Vidaamuyarchi Climax: ಮೋಸಗಾತಿ ಹೆಂಡತಿಯನ್ನು ಕ್ಷಮಿಸಿದ್ದು ಸರಿಯೇ? ಅಜಿತ್ , ತ್ರಿಶಾ ನಟನೆಯ ವಿಡಾಮುಯರ್ಚಿ ಸಿನಿಮಾದ ಅಚ್ಚರಿಯ ಅಂತ್ಯ
Vidaamuyarchi OTT: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ವಿಡಾಮುಯರ್ಚಿ ನಿಗೂಢ ಕಥೆಯನ್ನು ಹೊಂದಿರುವ ಸಾಹಸಯಮಯ ಥ್ರಿಲ್ಲರ್ ಸಿನಿಮಾ. ಈ ಸಿನಿಮಾದ ಕ್ಲೈಮ್ಯಾಕ್ಸ್ ಹೀಗೆ ಆಗಬಾರದಿತ್ತು ಎಂದು ಸಾಕಷ್ಟು ಜನರು ಹೇಳಿದ್ದಾರೆ. ಸುಫಾರಿ ನೀಡಿದ ಮೋಸಗಾತಿ ಹೆಂಡತಿಯನ್ನು ಕ್ಷಮಿಸುವಂತಹ ಮಹಾನ್ ಗುಣ ಬೇಕಿತ್ತೇ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ

Vidaamuyarchi OTT:ಅಜಿತ್ ಕುಮಾರ್, ತ್ರಿಶಾ ಕೃಷ್ಣನ್ ನಟಿಸಿರುವ ವಿಡಾಮುಯರ್ಚಿ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಅನೇಕ ರಹಸ್ಯ, ಕುತೂಹಲ, ನಿಗೂಢತೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಸಾಗುವ ಸಿನಿಮಾ. ಆರಂಭದಲ್ಲಿ ಮಧುರ ಪ್ರೇಮಕಥೆಯಂತೆ ನದಿಯ ನೀರಿನಂತೆ ಸಾಗುವ ಸಿನಿಮಾ ಬಳಿಕ ಆಕ್ಷನ್ ಟ್ರ್ಯಾಕ್‌ಗೆ ಮರಳುತ್ತದೆ. ಇದೇ ಸಿನಿಮಾದಲ್ಲಿ ಹೆಂಡತಿಯ ಒಂದು ಮೋಸ, ತಣ್ಣನೆಯ ಕ್ರೌರ್ಯ ಅಚ್ಚರಿ ಹುಟ್ಟಿಸುತ್ತದೆ.
ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್ ಅವರು ಕಾಯಲ್ ಎಂಬ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಕೆಯ ಪತಿ ಅರ್ಜುನ್ (ಅಜಿತ್ ಕುಮಾರ್). ಈಕೆಗೆ ಪ್ರಕಾಶ್ ಎಂಬ ಲವರ್ ಇರುತ್ತಾನೆ. ಈತನಿಗಾಗಿ ಪತಿಗೆ ಡಿವೋರ್ಸ್ ನೀಡಲು ಬಯಸುತ್ತಾಳೆ. ಅರ್ಜುನ್ ಮತ್ತು ಕಾಯಲ್ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಆರಂಭದಲ್ಲಿ ಇರುವ ಅತೀವ ಪ್ರೀತಿ, ರೋಮಾನ್ಸ್ ಕಡಿಮೆಯಾಗಿದೆ. ಈಕೆಗೆ ಮಿಸ್‌ಕ್ಯಾರೇಜ್ ಆಗಿದೆ.
ನನಗೆ ಪ್ರಕಾಶ್ ಎಂಬ ವ್ಯಕ್ತಿಯ ಜತೆ ಸಂಬಂಧ ಇದೆ ಮತ್ತು ನನಗೆ ಡಿವೋರ್ಸ್ ನೀಡು ಎಂದು ಅರ್ಜುನ್‌ಗೆ ಹೇಳುತ್ತಾಳೆ ಕಾಯಲ್. ಈ ವಿಷಯವನ್ನು ಪ್ರಾಮಾಣಿಕತೆಯಿಂದ ಹೇಳಿರುವ ಹೆಂಡತಿಯನ್ನು ಹೊಗಳುತ್ತಾನೆ. ನಾನು ಡಿವೋರ್ಸ್ ನೀಡಿದ ಬಳಿಕ ತಿಬಿಲಿಸಿ ಎಂಬ ಊರಲ್ಲಿ ಹೆತ್ತವರ ಜತೆ ಇರಬೇಕೆಂದು ಕಾಯಲ್ ಬಯಸುತ್ತಾಳೆ. ನಾವಿಬ್ಬರು ಬೇರೆಯಾಗುವ ಮೊದಲು ಕೊನೆಯ ಬಾರಿ ಟ್ರಿಪ್ ಹೋಗೋಣ, ನಿನ್ನ ಹೆತ್ತವರ ಮನೆಗೆ ನಾನೇ ಕಾರಲ್ಲಿ ಡ್ರಾಪ್ ಮಾಡುವೆ ಎಂದು ಅರ್ಜುನ್ ಹೇಳುತ್ತಾನೆ. ಪ್ರಯಾಣ ಆರಂಭವಾಗುತ್ತದೆ.
