Animal OTT: ಜನವರಿ 26 ಅಲ್ಲ, ಅದಕ್ಕೂ 10 ದಿನ ಮೊದಲೇ ಒಟಿಟಿಯಲ್ಲಿ ಅನಿಮಲ್ ಬಿಡುಗಡೆ; ರಣಬೀರ್ ಸಿನಿಮಾವನ್ನು ಮನೆಯಲ್ಲಿ ಸದ್ಯದಲ್ಲೇ ನೋಡಿ
Animal OTT Release Date Preponed: ರಣಬೀರ್ ಕಪೂರ್- ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾವು ಈ ಸಂಕ್ರಾಂತಿ ವೇಳೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಒಟಿಟಿಯಲ್ಲಿ ಥಿಯೇಟರ್‌ನಲ್ಲಿ ನೋಡದ ಕೆಲವು ದೃಶ್ಯಗಳು, ಸೆನ್ಸಾರ್ ಮಂಡಳಿಯಿಂದ ಕತ್ತರಿ ಪ್ರಯೋಗಕ್ಕೆ ಒಳಗಾದ ದೃಶ್ಯಗಳೂ ಇರುವ ನಿರೀಕ್ಷೆಯಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ರಣಬೀರ್ ಕಪೂರ್- ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿಯ ಅನಿಮಲ್ ಸಿನಿಮಾವು ಅತಿಯಾದ ಕ್ರೌರ್ಯದ ಕಾರಣಕ್ಕೆ ಟೀಕೆಗೆ ಒಳಗಾಗಿತ್ತು. ಹೀಗಿದ್ದರೂ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಹಿಂದೆ ಬಿದ್ದಿರಲಿಲ್ಲ. ಇದು ಸುದೀರ್ಘ ಅವಧಿಯ ಸಿನಿಮಾ. 3 ಗಂಟೆ 21 ನಿಮಿಷಗಳ ರನ್ ಟೈಮ್ ಇರುವ ಈ ಸಿನಿಮಾ ಮನೆಯಲ್ಲೇ ನೋಡಲು ಸಂಕ್ರಾಂತಿ ವೇಳೆಗೆ ಬಿಡುವು ಮಾಡಿಕೊಳ್ಳಬಹುದು.
ಡಿಸೆಂಬರ್ 1ರಂದು ಬಿಡುಗಡೆಯಾದ ಅನಿಮಲ್ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಚಿತ್ರ ಬಿಡುಗಡೆಯಾದ ಬಳಿಕ ಅತಿಯಾದ ಕ್ರೌರ್ಯದಿಂದ ನಕಾರಾತ್ಮಕ ವಿಮರ್ಶೆ ಪಡೆದಿತ್ತು. ಹೀಗಿದ್ದರೂ, ಭಾರತ ಮಾತ್ರವಲ್ಲದೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬಹುಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇಲ್ಲಿಯವರೆಗೆ ಜಾಗತಿಕವಾಗಿ 840 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇತ್ತೀಚಿಗೆ ಬಿಡುಗಡೆಯಾದ ಸಲಾರ್ ಸಿನಿಮಾವು ಈಗಾಗಲೇ ಹದಿಮೂರು ದಿನದಲ್ಲಿಯೇ 650 ಕೋಟಿ ಕ್ಲಬ್‌ಗೆ ಸೇರಿದೆ.
ಈ ಹಿಂದಿನ ವರದಿ ಪ್ರಕಾರ ಅನಿಮಲ್ ಸಿನಿಮಾ ಜನವರಿ 27ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೀಗ ಬಂದಿರುವ ಅಪ್‌ಡೇಟ್ ಪ್ರಕಾರ ಇನ್ನೊಂದೆರಡು ವಾರ ಮೊದಲೇ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಜನವರಿ 15ರಂದು ನೆಟ್‌ಫ್ಲಿಕ್ಸ್‌ನಲ್ಲಿ ಅನಿಮಲ್ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರ ತಂಡ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ.
ಇದು ಅತಿಯಾದ ಕ್ರೌರ್ಯ ಹೊಂದಿದೆ ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಕುಟುಂಬ ಸಮೇತ ಈ ಸಿನಿಮಾಕ್ಕೆ ಹೋಗಿರಲಿಲ್ಲ. ಈ ರೀತಿ ಹಲವು ಕಾರಣಗಳಿಂದ ಸಿನಿಮಾ ನೋಡದೆ ಇರುವವರು ಒಟಿಟಿಯಲ್ಲೇ ನೋಡಬಹುದು. ಈ ಸಿನಿಮಾದ ಭರ್ಜರಿ ಟೇಕಿಂಗ್ ಮತ್ತು ಮೇಕಿಂಗ್‌ಗಾಗಿ ಬಾಲಿವುಡ್ ಮತ್ತು ಟಾಲಿವುಡ್ ಸೆಲೆಬ್ರಿಟಿಗಳು ಅವರನ್ನು ಹೊಗಳುತ್ತಿದ್ದಾರೆ.
ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಕಂಪನಿಯು ದಾಖಲೆ ಬೆಲೆಗೆ ಈಗಾಗಲೇ ಖರೀದಿಸಿದೆ. ಈ ಬ್ಲಾಕ್‌ಬಸ್ಟರ್ ಸಿನಿಮಾ ಜನವರಿ 15ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಒಟಿಟಿಯಲ್ಲಿ ಅನಿಮಲ್ ಸಿನಿಮಾ ನೋಡಬಹುದಾಗಿದೆ. ಕೆಲವು ವದಂತಿಗಳ ಪ್ರಕಾರ ಒಟಿಟಿ ಆವೃತ್ತಿಯು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆವೃತ್ತಿಗಿಂತಲೂ 20 ನಿಮಿಷಗಳಷ್ಟು ಹೆಚ್ಚಿರಲಿದೆಯಂತೆ. ಈಗಾಗಲೇ ಥಿಯೇಟರ್ ಸಿನಿಮಾವೇ ಮೂರು ಗಂಟೆಗಿಂತಲೂ ಹೆಚ್ಚಿದೆ.
ಅನಿಮಲ್ ಮಾತ್ರವಲ್ಲದೆ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರವು ಒಟಿಟಿಯಲ್ಲಿ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರ ಡಿಸೆಂಬರ್ ಅಂತ್ಯದ ವೇಳೆಗೆ ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ, ಅಭಿಮಾನಿಗಳಿಗೆ ನಿರಾಶೆಯಾಗುವಂತೆ ಅದು ಒಟಿಟಿಯಲ್ಲಿ ಬಿಡುಗಡೆಯಾಗಿಲ್ಲ. ಈ ಜನವರಿ ತಿಂಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟಿಟಿ ಪ್ರಸಾರಕ್ಕೆ ಸಂಬಂಧಪಟ್ಟ ಡೀಲ್ ಇನ್ನೂ ಅಂತಿಮವಾಗಿರದೆ ಇರುವ ಕಾರಣ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗಿದೆ.