Chilli Chicken OTT: ಒಟಿಟಿಗೆ ಒಂತು ಕನ್ನಡದ ಚಿಲ್ಲಿ ಚಿಕನ್ ಸಿನಿಮಾ; ನೈಜ ಘಟನೆ ಆಧರಿತ ಈ ಚಿತ್ರದ ವೀಕ್ಷಣೆ ಎಲ್ಲಿ?
ಕಳೆದ ಜೂನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಚಿಲ್ಲಿ ಚಿಕನ್ ಸಿನಿಮಾ ಇದೀಗ 70 ದಿನಗಳ ಬಳಿಕ ಒಟಿಟಿಗೆ ಆಗಮಿಸಿದೆ. IMDbಯಲ್ಲಿ ಒಳ್ಳೆಯ ರೇಟಿಂಗ್ ಪಡೆದ ಈ ನೈಜ ಘಟನೆ ಆಧರಿತ ಈ ಸಿನಿಮಾ ಎಲ್ಲಿ ಸ್ಟ್ರೀಮ್ ಆಗುತ್ತಿದೆ, ಕಥೆ ಏನು? ಎಂಬಿತ್ಯಾದಿ ವಿವರ ಇಲ್ಲಿದೆ.
Chilli Chicken OTT: ಹೊಸಬರ ತಂಡವೊಂದು ಬಹುರಾಜ್ಯದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿ ಕನ್ನಡದಲ್ಲಿ ಚಿಲ್ಲಿ ಚಿಕನ್ ಅನ್ನೋ ಸಿನಿಮಾ ಮಾಡಿದ್ದರು. ಒಂದಷ್ಟು ಕಾರಣಕ್ಕೆ ಕುತೂಹಲ ಮೂಡಿಸಿದ್ದ ಈ ಸಿನಿಮಾ ಜೂನ್ 21ರಂದು ಚಿತ್ರಮಂದಿರದಲ್ಲಿಯೂ ತೆರೆಕಂಡು ಮೆಚ್ಚುಗೆ ಪಡೆದಿತ್ತು. ಇದೀಗ ಇದೇ ಚಿತ್ರ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಈ ಸಿನಿಮಾದ ಕಥೆ ಏನು? ತಾರಾಹಣದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬಿತ್ಯಾದಿ ವಿವರ ಇಲ್ಲಿದೆ.
ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಚಿಲ್ಲಿ ಚಿಕನ್ ಸಿನಿಮಾ ನಿರ್ಮಾಣ ಮಾಡಿದ್ದರು. ಪ್ರತೀಕ್ ಪ್ರಜೋಶ್ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರಕ್ಕಾಗಿ ಬೇರೆ ಬೇರೆ ರಾಜ್ಯಗಳ ಸಿನಿಮಾ ಪ್ರಿಯರು ಒಂದಾಗಿರುವುದು ವಿಶೇಷ. ಚಿತ್ರದ ನಿರ್ದೇಶಕ ಕೇರಳದವರು, ನಿರ್ಮಾಪಕ ಗುಜರಾತಿನವರು. ಮಣಿಪುರ, ಮೇಘಾಲಯ, ಚೆನ್ನೈನ ಕಲಾವಿದರು ಚಿಲ್ಲಿ ಚಿಕನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಏನಿದು ಚಿಲ್ಲಿ ಚಿಕನ್ ಸಿನಿಮಾ?
ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐವರು ಹುಡುಗರು ಬೆಂಗಳೂರಿನಲ್ಲಿ ಚೈನೀಸ್ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ, ಇಲ್ವಾ? ಎನ್ನುವುದೇ ಚಿಲ್ಲಿ ಚಿಕನ್ ಚಿತ್ರದ ಕಥಾಹಂದರ. ಬೆಂಗಳೂರು ಮಹಾನಗರದಲ್ಲಿನ ನೈಜ ಘಟನೆ ಆಧರಿಸಿ ಮೂಡಿಬಂದ ಈ ಸಿನಿಮಾ ಹಾಸ್ಯದ ಜತೆಗೆ ಪ್ರಸ್ತುತತೆಯ ಬಗ್ಗೆಯೂ ಬೆಳಕು ಚೆಲ್ಲಿತ್ತು.
ಕೇರಳ ನಿರ್ದೇಶಕ, ಗುಜರಾತಿ ನಿರ್ಮಾಪಕ
ನಿರ್ಮಾಪಕ ದೀಪ್ ಭೀಮಾಜಿಹಾನಿ ಈ ಹಿಂದೆ ಹಿಂದಿಯಲ್ಲಿ ಒಂದಿಷ್ಟು ಶಾರ್ಟ್ ಫಿಲಂಗಳನ್ನು ನಿರ್ಮಿಸಿದ ಅನುಭವ ಇದೆ. ಆ ಅನುಭದ ಮೇಲೆ ಕನ್ನಡದಲ್ಲಿ ಚಿಲ್ಲಿ ಚಿಕನ್ ಸಿನಿಮಾ ನಿರ್ಮಾಣ ಮಾಡಿದ್ದರು. ಕೇರಳ ಮೂಲದ ನಿರ್ದೇಶಕ ಪ್ರತೀಕ್ ಪ್ರಜೋಶ್ ಸಹ ಸಿನಿಮಾ ಹಿನ್ನೆಲೆಯಿಂದಲೇ ಬಂದವರು. ಹಿಂದಿಯ ಪದ್ಮಾವತ್ ಸೇರಿದಂತೆ ಮಲಯಾಳಂ, ಗುಜರಾತಿ ಭಾಷೆಯ ಹಲವು ಸಿನಿಮಾಗಳಿಗೆ ಕೆಲಸ ಮಾಡಿ, ಕೆಲ ಶಾರ್ಟ್ ಫಿಲಂ ಡೈರೆಕ್ಷನ್ ಸಹ ಮಾಡಿದ್ದಾರೆ. ಚಿಲ್ಲಿ ಚಿಕನ್ ಇವರ ಮೊದಲ ನಿರ್ದೇಶನದ ಸಿನಿಮಾ.
ಚಿಲ್ಲಿ ಚಿಕನ್ ಸಿನಿಮಾ ವೀಕ್ಷಣೆ ಎಲ್ಲಿ?
ಚಿಲ್ಲಿ ಚಿಕನ್ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ 70 ದಿನಕ್ಕೆ ಈ ಸಿನಿಮಾ ಪ್ರೈಂ ವಿಡಿಯೋಕ್ಕೆ ಬಂದಿದೆ.
ಪಾತ್ರಧಾರಿಗಳು, ತಾಂತ್ರಿಕ ವರ್ಗ ಹೀಗಿದೆ
ಚಿಲ್ಲಿ ಚಿಕನ್ ಸಿನಿಮಾದಲ್ಲಿ ಬಿ.ವಿ.ಶೃಂಗಾ, ಚೆನ್ನೈ ಮೂಲದ ರಿನಿ, ನಿತ್ಯಶ್ರೀ, ಮಣಿಪುರದ ಕಲಾವಿದರಾದ ಬಿಜೌ ತಾಂಜಿಂ, ವಿಕ್ಟರ್ ತೌಡಮ್, ಜಿಂಪಾ ಭುಟಿಯಾ, ಟಾಮ್‌ಥಿನ್ ಥೋಕ್‌ಚೋಮ್, ಹಿರಾಕ್ ಸೋನೊವಾಲ್ ಮುಂತಾದವರಿದ್ದಾರೆ.
ಸಿದ್ದಾಂತ್ ಸುಂದರ್ ಅವರ ಸಂಗೀತ ಸಂಯೋಜನೆ, ಶ್ರೀಶ್ ತೋಮರ್ ಛಾಯಾಗ್ರಹಣ, ಆಶಿಕ್ ಕೆ.ಎಸ್ ಸಂಕಲನ, ತ್ರಿಲೋಕ್ ಮತ್ತು ಕೆಎಎಸ್ ಸಂಭಾಷಣೆ, ಸಿದ್ದಾಂತ್, ಪ್ರತೀಕ್ ಮತ್ತು ಕೆಎಎಸ್ ಕಥೆ, ಕೆಎಎಸ್ ಮತ್ತು ಪ್ರತೀಕ್ ಪ್ರಜೋಶ್ ಅವರ ಚಿತ್ರಕಥೆ, ಮಾರ್ಟಿನ್ ಯೋ ಅವರ ಸಾಹಿತ್ಯ, ಮಾಸ್ಟರ್ ಎನ್ ಎ ಅವರ ಸಾಹಸ ನಿರ್ದೇಶನ ಮಾಡಿದ್ದಾರೆ.
ವಿಭಾಗ