Aadujeevitham: ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಒಟಿಟಿಗೆ ಸದ್ಯ ಬರೋ ಛಾನ್ಸೇ ಇಲ್ಲ; ಚಿತ್ರತಂಡದ ಲೆಕ್ಕಾಚಾರವೇ ಬೇರೆ
Aadujeevitham OTT Release: ಪೃಥ್ವಿರಾಜ್ ಸುಕುಮಾರನ್ ನಟನೆಯ ಈ ವರ್ಷದ ಜನಪ್ರಿಯ ಸರ್ವೈವಲ್ ಸಿನಿಮಾ ಆಡುಜೀವಿತಂ ಒಟಿಟಿಯಲ್ಲಿ ಬಿಡುಗಡೆಯಾಗುವುದು ವಿಳಂಬವಾಗುವ ಸಾಧ್ಯತೆಯಿದೆ. ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಲು ಬಯಸುವವರಿಗೆ ಇದರಿಂದ ನಿರಾಶೆಯಾಗಿದೆ.
ಬೆಂಗಳೂರು: ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾ ಚಿತ್ರಮಂದಿರಗಳಲ್ಲಿ ಮಾರ್ಚ್ 28, 2024ರಲ್ಲಿ ಬಿಡುಗಡೆಯಾಗಿತ್ತು. ಈ ಬದುಕುಳಿಯುವ ಸಾಹಸ ಕಥನದ ಸಿನಿಮಾ ಎಲ್ಲರಿಗೂ ಇಷ್ಟವಾಗಿತ್ತು. ವೀಕ್ಷಕರಿಗೆ ಅನನ್ಯ ಅನುಭವ ನೀಡಿತ್ತು. ಮೇ ತಿಂಗಳಲ್ಲಿ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ ಎಂದು ಸುದ್ದಿಯಾಗಿದೆ. ಮೇ ತಿಂಗಳು ಕಳೆದು ಜೂನ್ ಅರ್ಧ ಕಳೆದಿದೆ. ಹೀಗಿದ್ದರೂ, ಆಡುಜೀವಿಂತ ಒಟಿಟಿಗೆ ಬಂದಿಲ್ಲ ಏಕೆ ಎಂದು ಒಟಿಟಿ ವೀಕ್ಷಕರು ಯೋಚಿಸುತ್ತಿದ್ದಾರೆ. ಇದೀಗ ಲಭ್ಯವಾದ ಮಾಹಿತಿ ಪ್ರಕಾರ ಚಿತ್ರತಂಡ ಇನ್ನೂ ಯಾವುದೇ ಒಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಯಾವುದೇ ಕಂಪನಿಗೆ ನೀಡಿಲ್ಲ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಕೂಡ ಇದರ ಒಟಿಟಿ ಹಕ್ಕುಗಳನ್ನು ಹೊಂದಿಲ್ಲ.
ಈ ಹಿಂದಿನ ವರದಿಗಳ ಪ್ರಕಾರ ಮೇ 26ರಂದು ಆಡುಜೀವಿತಂ ಒಟಿಟಿಗೆ ಆಗಮಿಸಬೇಕಿತ್ತು. ಆದರೆ, ಈ ಕುರಿತು ಸಿನಿತಂಡ ಖಚಿತಪಡಿಸಿರಲಿಲ್ಲ. ಈಗಲೂ ಚಿತ್ರತಂಡದ ಅಪ್‌ಡೇಟ್‌ಗಾಗಿ ಜನರು ಕಾಯುತ್ತಿದ್ದಾರೆ. ವರದಿಯೊಂದರ ಪ್ರಕಾರ ಆಡುಜೀವಿಂತ ಸಿನಿಮಾದ ಒಟಿಟಿ ಹಕ್ಕುಗಳ ಡೀಲ್ ಈಗಲೂ ಪೆಂಡಿಂಗ್‌ನಲ್ಲಿ ಇದೆಯಂತೆ.
ಆಡುಜೀವಿತಂ ಸಿನಿಮಾ ಒಟಿಟಿಗೆ ಯಾಕೆ ಬಂದಿಲ್ಲ?
