Annapoorani OTT: ವಿವಾದಿತ ಅನ್ನಪೂರ್ಣಿ ಸಿನಿಮಾ ಮತ್ತೆ ಒಟಿಟಿಯಲ್ಲಿ ಬಿಡುಗಡೆ; ನಯನತಾರ ಅಭಿಮಾನಿಗಳು ಖುಷಿಪಡುವ ಮುನ್ನ ಈ ಕಹಿಸುದ್ದಿ ಓದಿ
Annapoorani OTT Release: ಸುಮಾರು ಆರು ತಿಂಗಳ ಹಿಂದೆ ನಯನತಾರ ಅಭಿನಯದ ಅನ್ನಪೂರ್ಣಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ, ಈ ಸಿನಿಮಾ ಕೆಲವೊಂದು ಕಾರಣಗಳಿಂದ ವಿವಾದಕ್ಕೆ ಈಡಾಗಿ ನೆಟ್‌ಫ್ಲಿಕ್ಸ್‌ನಿಂದ ಬ್ಯಾನ್ ಆಗಿತ್ತು. ಈ ಮೂಲಕ ಭಾರತದಲ್ಲಿ ಬ್ಯಾನ್ ಆಗಿತ್ತು. ಆದರೆ, ಇದೀಗ ಒಟಿಟಿಯಲ್ಲಿ ಅನ್ನಪೂರ್ಣಿ ಸಿನಿಮಾ ಮರುಬಿಡುಗಡೆಯಾಗಿದೆ.
ಬೆಂಗಳೂರು: ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮವಾಗಿ ವಹಿವಾಟು ನಡೆಸಿರಲಿಲ್ಲ. ಆದರೆ, ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಜನರನ್ನು ರೀಚ್ ಆಗುವ ಸ್ಥಿತಿಯಲ್ಲಿತ್ತು. ಆದರೆ, ಆ ಸಮಯದಲ್ಲಿ ಈ ಸಿನಿಮಾದ ಕುರಿತು ವಿವಾದ ಮತ್ತು ದ್ವೇಷ ಆರಂಭವಾಗಿತ್ತು. ಈ ಸಿನಿಮಾ "ಲವ್ ಜಿಹಾದ್"ಗೆ ಬೆಂಬಲ ನೀಡುವಂತೆ ಇದೆ ಮತ್ತು "ಹಿಂದು ಭಾವನೆಗಳಿಗೆ ವಿರುದ್ಧವಾಗಿದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗತೊಡಗಿತ್ತು. ಈ ಸಿನಿಮಾವನ್ನು ಜಗತ್ತಿನಾದ್ಯಂತ ಒಟಿಟಿಗಳಿಂದ ತೆಗೆದುಹಾಕುವಂತೆ ನೆಟ್‌ಫ್ಲಿಕ್ಸ್ ಮೇಲೆ ಒತ್ತಡವುಂಟಾಯಿತು. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನೆಟ್‌ಫ್ಲಿಕ್ಸ್ ಜಾಗತಿಕವಾಗಿ ಈ ಸಿನಿಮಾವನ್ನು ತೆಗೆದುಹಾಕಿತು.
ಅನ್ನಪೂರ್ಣಿ ಒಟಿಟಿ ಬಿಡುಗಡೆ ದಿನಾಂಕ
ಇದೀಗ ಅನ್ನಪೂರ್ಣಿ ಸಿನಿಮಾವು ಮತ್ತೆ ಒಟಿಟಿಗೆ ಆಗಮಿಸುತ್ತಿದೆ. ಈ ಕುರಿತು ನಯನತಾರಾ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಒಟಿಟಿಯಲ್ಲಿ ಬಿಡುಗಡೆಗೊಂಡ ಆರು ತಿಂಗಳ ಬಳಿಕ ಇದೀಗ ಅನ್ನಪೂರ್ಣಿ ಸಿನಿಮಾವು ಆಗಸ್ಟ್ 9, 2024ರಂದು "ಸಿಂಪ್ಲಿ ಸೌತ್" ಒಟಿಟಿ ಮೂಲಕ ಮರುಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು "ಭಾರತ ಹೊರತುಪಡಿಸಿ ಜಗತ್ತಿನಾದ್ಯಂತ ಇರುವ ಒಟಿಟಿ ವೀಕ್ಷಕರು ವೀಕ್ಷಿಸಬಹುದಾಗಿದೆ" ಹೀಗಾಗಿ ಭಾರತದಲ್ಲಿ ಇರುವ ನಯನತಾರಾ ಅಭಿಮಾನಿಗಳಿಗೆ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಲಾಗದು. ಹೀಗಾಗಿ ಇದು ಭಾರತದಲ್ಲಿರುವ ನಯನತಾರ ಅಭಿಮಾನಿಗಳಿಗೆ ಕಹಿಸುದ್ದಿ.
ಅನ್ನಪೂರ್ಣಿ ವಿವಾದ ಏನು?
"ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ" ಶಿವಸೇನೆಯ ಮಾಜಿ ಮುಖಂಡ ರಮೇಶ್ ಸೋಲಂಕಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.. ಅನ್ನಪೂರಣಿ ಸಿನಿಮಾವು ಶ್ರೀರಾಮ ದೇವರು ಮತ್ತು ಹಿಂದೂ ಸಮುದಾಯದ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಇವರು ಮಾತ್ರವಲ್ಲದೆ ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
"ಅನ್ನಪೂರ್ಣಿ ಸಿನಿಮಾದಲ್ಲಿ ರಾಮನ ಕುರಿತು ಕೆಟ್ಟದ್ದಾಗಿ ಬಿಂಬಿಸಲಾಗಿದೆ. ಜತೆಗೆ, ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳನ್ನು ಹೊಂದಿದೆ . ಹಿಂದು ಆರ್ಚಕನ ಮಗಳು ಬಿರಿಯಾನಿ ಸಿದ್ಧಪಡಿಸುವ ಮೊದಲು ನಮಾಜ್ ಮಾಡುತ್ತಾಳೆ. ಸಿನಿಮಾ ಲವ್ ಜಿಹಾದ್‌ಗೆ ಉತ್ತೇಜನ ನೀಡಿದೆ. ಸಿನಿಮಾ ನಟ ಫರ್ಹಾನ್ ಭಗವಂತ ರಾಮನೂ ಮಾಂಸ ತಿನ್ನುತ್ತಿದ್ದ ಎಂದು ನಟಿಗೆ ಮಾಂಸಾಹಾರ ತಿನ್ನಲು ಉತ್ತೇಜಿಸುವ ದೃಶ್ಯವಿದೆ" ಎಂದು ರಮೇಶ್ ಸೋಲಂಕಿ ಹೇಳಿದ್ದರು.
ಅನ್ನಪೂರ್ಣಿಯು (Annapoorani) ನಾಯಕಿ ಪ್ರದಾನ ಚಿತ್ರ. ಇದು ನಯನತಾರಾ ಅವರ 75ನೇಯ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಸತ್ಯರಾಜ್, ಕಾರ್ತಿಕ್ ಕುಮಾರ್, ಸುರೇಶ್ ಚಕ್ರವರ್ತಿ, ಕೆಎಸ್ ರವಿಕುಮಾರ್, ರೇಣುಕಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು.. ನೀಲೇಶ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಥಮನ್ ಎಸ್ ಅವರ ಸಂಗೀತವಿದೆ. ಸತ್ಯನ್ ಸೂರ್ಯನ್ ಛಾಯಾಗ್ರಹಣವಿದೆ. ಶಾರೂಖ್ ಖಾನ್ ಜತೆ ಇವರು ಜವಾನ್ ಚಿತ್ರದಲ್ಲಿ ಮಿಂಚಿದ್ದರು. ಲೇಡಿ ಪೊಲೀಸ್ ಪಾತ್ರದಲ್ಲಿ ಇವರ ನಟನೆ ಎಲ್ಲರ ಗಮನ ಸೆಳೆದಿತ್ತು.
ನಯನತಾರಾ ಅವರು 2003ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆಯಲ್ಲಿ ನಟಿಸಿದ ಬಳಿಕ ಕಾಲಿವುಡ್‌ಗೆ ಎಂಟ್ರಿ ನೀಡಿದ್ದರು. ತಮಿಳಿನಲ್ಲಿ ಅಯ್ಯ, ತೆಲುಗಿನಲ್ಲಿ ಲಕ್ಷ್ಮಿ ಸಿನಿಮಾಗಳಲ್ಲಿ ನಟಿಸಿದ್ದರು. ಇದಾದ ಬಳಿಕ ಚಂದ್ರಮುಖಿ , ದುಬೈ ಸೀನು, ತುಲಿಯಾಸಿ, ಬಿಲ್ಲಾ, ಯಾರಡಿ ನೀ ಮೊಹಿನಿ, ಆಧವನ್, ಅಡರ್ಸ್ , ರಾಜಾ ರಾಣಿ, ಅರಂಬಮ್, ಥನಿ ಒರುವಾನ್, ಮಾಯಾ, ನಾನು ರೌಡಿ ಧಾನ್, ಬಾಬು ಬಂಗಾರಮ್ ಮತ್ತು ಇರು ಮುಗಾನ್ ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಅವರ ಸೂಪರ್ ಸಿನಿಮಾದಲ್ಲೂ ನಟಿಸಿದ್ದಾರೆ.