ಕನ್ನಡ ಸುದ್ದಿ  /  ಮನರಂಜನೆ  /  ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

Aavesham Movie Ott: ಫಹಾದ್‌ ಫಾಸಿಲ್‌ ನಟನೆಯ ಆವೇಶಂ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಒಟಿಟಿ ಚಿತ್ರಪ್ರೇಮಿಗಳು ಇದೀಗ ಈ ಚಿತ್ರವನ್ನು ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ
ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ

ಬೆಂಗಳೂರು: ಚಿತು ಮಾಧವನ್‌ ನಿರ್ದೇಶನದ, ಫಹಾದ್ ಫಾಸಿಲ್, ಹಿಪ್ಜ್ ಸ್ಟರ್, ಮಿಥುನ್ ಜೈ ಶಂಕರ್ ಮತ್ತು ರೋಶನ್ ಶಾನವಾಸ್ ನಟಿಸಿರುವ ಆವೇಶಂ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪಡೆದ ಯಶಸ್ಸಿನ ಕಥೆ ನಿಮಗೆ ಗೊತ್ತಿರಬಹುದು. ಸುಮಾರು 20-30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು 150 ಕೋಟಿ ರೂಪಾಯಿಗೂ ಅಧಿಕ ಗಳಿಸಿದೆ. ಫಹಾದ್‌ ಫಾಸಿಲ್‌ನನ್ನು ಹಿಂದೆಂದೂ ನೋಡದ ಅವತಾರದಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಇದೀಗ ಆ ಆವೇಶಂ ಚಿತ್ರವು ಒಟಿಟಿಗೆ ಆಗಮಿಸಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಒಟಿಟಿಯಲ್ಲಿ ಈ ಚಿತ್ರ ನೋಡಿದ ಸಿನಿಪ್ರೇಮಿಗಳು ಎಕ್ಸ್‌ನಲ್ಲಿ (ಹಿಂದಿನ ಟ್ವಿಟ್ಟರ್‌) ರಿವ್ಯೂ ಬರೆಯುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೌಡಿ ರೀಲ್ಸ್‌ ಮಾಡೋದೇ ವಿಚಿತ್ರ

ಫಹಾದ್‌ ಫಾಸಿಲ್‌ ಗ್ಯಾಂಗ್‌ಸ್ಟಾರ್‌ ರಂಗನಾಗಿ ಸಿಗರೇಟು ಸೇದುತ್ತಾ ಡ್ಯಾನ್ಸ್‌ ಮಾಡುವ ದೃಶ್ಯದ ತುಣಕೊಂದನ್ನು ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. "ಭಾರತದಲ್ಲಿ ಯಾವುದೇ ನಟರು ರಂಗನ ಪಾತ್ರವನ್ನು ಫಹಾದ್‌ ಫಾಸಿಲ್‌ ಮಾಡಿದ್ದಷ್ಟು ಉತ್ಸಾಹದಿಂದ, ಶಕ್ತಿಯುತವಾಗಿ ಮಾಡಲು ಸಾಧ್ಯವಿಲ್ಲ. ಯಾರಿಗೂ ಇಂತಹ ಕಲ್ಟ್‌ ಕ್ಲಾಸಿಕ್‌ ಪಾತ್ರ ಮಾಡಲು ಸಾಧ್ಯವಿಲ್ಲ" ಎಂದು ಸೋಷಿಯಲ್‌ ಮೀಡಿಯಾ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಬ್ಬರು ಇದೇ ರೀತಿಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, "ರೌಡಿಯೊಬ್ಬರು ರೀಲ್ಸ್‌ ಮಾಡ್ತಾರೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ. ಕ್ಲೈಮ್ಯಾಕ್ಸ್ ವರೆಗೆ ಅವರ ಫೈಟ್ ಅಥವಾ ಫೈಟಿಂಗ್ ದೃಶ್ಯಗಳನ್ನು ಸಹ ತೋರಿಸುವುದಿಲ್ಲ. ಅವನು ತನ್ನ ಗೂಂಡಾಗಳ ಬೆಂಬಲದೊಂದಿಗೆ ಇರುವ ವ್ಯಕ್ತಿ ಎಂದು ತಿಳಿದುಕೊಳ್ಳಬಹುದು. ಇದು ಗ್ಯಾಂಗ್‌ಸ್ಟಾರ್‌ನ ಭಾವನಾತ್ಮಕ, ಕಾಮಿಡಿ ಚಿತ್ರ" ಎಂದು ಇನ್ನೊಬ್ಬರು ಹೇಳಿದ್ದಾರೆ.

ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಫಹಾದ್‌

ಇನ್ನೊಬ್ಬ ಅಭಿಮಾನಿ ಆವೇಶಂ ಚಿತ್ರದ ತನ್ನ ನೆಚ್ಚಿನ ದೃಶ್ಯದ ಕ್ಲಿಪ್‌ ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ ರಂಗಾನ ಫ್ಲಾಷ್‌ಬ್ಯಾಕ್‌ ಕಥೆಯನ್ನು ತೋರಿಸುತ್ತದೆ. "ಇಲ್ಲಿ ಕೇವಲ ರಂಗನ ನಟನೆಯನ್ನು ಮಾತ್ರ ನೋಡಬೇಡಿ. ಅತ್ಯುತ್ತಮ ಹಿನ್ನೆಲೆ ಸಂಗೀತ ಗಮನಿಸಿ. ಅದ್ಭುತ ಸಂಗಿತ ನೀಡಿದ ಸುಶಿನ್‌ ಶ್ಯಾಮ್‌ಗೂ ಅಭಿನಂದನೆ" ಎಂದು ಅವರು ಹೇಳಿದ್ದಾರೆ.

ಎಕ್ಸ್‌ ಬಳಕೆದಾರರೊಬ್ಬರು "ಫಹಾದ್‌ ಫಾಸಿಲ್‌ ಅವರು ರಂಗನ ಪಾತ್ರಕ್ಕೆ ತನ್ನ ಸರ್ವಸ್ವವನ್ನೇ ನೀಡಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ. "ಆವೇಶಂ ಬೇರೆಯದ್ದೇ ರೀತಿಯ ಸಿನಿಮಾ. ಇದು ಶುದ್ಧ ಸಿನಿಮಾ. ರಂಗನ ಪಾತ್ರಕ್ಕೆ ಫಹಾದ್‌ ಜೀವತುಂಬಿದ್ದಾರೆ. ಅವರ ಹಲವು ಪಾತ್ರಗಳಲ್ಲಿ ಇದು ಅತ್ಯುತ್ತಮ ಪಾತ್ರ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಮ್ಮನೇ ಸಿನಿಮಾವನ್ನು ವೈಭವೀಕರಿಸಬೇಡಿ

ಇನ್ನೊಬ್ಬ ಸೋಷಿಯಲ್‌ ಮೀಡಿಯಾ ಬಳಕೆದಾರ "ಸುಮ್ಮನೆ ಈ ಸಿನಿಮಾದ ಕುರಿತು ಹೈಪ್‌ ಕ್ರಿಯೆಟ್‌ ಮಾಡಬೇಡಿ" ಎಂದಿದ್ದಾರೆ. "ಆವೇಶಂ ಸಿನಿಮಾದ ಕುರಿತು ಈ ರೀತಿಯ ವೈಭವೀಕರಣ ಏಕೆಂದು ನನಗೆ ಇನ್ನೂ ಅರ್ಥವಾಗಿಲ್ಲ. ನನಗೆ ಕೆಲವೊಂದು ಸಂದರ್ಭದಲ್ಲಿ ನಗುಬಂತು, ಕೆಲವೊಮ್ಮೆ ನಗಲಿಲ್ಲ. ಬಹುಶಃ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಒಟಿಟಿಯಲ್ಲಿ ನೋಡಿರುವವರಿಂದ ಪರಿಣಾಮಕಾರಿಯಾಗಿ ಕಾಣಿಸಲಿಲ್ಲವೋ ಏನೋ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ಲೈಮ್ಯಾಕ್ಸ್‌ ಸಂದರ್ಭದಲ್ಲಿ ರಂಗಾ ಭಾವುಕನಾಗುವ ದೃಶ್ಯವನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. "ಪ್ರೇಕ್ಷಕರು ಈ ದೃಶ್ಯಕ್ಕೆ ಕನೆಕ್ಟ್‌ ಆಗದೆ ಇದ್ದರೆ ಅರ್ಥವಾಗದು" ಎಂದಿದ್ದಾರೆ. "ತಮ್ಮ ಹೃದಯದಲ್ಲಿ ಅತ್ಯಂತ ಪ್ರೀತಿಯುಳ್ಳ ವ್ಯಕ್ತಿಯಾಗಿ ರಂಗಾ ಇಷ್ಟವಾಗುತ್ತಾನೆ. ಸಿನಿಮಾದ ಅತ್ಯುತ್ತಮ ಇಂಟರ್‌ವಲ್‌, ಅತ್ಯುತ್ತಮ ಕ್ಲೈಮ್ಯಾಕ್ಸ್‌ ಇಷ್ಟವಾಗುತ್ತದೆ" ಎಂದು ಮತ್ತೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಆವೇಶಂ ಚಿತ್ರದಲ್ಲಿ ಅಜು (ಹಿಪ್ಜ್ ಸ್ಟರ್), ಬೀಬಿ (ಮಿಥುನ್) ಮತ್ತು ಶಾಂತನ್ (ರೋಷನ್) ಎಂಬ ಮೂವರು ಯುವಕರು ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಲು ಕೇರಳದಿಂದ ಬೆಂಗಳೂರಿಗೆ ಆಗಮಿಸುವ ಕಥೆಯಿದೆ. ಕಾಲೇಜಿನಲ್ಲಿ ಕುಟ್ಟಿ ಎಂಬ ವಿದ್ಯಾರ್ಥಿಯ ಕಿರಿಕಿರಿಯಿಂದ ತಪ್ಪಿಸಲು ಬಾರ್‌ನಲ್ಲಿ ಭೇಟಿಯಾಗುವ ರಂಗಾ ಎಂಬ ಪ್ರಸಿದ್ಧ ದರೋಡೆಕೋರನ ನೆರವು ಪಡೆಯುತ್ತಾರೆ. ಕುಟ್ಟಿ ವಿರುದ್ಧ ಸೇಡು ತೀರಿಸಲು ಪ್ರಯತ್ನಿಸಿದಾಗ ಏನೆಲ್ಲ ಆಗುತ್ತದೆ? ಎಂದು ತಿಳಿಯಲು ಚಿತ್ರವನ್ನು ನೋಡಬಹುದು.

ಒಟಿಟಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point