ಇವರಿಬ್ಬರ ಈ ರೋಡ್ ಟ್ರಿಪ್ ವೇಳೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅಪರಿಚಿತರ ಎಂಟ್ರಿಯಾಗುತ್ತದೆ. ಕೆಲವೊಮ್ಮೆ ನಮ್ಮ ನಂಬಿಕೆಗಳೇ ಸುಳ್ಳಾದಂತೆ ಘಟನೆಗಳು ನಡೆಯುತ್ತವೆ. ಪತ್ನಿಯ ಕಿಡ್ನ್ಯಾಪ್ ಆಗುತ್ತದೆ. ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಆದರೆ, ಆ ಸಮಯದಲ್ಲಿ ತನ್ನ ಪತ್ನಿಯ ಕುರಿತಾದ ಅನೇಕ ಸಂಗತಿಗಳು "ಕ್ಷಮಿಸಲಾಗದ ವಿಷಯಗಳು" ತಿಳಿಯುತ್ತವೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಈತ ತನ್ನ ಹೆಂಡತಿಯನ್ನು ಕ್ಷಮಿಸುತ್ತಾನೆ. ಡಿವೋರ್ಸ್‌ಗೆ ಮುಂದಾದವರು ಮತ್ತೆ ಒಂದಾಗುತ್ತಾರೆ.
ವಿಡಾಮುಯರ್ಚಿ ಸಿನಿಮಾದ ಅಚ್ಚರಿಯ ಅಂತ್ಯ
ಈ ಸಿನಿಮಾದ ಕ್ಲೈಮ್ಯಾಕ್ಸ್ ಅಚ್ಚರಿ ತಂದಿದೆ ಎಂದು ಈಗಾಗಲೇ ರೆಡಿಟ್‌ನಲ್ಲಿ ಚರ್ಚೆಯಾಗಿದೆ. "ಈ ರೀತಿ ಮೋಸ ಮಾಡಿದ ಪತ್ನಿಯನ್ನು ಕ್ಷಮಿಸಿದ್ದು ಸರಿಯಲ್ಲ. ಅಂತ್ಯದಲ್ಲಿ ಅವರಿಬ್ಬರು ಒಂದಾಗುವುದನ್ನು ತೋರಿಸುವ ಬದಲು, ದೂರ ಆಗುವುದು ಅಥವಾ ಯಾವುದೇ ನಿರ್ಧಾರಕ್ಕೆ ಬರಲಾಗದಂತೆ ತೋರಿಸಬಹುದಿತ್ತು" "ಈಕೆ ಗಂಡನಿಗೆ ಮೋಸ ಮಾಡುತ್ತಾಳೆ. ಈ ರೀತಿ ಮೋಸ ಮಾಡಲು ನೀನೇ ಕಾರಣ ಎಂದು ಗಂಡನಿಗೆ ಹೇಳುತ್ತಾಳೆ. ಇದೆಲ್ಲ ಇಷ್ಟು ಸಹಜವಾಗಿ ನಡೆಯುವ ವಿಷಯಗಳೇ?" "ತನ್ನನ್ನು ಕೊಲ್ಲಲು ಸುಫಾರಿ ನೀಡಿದ ಮೋಸಗಾತಿ ಹೆಂಡತಿಯನ್ನು ಕ್ಷಮಿಸುವಂತಹ ಮಹಾನ್ ಗುಣ ಬೇಕಿತ್ತೇ" ಎಂದು ಕೆಲವರು ಪ್ರಶ್ನಿಸಿದ್ದಾರೆ.
"ಈ ಸಿನಿಮಾ ನೀಡುವ ಸಂದೇಶ ವಿಲಕ್ಷಣವಾಗಿದೆ. ಈ ಸಿನಿಮಾದಲ್ಲಿ ಅಫೇರ್ ವಿಷಯ ಇಲ್ಲದೆ ಇದ್ದರೂ ಏನಾಗುತ್ತಿರಲಿಲ್ಲ. ಸಿನಿಮಾದ ಕೊನೆಗೆ ಅರ್ಜುನ್ ಮತ್ತು ಕಾಯಲ್ ಸಂಬಂಧ ಕೊನೆಗೊಳ್ಳಬೇಕಿತ್ತು" "ಪತ್ನಿಯ ಡಿವೋರ್ಸ್, ಆಕೆಯ ಕಿಡ್ನ್ಯಾಪ್, ಆಕೆಯನ್ನು ಕಾಪಾಡು, ಆಕೆಗೆ ಸಾವು ಬದುಕಿನ ಕ್ಷಣಗಳನ್ನು ನೀಡು, ಆಕೆಗೆ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸು, ಡಿವೋರ್ಸ್ ಕ್ಯಾನ್ಸಲ್" "ಇದು ಅನಿರುದ್ಧ ಅವರ ಅತ್ಯಂತ ದುರ್ಬಲ ಕಥೆ" ಎಂದೆಲ್ಲ ಕ್ಲೈಮ್ಯಾಕ್ಸ್ ಕುರಿತು ಜನರು ಚರ್ಚೆ ಮಾಡಿದ್ದಾರೆ.
ವಿಡಾಮುಯರ್ಚಿ ಸಿನಿಮಾವು ಅತ್ಯಂತ ರೋಚಕವಾಗಿ ಸಾಗುತ್ತದೆ. ಕಾರಿನಲ್ಲಿ ಮಾಡುವ ಸಾಹಸ ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ವಿಲನ್ ಪಾತ್ರಗಳ ಅಬ್ಬರವೂ ಅದ್ಭುತವಾಗಿದೆ. ಅಜಯ್ ಕುಮಾರ್ ಸಾಹಸವನ್ನು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಭಾರತದ ರೋಚಕ ಸಿನಿಮಾಗಳಲ್ಲಿ ಇದನ್ನು ಒಂದು ಎಂದು ಹೇಳಲು ಅಡ್ಡಿಯಿಲ್ಲ.


