Rifle Club Movie Review: ಹಳೆ ತುಪಾಕಿಗಳ ನಡುವೆ ಹಾಸ್ಯ ಚಟಾಕಿ, ಡಾರ್ಕ್ ಕಾಮಿಡಿ "ರೈಫಲ್ ಕ್ಲಬ್" ಸಿನಿಮಾ ವಿಮರ್ಶೆ
Rifle club Movie Review: ಆಶಿಕ್ ಅಬು ನಿರ್ದೇಶನದ ರೈಫಲ್ ಕ್ಲಬ್ ಎಂಬ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮೂಲ ಮಲಯಾಳಂ ಸಿನಿಮಾ ಕನ್ನಡ ಭಾಷೆಯಲ್ಲಿಯೂ ಲಭ್ಯವಿದೆ. ಚಿತ್ರದ ಕಲಾವಿದರೆಲ್ಲರೂ ಪ್ರಮುಖ ಪಾತ್ರದಾರಿಗಳಂತೆ ಸಾಮೂಹಿಕ ಪ್ರದರ್ಶನ ತೋರಿದ ರೈಫಲ್ ಕ್ಲಬ್ ಚಿತ್ರದ ವಿಮರ್ಶೆ ಓದಿ.

Rifle club Movie Review: ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ರೈಫಲ್ ಕ್ಲಬ್ ಸಿನಿಮಾ ನೋಡಿ ಮುಗಿಸಿದ ಬಳಿಕ "ಈ ಸಿನಿಮಾದ ಹೀರೋ ಯಾರು?" ಎಂಬ ಪ್ರಶ್ನೆಯೊಂದು ಮೂಡುತ್ತದೆ. ಸಿನಿಮಾದೊಳಗಿನ ಸಿನಿಮಾದಲ್ಲಿ ಹೀರೋ ಆಗಿರುವ ಷಹಜಹಾನ್ (ವಿನೀತ್ ಕುಮಾರ್) ಈ ಚಿತ್ರದ ಹೀರೋ ಅಲ್ಲ. ರೈಫಲ್ ಕ್ಲಬ್‌ನ ವಿವಿಧ ವಯೋಮಾನದ ಎಲ್ಲಾ ಸದಸ್ಯರು ಈ ಚಿತ್ರದ ಹೀರೋ ಮತ್ತು ಹೀರೋಯಿನ್‌ಗಳು ಎಂದರೆ ತಪ್ಪಾಗದು. ಅಬ್ಬಬ್ಬ ಚಿತ್ರ ಒಂದರ್ಧ ಮುಗಿದ ಬಳಿಕ ಒಬ್ಬರಿಗೊಬ್ಬರು ಕಾಂಪಿಟೇಷನ್ ನೀಡುವಂತೆ ಅಚ್ಚರಿಯ ಪ್ರದರ್ಶನ ನೀಡುತ್ತಾರೆ. ರೈಫಲ್ ಕ್ಲಬ್ ಸಿನಿಮಾವು ಕ್ಲಬ್‌ನ ಸದಸ್ಯರೆಲ್ಲರ ಸಾಮೂಹಿಕ ಉತ್ಸವ, ಸಾಮೂಹಿಕ ಸಿಡಿಮದ್ದು ಪ್ರದರ್ಶನವಾಗಿದೆ. ಕಾಡು, ಬೇಟೆ, ಹಳೆಯ ಕ್ಲಬ್‌ನ ವಾತಾವರಣವು ವೀಕ್ಷಕರಿಗೆ ಬೇರೆಯದ್ದೇ ಫೀಲ್‌ನೀಡುತ್ತದೆ. ಡ್ರಗ್ಸ್ ಸೇವಿಸಿದಾತ ಚಿಕ್ಕ ಮಗುವಿನಂತೆ ಬಾಯಿ ಚೀಪುವಂತಹ ಹಲವು ಸೀನ್‌ಗಳು ಗನ್ ನಡುವೆ ಫನ್ ಹೆಚ್ಚಿಸಿವೆ. ಈ ಚಿತ್ರವು ಹಲವು ಕಾರಣಗಳಿಂದ ಇಷ್ಟವಾಗುತ್ತದೆ. ಇಷ್ಟವಾಗದೆ ಇರಲು ಕೆಲವು ಕಾರಣಗಳು ಇರಬಹುದು.
ಇದು ಸುಮಾರು ಒಂದು ದಿನದಲ್ಲಿ ನಡೆಯುವ ಘಟನೆ. ಒಂದು ದಿನದಲ್ಲಿ ದೊಡ್ಡ ಯುದ್ಶವೇ ನಡೆದು ಹೋಗುತ್ತದೆ. ಶಾಂತ ಸಮುದ್ರದ ನಡುವೆ ದೊಡ್ಡ ಸುನಾಮಿಯೇ ಸಂಭವಿಸುತ್ತದೆ. ರಕ್ತಪಾತದ ಕ್ಯಾನ್ವಸ್‌ನಲ್ಲಿ ಮನರಂಜನೆಯ ಅಂಶಗಳನ್ನು ಹದವಾಗಿ ಮಿಶ್ರಮಾಡಿ ಬ್ಲ್ಯಾಕ್ ಡಾರ್ಕ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆಶಿಕ್ ಅಬು. ಇದು ಸುಮಾರು 1990ರ ಆರಂಭದ ಸಿನಿಮಾ. ಹಳೆ ಕಾಲದ ಕಾರುಗಳು, ಗನ್‌ಗಳು ಪ್ರಮುಖ ಹೈಲೈಟ್.
ಸಿನಿಮಾದೊಳಗಿನ ಸಿನಿಮಾದ ನಾಯಕ ಷಹಜಹಾನ್ (ವಿನೀತ್ ಕುಮಾರ್)ಗೆ ಪ್ರಣಯ ಸಿನಿಮಾಗಳು ಸಾಕಾಗುತ್ತದೆ. ಗನ್ ಶೂಟಿಂಗ್ ಮತ್ತು ಬೇಟೆಯ ಸಿನಿಮಾ ಮಾಡಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಆತ ಬ್ರಿಟಿಷರ ಕಾಲದ ಸುಲ್ತನ್‌ಬತ್ತೇರಿ (ಸುಲ್ತಾನ್ ಬ್ಯಾಟರಿ)ಗೆ ಬರುತ್ತಾನೆ. ಬ್ರಿಟಿಷರ ಕಾಲದ ಮದ್ದುಗುಂಡು ತಾಣ ಈಗ ರೈಫಲ್ ಕ್ಲಬ್ ಆಗಿದೆ. ವಯನಾಡು ಪಶ್ಚಿಮ ಘಟ್ಟದ ನಡುವೆ ಇರುವ ಈ ಕ್ಲಬ್‌ನಲ್ಲಿ ವಿವಿಧ ವಯೋಮಾನದ ಹಲವು ಸದಸ್ಯರು ಇದ್ದಾರೆ. ಷಹಜಹಾನ್‌ನ ತಮ್ಮ ಮತ್ತು ಆತನ ಗೆಳತಿ ಮಂಗಳೂರಿನಲ್ಲಿ ಶಸ್ತ್ರಾಸ್ತ್ರ ವ್ಯಾಪಾರಿ ದಯಾನಂದ (ಅನುರಾಗ್ ಕಶ್ಯಪ್) ಜತೆ ವೈರತ್ವ ಕಟ್ಟಿಕೊಳ್ಳುವಂತಹ ಪ್ರಸಂಗವೊಂದು ನಡೆದಿದೆ. ಹೀಗಾಗಿ, ತಮ್ಮ ಮತ್ತು ಗೆಳತಿಯೂ ಕ್ಲಬ್‌ಗೆ ಬರುತ್ತಾರೆ. ಇವರಿಬ್ಬರನ್ನು ಹುಡುಕಿಕೊಂಡು ದಯಾನಂದನ ಮಕ್ಕಳು ಬರುತ್ತಾರೆ. ಬಳಿಕ ದಯಾನಂದ ತನ್ನ ಗ್ಯಾಂಗ್ ಜತೆ ಬರುತ್ತಾನೆ. ರೈಫಲ್ ಕ್ಲಬ್ ಸದಸ್ಯರ ಗ್ಯಾಂಗ್ ಮತ್ತು ದಯಾನಂದ ಗ್ಯಾಂಗ್ ನಡುವೆ ನಡೆಯುವ ಗನ್ ಫೈಟಿಂಗ್ ಈ ಸಿನಿಮಾದ ಹೈಲೈಟ್.
