರಂಜನೆ ನೀಡಲು ವಿಫಲವಾಗುತ್ತಿದೆ ಎಂಬ ಅಭಿಪ್ರಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿದೆ. ನಾವೀಗ ಬಿಗ್‌ಬಾಸ್‌ ಶೋ ಎಂದು ದೊಡ್ಮನೆಯೊಳಗಿನ ಜಗಳ ಇತ್ಯಾದಿಗಳನ್ನು "ಆನಂದಿಸುತ್ತಿದ್ದೇವೆ". ಒಟಿಟಿ ಜಗತ್ತು ಸ್ಕ್ವಿಡ್‌ ಗೇಮ್‌, ಬೀಸ್ಟ್‌ ಗೇಮ್‌ ಎಂದು ಏನೇನೋ ಪ್ರಯೋಗ ಮಾಡುತ್ತಿದೆ. ಭವಿಷ್ಯದ ಮನರಂಜನೆ ಭಯಾನಕವಾಗಿರುವ ಮುನ್ಸೂಚನೆಯೂ ಇದಾಗಿರಬಹುದು.

  • ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner