ಕನ್ನಡ ಸುದ್ದಿ  /  ಮನರಂಜನೆ  /  Guruvayoor Ambalanadayil: ಹೇಗಿದೆ ಗುರುವಾಯೂರ್ ಅಂಬಲನಡಯಿಲ್‌? ಆನಂದಣ್ಣ-ವಿನು ಅಣ್ಣ ರಾಜಿಯಾದ್ರ, ಒಟಿಟಿ ಸಿನಿಮಾ ವಿಮರ್ಶೆ

Guruvayoor Ambalanadayil: ಹೇಗಿದೆ ಗುರುವಾಯೂರ್ ಅಂಬಲನಡಯಿಲ್‌? ಆನಂದಣ್ಣ-ವಿನು ಅಣ್ಣ ರಾಜಿಯಾದ್ರ, ಒಟಿಟಿ ಸಿನಿಮಾ ವಿಮರ್ಶೆ

Guruvayoor Ambalanadayil OTT Movie Review: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಮಲಯಾಳಂ ಸಿನಿಮಾ ಗುರುವಾಯೂರ್ ಅಂಬಲನಡಯಿಲ್‌ ಸ್ಟ್ರೀಮಿಂಗ್‌ ಆಗುತ್ತಿದೆ. ಹೇಗಿದೆ ಈ ಸಿನಿಮಾ. ಸಖತ್‌ ಕಾಮಿಡಿ ಇದೆಯಾ? ಓದಿ ಈ ಸಿನಿಮಾದ ವಿಮರ್ಶೆ.

Guruvayoor Ambalanadayil: ಹೇಗಿದೆ ಗುರುವಾಯೂರ್ ಅಂಬಲನಡಯಿಲ್‌?
Guruvayoor Ambalanadayil: ಹೇಗಿದೆ ಗುರುವಾಯೂರ್ ಅಂಬಲನಡಯಿಲ್‌?

Guruvayoor Ambalanadayil OTT Movie Review: ಒಟಿಟಿಯಲ್ಲಿ ಪ್ರತಿವಾರ ಹಲವು ಹೊಸ ಸಿನಿಮಾ, ವೆಬ್‌ ಸರಣಿಗಳು ಬಿಡುಗಡೆಯಾಗುತ್ತಿವೆ. ಕಳೆದ ವಾರ ಗುರುವಾಯೂರ್ ಅಂಬಲನಡಯಿಲ್‌ (Guruvayoor Ambalanadayil) ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿರುವ ಈ ಮಲಯಾಳಂ ಸಿನಿಮಾದ ಕಥೆಯೇನು? ವಿಮರ್ಶಕರ ರೇಟಿಂಗ್‌ ಎಷ್ಟು? ಯಾರೆಲ್ಲ ನಟಿಸಿದ್ದಾರೆ? ಹೇಳಿಕೊಳ್ಳುವಷ್ಟು ಚೆನ್ನಾಗಿದೆಯಾ? ಒಟ್ಟಾರೆ ಗುರುವಾಯೂರ್‌ ಅಂಬಲನಡಯಿಲ್‌ ಚಿತ್ರ ಹೇಗಿದೆ? ಇತ್ಯಾದಿಗಳನ್ನು ತಿಳಿಯೋಣ ಬನ್ನಿ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ಕನ್ನಡದಲ್ಲೂ ಲಭ್ಯವಿದೆ.

