Blink OTT: ಭಾರತದ ಒಟಿಟಿಯಲ್ಲೂ ಬಿಡುಗಡೆಯಾಯ್ತು ಬ್ಲಿಂಕ್ ಸಿನಿಮಾ; ದೀಕ್ಷಿತ್ ಶೆಟ್ಟಿ ನಟನೆಯ ಸಿನಿಮಾಕ್ಕೆ ಒಟಿಟಿ ವೀಕ್ಷಕರಿಂದ ಬಹುಪರಾಕ್
Blink Movie OTT Release: ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಜೆ ಆಚಾರ್ ನಟನೆಯ ಈ ಚಿತ್ರ ಭಾರತದಲ್ಲೂ ಒಟಿಟಿಯಲ್ಲಿ ರಿಲೀಸ್ ಆಗಿದೆ ಎಂಬ ಸುದ್ದಿ ಒಟಿಟಿ ವೀಕ್ಷಕರಿಗೆ ಖುಷಿ ತಂದಿದೆ.
ಬೆಂಗಳೂರು: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕೆಲವು ದಿನಗಳ ಹಿಂದೆ ಬ್ಲಿಂಕ್ ಕನ್ನಡ ಸಿನಿಮಾ ಬಿಡುಗಡೆಯಾಗಿತ್ತು. ಭಾರತ ಹೊರತುಪಡಿಸಿ ಅಮೆರಿಕ, ಇಂಗ್ಲೆಂಡ್‌ನಲ್ಲಿ ಬ್ಲಿಂಕ್ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಇದೀಗ ಅಮೆಜಾನ್ ಪ್ರೈಮ್ ಇಂಡಿಯಾದಲ್ಲೂ ಬ್ಲಿಂಕ್ ಬಿಡುಗಡೆಯಾಗಿದೆ. ಭಾರತದ ಒಟಿಟಿ ವೀಕ್ಷಕರು ಈ ಸಿನಿಮಾ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಾಚೆಗೂ ಬ್ಲಿಂಕ್ ಸಿನಿಮಾವನ್ನು ಟ್ರೆಂಡ್ ಮಾಡಲು ನೆರವಾಗುವಂತೆ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಬ್ಲಿಂಕ್ ಸಿನಿಮಾ ನಿರ್ಮಾಪಕ ರವಿಚಂದ್ರ ಎಜೆ ಮನವಿ ಮಾಡಿದ್ದಾರೆ.
ಬ್ಲಿಂಕ್ ಸಿನಿಮಾಕ್ಕೆ ಪ್ರೋತ್ಸಾಹ ನೀಡಿ
ಅಮೆಜಾನ್ ಪ್ರೈಮ್ ಇಂಡಿಯಾದಲ್ಲೂ ಈಗ ಬ್ಲಿಂಕ್ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಭಾರತೀಯರು ಬ್ಲಿಂಕ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದಾಗಿದೆ. "ಎಕ್ಸ್ (ಟ್ವಿಟ್ಟರ್)ನಲ್ಲಿ ಬ್ಲಿಂಕ್ ಸಿನಿಮಾದ ಹ್ಯಾಷ್‌ಟ್ಯಾಗ್‌ಗಳನ್ನು ಪ್ರಚಾರ ಮಾಡಿ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ನೋಡಿರುವ ಪ್ರೇಕ್ಷಕರು ಮತ್ತು ವಿಮರ್ಶಕರು ಚೆನ್ನಾಗಿದೆ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬ್ಲಿಂಕ್ ಸಿನಿಮಾ ಪ್ರಸಾರವಾಗುತ್ತಿದೆ. ದಯವಿಟ್ಟು ಪ್ರಿಂಟ್, ಪೇಪರ್, ಟ್ರೋಲ್ ಪೇಜ್‌ಗಳಲ್ಲಿ ಬ್ಲಿಂಕ್ ಸಿನಿಮಾದ ಕುರಿತು ಪ್ರಚಾರ ಮಾಡಿ. ಈ ಮೂಲಕ ಕರ್ನಾಟಕದಾಚೆಗೂ ಬ್ಲಿಂಕ್ ಸಿನಿಮಾ ತಲುಪುವಂತೆ ಮಾಡಿ" ಎಂದು ಬ್ಲಿಂಕ್ ನಿರ್ಮಾಪಕರಾದ ರವಿಚಂದ್ರ ಎಜೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ಲಿಂಕ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದ ಈ ಚಿತ್ರ ಕಾಣಿಸದೆ ಇರಬಹುದು. ಸದ್ಯದಲ್ಲಿಯೇ ಈ ತೊಂದರೆ ಸರಿಯಾಗಬಹುದು. ಪ್ರೈಮ್‌ನಲ್ಲಿ ಬ್ಲಿಂಕ್ ಕಾಣಿಸದೆ ಇದ್ದರೆ ಸರ್ಚ್‌ಗೆ ಹೋಗಿ Blink ಎಂದು ಹುಡುಕಿ. ಕೆಲವು ದಿನಗಳ ಹಿಂದೆ ಅಮೆಜಾನ್ ಪ್ರೈಮ್‌ನಲ್ಲಿ ಬಾಡಿಗೆ (ರೆಂಟ್) ಆಧಾರದಲ್ಲಿ ಬ್ಲಿಂಕ್ ಸಿನಿಮಾವನ್ನು ವೀಕ್ಷಿಸಲು ಇಂಗ್ಲೆಂಡ್ ಮತ್ತು ಅಮೆರಿಕದ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಭಾರತ ಸೇರಿದಂತೆ ಇತರೆ ದೇಶಗಳ ಪ್ರೇಕ್ಷಕರಿಗೆ "ಸದ್ಯ ನೀವಿರುವ ಲೊಕೆಷನ್‌ನಲ್ಲಿ ಬ್ಲಿಂಕ್ ಸಿನಿಮಾ ಲಭ್ಯವಿಲ್ಲ" ಎಂಬ ಸೂಚನೆ ದೊರಕುತ್ತಿತ್ತು. ಇದೀಗ ಭಾರತದಲ್ಲೂ ಬಿಡುಗಡೆಯಾಗಿ ಸಾಕಷ್ಟು ಜನರು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ ಎಂಬ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಬ್ಲಿಂಕ್ ಸಿನಿಮಾಕ್ಕೆ ಒಟಿಟಿಯಲ್ಲಿ ಪ್ರಶಂಸೆ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬ್ಲಿಂಕ್ ಸಿನಿಮಾ ನೋಡಿರುವ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಅತ್ಯುತ್ತಮ ಚಿತ್ರ" "ವಿನೂತನವಾಗಿದೆ" "ಕ್ಲೈಮ್ಯಾಕ್ಸ್ ತುಸು ಗೊಂದಲ ಮೂಡಿಸಿತು" "ಸೂಪರ್" ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ಲಿಂಕ್‌ಗೆ ಬೆಂಬಲ ಬೇಕು
ಕೆಲವು ದಿನಗಳ ಹಿಂದೆ ಬ್ಲಿಂಕ್ ನಿರ್ಮಾಪಕರು ಈ ಚಿತ್ರದ ಕುರಿತು ಟ್ವಿಟ್ಟರ್‌ನಲ್ಲಿ ಸುದೀರ್ಘವಾಗಿ ಬರೆದಿದ್ದರು. "ಅನೇಕ ಅಡೆತಡೆಗಳನ್ನು ದಾಟಿ ಏಳುಬೀಳುಗಳನ್ನು ದಾಟಿ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣದ ನಂತರ ಮಾರ್ಚ್ 8ಕ್ಕೆ ನಾವು ನಮ್ಮ ಸಿನಿಮಾ ಬ್ಲಿಂಕ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೆವು. ಹಂಚಿಕೆದಾರರಿಗಾಗಿ ನಾಲ್ಕೈದು ಕಡೆ ಅಲೆದಾಡಿ ಯಾವುದು ಕೈಗೆಟುಕದಿದ್ದಾಗ ಸ್ವತಹ ನಾವೇ ಒಂದಿಷ್ಟು ಧೈರ್ಯವನ್ನು ಮಾಡಿ ನಮ್ಮ ಜನನಿ ಪಿಕ್ಚರ್ಸ್ ವಿಶಾಲ ಕರ್ನಾಟಕಕ್ಕೆ ಹಂಚಿಕೆದಾರರಾಗಿ ಬ್ಲಿಂಕ್ ಸಿನಿಮಾವನ್ನು ಬಿಡುಗಡೆ ಮಾಡಿದ್ದೆವು. ಬಿಡುಗಡೆಯಾದ ವಾರದಲ್ಲಿ ಮೊದಮೊದಲು ಕಡಿಮೆ ಪ್ರದರ್ಶನಗಳು ಸಿಕ್ಕಿದ್ದವು ಆದರೆ ಸಿನಿಮಾ ಪ್ರಿಯರು, ಪ್ರೇಕ್ಷಕರು ಬ್ಲಿಂಕ್ ಸಿನಿಮಾವನ್ನು ನೋಡಿದ ನಂತರ ತಾವು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾ ಹೋದಂತೆಲ್ಲ ಮಲ್ಟಿಪ್ಲೆಕ್ಸ್ ಗಳಿಗೆ ಬ್ಲಿಂಕ್ ಸಿನಿಮ ನೋಡಲು ಆಗಮಿಸುವ ಜನರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು" ಎಂದು ಬ್ಲಿಂಕ್ ಕುರಿತು ಬರೆದುಕೊಂಡಿದ್ದರು.
"ನಮ್ಮ ಹಿರಿಯರಾದ ಡಾ. ಶಿವರಾಜಕುಮಾರ್ ನವೀನ್ ಶಂಕರ್ ಹಾಗೂ ನಿರ್ದೇಶಕರುಗಳಾದ ಸಿಂಪಲ್ ಸುನಿ ಮನ್ಸೂರೆ ಹಾಗೂ ಇನ್ನಿತರ ಅನೇಕ ಕಲಾವಿದರು ನಮ್ಮ ಸಿನಿಮಾಾಗೆ ಬೆಂಬಲ ಕೊಟ್ಟಿದ್ದನ್ನು ಸ್ಮರಿಸುತ್ತೇನೆ. ಇದರಿಂದ ಅನೇಕ ಜನ ನಮ್ಮ ಸಿನಿಮಾವನ್ನು ನೋಡುವಂತಾಗಿ ಕನ್ನಡ ಚಿತ್ರರಂಗದಲ್ಲಿ ಒಂದು ಹೆಗ್ಗಳಿಕೆ ಪಡೆಯಿತು. ಎಲ್ಲವೂ ಅಂದುಕೊಂಡಂತೆ ಆಗುತ್ತಿತ್ತು ಆದರೂ ಕೂಡ, ಅದೇ ಸಮಯದಲ್ಲಿ ಮಲಯಾಳಂ ಭಾಷೆಯ ಒಂದು ಚಿತ್ರ ಬಿಡುಗಡೆಯಾಗಿ ಅದು ಕರ್ನಾಟಕದಲ್ಲಿ ಮನ್ನಣೆ ಪಡೆದಷ್ಟು ನಮ್ಮ ಚಿತ್ರಗೆ ಮನ್ನಣೆ ಸಿಗಲಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.