ಓಟಿಟಿ ವಿಮರ್ಶೆ: ಯೋಗಿ ಬಾಬು ನಟನೆಯ ಬೋಟ್‌ ಸಿನಿಮಾ ಹೇಗಿದೆ? ಸಮುದ್ರದ ನಡುವೆ ಪ್ರಾಣ ಸಂಕಟ
ಕನ್ನಡ ಸುದ್ದಿ  /  ಮನರಂಜನೆ  /  ಓಟಿಟಿ ವಿಮರ್ಶೆ: ಯೋಗಿ ಬಾಬು ನಟನೆಯ ಬೋಟ್‌ ಸಿನಿಮಾ ಹೇಗಿದೆ? ಸಮುದ್ರದ ನಡುವೆ ಪ್ರಾಣ ಸಂಕಟ

ಓಟಿಟಿ ವಿಮರ್ಶೆ: ಯೋಗಿ ಬಾಬು ನಟನೆಯ ಬೋಟ್‌ ಸಿನಿಮಾ ಹೇಗಿದೆ? ಸಮುದ್ರದ ನಡುವೆ ಪ್ರಾಣ ಸಂಕಟ

ಒಟಿಟಿ ಸಿನಿಮಾ ವಿಮರ್ಶೆ: ಯೋಗಿ ಬಾಬು ನಟನೆಯ ಬೋಟ್‌ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿದೆ. ಚಿಂಬು ದೇವನ್‌ ನಿರ್ದೇಶನದ ಈ ಸಿನಿಮಾ ಒಂದು ಸಲ ನೋಡಬಹುದಾದ ಸಿಂಪಲ್‌ ಸಿನಿಮಾ. ಅದ್ಭುತ ಸರ್ವೈವಲ್‌ ಚಿತ್ರವಾಗುವ ಸಾಧ್ಯತೆ ಇದ್ದರೂ ನಿರ್ದೇಶಕರು ರಿಸ್ಕ್‌ ತೆಗೆದುಕೊಂಡಿಲ್ಲ.

ಬೋಟ್‌ ಒಟಿಟಿ ಸಿನಿಮಾ ವಿಮರ್ಶೆ
ಬೋಟ್‌ ಒಟಿಟಿ ಸಿನಿಮಾ ವಿಮರ್ಶೆ

ಓಟಿಟಿ ಸಿನಿಮಾ ವಿಮರ್ಶೆ: ಯೋಗಿ ಬಾಬು ನಟನೆಯ ಸಿನಿಮಾವೆಂದರೆ ಒಂದಿಷ್ಟು ನಗು ಇದ್ದೇ ಇರುತ್ತದೆ. ಆದರೆ, ಬೋಟ್‌ ಹಾಗಲ್ಲ, ಇದೊಂದು ಸರ್ವೈವಲ್‌ ಡ್ರಾಮಾ, ಅಂದರೆ, ಬದುಕುಳಿಯುವ ಕಥನ. ಥಿಯೇಟರ್‌ಗಿಂತ ಒಟಿಟಿಯಲ್ಲಿ ವೀಕ್ಷಿಸಲು ಸೂಕ್ತವಾದ ಸಿನಿಮಾ ಎನ್ನಬಹುದು. ಚಟ್ನಿ ಸಾಂಬಾರ್‌ ವೆಬ್‌ ಸರಣಿ ಬಳಿಕ ಒಟಿಟಿಗೆ ಬಂದ ಬೋಟ್‌ ಸಿನಿಮಾವನ್ನು ತುಂಬಾ ಆಳವಾಗಿ ಬಗೆಯಲು ಹೋದರೆ ನಿರಾಶೆಯಾಗಬಹುದು. ಸಿನಿಮಾದಲ್ಲಿರುವ ಐತಿಹಾಸಿಕ ಮಾಹಿತಿಗಳ ಸತ್ಯಾಸತ್ಯತೆ, ಪ್ರೊಪಗಾಂಡ ಮುಂತಾದ ವಿಚಾರಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಬೋಟ್‌ ಸಿನಿಮಾ ಇಷ್ಟವಾಗಬಹುದು. ಆದರೆ, ಏನೋ ಕೌತುಕ ಹುಟ್ಟಿಸಿ ನಿರಾಶೆ ಹುಟ್ಟಿಸುವಂತಹ ಅನೇಕ ಸಂಗತಿಗಳನ್ನು ಮರೆಯುವಂತೆ ಇಲ್ಲ.

ಬೋಟ್‌ ಸಿನಿಮಾದ ಕಥೆ ಮತ್ತು ವಿಮರ್ಶೆ

ಇದು ಸ್ವಾತಂತ್ರ್ಯ ಪೂರ್ವದ ಕಥೆ ಹೊಂದಿದೆ. 1943ರಲ್ಲಿ ಮದ್ರಾಸ್‌ನಲ್ಲಿ ನಡೆದ ಘಟನೆ. ಜಪಾನ್‌ ದೇಶವು ಮದ್ರಾಸ್‌ ಮೇಲೆ ಬಾಂಬ್‌ ಹಾಕುವ ಭೀತಿಯ ನಡುವೆ ನಡೆಯುತ್ತದೆ. ಈ ಸಮಯದಲ್ಲಿ ಹತ್ತು ಜನರು ಒಂದು ಸಣ್ಣ ಬೋಟ್‌ ಮೂಲಕ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಳಿಕ ಕಥೆ ಸಣ್ಣ ಬೋಟ್‌ ಮತ್ತು ವಿಶಾಲ ಸಮುದ್ರದಲ್ಲಿ ನಡೆಯುತ್ತದೆ. ಈ ಬೋಟ್‌ನಲ್ಲಿ ಭಾರತದ ವೈವಿಧ್ಯಮಯ ಜನರನ್ನು ತೋರಿಸಲಾಗಿದೆ. ತಂದೆ ಮತ್ತು ಮಗಳು, ಗರ್ಭಿಣಿ ಮತ್ತು ಆಕೆಯ ಮಗ, ಇನ್ನೊಂದಿಷ್ಟು ನಿಗೂಢ ಜನರು ಇರುತ್ತಾರೆ. ಅವರೇ ಉಗ್ರರು ಎಂಬ ಅನುಮಾನ ಆರಂಭದಲ್ಲಿ ಇರುತ್ತದೆ. ಇನ್ನಷ್ಟು ವಿಸ್ತರಿಸಿ ಹೇಳಬೇಕಾದರೆ ದೋಣಿಯ ಮಾಲೀಕ ಬೆಸ್ತ ಕುಮಾರನ್ (ಯೋಗಿ ಬಾಬು) ಮತ್ತು ಅವನ ವಯಸ್ಸಾದ ಅಜ್ಜಿ ಮುತ್ತುಮರಿ (ಕುಲ್ಲಾಪುಲಿ ಲೀಲಾ), ​​ರಾಜಸ್ಥಾನಿ ಲಾಲ್ (ಚಾಮ್ಸ್), ನಾರಾಯಣನ್ (ಚಿನ್ನಿ ಜಯಂಧ್), ಬ್ರಾಹ್ಮಣ ಗುಮಾಸ್ತ ಮತ್ತು ಅವರ ಮಗಳು ಲಕ್ಷ್ಮಿ (ಗೌರಿ ಕಿಶನ್), ವಿಜಯಾ (ಮಧುಮಿತಾ), ತೆಲುಗು ಮಹಿಳೆ (ಗರ್ಭಿಣಿ )ಮತ್ತು ಅವಳ ಮಗ ಮಹೇಶ್ (ಅಕ್ಷತ್) ಮತ್ತು ಇಬ್ಬರು ನಿಗೂಢ ಪುರುಷರಾದ ರಾಜಾ ಮುಹಮ್ಮದ್ (ಶ ರಾ) ಮತ್ತು ಮುತ್ತಯ್ಯ (ಎಂಎಸ್ ಭಾಸ್ಕರ್) ಈ ಬೋಟ್‌ನಲ್ಲಿ ಇರುತ್ತಾರೆ. ಈ ಮೂಲಕ ಒಂದು ಮಿನಿ ಭಾರತದ ಕಥೆ ಹೇಳುವ ಪ್ರಯತ್ನ ಬೋಟ್‌ನೊಳಗೆ ಕಾಣಿಸುತ್ತದೆ. ಇನ್ನೊಂದು ಇಲಿ ಇರುತ್ತದೆ. ಆ ಇಲಿ ಗರ್ಭ ಧರಿಸಿರುತ್ತದೆ.

ಈ ನಡುವೆ ಬ್ರಿಟಿಷ್‌ ಕರ್ನಲ್‌ ಒಬ್ಬ ಸಮುದ್ರದ ನಡುವೆ ಈ ಬೋಟ್‌ಗೆ ಸೇರುತ್ತಾನೆ. ಆತ ಈ ಬೋಟ್‌ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ, ಚಿಕ್ಕ ಬೋಟ್‌ಗೆ ಇಷ್ಟು ಜನರನ್ನು ತಡೆಯುವ ಶಕ್ತಿ ಇರುವುದಿಲ್ಲ. ಒಂದಿಬ್ಬರು ನೀರಿಗೆ ಹಾರಿ ಸತ್ತರೆ ಬೋಟ್‌ನಲ್ಲಿದ್ದವರು ಬಚಾವಾಗಬಹುದು. ಯಾರಿಗೆ ತಾನೇ ಸಾಯಲು ಇಷ್ಟವಿರುತ್ತದೆ. ಈ ಸಮಯದಲ್ಲಿ ಇತರರ ಸ್ವಾರ್ಥ ಮನಸ್ಸು ಕುಮಾರನ್‌ ಮತ್ತು ಅಜ್ಜಿಯನ್ನು ಸಾಯಿಸುವ ಕುರಿತೂ ಆಲೋಚಿಸುತ್ತದೆ. ಈ ಬೋಟ್‌ನಲ್ಲಿರುವವರಿಗೆ ಆಗಾಗ ಹಲವು ಅಪಾಯಗಳು ಕಾಣಿಸುತ್ತವೆ. ದೊಡ್ಡ ತಿಮಿಂಗಲ, ಬೋಟ್‌ನ ತೂತಿನಿಂದ ನೀರು ಒಳಕ್ಕೆ ಬರುವುದು, ಸಮುದ್ರದಡಿಯ ಒಂದು ಬಾಂಬ್‌ ಎಲ್ಲವೂ ಇರುತ್ತದೆ. ಈ ಮೂರು ಅಂಶಗಳು ಮುಂದೆನಾಗಬಹುದು ಎಂಬ ಕುತೂಹಲ ಹೆಚ್ಚಿಸುತ್ತದೆ. ಇದರೊಂದಿಗೆ ಇರುವ ಹತ್ತು ಜನರಲ್ಲಿ ಉಗ್ರರು ಯಾರು ಎಂಬ ಕುತೂಹಲವೂ ಇರುತ್ತದೆ. ಅವನು ಆಗಿರಬಹುದಾ? ಅವಳು ಆಗಿರಬಹುದಾ? ಎಂಬ ಕುತೂಹಲ ಇದ್ದೇ ಇರುತ್ತದೆ.

ಇವಿಷ್ಟು ವಿಷಯಗಳಲ್ಲಿ ಇದೊಂದು ಅದ್ಭುತ ಬದುಕುಳಿಯವ ಡ್ರಾಮಾ ಆಗುವ ಸಾಧ್ಯತೆ ಇತ್ತು. ಆದರೆ, ನಿರ್ದೇಶಕರು ಹೆಚ್ಚು ರಿಸ್ಕ್‌ ತೆಗೆದುಕೊಳ್ಳದೆ ಸಾಧಾರಣ ಸಿನಿಮಾ ಮಾಡಿಬಿಟ್ಟಿದ್ದಾರೆ. ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರ ಸೇರಲಿ ಎಂಬಂತೆ ಬೋಟ್‌ ಹೋಗುತ್ತ ಇರುತ್ತದೆ, ಮಾತುಗಳು, ಜಗಳ, ಸಾಂಸ್ಕೃತಿಕ ರಾಜಕೀಯ ಎಲ್ಲವೂ ನಡೆಯುತ್ತದೆ. ಆದರೆ, ಈ ಬೋಟ್‌ ದಡ ಸೇರುತ್ತಾ? ಎಂಬ ಕುತೂಹಲ ಇರುವವರು ಖಂಡಿತಾ ಇದನ್ನು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ನೋಡಬಹುದು.