ಈ ವಿಳಂಬದ ಹಿಂದೆ ಅನೇಕ ಕಾರಣಗಳು ಇವೆ. ಚಿತ್ರತಂಡದ ಲೆಕ್ಕಾಚಾರವೂ ಬೇರೆ ರೀತಿ ಇದೆ. ಚಿತ್ರತಂಡವು ಪ್ರಮುಖ ಸ್ಟುಡಿಯೋವೊಂದರ ಜತೆ ಸಂಪರ್ಕದಲ್ಲಿದ್ದಾರಂತೆ. ಈ ಸಿನಿಮಾಕ್ಕೆ ಆಸ್ಕರ್ ಕಾಂಪೇನ್ ಮಾಡುವ ಪ್ರಯತ್ನದಲ್ಲಿದ್ದಾರಂತೆ. ಇದರೊಂದಿಗೆ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗುತ್ತಿದೆಯಂತೆ. ಸಾಂಪ್ರದಾಯಿಕ ಥಿಯೇಟರ್‌ಗಳನ್ನು ಮೀರಿ ವ್ಯಾಪಕ ವಿತರಣೆ ಕುರಿತು ಆಲೋಚಿಸಲಾಗುತ್ತಿದೆ. ಈ ನಿರ್ಣಾಯಕ ಒಪ್ಪಂದಗಳು ಪೂರ್ಣಗೊಂಡ ಬಳಿಕ ಒಟಿಟಿ ಮತ್ತು ಸ್ಯಾಟ್‌ಲೈಟ್ ಹಕ್ಕುಗಳ ಕುರಿತು ಚಿತ್ರತಂಡ ಯೋಚಿಸಲಿದೆ ಎಂದು ವರದಿಗಳು ತಿಳಿಸಿವೆ.
ಬ್ಲಾಸ್ಲಿ ನಿರ್ದೇಶನದಲ್ಲಿ ಆಡುಜೀವಿತಂ ಎಂಬ ಸಿನಿಮಾ ಮಲಯಾಳಂ ಸಿನಿಮಾ ತೆರೆಕಂಡಿತ್ತು. ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾಕ್ಕಾಗಿ ಹಲವು ವರ್ಷಗಳ ಕಾಲ ಸಮಯ ನೀಡಿದ್ದರು. ತನ್ನ ದೇಹದಲ್ಲಿ ಅನೇಕ ರೂಪಾಂತರ ಮಾಡಿದ್ದರು. ಅನೇಕ ದಿನ ಉಪವಾಸ ಕಳೆದಿದ್ದರು. ಕೇರಳದ ವ್ಯಕ್ತಿಯೊಬ್ಬರು ಸೌದಿಯಲ್ಲಿ ಕಷ್ಟದ ಜೀವನ ನಡೆಸಿದ ಕಥೆಯನ್ನು ಇದು ಹೊಂದಿತ್ತು. ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಒಟಿಟಿ ವೀಕ್ಷಕರು ಕಾಯುತ್ತಿದ್ದರು. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಆಡುಜೀವಿತಂ ಒಟಿಟಿಗೆ ಶೀಘ್ರದಲ್ಲಿ ಆಗಮಿಸುವ ಯಾವುದೇ ಸೂಚನೆಗಳು ಇಲ್ಲ.
ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. 2008ರ ಬೆಸ್ಟ್ ಸೆಲ್ಲಿಂಗ್ ಕಾದಂಬರಿ ಆಡುಜೀವಿತಂ ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಬೆನ್ನಿಮಿನ್ ಬರೆದ ಈ ಕಾದಂಬರಿಯು ಸತ್ಯ ಘಟನೆ ಆಧರಿತವಾಗಿದೆ. ನಜೀಬ್ ಎಂಬ ಮಲಯಾಳಿ ವಲಸಿಗ ಗಲ್ಪ್ ದೇಶದಲ್ಲಿ ಅನುಭವಿಸಿದ ಕಷ್ಟದ ಕಥೆಯನ್ನು ಈ ಸಿನಿಮಾ ಪ್ರೇಕ್ಷಕರ ಮುಂದಿಟ್ಟಿದೆ. ಸೌದಿ ಅರೇಬಿಯಾದಲ್ಲಿ ಈ ವಲಸಿಗ ಜೀತದಾಳುವಿನಂತೆ ಮರುಭೂಮಿಯಲ್ಲಿ ಬದುಕಿರುತ್ತಾನೆ. ಆತ ಅಲ್ಲಿಂದ ಭಾರತಕ್ಕೆ ವಾಪಸ್ ಬರಲು ಮಾಡುವ ಪ್ರಯತ್ನ, ತುಡಿತ, ನೋವಿನ ಕಥನಗಳನ್ನು ಈ ಸಿನಿಮಾ ಹೊಂದಿದೆ. ಅಂದಹಾಗೆ, ಈ ಸಿನಿಮಾದ ಕಥೆಯ ನಜೀಬ್ ಈಗಲೂ ಕೇರಳದಲ್ಲಿ ಇದ್ದಾರೆ.