OTT: ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಎರಡೇ ವಾರಕ್ಕೆ ಗ್ಯಾಂಗ್ಸ್ ಆಫ್ ಗೋದಾವರಿ ಒಟಿಟಿಗೆ, ಮನೆಯಲ್ಲೇ ನೋಡಿ ಕನ್ನಡತಿ ನೇಹಾ ಶೆಟ್ಟಿ ಸಿನಿಮಾ
Gangs of Godavari OTT release: ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ನಟಿಸಿರುವ ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಪ್ ಗೋದಾವರಿ ಸಿನಿಮಾವು ಒಟಿಟಿಯಲ್ಲಿ ಯಾವಾಗ ಪ್ರಸಾರವಾಗಲಿದೆ? ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು: ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದಲ್ಲಿ ವಿಶ್ವಕ್ ಸೇನ್, ನೇಹಾ ಶೆಟ್ಟಿ ಮತ್ತು ಅಂಜಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೇವಲ ಎರಡು ವಾರಗಳ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟು ಬೇಗ ಒಟಿಟಿಗೆ ಬಿಡುಗಡೆ ಮಾಡಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. "ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ದೂರಬೇಡಿ, ಇಷ್ಟು ಬೇಗ ಸಿನಿಮಾವನ್ನು ಒಟಿಟಿಗೆ ತರುವಂತಹ ಕೆಲಸ ಮಾಡುವುದನ್ನು ತಪ್ಪಿಸಿ" ಎಂದು ನೆಟ್ಟಿಗರು ಹೇಳಿದ್ದಾರೆ.
ಗ್ಯಾಂಗ್ಸ್ ಆಫ್ ಗೋದಾವರಿ ಒಟಿಟಿಗೆ
ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಹೊಸ ಟ್ರೈಲರ್ ಅನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿದೆ. ಈ ಮೂಲಕ ಒಟಿಟಿಯಲ್ಲಿ ಇದೇ ಜೂನ್ 14 ರಂದು ಗ್ಯಾಂಗ್ಸ್ ಆಫ್ ಗೋದಾವರಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ನೆಟ್‌ಫ್ಲಿಕ್ಸ್ ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಈ ರೀತಿ ಬರೆದಿದೆ. "ಜೂನ್ 14ರಂದು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾವನ್ನು ವೀಕ್ಷಿಸಿ" ಎಂದು ಟ್ವೀಟ್ ಮಾಡಿದೆ.
ರತ್ನ (ವಿಶ್ವಕ್) ಎಂತಹ ವ್ಯಕ್ತಿ ಎಂಬುದನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಅವನು ರಾಜಕಾರಣದ ಮೂಲಕ ಉನ್ನತ ಸ್ಥಾನಕ್ಕೆ ಏರಲು ಬಯಸುವ ವ್ಯಕ್ತಿ. ಆತ ಬುಜ್ಜಿಯನ್ನು (ನೇಹಾ) ಪ್ರೀತಿಸಿ ಮದುವೆಯಾಗುವ ಮಾಹಿತಿಯೂ ಇದೆ. ಇದೇ ಸಮಯದಲ್ಲಿ ಶತ್ರುಗಳ ಜತೆ ಹೋರಾಟದ ಚಿತ್ರಣವನ್ನೂ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಗ್ಯಾಂಗ್ಸ್ ಆಫ್ ಗೋದಾವರಿ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳ ಹಿನ್ನಲೆಯಲ್ಲಿ ಸಾಗುತ್ತದೆ.
ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಲೆಕ್ಕಿಸದೆ ಒಟಿಟಿಗೆ ಬಿಡುಗಡೆ ಮಾಡುವ ಕುರಿತು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. . ಇತ್ತೀಚೆಗೆ, ವಿ.ವಿ.ಗೋಪಾಲ ಕೃಷ್ಣ ಅವರ ಸತ್ಯದೇವ್ ಅಭಿನಯದ ಕೃಷ್ಣಮ್ಮ ಸಿನಿಮಾವು ಮೇ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಒಂದು ವಾರದ ನಂತರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಇದೀಗ ಗ್ಯಾಂಗ್ಸ್ ಆಫ್ ಗೋದಾವರಿ ಒಟಿಟಿಯತ್ತ ಮುಖ ಮಾಡಿದೆ.
ಶ್ರೀಕರ ಸ್ಟುಡಿಯೋಸ್‌ನ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸಿದ್ದಾರೆ. ವೆಂಕಟ್ ಉಪ್ಪತ್ತೂರಿ ಮತ್ತು ಗೋಪಿಚಂದ್ ಇನ್ನುಮುರಿ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದಲ್ಲಿ ನೇಹಾ ಶೆಟ್ಟಿ ಮತ್ತು ಅಂಜಲಿ ನಾಯಕಿಯರಾಗಿದ್ದಾರೆ. ಜನಪ್ರಿಯ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
90 ರ ದಶಕದಲ್ಲಿ ಗೋದಾವರಿ ಜಿಲ್ಲೆಯ ಲಂಕಾ ಪ್ರದೇಶದಲ್ಲಿ ನಡೆಯುವ ಕಥೆಯಂತೆ ಗ್ಯಾಂಗ್ಸ್ ಆಫ್ ಗೋದಾವರಿಯನ್ನು ಚಿತ್ರೀಕರಿಸಲಾಗಿದೆ. ಯುವಕನೊಬ್ಬ ರಾಜಕೀಯವನ್ನು ಬಳಸಿಕೊಂಡು ಹೇಗೆ ಉನ್ನತ ಸ್ಥಾನಕ್ಕೆ ಏರಿದ ಎಂಬುದೇ ಚಿತ್ರದ ಕಥೆ ಎಂದಿದ್ದಾರೆ ನಿರ್ಮಾಪಕ ನಾಗವಂಶಿ. ಅಲ್ಲದೇ ಇದು ಗ್ಯಾಂಗ್ ಸ್ಟರ್ ಸಿನಿಮಾ ಅಲ್ಲ ಎಂದು ನಿರ್ದೇಶಕ ಕೃಷ್ಣ ಚೈತನ್ಯ ಸ್ಪಷ್ಟಪಡಿಸಿದ್ದರು.