OTT releases: ಈ ವೀಕೆಂಡ್‌ನಲ್ಲಿ ಒಟಿಟಿಯಲ್ಲಿ ನೋಡಿ, ಅಟ್ಲಾಸ್, ಪಂಚಾಯತ್, ಆಡುಜೀವಿತಂ ಸೇರಿದಂತೆ 5 ಸಿನಿಮಾ, ಸರಣಿಗಳು ರಿಲೀಸ್
OTT releases to watch this week: ಸುರಿಯುವ ಮಳೆಯ ನಡುವೆ ಮನೆಯಲ್ಲಿಯೇ ಕುಳಿತು ಒಟಿಟಿಯಲ್ಲಿ ಸಿನಿಮಾ ನೋಡಲು ಬಯಸುವವರಿಗೆ ಈ ವಾರಾಂತ್ಯದಲ್ಲಿ ಹಲವು ಸಿನಿಮಾಗಳು ಕಾಯುತ್ತಿವೆ. ಅಟ್ಲಾಸ್, ಪಂಚಾಯತ್, ಆಡುಜೀವಿತಂ, ಕ್ರ್ಯೂ ಸೇರಿದಂತೆ ಹಲವು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿವೆ.
ಬೆಂಗಳೂರು: ಕರ್ನಾಟಕದ ಮಂಗಳೂರು, ಮಡಿಕೇರಿ, ಬೆಂಗಳೂರು, ಮೈಸೂರು, ಹಾಸನ, ಧಾರವಾಡ, ಚಿಕ್ಕಮಗಳೂರು ಸೇರಿದಂತೆ ಎಲ್ಲೆಡೆ ವರುಣನ ಆಗಮನವಾಗಿದೆ. ಅಲ್ಲಲ್ಲಿ ಜೋರು ಮಳೆ ಸುರಿಯುತ್ತಿದೆ. ಇಂತಹ ಮಳೆಯ ನಡುವೆ ಮನೆಯಿಂದ ಹೊರಕ್ಕೆ ಹೋಗದೆ ಮನೆಯಲ್ಲಿಯೇ ಕುಳಿತು ಒಟಿಟಿ ಆನ್ ಮಾಡಲು ಹೆಚ್ಚಿನವರು ಗಮನ ನೀಡಬಹುದು. ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಜಿಯೋಸಿನೆಮಾ, ಸೋನಿಲಿವ್ ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು ಆಗಮಿಸಿವೆ. ಈ ವೀಕೆಂಡ್‌ನಲ್ಲಿ ಇನ್ನಷ್ಟು ಸಿನಿಮಾ, ಸರಣಿಗಳು ಬಿಡುಗಡೆಯಾಗುತ್ತಿವೆ.
ಕಾರ್ದಶಿಯಾನ್ ಕುಟುಂಬದ ರೋಮಾಂಚಕ ಹೊಸ ಅಧ್ಯಾಯದಿಂದ ಹಿಡಿದು ವೆಬ್ ಶೋನ ಬಹುನಿರೀಕ್ಷಿತ ಸೀಸನ್‌ನ ಬಿಡುಗಡೆಯವರೆಗೆ ಈ ವೀಕೆಂಡ್‌ನಲ್ಲಿ ಹಲವು ಸಿನಿಮಾ ಸರಣಿಗಳನ್ನು ನೋಡಬಹುದು. ಪಂಚಾಯತ್‌ನ ಹೊಸ ಸೀಸನ್ ಆರಂಭವಾಗಿದೆ. ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ ನಟನೆಯ ಕ್ರ್ಯೂ ಸಿನಿಮಾ ಈ ವಾರ ರಿಲೀಸ್ ಆಗಿದೆ. ಜೆನ್ನಿಫರ್ ಲೋಪೆಜ್ ಅವರ ಅಟ್ಲಾಸ್ ಅನ್ನು ಈ ವಾರ ನೋಡಬಹುದು.
ಅಟ್ಲಾಸ್
ಬಹು ನಿರೀಕ್ಷಿತ ವೈಜ್ಞಾನಿಕ ಥ್ರಿಲ್ಲರ್ ಗಳಲ್ಲಿ ಒಂದಾದ ಅಟ್ಲಾಸ್ ಸಿನಿಮಾದಲ್ಲಿ ನಟ-ಗಾಯಕಿ ಜೆನ್ನಿಫರ್ ಲೋಪೆಜ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಕುರಿತು ನಂಬಿಕೆ ಹೊಂದಿಲ್ಲದೆ ಇರುವ ಭಯೋತ್ಪಾದನಾ ವಿರೋಧಿ ಡೇಟಾ ವಿಶ್ಲೇಷಕ ಅಟ್ಲಾಸ್ ಶೆಫರ್ಡ್ ಪಾತ್ರದಲ್ಲಿ ಇವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಥ್ರಿಲ್ಲರ್ ನಲ್ಲಿ ಸಿಮು ಲಿಯು ಮತ್ತು ಸ್ಟರ್ಲಿಂಗ್ ಕೆ ಬ್ರೌನ್ ಕೂಡ ಇದ್ದಾರೆ. ಮೇ 24ರಂದು ಅಟ್ಲಾಸ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.