ಯೋಗಿ ಬಾಬು ಈ ಬೋಟ್‌ ಮತ್ತು ಸಿನಿಮಾವನ್ನು ತನ್ನ ಭುಜದ ಮೇಲೆ ಹೊತ್ತಂತೆ ಮುನ್ನಡೆಸಿದ್ದಾರೆ. ಕಾಮಿಡಿ ನಟ ಗಂಭೀರವಾಗಿ ನಟಿಸುವುದು ಕಷ್ಟ. ಅಲ್ಲಲ್ಲಿ ತುಸು ಕಾಮಿಡಿ ಕಾಣಿಸಿದರೆ ಅದು ಯೋಗಿ ಬಾಬು ತಪ್ಪು ಅಲ್ಲ ಎನ್ನಬಹುದು. ಈ ಬೋಟ್‌ ಸಿನಿಮಾವು 1944ರ ಆಲ್ಬರ್ಟ್‌ ಹಿಚ್‌ಕಾಕ್‌ರ ಲೈಫ್‌ಬೋಟ್‌ ಸಿನಿಮಾದಿಂದ ಸ್ಪೂರ್ತಿ ಪಡೆದಿದೆ ಎನ್ನಲಾಗಿದೆ. ಆ ಸಿನಿಮಾಕ್ಕೆ ಹೋಲಿಸಿದರೆ ಇದು ಶೇಕಡ 1ರಷ್ಟೂ ಇಲ್ಲ ಎನ್ನಲಾಗುತ್ತಿದೆ. ಈ ಸಿನಿಮಾದೊಳಗೆ ನಿರ್ದೇಶಕರು ಜಾತೀಯತೆ, ಕಮ್ಯುನಿಸಂ, ಸ್ವಾತಂತ್ರ್ಯ ಹೋರಾಟ, ಸಮಾನತೆ ಮುಂತಾದ ಅಂಶಗಳನ್ನು ತುರುಕಲು ಯತ್ನಿಸಿದಂತೆಯೂ ಕಾಣುತ್ತದೆ. ಚಿಂಬು ದೇವನ್‌ ನಿರ್ದೇಶನದ ಇತರೆ ಸಿನಿಮಾಗಳನ್ನು ನೋಡಿದ್ದರೆ ಈ ಸಿನಿಮಾ ಸಪ್ಪೆ ಎನಿಸಬಹುದು. ಸದ್ಯ ಒಟಿಟಿಯಲ್ಲಿ ಬಿಡುಗಡೆಯಾದ ಸಾಕಷ್ಟು ಸಿನಿಮಾಗಳಿಗೆ ಹೋಲಿಸಿದರೆ ಬೋಟ್‌ ತುಸುವಾದರೂ ಇಷ್ಟವಾಗುತ್ತದೆ.

ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

 

ಒಟಿಟಿ ಸಿನಿಮಾ ವಿಮರ್ಶೆ

ಸಿನಿಮಾದ ಹೆಸರು: ಗೋಟ್‌

ಯಾವ ಓಟಿಟಿಯಲ್ಲಿದೆ?: ಅಮೆಜಾನ್‌ ಪ್ರೈಮ್‌ ವಿಡಿಯೋ

ತಾರಾಗಣ: ಯೋಗಿ ಬಾಬು, ಗೌರಿ ಜಿ ಕಿಶನ್, ಮಾಸ್ ಭಾಸ್ಕರ್, ಚಿನ್ನಿ ಜಯಂತ್, ಜೆಸ್ಸಿ ಫಾಕ್ಸ್-ಅಲೆನ್, ಚಾನ್ಸ್, ಮಧುಮಿತಾ, ಶಾ ರಾ, ಕೊಲ್ಲಾಪುಲಿ ಲೀಲಾ, ಮತ್ತು ಅಕ್ಷತ್ ದಾಸ್

ನಿರ್ದೇಶಕ: ಚಿಂಬು ದೇವನ್‌