ಸರ್ದಾರ್ ಪಟೇಲ್‌ಗೆ ಪ್ರಧಾನಿ ಹುದ್ದೆ ಕೈ ತಪ್ಪಿಸಿದ್ದು ಮಹಾತ್ಮ ಗಾಂಧಿ! ಫ್ರೀಡಂ ಅಟ್ ಮಿಡ್‌ನೈಟ್ ವೆಬ್‌ಸೀರಿಸ್‌ನಲ್ಲಿ ಅಚ್ಚರಿಯ ಇತಿಹಾಸ
ಫ್ರೀಡಂ ಅಟ್ ಮಿಡ್‌ನೈಟ್ ವೆಬ್‌ಸಿರೀಸ್‌ನ ಟೀಸರ್ ಬಿಡುಗಡೆಯಾಗಿದೆ. ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ಬಂದ ಮೇಲೆ, ದೇಶ ಮುನ್ನಡೆಸುವ ಮುಂದಿನ ಪ್ರಧಾನಿ ಯಾರು ಎಂಬ ವಿಚಾರದ ಜತೆಗೆ, ಪ್ರಧಾನಿ ಹುದ್ದೆ ಬದಲಾವಣೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಪಾತ್ರ ಹೇಗಿತ್ತು ಎಂಬುದನ್ನು ಟೀಸರ್‌ನಲ್ಲಿ ಅಡಕ ಮಾಡಿ ಹೊರತಂದಿದ್ದಾರೆ ನಿರ್ದೇಶಕ ನಿಖಿಲ್ ಅಡ್ವಾಣಿ.
Freedom At Midnight Web Series: ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಪೂರ್ವದ ಇತಿಹಾಸ ಹಿನ್ನೆಲೆಯಲ್ಲಿ ತಯಾರಾದ ಫ್ರೀಡಂ ಅಟ್ ಮಿಡ್‌ನೈಟ್ (Freedom At Midnight) ವೆಬ್‌ಸಿರೀಸ್‌ನ ಟೀಸರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಸೋನಿ ಲೀವ್ ಒಟಿಟಿ ವೇದಿಕೆಯಲ್ಲಿ ಈ ಸಿರೀಸ್ ಇನ್ನೇನು ಶೀಘ್ರದಲ್ಲಿಯೇ ಸ್ಟ್ರೀಮಿಂಗ್ ಆರಂಭಿಸಲಿದ್ದು, ಸದ್ಯದ ಟೀಸರ್‌ನಲ್ಲಿ ಒಂದಷ್ಟು ವಿಚಾರಗಳು, ನೋಡುಗರನ್ನು ಅಚ್ಚರಿಗೆ ದೂಡಿವೆ. ಹಿಂದೆಂದೂ ಕೇಳಿರದ, ಗೊತ್ತಿರದ ಇತಿಹಾಸದ ವಿಚಾರಗಳು ಇದೀಗ ಈ ಸಿರೀಸ್‌ನ ಟೀಸರ್ ಮೂಲಕ ಗೊತ್ತಾಗಿದೆ.
ಫ್ರೀಡಂ ಅಟ್ ಮಿಡ್‌ನೈಟ್ ವೆಬ್‌ಸಿರೀಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಕುತೂಹಲ ಕೆರಳಿಸುತ್ತಿದೆ. ದೇಶಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ಬಂದ ಮೇಲೆ, ದೇಶ ಮುನ್ನಡೆಸುವ ಮುಂದಿನ ಪ್ರಧಾನಿ ಯಾರು ಎಂಬ ವಿಚಾರದ ಜತೆಗೆ, ಪ್ರಧಾನಿ ಹುದ್ದೆ ಬದಲಾವಣೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಪಾತ್ರ ಹೇಗಿತ್ತು ಎಂಬುದನ್ನು ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಅಡಕ ಮಾಡಿ ಹೊರತಂದಿದ್ದಾರೆ ನಿರ್ದೇಶಕ ನಿಖಿಲ್ ಅಡ್ವಾಣಿ. ಈ ಮೂಲಕ ಬಹುತೇಕರಿಗೆ ಗೊತ್ತಿಲ್ಲದ ಇತಿಹಾಸದ ಸಂಗತಿಯನ್ನು ಈ ಸಿರೀಸ್ ಮೂಲಕ ಹೇಳಲು ಹೊರಟಿದ್ದಾರೆ.
ಟೀಸರ್‌ನಲ್ಲೇನಿದೆ?
