ಒಟಿಟಿಯಲ್ಲಿ ಬ್ಲಾಕ್ಬಸ್ಟರ್, ಬೋಲ್ಡ್ ಸಿನಿಮಾಗಳನ್ನೇ ಹಿಂದಿಕ್ಕಿದ ಈ ಅಟ್ಟರ್ಫ್ಲಾಪ್ ಚಿತ್ರ; ಟಾಪ್-1 ಟ್ರೆಂಡಿಂಗ್
OTT Trending Movies: ಕಮಲ್ ಹಾಸನ್ ನಟನೆಯ ಹಾಗೂ ಅಟ್ಟರ್ಫ್ಲಾಪ್ ಆಗಿರುವ ಇಂಡಿಯನ್-2 ಚಿತ್ರವು ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಬ್ಲಾಕ್ಬಸ್ಟರ್, ಬೋಲ್ಡ್ ಚಿತ್ರಗಳನ್ನು ಹಿಂದಿಕ್ಕಿ ಟಾಪ್-1 ಟ್ರೆಂಡಿಂಗ್ ಆಗಿ ಮುನ್ನುಗ್ಗುತ್ತಿದೆ.
OTT Trending Movies: ನಿಜ ಹೇಳಬೇಕೆಂದರೆ, ಕೆಲವೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಬರುವ ರೆಸ್ಪಾನ್ಸ್ಗೂ ಮತ್ತು ಬಾಕ್ಸಾಫೀಸ್ ಕಲೆಕ್ಷನ್ಗೂ ಸಂಬಂಧವೇ ಇರಲ್ಲ. ಅದೇ ರೀತಿ ಇದೇ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪಡೆಯುವ ಪ್ರತಿಕ್ರಿಯೆಯೇ ಬೇರೆಯಾಗಿರುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಹೊಡೆದ ಎಷ್ಟೋ ಸಿನಿಮಾಗಳು ಒಟಿಟಿಯಲ್ಲಿ ನೆಗೆಟಿವ್ ಟಾಕ್ ಪಡೆದು ಪಲ್ಟಿ ಹೊಡೆದಿದ್ದೂ ಉಂಟು. ಅಲ್ಲದೆ, ಟ್ರೋಲ್ ಕೂಡ ಆಗಿವೆ.
ಹಾಗೆ ಚಿತ್ರಮಂದಿರಗಳಲ್ಲಿ ನೆಗೆಟಿವ್ ಟಾಕ್ ಪಡೆದ ಎಷ್ಟೋ ಚಿತ್ರಗಳು ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದಿವೆ. ಥಿಯೇಟರ್‌ನಲ್ಲಿ ಇಷ್ಟಪಡದ ಅತ್ಯುತ್ತಮ ಕಂಟೆಂಟ್ ಚಿತ್ರಗಳು ಪ್ರಶಂಸೆಯನ್ನು ಪಡೆದಿರುವುದನ್ನು ನೋಡಿದ್ದೇವೆ. ಈ ರೀತಿಯಾಗಿ ಯಾವ ಸಿನಿಮಾ, ಹೇಗೆ, ಯಾವಾಗ, ಯಾವ ಕಾರಣಕ್ಕೆ, ಎಂತಹ ರೆಸ್ಪಾನ್ಸ್ ಪಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಗೊಂಡ ಅಟ್ಟರ್ ಫ್ಲಾಪ್ ಸಿನಿಮಾ, ಪ್ರಸ್ತುತ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ.
ಅಷ್ಟೆ ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ವಿಮರ್ಶಕರಿಂದ ಬ್ಲಾಕ್ ಬಸ್ಟರ್ ಹಿಟ್ ಟಾಕ್ ತಂದುಕೊಂಡ ಸಿನಿಮಾಗಳನ್ನು ಹಾಗೂ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಬೋಲ್ಡ್ ಅ್ಯಂಡ್ ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ಸಹ ಹಿಂದಿಕ್ಕಿರುವ ಈ ಸಿನಿಮಾ ಟಾಪ್-1 ಟ್ರೆಂಡಿಂಗ್ ಆಗಿ ಮುನ್ನುಗ್ಗುತ್ತಿದೆ. ಆ ಸಿನಿಮಾ ಬೇರೆ ಯಾವುದೋ ಅಲ್ಲ, ಇತ್ತೀಚೆಗೆ ಬಿಡುಗಡೆಯಾದ ಹಿರಿಯ ನಟ ಕಮಲ್ ಹಾಸನ್ ನಟಿಸಿದ ಇಂಡಿಯನ್-2.
ಆದರೆ ಇಂಡಿಯನ್-2 ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಒಟ್ಟಾರೆ ಅತ್ಯಂತ ಕೆಟ್ಟ ರಿವಿವ್ಯೂ ಬಂದಿತ್ತು. ಒಟಿಟಿಗೆ ಮೊದಲು ಬಂದಾಗಲೂ ಇಂಡಿಯನ್-2 ನೆಗೆಟಿವ್ ಟಾಕ್ ಪಡೆಯಿತು. ಇದೆಂತಾ ಸಿನಿಮಾ, ಚೂರು ಲಾಜಿಕ್ ಇಲ್ಲ, ಅನವಶ್ಯಕ ದೃಶ್ಯಗಳು ಎಂದು ನೆಟ್ಟಿಗರು, ನೆಟ್ಟಗೆ ಸಿನಿಮಾ ತೆಗೆಯಬೇಕು ಸೂಚಿಸಿದ್ದಾರೆ. ಆದರೆ ಎಲ್ಲೆಡೆ ನೆಗೆಟಿವ್ ರೆಸ್ಪಾನ್ಸ್ ಪಡೆದುಕೊಂಡ ಇಂಡಿಯನ್ -2 ಇದೀಗ ಒಟಿಟಿ ವೇದಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಅಟ್ಟರ್ಫ್ಲಾಪ್ ಸಿನಿಮಾಗೆ ಅಗ್ರಸ್ಥಾನ
ಇಂಡಿಯನ್ ಸಿನಿಮಾಗೆ ಸೀಕ್ವೆಲ್ ಆಗಿ ಬಂದ ಈ ಚಿತ್ರವು ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಕಂಡಿತು. ಇಂಡಿಯನ್-2 ಜುಲೈ 12ರಂದು ತೆರೆಗೆ ಅಪ್ಪಳಿಸಿತು. ಆದರೆ, ಆರಂಭಿಕ ದಿನದಿಂದಲೇ ಕೆಟ್ಟ ಟಾಕ್ ಪಡೆಯಿತು. ಹೀಗಾಗಿ ಕಮಲ್ ಹಾಸನ್ ಅವರ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಫ್ಲಾಪ್ ಚಿತ್ರವಾಯಿತು. ಸೋಲಿನ ವಿಮರ್ಶೆ ಪಡೆದ ಕಾರಣಕ್ಕೆ ಒಟಿಟಿಯಲ್ಲಿ ಬೇಗನೇ ಬಿಡುಗಡೆಯಾಯಿತು. ಇದು ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 9 ರಂದು ಬಿಡುಗಡೆಗೊಂಡಿತು. ದಕ್ಷಿಣ ಮತ್ತು ಹಿಂದಿ ಭಾಷೆಯಲ್ಲಿ ಡಿಜಿಟಲ್ ಆಗಿ ಪ್ರೀಮಿಯರ್ ಆಗಿರುವ ಇಂಡಿಯನ್-2 ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ 1 ಸ್ಥಾನದಲ್ಲಿದೆ.
ಆಸಕ್ತಿಕರ ಸಂಗತಿಗಳೇನೆಂದರೆ ಈ ಫ್ಲಾಪ್ ಚಿತ್ರವು ಎರಡು ಸೂಪರ್ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ. ಹಿಂದಿಯ 'ಫಿರ್ ಆಯಿ ಹಸೀನ್ ದಿಲ್ರೂಬಾ' ಮತ್ತು 'ಮಹಾರಾಜ' ಚಿತ್ರಗಳು ಇದೀಗ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ತಾಪ್ಸಿ ನಡೆಸಿರುವ ಫಿರ್ ಆಯಿ ಇದೇ ಆಗಸ್ಟ್ 9ರಂದು ತೆರೆಕಂಡು ಟಾಪ್ 1 ಸ್ಥಾನದಲ್ಲಿತ್ತು. ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಲೆಕ್ಷನ್ ಮತ್ತು ವಿಮರ್ಶಕರಿಂದ ಪ್ರಶಂಸೆ ಪಡೆದಿತ್ತು. ಆದರೆ ಇಷ್ಟೆಲ್ಲಾ ನೆಗೆಟಿವಿಟಿ ಆವರಿಸಿರುವ ಇಂಡಿಯನ್-2 ಈ ರೀತಿ ಟಾಪ್-1ಗೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.