ಇಷ್ಟೇ ಆಗಿದ್ದರೆ ಇದು ಬರೀ ಟಿಶ್ಯೂಂ ಟಿಶ್ಯೂಂ ಸಿನಿಮಾವಾಗುತ್ತಿತ್ತು. ಚಿತ್ರದ ಆರಂಭದಿಂದಲೂ ಪ್ರತಿಯೊಂದು ದೃಶ್ಯಗಳನ್ನು ತೋರಿಸಿರುವ ರೀತಿ, ಹಿನ್ನೆಲೆ ಸಂಗೀತ ಆ ನಿಗೂಢ ಸುಲ್ತಾನ್ ಬತ್ತೇರಿಯೊಳಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಸಿನಿಮಾದ ಹೀರೋ ಅಂತ ಯಾರನ್ನು ನಾವು ಅಂದುಕೊಂಡಿರುತ್ತೇವೆಯೋ ಅವರ ಬದಲು ಇತರ ಕಲಾವಿದರೇ ಹೀರೋಗಳಾಗುವಂತಹ ಸನ್ನಿವೇಶವನ್ನು ಕಾಣಬಹುದು. ಆರಂಭದಲ್ಲಿ ಬಂದೂಕುಗಳ ಜತೆ ಆಟವಾಡುತ್ತ, ಪಟಾಕಿ ಸಿಡಿಸುವಂತೆ ಖುಷಿಪಡುತ್ತ ಇದ್ದವರಿಗೆ ನಿಜವಾದ ಯುದ್ಧ ಎದುರಾಗುತ್ತದೆ. ಅಲ್ಲಿಯ ತನಕ ಒಬ್ಬರನೊಬ್ಬರನ್ನು ಟೀಕಿಸಿಕೊಂಡು ಇದ್ದವರು “ಯುದ್ಧದ” ಸಮಯದಲ್ಲಿ ಕನೆಕ್ಟ್ ಆಗುವ ರೀತಿಗಳು ಇಷ್ಟವಾಗುತ್ತದೆ.
ಆರಂಭದಲ್ಲಿ ಈ ಸಿನಿಮಾ ತುಂಬಾ ಸ್ಲೋ ಇದೆ ಎಂದು ಕೆಲವು ದೃಶ್ಯಗಳನ್ನು ಓಡಿಸಿಕೊಂಡು ನೋಡಿದೆ. ಆದರೆ, ಒಂದರ್ಧ ಸಿನಿಮಾ ಮುಗಿದ ಬಳಿಕ ಈ ಚಿತ್ರ ಪಡೆದುಕೊಂಡ ತಿರುವು ಸಿನಿಮಾವನ್ನು ರೋಚಕವಾಗಿಸುತ್ತದೆ. ಬಳಿಕ ಬರೇ ಗನ್ ಫೈಟ್ ಆಗಿದ್ದರೂ ಅದರೊಳಗಿನ ಫನ್ ಎಲಿಮೆಂಟ್‌ಗಳು ಖುಷಿ ಕೊಡುತ್ತದೆ. ಹಳೆ ಕಾಲದ ಬಂದೂಕುಗಳು, ರಿವಾಲ್ವರ್‌ಗಳು, ಸೀಮಿತ ಗುಂಡುಗಳನ್ನು ಹೊಂದಿರುವ ರೈಪಲ್ ಕ್ಲಬ್ ಸದಸ್ಯರು ಮತ್ತು ಆಧುನಿಕ ರೈಫಲ್‌ಗಳು, ಸ್ನೈಫರ್‌ಗಳನ್ನು ಹೊಂದಿರುವ ಗ್ಯಾಂಗ್‌ನ ನಡುವಿನ ಕಾದಾಟದಲ್ಲಿ ಗೆಲ್ಲುವುದು ಯಾರು? ಎನ್ನುವ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.
ಡ್ರಗ್ಸ್ ವ್ಯಸನಿಗಳ ವರ್ತನೆಯನ್ನು ಕಾಮಿಡಿಯಾಗಿ ತೋರಿಸಿದ್ದು ಇಷ್ಟವಾಗುತ್ತದೆ. ಹೀಗಾಗಿ, ಇಲ್ಲಿ ವಿಲನ್ ರೋಲ್ ಭಯ ಹುಟ್ಟಿಸದೆ ತುಸು ನಗು ತರಿಸುತ್ತದೆ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಈ ರೈಫಲ್ ಕ್ಲಬ್ ಸಿನಿಮಾದಲ್ಲಿ ವಿಲನ್ ದಯಾನಂದನಾಗಿ ನಟಿಸಿದ್ದಾರೆ. ಅವರ ವರ್ತನೆ, ಮ್ಯಾನರಿಸಂ, ಆಕ್ಟಿಂಗ್ ಉತ್ತಮವಾಗಿದೆ. ನನಗೆ ತುಂಬಾ ಇಷ್ಟವಾದ ಇನ್ನೊಂದು ಪಾತ್ರ ದಿಲೀಶ್ ಪೋತನ್ ಅವರದ್ದು. "ವೂ ಈಸ್ ದಿ ಇನ್‌ಚಾರ್ಜ್ ಆಫ್ ದಿ ಕ್ಲಬ್" ಎಂದು ದಯಾನಂದ ಕೇಳಿದಾಗ "ಸೆಕ್ರೆಟರಿ ಅವರನ್ ಸ್ಪೀಕಿಂಗ್" ಎಂದು ಅವರನ್ ಹೇಳುತ್ತಾನೆ. ಈ ರೀತಿ ಇಬ್ಬರ ನಡುವೆ ಒಂದಿಷ್ಟು ಸಂಭಾಷಣೆ ನಡೆಯುತ್ತದೆ. ಸಿನಿಮಾದ ಕೊನೆಯಲ್ಲಿ ನಡೆಯುವ ಇಬ್ಬರ ಈ ಸಂಭಾಷಣೆಗಳೂ ಗನ್ ನಡುವೆ ಫನ್ ಬಾಂಬ್ ಸಿಡಿಸುತ್ತದೆ.
ಕಾಡಿನ ನಡುವೆ ನಡೆಯುವ ಈ ಸಿನಿಮಾದ ಕಥೆಯಲ್ಲಿ ಕ್ಯಾಮೆರಾ ವರ್ಕ್ ಮತ್ತು ಸಂಗೀತ ನನಗೆ ಖುಷಿ ಕೊಟ್ಟ ಇನ್ನೆರಡು ಅಂಶಗಳು. ಆಶಿಕ್ ಅಬು ಅವರ ಛಾಯಾಗ್ರಹಣ ಒಂಥರ ಡಿಫರೆಂಟ್ ಆಗಿದೆ. ರೋಮಾಂಚಕಾರಿ ಆಕ್ಷನ್ ಕೋರಿಯೋಗ್ರಫಿಯೂ ಚಿತ್ರದ ಹೈಲೈಟ್. ನಿಗೂಢತೆ ಸೂಚಿಸುವ ಹಿನ್ನೆಲೆ ಸಂಗೀತವೂ ಆಪ್ತವಾಗಿದೆ. ಚಿತ್ರದ ಕಥೆ ತುಸು ಟೊಳ್ಳಾಗಿರುವಂತೆ ಇದೆ. ಆದರೆ, ಒಂದು ಬಾರಿ ಖುಷಿಯಾಗಿ ನೋಡಬಹುದಾದ ಸಿನಿಮಾ ಇದೆಂದರೆ ತಪ್ಪಾಗದು. ದೊಡ್ಡ ತಾರಾ ಬಳಗ ಇರುವ ಈ ಚಿತ್ರವು ಕೆಲವೊಂದು ಅನಿರೀಕ್ಷಿತ ಕ್ಷಣಗಳ ಮೂಲಕವೂ ನೋಡಿಸಿಕೊಂಡು ಹೋಗುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಬಿಡುಗಡೆಯಾದ ಚಿತ್ರವು ಕನ್ನಡ ಭಾಷೆಯಲ್ಲಿಯೂ ಲಭ್ಯವಿದೆ.
- ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು
ಸಿನಿಮಾದ ಹೆಸರು: ರಫೈಲ್ ಕ್ಲಬ್
ಮೂಲ: ಮಲಯಾಳಂ, ಒಟಿಟಿಯಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲೂ ಲಭ್ಯ
ಹಿಂದೂಸ್ತಾನ್ ಟೈಮ್ಸ್ ಕನ್ನಡ ರೇಟಿಂಗ್: 3.5/5
ಪಾತ್ರವರ್ಗ: ವಿಜಯ್ ರಾಘವನ್, ದಿಲೀಶ್ ಪೋತನ್, ಅನುರಾಗ್ ಕಶ್ಯಪ್ , ವಾಣಿ ವಿಶ್ವನಾಥ್, ಸುರಭಿ ಲಕ್ಷ್ಮಿ ಮತ್ತು ಇತರರು
ನಿರ್ದೇಶಕ: ಆಶಿಕ್ ಅಬು
ಸಂಗೀತ: ರೆಕ್ಸ್ ಸಾಜನ್
