OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ
ಕನ್ನಡ ಸುದ್ದಿ  /  ಮನರಂಜನೆ  /  Ott Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

Miss You Movie Review: ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾವು ಒಂದಿಷ್ಟು ಕುತೂಹಲವನ್ನು ಒಡಲಲ್ಲಿ ಇಟ್ಟುಕೊಂಡು ನೋಡಿಸಿಕೊಂಡು ಹೋಗುವ ಲವ್‌ ಮತ್ತು ಫ್ಯಾಮಿಲಿ ಡ್ರಾಮಾ. ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಹದವಾಗಿ ಬೆರೆಸಿರುವ ಸಿಂಪಲ್‌ ಬೆಲ್ಲದ ಕಾಫಿ ಎನ್ನಬಹುದು.

 ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ವಿಮರ್ಶೆ
ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ವಿಮರ್ಶೆ

Miss You Movie Review: ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ವಾರ ಬಿಡುಗಡೆಯಾದ ಮಿಸ್‌ ಯು ಸಿನಿಮಾ ಒಂದು ಹಿತವಾದ ಭಾವ ನೀಡುವ ಸರಳ ಸಿನಿಮಾ. ಈ ತಮಿಳು ಸಿನಿಮಾದಲ್ಲಿ ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ಬೆಂಗಳೂರಿಗೆ ಬರುವುದು, ಅಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಾಕೆಯ ಮೇಲೆ ಕ್ರಶ್‌ಗೆ ಬೀಳುವುದು ಇತ್ಯಾದಿಗಳು ಇರುವುದರಿಂದ ಇದು ಕನ್ನಡಿಗರಿಗೂ ಕನೆಕ್ಟ್‌ ಆಗಬಹುದಾದ ಸಿನಿಮಾ. ಈ ಸಲ ಕಪ್‌ ನಮ್ದೆ ಎಂಬ ಕನ್ನಡ ಡೈಲಾಗ್‌ ಎರಡು ಬಾರಿ ನಾಟಕೀಯವಾಗಿ ನುಸುಳಿದೆ. ನಿಮ್ಮ ಮಗನಿಗೆ ಆಕ್ಸಿಡೆಂಟ್‌ ಆಗಿದೆ ಎಂದು ಕರ್ನಾಟಕದ ಪೊಲೀಸ್‌ ಕನ್ನಡದಲ್ಲಿಯೇ ಹೇಳುತ್ತಾರೆ. ಇದರಲ್ಲಿ ನಾಯಕ ಕುಡಿಯುವ ಬೆಲ್ಲದ ಕಾಫಿಗೂ ಒಂದು ಪಾತ್ರವಿದೆ.

ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಒಳಗೊಂಡ ಒಂದು ಸರಳ ಚಿತ್ರ. ಒಂದೆರಡು ಫೈಟಿಂಗ್‌ ಸೀನ್‌ಗಳೂ ಇವೆ. ನಟ ಸಿದ್ಧಾರ್ಥ್‌ ಅವರ ಸಹಜ ನಟನೆ, ಆಶಿಕಾ ರಂಗನಾಥ್‌ ಮುದ್ದು ಮುಖದ ಜತೆಗೆ ಈ ಸಿನಿಮಾ ಅನಿರೀಕ್ಷಿತ ಘಟನೆಗಳ ಮೂಲಕ ಒಂದಿಷ್ಟು ಕುತೂಹಲವನ್ನು ಇಟ್ಟುಕೊಂಡು ನೋಡುವಂತೆ ಮಾಡುತ್ತದೆ. ಈ ಸಿನಿಮಾ ನಿಧಾನವಾಗಿ ಆರಂಭವಾಗಿ ಒಂದಿಷ್ಟು ಸಮಯದ ಬಳಿಕ ಲಯಕ್ಕೆ ಬರುತ್ತದೆ.

ಮಿಸ್‌ ಯು ಕಥೆಯೇನು?

ಮಿಸ್‌ ಯು ಸಿನಿಮಾದಲ್ಲಿ ನಾಯಕ ವಾಸುದೇವನ್‌ಗೆ (ಸಿದ್ಧಾರ್ಥ್‌) ಅಪಘಾತವಾಗುತ್ತದೆ. ಅಪಘಾತ ಮಾಡಿಸಿದ್ದು ರಾಜ್ಯದ ಮುಖ್ಯಮಂತ್ರಿ. ಅಪಘಾತದ ಬಳಿಕ ಆತನಿಗೆ ಇತ್ತೀಚಿನ ಎರಡು ವರ್ಷಗಳ ಘಟನೆ ನೆನಪಿಗೆ ಇರುವುದಿಲ್ಲ. ಆ ಸಿಎಂ ತನ್ನ ವೈರಿ ಎನ್ನುವುದೂ ಗೊತ್ತಿಲ್ಲ. ಅಷ್ಟೇ ಆಗಿದ್ದರೆ ಅದು ಹೀರೋ-ವಿಲನ್‌ ಕಥೆ ಆಗುತ್ತಿತ್ತು. ಅಪಘಾತದ ಬಳಿಕ ಬೆಂಗಳೂರಿಗೆ ಬಂದ ವಾಸು, ಸುಬ್ಬಲಕ್ಷ್ಮಿಯನ್ನು ನೋಡುತ್ತಾನೆ. ಆಕೆಯ ಧೈರ್ಯ, ರೆಬಲ್‌ ವರ್ತನೆಗೆ ಮನಸೋತು ಪ್ರೀತಿಗೆ ಬೀಳುತ್ತಾನೆ. ಅವಳನ್ನೇ ಮದುವೆಯಾಗಬೇಕೆಂದು ಫೋಟೋ ತೆಗೆದುಕೊಂಡು ಮನೆಗೆ ಬಂದವನಿಗೆ ಆಶ್ಚರ್ಯವಾಗುತ್ತದೆ. ಮನೆಯಲ್ಲಿ ಎಲ್ಲರೂ ಅವಳು ಬೇಡ ಎನ್ನುತ್ತಾರೆ. ಯಾಕೆಂದರೆ, ಆಕೆ ಬೇರೆ ಯಾರೂ ಅಲ್ಲ, ವಾಸು ಈ ಹಿಂದೆ ರಿಜೆಕ್ಟ್‌ ಮಾಡಿದ ಹುಡುಗಿ. ಈತ ಎರಡು ವರ್ಷದಲ್ಲಿ ಮರೆತದ್ದು ಇಷ್ಟು ವಿಷಯ ಮಾತ್ರವಲ್ಲ. ಹಲವು ಘಟನೆಗಳನ್ನು ಮರೆತಿರುತ್ತಾನೆ.

ಈತನಿಗೆ ಹಿಂದಿನದು ನೆನಪಿಲ್ಲ. ಆದರೆ, ಆಕೆಗೆ ಹಿಂದೆ ಈತನಿಂದ ಅನುಭವಿಸಿದ ನೋವು ನೆನಪಿದೆ. ಹೀಗಾಗಿ, ಈತನ ಪ್ರೀತಿಗೆ ಆಕೆ ಒಪ್ಪುವುದಿಲ್ಲ. ಮುಂದೊಂದು ದಿನ ಈತನಿಗೆ ಹಳೆಯದು ನೆನಪಿಗೆ ಬಂದರೆ ಇದೇ ರೀತಿಯ ಪ್ರೀತಿ ಇರುತ್ತದೆಯೇ ಎಂಬ ಅನುಮಾನವೂ ಇದೆ. ಈ ರೀತಿ ಒಂದಿಷ್ಟು ವರ್ಷಗಳ ಘಟನೆ ಮರೆಯುವಂತಹ ಬೇರೆ ಯಾವುದೋ ಸಿನಿಮಾ ನಿಮಗೆ ನೆನಪಿಗೆ ಬಂದರೂ ಅಚ್ಚರಿಯಿಲ್ಲ. ಇವರಿಬ್ಬರೂ ಕೊನೆಗೂ ಒಂದಾಗುತ್ತಾರ? ಸಿಎಂ ಕಡೆಯವರು ಈಕೆಯನ್ನು ಸಾಯಿಸಲು ಯತ್ನಿಸುವುದೇಕೆ? ಹೀಗೆ ಹಲವು ಪ್ರಶ್ನೆಗಳನ್ನು ಒಡಲಲ್ಲಿ ಇಟ್ಟುಕೊಂಡು ಸಿನಿಮಾ ಶಾಂತ ಸಮುದ್ರದಂತೆ ಸಾಗುತ್ತದೆ.

