OTT News: ಗುಲ್‌ಮೊಹರ್ ಚಿತ್ರದಿಂದ ಆಟಂವರೆಗೆ.. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಏಳು ಸಿನಿಮಾಗಳನ್ನು ಈ ಒಟಿಟಿಯಲ್ಲಿ ವೀಕ್ಷಿಸಿ
70th National Film Award Winning Movies: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪೊನ್ನಿಯಿನ್ ಸೆಲ್ವನ್, ಕಾಂತಾರ, ಆಟಂ, ಬ್ರಹ್ಮಾಸ್ತ್ರ, ಗುಲ್‌ಮೊಹರ್ ಮತ್ತು ಉಂಚೈ ಸೇರಿ ಇನ್ನೂ ಹಲವು ಸಿನಿಮಾಗಳು ಸದ್ಯ ಯಾವ ಒಟಿಟಿಯಲ್ಲಿವೆ ಎಂಬುದನ್ನು ನಾವೀಗ ನೋಡೋಣ.
National Film Award Winning Movies on OTT: 2022ರಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ್ದ ಸಿನಿಮಾಗಳೀಗ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ಅದರಲ್ಲೂ ಸೌತ್‌ನ ಸಿನಿಮಾಗಳೇ ಹೆಚ್ಚಿನ ಪ್ರಶಸ್ತಿ ಪಡೆದು ಮುಂದಡಿ ಇರಿಸಿವೆ. ಹಾಗೇ ಅವಾರ್ಡ್‌ಗೆ ಅರ್ಹವಾದ ಸಿನಿಮಾಗಳನ್ನು ನೀವೀಗ ಒಟಿಟಿಯಲ್ಲಿಯೂ ವೀಕ್ಷಣೆ ಮಾಡಬಹುದು. ಪೊನ್ನಿಯಿನ್ ಸೆಲ್ವನ್, ಕಾಂತಾರ, ಆಟಂ, ಬ್ರಹ್ಮಾಸ್ತ್ರ, ಗುಲ್‌ಮೊಹರ್ ಮತ್ತು ಉಂಚೈ ಸೇರಿ ಇನ್ನೂ ಹಲವು ಸಿನಿಮಾಗಳು ಸದ್ಯ ಯಾವ ಒಟಿಟಿಯಲ್ಲಿವೆ ಎಂಬುದನ್ನು ನಾವೀಗ ನೋಡೋಣ.
ಪೊನ್ನಿಯಿನ್ ಸೆಲ್ವನ್
ಮಣಿರತ್ನ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಿನಿಮಾ ಈ ಸಲದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2024ರಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. ಎಆರ್ ರೆಹಮಾನ್ ಅತ್ಯುತ್ತಮ ಹಿನ್ನೆಲೆ ಸಂಗೀತ, ರವಿ ವರ್ಮನ್ ಅತ್ಯುತ್ತಮ ಛಾಯಾಗ್ರಹಣ, ಆನಂದ್ ಕೃಷ್ಣಮೂರ್ತಿ ಅತ್ಯುತ್ತಮ ಧ್ವನಿ ವಿನ್ಯಾಸ, ಮತ್ತು ತಮಿಳಿನ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗುತ್ತಿದೆ.
ಆಟಂ ಸಿನಿಮಾ ಯಾವ ಒಟಿಟಿಯಲ್ಲಿ?
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಮಲಯಾಳಂನ ಆಟಂ ಸಿನಿಮಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಜತೆಗೆ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೆದ್ದುಕೊಂಡಿತು. ಆನಂದ್ ಏಕರ್ಶಿ ನಿರ್ದೇಶನದ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
ಪ್ರೈಂನಲ್ಲಿ ಕಾಂತಾರ
ಕನ್ನಡದ ಕಾಂತಾರ ಸಿನಿಮಾದಲ್ಲಿನ ನಟನೆಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಜತೆಗೆ ಅತ್ಯುತ್ತಮ ಜನಪ್ರಿಯ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಪಡೆದಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದ ಜತೆಗೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ವೀಕ್ಷಿಸಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಡಬ್ಬಿಂಗ್ ಲಭ್ಯವಿದೆ.
ಗುಲ್‌ಮೊಹರ್ ವೀಕ್ಷಣೆ ಎಲ್ಲಿ?
ಗುಲ್‌ಮೊಹರ್ ಪ್ರಾದೇಶಿಕ ವಿಭಾಗದಲ್ಲಿ ಹಿಂದಿಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಮನೋಜ್ ಬಾಜಪೇಯಿ ಅತ್ಯುತ್ತಮ ಸ್ಪೇಷಲ್ ಮೆನ್ಷನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಅರ್ಪಿತಾ ಮುಖರ್ಜಿ ಮತ್ತು ರಾಹುಲ್ ವಿ ಚಿಟ್ಟೆಲಾ ಸಂಭಾಷಣೆಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಪಡೆದರು. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ನಿತ್ಯಾ ಮೆನನ್ ನಟನೆಯ ತಿರುಚಿತ್ರಂಬಲಂ
ತಮಿಳಿನ ತಿರುಚಿತ್ರಂಬಲಂ ಸಿನಿಮಾದಲ್ಲಿನ ನಟನೆಗಾಗಿ ನಟಿ ನಿತ್ಯಾ ಮೆನನ್ (ಕಚ್ ಎಕ್ಸ್‌ಪ್ರೆಸ್‌ಗಾಗಿ ಮಾನಸಿ ಪರೇಖ್ ಸಹ ಅತ್ಯುತ್ತಮ ನಟಿ ಗೌರವವನ್ನು ಸಮವಾಗಿ ಹಂಚಿಕೊಂಡಿದ್ದಾರೆ) ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಜಾನಿ ಮಾಸ್ಟರ್ ಮತ್ತು ಸತೀಶ್ ಕೃಷ್ಣನ್ ಅತ್ಯುತ್ತಮ ನೃತ್ಯ ಸಂಯೋಜನೆಗೂ ಪ್ರಶಸ್ತಿ ಲಭಿಸಿದೆ. ತಮಿಳಿನ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದೆ.
ಜೀ 5ನಲ್ಲಿ ಉಂಚೈ ಸಿನಿಮಾ..
70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಇದೇ ಚಿತ್ರದ ನಿರ್ದೇಶನಕ್ಕೆ ಸೂರಜ್ ಬರ್ಜಾತ್ಯಾ ಅತ್ಯುತ್ತಮ ನಿರ್ದೇಶಕರಾಗಿ ಆಯ್ಕೆಯಾದರು. ಅಂದಹಾಗೆ ಉಂಚೈ ಸಿನಿಮಾ ZEE5 ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ಬ್ರಹ್ಮಾಸ್ತ್ರ 1 ವೀಕ್ಷಣೆ ಎಲ್ಲಿ?
ಅಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಪಾರ್ಟ್ 1 ಸಿನಿಮಾ ಎವಿಜಿಸಿ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್) ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಜತೆಗೆ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಪ್ರೀತಮ್ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಅರ್ಜಿತ್ ಸಿಂಗ್ (ಕೇಸರಿಯಾ ಹಾಡು) ಪಡೆದಿದ್ದಾರೆ. ಈ ಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ವಿಭಾಗ