ಕ್ರ್ಯೂ
ಮಹಿಳಾ ತಾರಾಗಣದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಗೆದ್ದಿತ್ತು. ಟಬು, ಕರೀನಾ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ ಕ್ರ್ಯೂ ಸಿನಿಮಾ ಮೇ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ವಿಮಾನಯಾನ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದಾಗ ಈ ತೊಂದರೆಯಿಂದ ಪಾರಾಗಲು ಈ ಮೂವರು ಸಿಬ್ಬಂದಿ ದರೋಡೆಗಿಳಿಯುತ್ತಾರೆ. ಈ ಸಿನಿಮಾದಲ್ಲಿ ಸಾಕಷ್ಟು ಕಾಮಿಡಿಯೂ ಇದೆ.
ಆಡುಜೀವಿತಂ - ದಿ ಗೋಟ್ ಲೈಫ್
ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾವು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಸರ್ವೈವಲ್ ಸಿನಿಮಾ ಮೇ 26ರಂದು ರಿಲೀಸ್ ಆಗಲಿದೆ. ಬ್ಲಾಸ್ಲಿ ನಿರ್ದೇಶನದಲ್ಲಿ ಆಡುಜೀವಿತಂ ಸಿನಿಮಾ ತೆರೆಕಂಡಿತ್ತು. ಕೇರಳದ ವ್ಯಕ್ತಿಯೊಬ್ಬರು ಸೌದಿಯಲ್ಲಿ ಕಷ್ಟದ ಜೀವನ ನಡೆಸಿದ ಕಥೆಯನ್ನು ಇದು ಹೊಂದಿತ್ತು. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಒಟಿಟಿಯಲ್ಲಿ ಲಭ್ಯವಿರಲಿದೆ. ಕನ್ನಡದಲ್ಲಿ ಹೊಂಬಾಳೆ ಫಿಲಂಸ್ ಈ ಸಿನಿಮಾ ವಿತರಣೆ ಹಕ್ಕನ್ನು ಪಡೆದುಕೊಂಡಿತ್ತು. ತೆಲುಗಿನಲ್ಲಿ ಮೈತ್ರಿ ಮೂವಿ ಮೇಕರ್ಸ್ ವತಿಯಿಂದ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೇ 26ರಂದು ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದಾಗಿದೆ.
ಕಾರ್ದಶಿಯಾನ್ ಸೀಸನ್ 5
ಜನಪ್ರಿಯ ರಿಯಾಲಿಟಿ ಟಿವಿ ಸರಣಿಯ ಐದನೇ ಸೀಸನ್ ನಿನ್ನೆ ಅಂದರೆ ಗುರುವಾರ ಬಿಡುಗಡೆಯಾಗಿದೆ. ಈ ಕಾರ್ಯಕ್ರಮವು ಗುರುವಾರ ಡಿಸ್ನಿ + ಹಾಟ್ಸ್ಟಾರ್ನಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಹೊಸ ಎಪಿಸೋಡ್‌ಗಳು ವಾರಕ್ಕೊಮ್ಮೆ ಬಿಡುಗಡೆಯಾಗಲಿವೆ.
ಪಂಚಾಯತ್ ಸೀಸನ್ 3
ವೆಬ್ ಶೋ ಪಂಚಾಯತ್ ನ ಮೂರನೇ ಸೀಸನ್ ಮೇ 28 ರಂದು ಬಿಡುಗಡೆಯಾಗಲಿದೆ. ಈ ಮೂಲಕ ಬಹುದಿನಗಳ ಕಾಯುವಿಕೆ ಅಂತ್ಯಗೊಳ್ಳಲಿದೆ. ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುಬೀರ್ ಯಾದವ್, ಫೈಸಲ್ ಮಲಿಕ್, ಚಂದನ್ ರಾಯ್ ಮತ್ತು ಸಾನ್ವಿಕಾ ಈ ಸೀಸನ್‌ನಲ್ಲಿ ನಟಿಸಿದ್ದಾರೆ.
ಪಂಚಾಯತ್ ಸರಣಿಯಲ್ಲಿ ರಘುವೀರ್ ಸ್ಥಳೀಯ ರಾಜಕಾರಣಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಇದರಿಂದ 'ಸಂಜೀವ್ ಜಿ' ಅಭಿಷೇಕ್ ತ್ರಿಪಾಠಿ (ಜಿತೇಂದ್ರ ಪಾತ್ರ) ಅವರ ಭವಿಷ್ಯವು ಅಪಾಯದಲ್ಲಿದೆ. ಮೂರನೇ ಸೀಸನ್ ಕಥೆ ಇಲ್ಲಿಂದ ಆರಂಭವಾಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮೇ 28ರಂದು ಪಂಚಾಯತ್ ಮೊದಲ ಬಾರಿಗೆ ಪ್ರಸಾರವಾಗಿತ್ತು.