ಈ ಹಾಡಿನಲ್ಲಿ ಇರುವ ಕೆಲವು ಡ್ಯಾನ್ಸ್‌ಗಳು ಕಾಲೇಜು ವಾರ್ಷಿಕೋತ್ಸವದಲ್ಲಿ ಹಿಂದಿನ ಬೆಂಚಿನ ಹುಡುಗರು ಮಾಡಿರುವ ಡ್ಯಾನ್ಸ್‌ ನೆನಪಿಗೆ ತರಬಹುದು. ನಾಯಕ ಸಿದ್ಧಾರ್ಥ್‌ನದ್ದು ಅತಿರೇಕವಿಲ್ಲದ ಸಹಜ ನಟನೆ. ನಮ್ಮ ಕನ್ನಡದ ಹುಡುಗಿ ಆಶಿಕಾ ರಂಗನಾಥ್‌ "ಫ್ಯಾಮಿಲಿ ಹೆಣ್ಣು" ಮತ್ತು "ಬದಲಾದ ಹೆಣ್ಣು" ಲುಕ್‌ನಲ್ಲಿ ಹೆಚ್ಚು ವ್ಯತ್ಯಾಸ ಇಲ್ಲದಂತೆ ನಟಿಸಿದ್ದಾರೆ. ಇವರಿಬ್ಬರ ಜೋಡಿ ಕ್ಯೂಟ್‌ ಆಗಿದೆ ಎನ್ನಬಹುದು. ಗ್ರಿಬ್ಬಾನ್‌ ಹಾಡುಗಳು ಮನಮುಟ್ಟುವಂತೆ ಇಲ್ಲ. ಆದರೆ, ಹಿನ್ನೆಲೆ ಸಂಗೀತ ಪ್ರೇಮಮಯ, ಭಾವುಕ ಕ್ಷಣಗಳನ್ನು ಆಪ್ತವಾಗಿಸಿದೆ. ಈ ಸ್ಲೋ ಮೋಷನ್‌ ಸಿನಿಮಾ ಬೋರ್‌ ಹೊಡೆಯದಂತೆ ಸಂಕಲನವಿದೆ. ಒಟ್ಟಾರೆ ಮಿಸ್‌ ಯು ಸಿನಿಮಾವು ಕುಟುಂಬ ಸಮೇತ ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಒಂದು ಬಾರಿ ನೋಡಬಹುದಾದ ಸಿನಿಮಾ. ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಹದವಾಗಿ ಬೆರೆಸಿರುವ ಲೋಕಲ್‌ ಬೆಲ್ಲದ ಕಾಫಿ ಎನ್ನಬಹುದು.

  • ಸಿನಿಮಾ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

_______

ಸಿನಿಮಾದ ಹೆಸರು: ಮಿಸ್‌ ಯು

ಒಟಿಟಿ: ಅಮೆಜಾನ್‌ ಪ್ರೈಮ್‌ ವಿಡಿಯೋ

ಒಟಿಟಿ ಬಿಡುಗಡೆ ದಿನಾಂಕ: 2025-01-10

ತಾರಾಗಣ: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌, ಕರುಣಾಕರಣ್‌, ಜಯ ಪ್ರಕಾಶ್‌ ಮುಂತಾದವು

ನಿರ್ದೇಶನ: ರಾಜಶೇಖರ್‌

ಸಂಗೀತ: ಗಿಬ್ರಾನ್‌

ಎಚ್‌ಟಿ ಕನ್ನಡ ರೇಟಿಂಗ್‌: 2.5/5

Whats_app_banner