ಜವಾಹರ್ ಲಾಲ್ ನೆಹರು ಹೇಗೆ ದೇಶದ ಮೊದಲ ಪ್ರಧಾನಿಯಾದರು ಎಂಬುದನ್ನು ಈ ಟ್ರೇಲರ್ ಹೇಳುತ್ತದೆ. ವೀಡಿಯೊದ ಆರಂಭದಲ್ಲಿ, ಮೌಲಾನ ಅಬ್ದುಲ್ ಕಲಾಂ ಆಜಾದ್ (ಪವನ್ ಚೋಪ್ರಾ) ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾರೆ. ಕಾಂಗ್ರೆಸ್‌ನ ಭವಿಷ್ಯದ ಅಧ್ಯಕ್ಷರೇ ದೇಶದ ಮೊದಲ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳುತ್ತಾರೆ. ಆಗ ಪಟೇಲರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ (ರಾಜೇಂದ್ರ ಚಾವ್ಲಾ) ಮುಂದಿನ ಪ್ರಧಾನಿ ಎಂದು ಆಜಾದ್ ಘೋಷಣೆ ಮಾಡುತ್ತಿದ್ದಂತೆ, ಅವರಿಗೆ ಎಲ್ಲರೂ ಬೆಂಬಲ ಸೂಚಿಸುತ್ತಾರೆ. ಇತರ ಎಲ್ಲ ಸದಸ್ಯರು ಚಪ್ಪಾಳೆಯೊಂದಿಗೆ ಅದನ್ನು ಅನುಮೋದಿಸುತ್ತಾರೆ. ಸ್ವತಃ ನೆಹರೂ ಹಸ್ತಲಾಘವ ಮಾಡಿ ಶುಭ ಕೋರುತ್ತಾರೆ.
ಗಾಂಧೀಜಿಯಿಂದ ಪ್ರಧಾನಿಯಾದ ನೆಹರೂ
ಆದರೆ ಅದೇ ಕ್ಷಣದಲ್ಲಿ, ಮಹಾತ್ಮ ಗಾಂಧಿ (ಚಿರಾಗ್ ವೋಹ್ರಾ) ಸಭೆಯ ಅಂಗಳ ಪ್ರವೇಶಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಸರ್ದಾರ್ ಬೇಕು, ಆದರೆ ದೇಶಕ್ಕೆ ಜವಾಹರ್ (ಸಿದ್ಧಾಂತ ಗುಪ್ತ) ಬೇಕು ಎಂದು ಹೇಳುತ್ತಾರೆ. ಸರ್ದಾರ್ ವಲ್ಲಭಬಾಯಿ ಪಟೇಲರ ಕೈಗೆ ನಾಮಪತ್ರ ಹಿಂಪಡೆಯುವ ಪತ್ರ ನೀಡುತ್ತಾರೆ ಗಾಂಧೀಜಿ. ಅರಳಿದ ವಲ್ಲಭಬಾಯಿ ಪಟೇಲರ ಮುಖ ಮಂಕಾಗುತ್ತದೆ. ಗಾಂಧೀಜಿ ಮಾತಿಗೆ ಸಹಮತಿಸಿ, ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯುತ್ತಾರೆ. ಅಲ್ಲಿಗೆ ನೆಹರೂ ದೇಶದ ಮೊದಲ ಪ್ರಧಾನಿಯಾಗಿ ಗಾಂಧೀಜಿಯೇ ಘೋಷಿಸುತ್ತಾರೆ. ನೆಹರೂ ಪ್ರಧಾನಿಯಾಗಲು ಗಾಂಧಿ ಅವರ ಪಾತ್ರವೇ ದೊಡ್ಡದಿತ್ತು ಎಂಬುದನ್ನು ಬಿಡುಗಡೆಯಾದ ಟೀಸರ್‌ನಲ್ಲಿ ಕಾಣಬಹುದಾಗಿದೆ.
ಒಂದು ರಾಜಕೀಯ ಡ್ರಾಮಾ
ಟೀಸರ್‌ನ ಕೊನೆಯಲ್ಲಿ ದೇಶದ ಸ್ವಾತಂತ್ರ್ಯ ಮತ್ತು ದೇಶವನ್ನು ಹಿಂದೂಸ್ತಾನ್ ಮತ್ತು ಪಾಕಿಸ್ತಾನವಾಗಿ ವಿಭಜಿಸುವಂತಹ ಘಟನೆಗಳನ್ನು ಸಹ ತೋರಿಸಲಾಗಿದೆ. ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲ್ಯಾಪಿಯರ್ ಬರೆದ 1975ರ ಫ್ರೀಡಂ ಅಟ್ ಮಿಡ್‌ನೈಟ್ ಪುಸ್ತಕವನ್ನು ಆಧರಿಸಿ, ಈ ವೆಬ್‌ಸಿರೀಸ್ ಮಾಡಲಾಗಿದೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತು ದೇಶ ವಿಭಜನೆಯ ಹಿಂದಿನ ಇತಿಹಾಸವನ್ನೂ ಈ ವೆಬ್‌ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ ನಿರ್ದೇಶಕ ನಿಖಿಲ್ ಅಡ್ವಾಣಿ. ಸದ್ಯ ಡ್ರಾಪ್ 1 ಹೆಸರಿನಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿಯೇ ಸ್ಟ್ರೀಮಿಂಗ್ ದಿನಾಂಕ ಘೋಷಣೆ ಆಗಲಿದೆ.