ಸಿನಿಮಾದ ಹೆಸರು: ಗುರುವಾಯೂರ್ ಅಂಬಲನಡಯಿಲ್‌
ಯಾವ ಒಟಿಟಿಯಲ್ಲಿದೆ?: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌
ತಾರಾಗಣ: ಪೃಥ್ವಿರಾಜ್‌ ಸುಕುಮಾರನ್‌, ಬಸಿಲ್‌ ಜೋಸೆಫ್‌, ನಿಖಿಲಾ ವಿಮಲ್‌, ಅನಸ್ವರ ರಾಜನ್‌, ಯೋಗಿ ಬಾಬು, ಸಿಜು ಸನ್ನಿ, ಸಾಫ್‌, ಜಗದೀಶ್‌, ಬೈಜು ಸಂತೋಷ್‌, ರೇಖಾ, ಇರ್ಷಾದ್‌
ರೇಟಿಂಗ್‌: ***

ಗುರುವಾಯೂರ್ ಅಂಬಲನಡಯಿಲ್‌ ಒಟಿಟಿ ಸಿನಿಮಾದ ವಿಮರ್ಶೆ

ಒಂದು ಸರಳ ಕಥೆಯನ್ನು ಹೊಂದಿರುವ ಸಾಕಷ್ಟು ನಗೆನಾಟಕ ಇರುವ ಒಂದು ಸಿಂಪಲ್‌ ಸಿನಿಮಾ ಇದಾಗಿದೆ. ಎರಡು ಕುಟುಂಬದ ನಡುವೆ ನಡೆಯುವ ಮದುವೆ, ಗೊಂದಲದ ವಿವರ ಇದರಲ್ಲಿದೆ. ಒಟ್ಟಾರೆ ಈ ಮದುವೆ ನಡೆಯುತ್ತ ಇಲ್ವಾ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಸಿನಿಮಾದ ಕೊನೆಯವರೆಗೆ ಇರುತ್ತದೆ. ಆ ಮದುವೆಗೆ ಇರುವ ವಿಘ್ನಗಳು, ತೊಂದರೆಗಳ ಸುತ್ತ ಸಿನಿಮಾ ಸುತ್ತುತ್ತದೆ. ಚಿತ್ರದ ಆರಂಭದಲ್ಲಿ ಆನಂದಣ್ಣ ಮತ್ತು ವಿನು ಅಣ್ಣನ ನಡುವೆ ಆತ್ಮೀಯತೆ, ಫ್ರೆಂಡ್‌ಶಿಪ್‌ ಅಥವಾ ಸಹೋದರತ್ವದ ಸುತ್ತ ಇರುತ್ತದೆ. ಇದಾದ ಬಳಿಕ ಇವರು ಬದ್ಧ ವೈರಿಗಳಂತೆ ಆಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಅಂಜಲಿ ಜತೆ ವಿನುವಿನ ಮದುವೆ ನಡೆಯುತ್ತ ಎಂಬ ಕುತೂಹಲ ಇರುತ್ತದೆ.

ಟ್ರೆಂಡಿಂಗ್​ ಸುದ್ದಿ

ಗುರುವಾಯೂರ್ ಅಂಬಲನಡಯಿಲ್‌ ಸಿನಿಮಾದ ಕಥೆ

ದುಬೈನಲ್ಲಿ ಕೆಲಸ ಮಾಡುತ್ತಿದ್ದ ವಿನು ರಾಮಚಂದ್ರನ್‌ಗೆ ಅಂಜಲಿ ಜತೆ ನಿಶ್ಚಿತಾರ್ಥವಾಗುತ್ತದೆ. ಅಂಜಲಿ ಸಹೋದರ ಆನಂದಣ್ಣನ ಜತೆಗೆ ವಿನುಗೆ ಆತ್ಮೀಯ ಬಾಂಡಿಂಗ್‌ ಬೆಳೆಯುತ್ತದೆ. ಆನಂದಣ್ಣ ಜೆಮ್ಶೆಡ್ಪುರದಲ್ಲಿ ಫ್ಯಾಕ್ಟರಿ ಮ್ಯಾನೇಜರ್‌ ಆಗಿರುತ್ತಾನೆ. ವಿನು ತನ್ನ ಮಾಜಿ ಪ್ರೇಯಸಿ ಪಾರ್ವತಿ ಜತೆ ಬ್ರೇಕಪ್‌ ಆಗಿ ಐದು ವರ್ಷಗಳಾಗಿರುತ್ತದೆ. ಆತ ಅದೇ ನೋವಿನಲ್ಲಿ ಇರುತ್ತಾನೆ. ಈ ಲವ್‌ ಫೈಲ್ಯೂರ್‌ನಿಂದ ಹೊರಬರುವಂತೆ ಆನಂದಣ್ಣ ವಿನುವಿಗೆ ಮೋಟಿವೇಟ್‌ ಮಾಡ್ತಾ ಇರುತ್ತಾನೆ. ಇದೇ ಸಮಯದಲ್ಲಿ ಆನಂದಣ್ಣ ತನ್ನ ಪತ್ನಿ ಪಾರ್ವತಿಯಿಂದ ಕೋಪಗೊಂಡು ದೂರವಾಗಿರುತ್ತಾನೆ. ಅಪರಿಚಿತ ಪ್ರೇಮಪತ್ರವೊಂದು ಪಾರ್ವತಿಗೆ ಬಂದ ಬಳಿಕ ಈತ ದೂರವಾಗಿರುತ್ತಾನೆ. "ಪಾರ್ವತಿಯನ್ನು ದೂರ ಮಾಡಬೇಡ, ಪಾರ್ವತಿ ಜತೆ ಚೆನ್ನಾಗಿರು" ಎಂದು ವಿನು ಒಂದಿಷ್ಟು ಸಲಹೆ ನೀಡಿ ಮತ್ತೆ ಪಾರ್ವತಿ ಮತ್ತು ಆನಂದಣ್ಣ ಒಂದಾಗುವಂತೆ ವಿನು ಮಾಡುತ್ತಾನೆ.

ಆದರೆ, ವಿನು ಮತ್ತು ಆನಂದಣ್ಣನ ನಡುವಿನ ತೊಂದರೆಗೆ ಪಾರ್ವತಿ ಎಂಬ ಈ ಮಹಿಳೆಯೇ ಕಾರಣ ಎಂಬ ಸತ್ಯ ತಿಳಿಯುತ್ತದೆ. ಪಾರ್ವತಿಯೇ ವಿನುವೇ ಹಳೆಯ ಲವರ್‌ ಎನ್ನುವುದು ತಿಳಿಯುತ್ತದೆ. ಇದಕ್ಕೆಲ್ಲ ವಿನುವೇ ಕಾರಣ ಎಂದು ಶಾರ್ಟ್‌ ಟೆಂಪರ್‌ ಆಗಿರುವ ಆನಂದಣ್ಣ(ಪೃಥ್ವಿರಾಜ್‌) ನಿರ್ಧರಿಸುತ್ತಾನೆ. ನನ್ನ ತಂಗಿಯನ್ನು ಇವನು ವಿವಾಹವಾಗಬಾರದು ಎಂದು ರೆಬೆಲ್‌ ಆಗುತ್ತಾನೆ. ಆರಂಭದಲ್ಲಿ ವಿನು ಕೂಡ ಈ ಮದುವೆ ಬೇಡ ಎಂದು ನಿರ್ಧರಿಸುತ್ತಾನೆ. ಆದರೆ, ಅಂಜಲಿಯ ಪ್ರೀತಿಯಿಂದ ಮದುವೆ ನಡೆಯಲಿ ಎಂದು ಮುಂದುವರೆಯುತ್ತಾನೆ. ಮದುವೆ ನಿಲ್ಲಿಸಲು ಮಾಡಿರುವ ಕೆಲವೊಂದು ಪ್ರಯತ್ನ, ಪ್ರಯೋಗಗಳು ಆಮೇಲೆ ಈತನ ಮದುವೆಗೆ ಅಡ್ಡಬರುತ್ತವೆ. ಆನಂದಣ್ಣನ ಅಡ್ಡಿಯೂ ಇರುತ್ತದೆ. ಗುರುವಾಯೂರ್‌ ದೇಗುಲದಲ್ಲಿ 120 ಸಾಮೂಹಿಕ ವಿವಾಹಗಳ ನಡುವೆ ಅಂಜಲಿ ಮತ್ತು ವಿನುವಿನ ಮದುವೆ ನಡೆಯುತ್ತ ಎಂದು ತಿಳಿಯಲು ಈ ಸಿನಿಮಾ ನೋಡಬಹುದು. ಮದುವೆ ದಿನದ ಸಂಭ್ರಮದ ಕ್ಲೈಮ್ಯಾಕ್ಸ್‌ ಇಂಟ್ರೆಸ್ಟಿಂಗ್‌ ಆಗಿದೆ.

ಹೇಗಿದೆ ಸಿನಿಮಾ?

ಸರಳ ಕಥೆಯಾದರೂ ವೀಕ್ಷಕರನ್ನು ಕೊನೆಯವರೆಗೆ ನೋಡುವಂತೆ ಮಾಡಲು ಸಿನಿಮಾದ ಚಿತ್ರಕಥೆ ನೆರವಾಗಿದೆ. ಈ ವಿಷಯಕ್ಕೆ ರೈಟರ್‌ ದೀಪು ಪ್ರದೀಪ್‌ಗೆ ಥ್ಯಾಂಕ್ಸ್‌ ಹೇಳಬೇಕು. ಜತೆಗೆ, ಈ ಸಿನಿಮಾದಲ್ಲಿರುವ ನಗೆ ನಾಟಕಗಳು ಪ್ರೇಕ್ಷಕರಿಗೆ ಖುಷಿ ನೀಡುತ್ತವೆ. ಒಂದು ಫನ್‌ ಸಿನಿಮಾದಂತೆ ಎಂಜಾಯ್‌ ಮಾಡಲು ನೆರವಾಗುತ್ತದೆ. ಈ ಸಿನಿಮಾದಲ್ಲಿ ಲವಲವಿಕೆ, ಸಂತೋಷ ಇದೆ. ಒಂದಿಷ್ಟು ಆತ್ಮೀಯತೆ, ಆಪ್ತ ಕ್ಷಣಗಳು ಇವೆ. ಸಂಬಂಧಗಳ ಮಹತ್ವವನ್ನೂ ಸಾರುತ್ತವೆ. ಎರಡು ಕುಟುಂಬಗಳು ಒಂದಾಗುವಂತಹ ಕ್ಷಣಗಳು ಹೃದಯಕ್ಕೆ ಆಪ್ತವಾಗುತ್ತವೆ. ಪೃಥ್ವಿರಾಜ್‌ ಸುಕುಮಾರನ್‌ ಮತ್ತು ಬಸಿಲ್‌ ಜೋಸೆಫ್‌ ಸಿನಿಮಾವನ್ನು ಹೊತ್ತುಕೊಂಡು ಸಾಗಿದ ರೀತಿ ಇಷ್ಟವಾಗುತ್ತದೆ. ಪೃಥ್ವಿರಾಜ್‌ ಸುಕುಮಾರನ್‌ ಅವರು ಕಾಮಿಡಿಗೂ ಸೈ ಎನ್ನುವಂತೆ ಕೆಲವೊಮ್ಮೆ ವರ್ತಿಸಿದ್ದಾರೆ. ಕ್ಲೈಮ್ಯಾಕ್ಸ್‌ನ ಮದುವೆ ಸಂಭ್ರಮ, ಆತಂಕ ಪ್ರೇಕ್ಷಕರನ್ನು ಹಿಡಿದಿಟ್ಟುತ್ತದೆ. ಮಲಯಾಳಂ ಸಿನಿಮಾ ಇಷ್ಟಪಡುವವರಿಗೆ ಗುರುವಾಯೂರ್‌ ಅಂಬಲನಡಯಿಲ್‌ ಖಂಡಿತಾ ಖುಷಿ ನೀಡಬಹುದು.

  • ಚಿತ್ರವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು