Savi Trending in Ott: ಒಟಿಟಿಯಲ್ಲಿ ಸವಿ ಸಿನಿಮಾ ಟ್ರೆಂಡಿಂಗ್; ರೋಚಕ ಸಿನಿಮಾಕ್ಕೆ ಪ್ರೇಕ್ಷಕರಿಂದ ಬಹುಪರಾಕ್
Savi - OTT Streaming: ಚಿತ್ರಮಂದಿರಗಳಲ್ಲಿ ಸವಿ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸು ಕಾಣಿಸಿರಲಿಲ್ಲ. ಆದರೆ, ಈ ಚಿತ್ರಕ್ಕೆ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಪಡೆಯೋಣ.

Savi Trending in Ott: ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಸಾಕಷ್ಟು ಜನರನ್ನು ತಲುಪುವುದಿಲ್ಲ. ಸಿನಿಮಾ ಚೆನ್ನಾಗಿದೆ ಬನ್ನಿ ಬನ್ನಿ ಅಂದ್ರೂ ಒಟಿಟಿಗೆ ಬಂದ ಮೇಲೆ ನೋಡಿಕೊಂಡ್ರಾಯ್ತು ಎಂದುಕೊಳ್ಳುತ್ತೇವೆ. ಈ ಟ್ರೆಂಡ್ ಕನ್ನಡ ಚಿತ್ರರಂಗದಲ್ಲಿ ಮಾತ್ರ ಇರುವುದಲ್ಲ. ಹಿಂದಿ ಭಾಷೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸವಿ ಎಂಬ ಚಿತ್ರ ಚಿತ್ರಮಂದಿರದಲ್ಲಿ ಸರಿಯಾಗಿ ಓಡಿರಲಿಲ್ಲ. ಆದರೆ, ಇದೀಗ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಹಿರಿಯ ತಾರೆ ಅನಿಲ್ ಕಪೂರ್, ದಿವ್ಯಾ ಕೋಸಲ ಮತ್ತು ತೆಲುಗು ನಟ ಹರ್ಷವರ್ಧನ್ ರಾಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಮೇ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಬಹುತೇಕ ಪಾಸಿಟಿವ್ ಪ್ರತಿಕ್ರಿಯೆ ದೊರಕಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ಆದರೆ, ಈಗ ಸವಿ ಚಿತ್ರ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ.
ಒಟಿಟಿಯಲ್ಲಿ ಸವಿ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ
ಸವಿ ಸಿನಿಮಾ ಇತ್ತೀಚೆಗೆ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಒಟಿಟಿಯಲ್ಲಿ ಈ ಚಿತ್ರ ನೋಡಿದ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಚಿತ್ರವು ಆಸಕ್ತಿದಾಯಕ ಮತ್ತು ಥ್ರಿಲ್ಲಿಂಗ್ ಆಗಿದೆ ಎಂದು ಹೇಳುತ್ತಿದ್ದಾರೆ. ಸಸ್ಪೆನ್ಸ್ ಜತೆಗೆ ಭಾವನಾತ್ಮಕವಾಗಿಯೂ ಇಷ್ಟವಾಗುತ್ತದೆ ಎಂದಿದ್ದಾರೆ.
ಸವಿ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಈ ಸಿನಿಮಾ ಭಾರತದ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಜಾನ್ವಿ ಕಪೂರ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ಮಹಿ ಸಿನಿಮಾ ಸದ್ಯ ಮೊದಲ ಸ್ಥಾನದಲ್ಲಿದೆ. ಇದೇ ವೇಗ ಮುಂದುವರಿದರೆ ಸವಿ ಮೊದಲ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ.
ಸವಿ ಚಿತ್ರದ ಬಗ್ಗೆ
ಸವಿ ಚಿತ್ರವನ್ನು ಅಭಿನಯ್ ದೇವ್ ನಿರ್ದೇಶಿಸಿದ್ದಾರೆ. 2010 ರ ಅಮೇರಿಕನ್ ಆಕ್ಷನ್ ಥ್ರಿಲ್ಲರ್ 'ದಿ ನೆಕ್ಸ್ಟ್ ತ್ರೀ ಡೇಸ್' ಮತ್ತು ಫ್ರೆಂಚ್ ಸಿನಿಮಾ ಎನಿಥಿಂಗ್ ಫಾರ್ ಹರ್‌ನಿಂದ ಸ್ಪೂರ್ತಿ ಪಡೆದು ಈ ಸಿನಿಮಾ ನಿರ್ಮಿಸಲಾಗಿದೆ. ಲಂಡನ್ ಹಿನ್ನಲೆಯಲ್ಲಿ ಚಿತ್ರ ಮೂಡಿಬಂದಿದೆ.
ಸವಿ ಚಿತ್ರದಲ್ಲಿ ಅನಿಲ್ ಕಪೂರ್, ದಿವ್ಯಾ ಕೋಸಲ, ಹರ್ಷವರ್ಧನ್ ರಾಣೆ, ರಾಗೇಶ್ವರಿ ಲೂಂಬಾ, ಮೈರಾಜ್ ಕಕ್ಕರ್, ಹಿಮಾಂಶಿ ಚೌಧರಿ, ಲ್ಯೂಕ್ ವೂಗ್ಲರ್, ಎಂಕೆ ರೈನಾ ಮತ್ತು ರವಿ ಮುಲ್ತಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ್ ಫಿಲ್ಮ್ಸ್ ಮತ್ತು ಟಿ ಸೀರೀಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮುಖೇಶ್ ಭಟ್, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶಾಲ್ ಮಿಶ್ರಾ ಜೊತೆಗೆ ಇನ್ನೂ ನಾಲ್ವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸವಿ ಚಿತ್ರವನ್ನು ಸುಮಾರು ರೂ.20 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರ ಸುಮಾರು ರೂ.17 ಕೋಟಿ ಕಲೆಕ್ಷನ್ ಮಾಡಿದೆ.
ಸವಿ ಸಿನಿಮಾದ ಕಥೆ
ಸವಿ (ದಿವ್ಯಾ ಕೋಸಲ), ಅವರ ಪತಿ ನಕುಲ್ ಸಚ್‌ದೇವ (ಹರ್ಷವರ್ಧನ್ ರಾಣೆ) ಮತ್ತು ಅವರ ಮಗ ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಸಂತೋಷದ ಜೀವನವನ್ನು ನಡೆಸುತ್ತಾರೆ. ಆದರೆ, ನಕುಲ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಾನೆ. ಈ ಸುಳ್ಳು ಪ್ರಕರಣದಿಂದ ಆತ ಪರಿತಪಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಆತ ತಪ್ಪಿತಸ್ಥರೆಂದು ಕಾನೂನು ಸಾಬೀತು ಮಾಡುತ್ತದೆ. 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದರಿಂದ ಇವರ ಜೀವನ ಅಸ್ತವ್ಯಸ್ತವಾಗುತ್ತದೆ. ನಕುಲ್‌ನನ್ನು ಹೊರಗೆ ತರಲು ಸವಿ ಪ್ರಯತ್ನ ಮಾಡುತ್ತಾಳೆ. ಜೈಲಿನಲ್ಲಿ ಗ್ಯಾಂಗ್ ಒಂದು ನಕುಲ್‌ನನ್ನು ಕೊಲ್ಲಲು ಪ್ರಯತ್ನಿಸುತ್ತದೆ ಎಂದು ಸವಿಗೆ ತಿಳಿಯುತ್ತದೆ. ತನ್ನ ಪತಿಯನ್ನು ರಕ್ಷಿಸುವ ಕಾರ್ಯದಲ್ಲಿ ಸವಿ ಯಶಸ್ವಿಯಾಗುತ್ತಾಳ? ಕೊಲೆಯ ರಹಸ್ಯವೇನು? ತಿಳಿಯಲು ಸವಿ ಸಿನಿಮಾ ನೋಡಬಹುದು.
